ರಕ್ಷಣಾ ಇಲಾಖೆಯಲ್ಲಿ .17.5 ಕೋಟಿ ಹಗರಣ?

First Published Jun 1, 2018, 10:32 AM IST
Highlights

ಉಕ್ರೇನ್‌ನಿಂದ ವಾಯುಪಡೆ ವಿಮಾನದ ಬಿಡಿ ಭಾಗಗಳನ್ನು ಖರೀದಿಸಲು ಭಾರತದ ರಕ್ಷಣಾ ಇಲಾಖೆಯ ಅಧಿಕಾರಿಗಳು 17.5 ಕೋಟಿ ರು. ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಉಕ್ರೇನ್‌ನ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ಆರಂಭಿಸಿದ್ದು, ಕೇಂದ್ರ ಗೃಹ ಇಲಾಖೆಯ ಸಹಕಾರ ಕೇಳಿದೆ ಎಂದು ರಾಷ್ಟ್ರೀಯ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. 

ನವದೆಹಲಿ (ಜೂ. 01):  ಉಕ್ರೇನ್‌ನಿಂದ ವಾಯುಪಡೆ ವಿಮಾನದ ಬಿಡಿ ಭಾಗಗಳನ್ನು ಖರೀದಿಸಲು ಭಾರತದ ರಕ್ಷಣಾ ಇಲಾಖೆಯ ಅಧಿಕಾರಿಗಳು 17.5 ಕೋಟಿ ರು. ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಉಕ್ರೇನ್‌ನ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ಆರಂಭಿಸಿದ್ದು, ಕೇಂದ್ರ ಗೃಹ ಇಲಾಖೆಯ ಸಹಕಾರ ಕೇಳಿದೆ ಎಂದು ರಾಷ್ಟ್ರೀಯ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ರಕ್ಷಣಾ ಇಲಾಖೆಯಲ್ಲಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.

ಭಾರತೀಯ ವಾಯುಪಡೆಯಲ್ಲಿ ಎಎನ್‌-32 ಎಂಬ ಹಳೆಯ ಕಾಲದ ಬೃಹತ್‌ ಸರಕು ಸಾಗಣೆ ವಿಮಾನಗಳಿವೆ. ಇವುಗಳನ್ನು ಶೀತಲ ಸಮರದ ಕಾಲದಲ್ಲಿ ಸೋವಿಯತ್‌ ರಷ್ಯಾದಿಂದ ಖರೀದಿಸಲಾಗಿದೆ. ಈ ವಿಮಾನಗಳಿಗೆ ಬೇಕಾದ ಬಿಡಿ ಭಾಗಗಳನ್ನು ಪೂರೈಸಲು 2014ರ ನವೆಂಬರ್‌ನಲ್ಲಿ ಭಾರತದ ರಕ್ಷಣಾ ಇಲಾಖೆಯು ಉಕ್ರೇನ್‌ನ ಸರ್ಕಾರಿ ಸ್ವಾಮ್ಯದ ಸ್ಪೆಟ್ಸ್‌ಟೆಕ್ನೋಎಕ್ಸ್‌ಪೋರ್ಟ್‌ ಎಂಬ ಕಂಪನಿಯ ಜೊತೆ ಒಪ್ಪಂದ ಮಾಡಿಕೊಂಡಿದೆ. ಈ ಒಪ್ಪಂದ ಮಾಡಿಕೊಳ್ಳಲು ರಕ್ಷಣಾ ಇಲಾಖೆಯ ಅಧಿಕಾರಿಗಳು ಉಕ್ರೇನ್‌ನಿಂದ ಸುಮಾರು 17.55 ಕೋಟಿ ರು. ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂದು ಅಲ್ಲಿನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಅನುಮಾನ ಬಂದಿದ್ದು, ತನಿಖೆ ಆರಂಭಿಸಿದೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಉಕ್ರೇನ್‌ನ ಭ್ರಷ್ಟಾಚಾರ ನಿಗ್ರಹ ದಳವು ಈ ವರ್ಷದ ಫೆ.13ರಂದು ಭಾರತದ ಗೃಹ ಇಲಾಖೆಗೆ ಪತ್ರ ಬರೆದು, ‘ಅಂತಾರಾಷ್ಟ್ರೀಯ ಕಾನೂನು ಸಹಕಾರ’ ನೀಡುವಂತೆ ಮನವಿ ಮಾಡಿದೆ. ಅಲ್ಲದೆ, ಮೇಲಿನ ಒಪ್ಪಂದಕ್ಕೆ ಸಂಬಂಧಿಸಿದ ಮಾತುಕತೆ, ಚೌಕಾಸಿ, ಬೆಳವಣಿಗೆಗಳು, ಸಹಿ ಹಾಕಿದ್ದು ಹಾಗೂ ಒಪ್ಪಂದದ ಜಾರಿ ಇವೇ ಮೊದಲಾದ ಕೆಲಸಗಳಲ್ಲಿ ಭಾಗಿಯಾಗಿದ್ದ ರಕ್ಷಣಾ ಇಲಾಖೆಯ ಅಧಿಕಾರಿಗಳ ಮಾಹಿತಿ ನೀಡುವಂತೆ ಕೇಳಿದೆ ಎಂದು ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ಹಗರಣ ಬೆಳಕಿಗೆ ಬಂದಿದ್ದು ಹೇಗೆ:

2014 ರಲ್ಲಿ ಭಾರತ-ಉಕ್ರೇನ್‌ ಒಪ್ಪಂದ ಮಾಡಿಕೊಂಡ ನಂತರ, ಭಾರತದ ಹಿಂದುಸ್ತಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌)ಗೆ ಉಕ್ರೇನ್‌ನ ಸ್ಪೆಟ್ಸ್‌ಟೆಕ್ನೋಎಕ್ಸ್‌ಪೋರ್ಟ್‌ ಕಂಪನಿಯು ಬಿಡಿಭಾಗಗಳನ್ನು ಪೂರೈಸಬೇಕಿತ್ತು. ಆದರೆ, 11 ತಿಂಗಳ ನಂತರ ಸ್ಪೆಟ್ಸ್‌ಟೆಕ್ನೋಎಕ್ಸ್‌ಪೋರ್ಟ್‌ ಕಂಪನಿಯು ಅಷ್ಟೇನೂ ಪ್ರಸಿದ್ಧವಲ್ಲದ ಗ್ಲೋಬಲ್‌ ಮಾರ್ಕೆಟಿಂಗ್‌ ಎಸ್‌ಪಿ ಲಿಮಿಟೆಡ್‌ ಎಂಬ ಕಂಪನಿಯ ಜೊತೆ ಈ ಒಪ್ಪಂದ ಪೂರ್ಣಗೊಳಿಸಲು ಇನ್ನೊಂದು ಒಪ್ಪಂದ ಮಾಡಿಕೊಂಡಿದೆ. ನಂತರ ಒಪ್ಪಂದದಲ್ಲಿ ಹೇಳಲಾದ ಎಲ್ಲಾ ಬಿಡಿ ಭಾಗಗಳನ್ನು ಪೂರೈಸುವುದಕ್ಕೂ ಮೊದಲೇ ಒಪ್ಪಂದ ಪೂರ್ಣಗೊಂಡಿದೆ ಎಂಬ ಹೇಳಿಕೆಗೆ ಉಭಯ ಪಕ್ಷಗಾರರು ಸಹಿ ಹಾಕಿದ್ದಾರೆ. ನಂತರ ಸ್ಪೆಟ್ಸ್‌ಟೆಕ್ನೋಎಕ್ಸ್‌ಪೋರ್ಟ್‌ ಕಂಪನಿಯು ಯುಎಇನಲ್ಲಿ ತೆರೆಯಲಾದ ಗ್ಲೋಬಲ್‌ ಮಾರ್ಕೆಟಿಂಗ್‌ ಕಂಪನಿಯ ಬ್ಯಾಂಕ್‌ ಖಾತೆಗೆ 17.55 ಕೋಟಿ ರು. ಹಣ ವರ್ಗಾಯಿಸಿದೆ. ಇವೆಲ್ಲವೂ ಅನುಮಾನಾಸ್ಪದವಾಗಿವೆ ಎಂದು ಉಕ್ರೇನ್‌ನ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ಆರಂಭಿಸಿದೆ.

ಗ್ಲೋಬಲ್‌ ಮಾರ್ಕೆಟಿಂಗ್‌ನ ಯುಎಇ ಬ್ಯಾಂಕ್‌ ಖಾತೆಯಲ್ಲಿ 2015ರಿಂದ 2018ರವರೆಗೆ ನಡೆದ ಹಣದ ವಹಿವಾಟು ಹಾಗೂ ಆ ಖಾತೆ ಯಾವ ಕಂಪ್ಯೂಟರ್‌ನಿಂದ ನಿರ್ವಹಣೆಯಾಗಿದೆ ಎಂಬುದರ ಐಪಿ ಅಡ್ರೆಸ್‌ ನೀಡುವಂತೆಯೂ ಭ್ರಷ್ಟಾಚಾರ ನಿಗ್ರಹ ದಳ ದುಬೈನ ನೂರ್‌ ಇಸ್ಲಾಮಿಕ್‌ ಬ್ಯಾಂಕ್‌ಗೆ ಕೋರಿದೆ.

ಬಿಜೆಪಿ ಡಿಫೆನ್ಸ್‌ ಹಗರಣ-ರಾಹುಲ್‌:

ಉಕ್ರೇನ್‌ ಸರ್ಕಾರದ ತನಿಖೆಯ ಬಗೆಗಿನ ಪತ್ರಿಕಾ ವರದಿಯನ್ನು ಟ್ವೀಟ್‌ ಮಾಡಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಇದು ಬಿಜೆಪಿಯ ರಕ್ಷಣಾ ಹಗರಣ ಎಂದು ಆರೋಪಿಸಿದ್ದಾರೆ. ‘ಎಎನ್‌-32 ವಿಮಾನದ ಡೀಲ್‌ನಲ್ಲಿ ಮಿನಿಸ್ಟ್ರಿ ಆಫ್‌ ಡಿಫೆನ್ಸ್‌ ಇಂಡಿಯಾ (ಮೋದಿ) ಅಧಿಕಾರಿಗಳು ದುಬೈ ಮೂಲಕ ಉಕ್ರೇನ್‌ ಸರ್ಕಾರದಿಂದ ಕೋಟ್ಯಂತರ ರು. ಕಿಕ್‌ಬ್ಯಾಕ್‌ ಪಡೆದಿದ್ದಾರೆ. ಮೋದಿಜೀ, ಸ್ವಯಂಘೋಷಿತ ಚೌಕಿದಾರ್‌ ಆಗಿರುವ ನೀವು ಕೂಡಲೇ ಭ್ರಷ್ಟ‘ಮೋದಿ’ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿರುವ ರಾಹುಲ್‌, ಅದಕ್ಕೆ ಬಿಜೆಪಿಡಿಫೆನ್ಸ್‌ಸ್ಕಾ್ಯಮ್‌ ಎಂದು ಹ್ಯಾಶ್‌ಟ್ಯಾಗ್‌ ಹಾಕಿದ್ದಾರೆ.

ಏನಿದು ಎಎನ್‌-32 ಹಗರಣ?

ಭಾರತೀಯ ವಾಯುಪಡೆಯಲ್ಲಿ ಸೋವಿಯತ್‌ ರಷ್ಯಾ ನಿರ್ಮಿತ ಅತ್ಯಂತ ಹಳೆಯದಾದ ಎಎನ್‌-32 ಎಂಬ ಸರಕು ವಿಮಾನಗಳಿವೆ. ಈಶಾನ್ಯ ಭಾರತವೂ ಸೇರಿದಂತೆ ದೇಶಾದ್ಯಂತ ಬೀಡು ಬಿಟ್ಟಿರುವ ಯೋಧರಿಗೆ ಅಗತ್ಯವಾದ ಸರಕುಗಳನ್ನು ಈ ವಿಮಾನದಲ್ಲೇ ಸಾಗಿಸಲಾಗುತ್ತದೆ. ಈ ವಿಮಾನದ ಬಿಡಿ ಭಾಗಗಳನ್ನು ಕೊಳ್ಳಲು ಉಕ್ರೇನ್‌ನ ಸರ್ಕಾರಿ ಸ್ವಾಮ್ಯದ ಕಂಪನಿ ಜೊತೆ ರಕ್ಷಣಾ ಇಲಾಖೆ 2014ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಅದಕ್ಕಾಗಿ ರಕ್ಷಣಾ ಇಲಾಖೆ ಅಧಿಕಾರಿಗಳು 17.55 ಕೋಟಿ ರು. ಕಿಕ್‌ಬ್ಯಾಕ್‌ ಪಡೆದಿದ್ದಾರೆ ಎಂಬ ಅನುಮಾನ ಮೂಡುವ ದಾಖಲೆಗಳು ಉಕ್ರೇನ್‌ನ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೊರಕಿವೆ. ಈ ಹಿನ್ನೆಲೆಯಲ್ಲಿ ಅದು ತನಿಖೆ ಆರಂಭಿಸಿದ್ದು, ಭಾರತದ ಗೃಹ ಇಲಾಖೆಯ ಸಹಕಾರ ಕೇಳಿದೆ.  

click me!