ಹೆಣ್ಣುಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಾನ ಹಕ್ಕು

By Suvarna Web DeskFirst Published Feb 4, 2018, 10:53 AM IST
Highlights

ಹೆಣ್ಣುಮಕ್ಕಳು ಪಿತ್ರಾರ್ಜಿತ ಆಸ್ತಿಗೆ ಸಮಾನ ಉತ್ತರಾಧಿಕಾರಿಗಳು (ಕೋಪಾ ರ್ಸನರ್) ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಅವರು 2005ಕ್ಕಿಂತ ಮೊದಲು ಜನಿಸಿದ್ದರೂ ಅವರಿಗೆ ಪಿತ್ರಾರ್ಜಿತ ಆಸ್ತಿಯ ಮೇಲೆ ಗಂಡು ಮಕ್ಕಳಿಗೆ ಇರುವಷ್ಟೇ ಹಕ್ಕು ಮತ್ತು ಬಾಧ್ಯತೆಯಿದೆ ಎಂದು ತೀರ್ಪು ನೀಡಿದೆ.

ನವದೆಹಲಿ : ಹೆಣ್ಣುಮಕ್ಕಳು ಪಿತ್ರಾರ್ಜಿತ ಆಸ್ತಿಗೆ ಸಮಾನ ಉತ್ತರಾಧಿಕಾರಿಗಳು (ಕೋಪಾ ರ್ಸನರ್) ಎಂದು ಸ್ಪಷ್ಟಪಡಿಸಿರುವ ಸುಪ್ರೀಂಕೋರ್ಟ್, ಅವರು 2005ಕ್ಕಿಂತ ಮೊದಲು ಜನಿಸಿದ್ದರೂ ಅವರಿಗೆ ಪಿತ್ರಾರ್ಜಿತ ಆಸ್ತಿಯ ಮೇಲೆ ಗಂಡು ಮಕ್ಕಳಿಗೆ ಇರುವಷ್ಟೇ ಹಕ್ಕು ಮತ್ತು ಬಾಧ್ಯತೆಯಿದೆ ಎಂದು ತೀರ್ಪು ನೀಡಿದೆ.

2005ರಲ್ಲಿ ಹಿಂದು ಉತ್ತರಾಧಿಕಾರ ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ತಂದು, ‘ಪಿತ್ರಾರ್ಜಿತ ಆಸ್ತಿಗೆ ಹೆಣ್ಮಕ್ಕಳೂ ಸಮಾನ ಉತ್ತರಾಧಿಕಾರಿಗಳು’ ಎಂದು ನಿಯಮ ರೂಪಿಸಿತ್ತು. ಆದರೆ, ಕೆಲ ಅಧೀನ ಕೋರ್ಟುಗಳಲ್ಲಿ ಈ ತಿದ್ದುಪಡಿಯನ್ನು ವ್ಯತಿರಿಕ್ತವಾಗಿ ವ್ಯಾಖ್ಯಾನಿಸುವ ಮೂಲಕ 2005 ಕ್ಕಿಂತ ಮೊದಲು ಹುಟ್ಟಿದ, ಅಂದರೆ ಕಾಯ್ದೆಗೆ ತಿದ್ದುಪಡಿ ಆಗುವುದಕ್ಕಿಂತ ಮೊದಲು ಜನಿಸಿದ, ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕಿಲ್ಲ ಎಂಬಂತಹ ತೀರ್ಪುಗಳನ್ನು ನೀಡಲಾಗುತ್ತಿತ್ತು.

 ಇಂತಹುದೇ ಮೇಲ್ಮನವಿಯೊಂದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಎ. ಕೆ.ಸಿಕ್ರಿ ಹಾಗೂ ಅಶೋಕ್ ಭೂಷಣ್ ಅವರ ಪೀಠವು ‘2005ಕ್ಕಿಂತ ಮೊದಲು ಜನಿಸಿದ ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯ ಮೇಲೆ ಸಮಾನ ಹಕ್ಕು ಮತ್ತು ಬಾಧ್ಯತೆಯಿದೆ. ಏಕೆಂದರೆ ಹಿಂದು ಉತ್ತರಾಧಿಕಾರ ಕಾಯ್ದೆಯಲ್ಲಿ ಹೆಣ್ಣುಮಕ್ಕಳು ಹುಟ್ಟಿ ನಿಂದಲೇ ಪಿತ್ರಾರ್ಜಿತ ಆಸ್ತಿಗೆ ಸಮಾನ ಉತ್ತರಾಧಿಕಾರಿಗಳು ಎಂದು ಹೇಳಲಾಗಿದೆ’ ಎಂದು ಸ್ಪಷ್ಟಪಡಿಸಿದೆ.

ಕಾಯ್ದೆಗೆ ತಿದ್ದುಪಡಿಯಾಗುವುದಕ್ಕಿಂತ ಮೊದಲು ಜನಿಸಿದ್ದಾರೆ ಎಂಬ ಕಾರಣಕ್ಕೆ ಯಾವುದೇ ಮಹಿಳೆಗೆ ಆಕೆಯ ಪಿತ್ರಾರ್ಜಿತ ಆಸ್ತಿಯ ಮೇಲಿನ ಹಕ್ಕನ್ನು ನಿರಾಕರಿಸಲು ಸಾಧ್ಯವಿಲ್ಲ. 2005ಕ್ಕಿಂತ ಮೊದಲು ದಾಖಲಾದ ವ್ಯಾಜ್ಯಗಳಿಗೂ ಹಿಂದು ಉತ್ತರಾಧಿಕಾರ ಕಾಯ್ದೆಯ ತಿದ್ದುಪಡಿ ಅನ್ವಯಿಸುತ್ತದೆ. ಏಕೆಂದರೆ ಗಂಡುಮಕ್ಕಳಿಗೆ ಇರುವಷ್ಟೇ ಹಕ್ಕನ್ನು ಹೆಣ್ಣುಮಕ್ಕಳಿಗೂ ನೀಡುವ ಉದ್ದೇಶ ದಿಂದಲೇ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ನ್ಯಾಯಪೀಠ ಹೇಳಿದೆ.

2002ರಲ್ಲಿ ಇಬ್ಬರು ಹೆಣ್ಣುಮಕ್ಕಳು ತಮ್ಮ ಮೃತ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಸೋದರರು ಪಾಲು ನೀಡುತ್ತಿಲ್ಲ ಎಂದು ಕೋರ್ಟ್‌ಗೆ ಹೋಗಿದ್ದರು. 2007 ರಲ್ಲಿ ಅವರ ಮನವಿಯನ್ನು ಜಾರಿ ನ್ಯಾಯಾಲಯ ತಿರಸ್ಕರಿಸಿತ್ತು. ಹೈಕೋರ್ಟ್ ಕೂಡ ಜಾರಿ ನ್ಯಾಯಾಲಯದ ತೀರ್ಪನ್ನೇ ಎತ್ತಿಹಿಡಿದಿತ್ತು. ಹೀಗಾಗಿ ಅವರು ಸುಪ್ರೀಂಕೋರ್ಟ್‌ಗೆ ಹೋಗಿದ್ದರು. ಹೈಕೋರ್ಟ್‌ನ ಆದೇಶವನ್ನು ರದ್ದುಪಡಿ ಸಿರುವ ಸುಪ್ರೀಂಕೋರ್ಟ್, ತಿದ್ದುಪಡಿ ಯಾದ ಕಾಯ್ದೆಯಡಿ ಮಹಿಳೆಗೆ ಹಕ್ಕಿದೆಯೇ ಇಲ್ಲವೇ ಎಂಬುದಕ್ಕೆ ಆಕೆಯ ಹುಟ್ಟು ಮಾನದಂಡವಾಗಲು ಸಾಧ್ಯವಿಲ್ಲ. ಹುಟ್ಟಿನಿಂದಲೇ ಆಕೆಯು ಪಿತ್ರಾ ರ್ಜಿತ ಆಸ್ತಿಗೆ ಸಮಾನ ಉತ್ತರಾಧಿಕಾರಿಯಾಗುತ್ತಾಳೆ ಎಂದು ತಿಳಿಸಿದೆ.

ಬಾಗಲಕೋಟೆಯ ಪ್ರಕರಣ :ಕರ್ನಾಟಕದ ಬಾಗಲಕೋಟೆಯ ಆಸ್ತಿ ವಿವಾದ ವೊಂದಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ| ಎ.ಕೆ. ಸಿಕ್ರಿ ಮತ್ತು ನ್ಯಾ|ಅಶೋಕ್ ಭೂಷಣ್ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಗುರುಲಿಂಗಪ್ಪ ಸವದಿ ಅವರಿಗೆ ನಾಲ್ವರು ಮಕ್ಕಳು. ಅರುಣಕುಮಾರ ಮತ್ತು ವಿಜಯ್ ಗಂಡು ಮಕ್ಕಳಾದರೆ, ದಾನಮ್ಮ ಹೆಣ್ಣು ಮಗಳು. ಸವದಿ ಅವರು 2001ರಲ್ಲಿ ತೀರಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಸವದಿ ಅವರ ಪತ್ನಿ ಸುಮಿತ್ರಾ ಅವರು ಕೂಡ ಸವದಿ ಅವರ ಅವಿಭಕ್ತ ಕುಟುಂಬದ ಆಸ್ತಿಗೆ ವಾರಸುದಾರರು ಆಗುತ್ತಾರೆ. ಆದರೆ ಅರುಣಕುಮಾರ ಅವರ ಪುತ್ರ ಅಮೃತ್ ಅವರು ತಮ್ಮ ತಂದೆಯ ಆಸ್ತಿಯಲ್ಲಿ ಪಾಲು ಕೇಳಿದ್ದರು.

1956ರ ಹಿಂದೂ ಉತ್ತರಾಧಿಕಾರಿ ಕಾಯ್ದೆ ಜಾರಿಗೆ ಬರುವ ಮೊದಲೇ ತಮ್ಮ ಅತ್ತೆ (ದಾನಮ್ಮ) ಜನಿಸಿದ್ದು ಅವರಿಗೆ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಹಕ್ಕು ನೀಡಬಾರದು ಎಂದು ಅಮೃತ್, ನ್ಯಾಯಾಲಯದ ಮೆಟ್ಟಿಲೇರಿದ್ದರು. ಅಷ್ಟೆ ಅಲ್ಲದೆ ಅತ್ತೆಯಂದಿರಿಗೆ ಮದುವೆಯಾಗಿದ್ದು ಮದುವೆಯ ಸಂದರ್ಭದಲ್ಲಿ ಅವರಿಗೆ ಹಣ, ಚಿನ್ನ ನೀಡಲಾಗಿದೆ ಎಂದು ವಾದಿಸಿದ್ದರು. ಆದರೆ, ತಾವು ಸವದಿ ಅವರ ಮಕ್ಕಳಾಗಿದ್ದು ತಮ್ಮ ತಂದೆ ಹಿಂದೂ ಉತ್ತರಾಧಿಕಾರಿ ಕಾಯ್ದೆ ಜಾರಿಗೆ ಬಂದ ಬಳಿಕ ಮರಣ ಹೊಂದಿದ್ದರು ಎಂದು ಹೆಣ್ಣು ಮಕ್ಕಳು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದರು.

ಸ್ಥಳೀಯ ನ್ಯಾಯಾಲಯ ಅಮೃತ್ ವಾದವನ್ನು ಎತ್ತಿ ಹಿಡಿದು ಸವದಿ ಅವರ ಆಸ್ತಿಯಲ್ಲಿ ಅವರ ಹೆಣ್ಣು ಮಕ್ಕಳಿಗೆ ಹಕ್ಕನ್ನು ನಿರಾಕರಿಸಿತ್ತು. 2012 ರಲ್ಲಿ ರಾಜ್ಯ ಹೈಕೋರ್ಟ್ ಕೂಡ ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಹೆಣ್ಣುಮಕ್ಕಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ವರದಿ : ರಾಕೇಶ್ ಎನ್.ಎಸ್ - ಕನ್ನಡಪ್ರಭ

click me!