RSS ಕಾರ್ಯಕರ್ತ ರಾಜು ಹತ್ಯೆ ಕಿಂಗ್ ಪಿನ್ ಅರೆಸ್ಟ್

By Web DeskFirst Published Apr 26, 2019, 9:31 AM IST
Highlights

ಆರ್‌ಎಸ್‌ಎಸ್‌ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಸೇರಿ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಸೇರಿದ ಐವರ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.

ಮೈಸೂರು :  ರಾಜ್ಯಾದ್ಯಂತ ಸುದ್ದಿಯಾಗಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತ ಕ್ಯಾತಮಾರನಹಳ್ಳಿ ರಾಜು ಸೇರಿ ಬಿಜೆಪಿ ಮತ್ತು ಸಂಘಪರಿವಾರಕ್ಕೆ ಸೇರಿದ ಐವರ ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮೈಸೂರಿನ ಕುವೆಂಪುನಗರ ಠಾಣೆ ಮತ್ತು ಸಿಸಿಬಿ ಘಟಕದ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಲಷ್ಕರ್‌ ಮೊಹಲ್ಲಾ ಎರಕಟ್ಟೆಬೀದಿ ನಿವಾಸಿ ಅಬ್ದುಲ್‌ ರವೂಫ್‌ ಷರೀಫ್‌ ಎಂಬವರ ಪುತ್ರ ಅತೀಕ್‌ ಅಹಮದ್‌ ಷರೀಫ್‌ ಅಲಿಯಾಸ್‌ ಟಿಂಬರ್‌ ಅತೀಕ್‌(39) ಬಂಧಿತ ಆರೋಪಿ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈತ ಐದು ವರ್ಷಗಳಿಂದ ತಲೆ ಮರೆಸಿಕೊಂಡಿದ್ದು, ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಸದ್ಯ ಮೈಸೂರು ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್‌ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಸಿಪಿ ಎಂ. ಮುತ್ತುರಾಜು, ಸಿಸಿಬಿ ಎಸಿಪಿ ವಿ. ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಕುವೆಂಪುನಗರ ಠಾಣೆಯ ಇನ್ಸ್‌ಪೆಕ್ಟರ್‌ ಜಿ.ಸಿ. ರಾಜು, ಸಿಬ್ಬಂದಿ ನಿರಂಜನ್‌, ರಾಜೇಂದ್ರ ಅವರು ಆರೋಪಿಯನ್ನು ಪತ್ತೆಹಚ್ಚಿದ್ದಾರೆ.

ಉದ್ವಿಗ್ನವಾಗಿತ್ತು ಮೈಸೂರು: ಮೈಸೂರಿನ ಉದಯಗಿರಿಯಲ್ಲಿ ರಸ್ತೆ ಬದಿ ಟೀ ಕುಡಿಯುತ್ತಿದ್ದಾಗ ಇಬ್ಬರು ಅಪರಿಚಿತರು ಆರೆಸ್ಸೆಸ್‌ ಕಾರ್ಯಕರ್ತ, ಕ್ಯಾತಮಾರನಹಳ್ಳಿ ರಾಜು (30) ಅವರನ್ನು 2016ರ ಮಾ.13ರಂದು ಹತ್ಯೆ ಮಾಡಲಾಗಿತ್ತು. ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತಲ್ಲದೆ, ಮೈಸೂರು ನಗರ ಬಂದ್‌ಗೂ ಕರೆ ನೀಡಲಾಗಿತ್ತು. ಈ ವೇಳೆ ನಡೆದ ಹಿಂಸಾಚಾರದಲ್ಲಿ ಕೆಲ ಬಸ್‌ಗಳ ಮೇಲೆ ಕಲ್ಲು ತೂರಾಟ, ಒಂದು ಬೈಕ್‌ ಹಾಗೂ ಆಟೋಗೆ ಬೆಂಕಿ ಹಚ್ಚಲಾಗಿತ್ತು. ರಾಜು ಅಂತ್ಯಕ್ರಿಯೆ ವೇಳೆಯೂ ಕಲ್ಲು ತೂರಾಟ ನಡೆದು ಮೈಸೂರು ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪ್ರಕರಣದಲ್ಲಿ ಅತೀಕ್‌ ಮಾತ್ರವಲ್ಲದೆ ಹಬೀಬ್‌ ಪಾಷಾ ಎಂಬಾತನ ಹೆಸರೂ ಕೇಳಿಬಂದಿತ್ತು

click me!