ಭಾರತೀಯ ವಿಮಾನ ನಿಲ್ದಾಣಗಳನ್ನು ಆಧುನೀಕರಣಗೊಳಿಸಲಿದೆ ರಷ್ಯನ್ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್?

By Suvarna NewsFirst Published Apr 25, 2024, 12:01 PM IST
Highlights

ಭಾರತ ಮತ್ತು ರಷ್ಯಾಗಳ ನಡುವೆ ಸ್ನೇಹ ಸಂಬಂಧದ ಒಂದು ಸುದೀರ್ಘ ಇತಿಹಾಸವಿದೆ. ಇತ್ತೀಚೆಗೆ ರಷ್ಯಾ ಭಾರತದ ಪ್ರಮುಖ ವ್ಯಾಪಾರ ಸಹಯೋಗಿಯಾಗಿ ಹೊರಹೊಮ್ಮಿದ ಬಳಿಕ, ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಇನ್ನಷ್ಟು ವೃದ್ಧಿಸಿದೆ.

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಭಾರತ ಮತ್ತು ರಷ್ಯಾಗಳ ನಡುವೆ ಸ್ನೇಹ ಸಂಬಂಧದ ಒಂದು ಸುದೀರ್ಘ ಇತಿಹಾಸವಿದೆ. ಇತ್ತೀಚೆಗೆ ರಷ್ಯಾ ಭಾರತದ ಪ್ರಮುಖ ವ್ಯಾಪಾರ ಸಹಯೋಗಿಯಾಗಿ ಹೊರಹೊಮ್ಮಿದ ಬಳಿಕ, ಎರಡೂ ರಾಷ್ಟ್ರಗಳ ನಡುವಿನ ಬಾಂಧವ್ಯ ಇನ್ನಷ್ಟು ವೃದ್ಧಿಸಿದೆ.

ಭಾರತದಲ್ಲಿನ ರಷ್ಯನ್ ರಾಯಭಾರ ಕಚೇರಿ ಇತ್ತೀಚೆಗೆ ರಷ್ಯನ್ ರಿಸರ್ಚ್ ಆ್ಯಂಡ್ ಪ್ರೊಡಕ್ಷನ್ ಅಸೋಸಿಯೇಷನ್ 'ರೇಡಿಯೋ ಟೆಕ್ನಿಕಲ್ ಸಿಸ್ಟಮ್ಸ್' (ಎನ್‌ಪಿಒ ಆರ್‌ಟಿಎಸ್) ಭಾರತದ ವಿಮಾನ ನಿಲ್ದಾಣಗಳನ್ನು ಆಧುನೀಕರಣಗೊಳಿಸುವ ಸಲುವಾಗಿ ಉಪಕರಣಗಳನ್ನು ಪೂರೈಸಿದೆ ಎಂದು ಘೋಷಿಸಿದೆ.

2022ನೇ ಇಸವಿಯ ದ್ವಿತೀಯ ತ್ರೈಮಾಸಿಕದಲ್ಲಿ ರಷ್ಯನ್ ಉತ್ಪಾದನಾ ಸಂಸ್ಥೆ ರೇಡಿಯೋ ಟೆಕ್ನಿಕಲ್ ಉಪಕರಣದ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿತು. ಈ ಒಪ್ಪಂದ ಇತ್ತೀಚಿನ ವರ್ಷಗಳಲ್ಲಿ ಇಂತಹ ಅತಿದೊಡ್ಡ ಒಪ್ಪಂದವಾಗಿತ್ತು. ಒಪ್ಪಂದದ ಪ್ರಮಾಣ ಬಹಳಷ್ಟು ಬೃಹತ್ತಾಗಿದ್ದರೂ, ರಷ್ಯನ್ ಕಂಪನಿ ಅತ್ಯಂತ ವೇಗವಾಗಿ ಉಪಕರಣಗಳ ಉತ್ಪಾದನೆ ನೆರವೇರಿಸಿ, ಪೂರೈಕೆ ಸಮಯದಲ್ಲಿ ಗ್ರಾಹಕರ ಎಲ್ಲ ನಿರ್ದಿಷ್ಟ ನಿರೀಕ್ಷೆಗಳನ್ನು ಪೂರೈಸಿತ್ತು. ರಷ್ಯನ್ ರಾಯಭಾರ ಕಚೇರಿಯ ಪ್ರಕಾರ, ಈ ಒಪ್ಪಂದದ ಅನುಸಾರವಾಗಿ ಪೂರೈಸಿದ ಮೊದಲ ಹಂತದ ಲ್ಯಾಂಡಿಂಗ್ ವ್ಯವಸ್ಥೆಗಳು ಈಗಾಗಲೇ ಬಳಕೆಯಲ್ಲಿವೆ.

ಬಾಹ್ಯಾಕಾಶದಿಂದ ಹಿಮಾಲಯದ ಹಿಮ ಸರೋವರಗಳ ಮೇಲೆ ಕಣ್ಣಿಟ್ಟ ಇಸ್ರೋ!

ಎನ್‌ಪಿಒ ಆರ್‌ಟಿಎಸ್ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ನಿರ್ವಹಿಸುತ್ತಿರುವ 24 ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು 34 ಜೊತೆ ಐಎಲ್ಎಸ್ 734 ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಮ್‌ಗಳನ್ನು ಉತ್ಪಾದಿಸಿದೆ.

ಈ ಉಪಕರಣಗಳ ನಾಲ್ಕು ತಂಡಗಳು ಈಗಾಗಲೇ ಭಾರತಕ್ಕೆ ರವಾನೆಯಾಗಿವೆ ಎಂದು ರಷ್ಯನ್ ರಾಯಭಾರ ಕಚೇರಿ ತಿಳಿಸಿದೆ. ಸಂಪೂರ್ಣ ಉಪಕರಣಗಳ ಪೂರೈಕೆ 2024ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಗಳಿವೆ.

ಭಾರತದಲ್ಲಿನ ರಷ್ಯನ್ ರಾಯಭಾರಿ ಡೆನಿಸ್ ಅಲಿಪೊವ್ ಅವರು ಎನ್‌ಪಿಒ ಆರ್‌ಟಿಎಸ್ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದೊಡನೆ ಕೈಗೊಂಡ ಒಪ್ಪಂದವನ್ನು ಪೂರ್ಣಗೊಳಿಸುವುದರಿಂದ, ಭಾರತೀಯ ವಿಮಾನ ನಿಲ್ದಾಣಗಳ ಮೂಲಭೂತ ವ್ಯವಸ್ಥೆ ಇನ್ನಷ್ಟು ಮೇಲ್ದರ್ಜೆಗೆ ಏರಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಅಲಿಪೊವ್ ಅವರು ಭಾರತೀಯ ಮಾರುಕಟ್ಟೆಯಲ್ಲಿ ರಷ್ಯನ್ ಸಂಸ್ಥೆಯ ಉಪಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಕ್ರಮಗಳಿಂದ, ಉಭಯ ದೇಶಗಳ ನಡುವೆ ಅತ್ಯುನ್ನತ ತಾಂತ್ರಿಕ ಸಹಯೋಗ ಏರ್ಪಡಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಐಎಲ್ಎಸ್ 734 ಎನ್ನುವುದು ಪೈಲಟ್‌ಗಳಿಗೆ ಸುರಕ್ಷಿತವಾಗಿ ಲ್ಯಾಂಡಿಂಗ್ ನಡೆಸಲು ನೆರವಾಗಲು ವಿಮಾನ ನಿಲ್ದಾಣಗಳಲ್ಲಿರುವ ಉಪಕರಣವಾಗಿದೆ. ಇದು ಮಳೆ ಮತ್ತು ದಟ್ಟ ಮಂಜಿನಿಂದ ವೀಕ್ಷಣೆಗೆ ಅಡಚಣೆಯಾದಾಗಲೂ ಲ್ಯಾಂಡಿಂಗ್ ನಡೆಸಲು ಪೈಲಟ್‌ಗಳಿಗೆ ನೆರವಾಗುತ್ತದೆ. ಈ ವ್ಯವಸ್ಥೆ ವಿಮಾನಕ್ಕೆ ರನ್‌ವೇ ಮೇಲಿನ ಸರಿಯಾದ ಪಥಕ್ಕೆ ಸಾಗಲು ಮಾರ್ಗದರ್ಶನ ನೀಡುವ ಸಂಕೇತಗಳನ್ನು ಕಳುಹಿಸುತ್ತದೆ. ಆ ಮೂಲಕ ವಿಮಾನ ಸೂಕ್ತವಾಗಿ ರನ್‌ವೇ ಮೇಲೆ ಬರುವಂತೆ ಖಾತ್ರಿಪಡಿಸುತ್ತದೆ. ವಿಮಾನ ನಿಲ್ದಾಣಗಳ ಸುರಕ್ಷಿತ ಮತ್ತು ಸಮರ್ಥ ಕಾರ್ಯಾಚರಣೆಗಳಿಗೆ ಈ ತಂತ್ರಜ್ಞಾನ ಅತ್ಯಂತ ಅವಶ್ಯಕವಾಗಿದೆ.

ಐಎಲ್ಎಸ್-734 ವ್ಯವಸ್ಥೆ ರನ್‌ವೇಯ ಗೋಚರತೆ ಕೇವಲ 50 ಮೀಟರ್ ಇರುವಾಗ ಮತ್ತು ನಿರ್ಧಾರ ಕೈಗೊಳ್ಳುವ ಎತ್ತರ ಕೇವಲ 15 ಮೀಟರ್ ಇರುವಾಗಲೂ ವಿಮಾನದ ಭೂಸ್ಪರ್ಶ ನಡೆಸಲು ಸಾಧ್ಯವಾಗಿಸುತ್ತದೆ.

ಆರ್‌ಟಿಎಸ್ ಸಿಇಒ ಅಲೆಕ್ಸಾಂಡರ್ ಡೊಲ್ಮಟೊವ್ ಅವರು ಕಠಿಣ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರುವ ಐಎಲ್ಎಸ್-734 ರೀತಿಯ ನಮ್ಮ ಉತ್ಪನ್ನಗಳನ್ನು ಗ್ರಾಹಕರು ಬಹಳಷ್ಟು ಶ್ಲಾಘಿಸುತ್ತಾರೆ ಎಂದಿದ್ದಾರೆ. ನಾವು ಒಪ್ಪಂದಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಕಾರಣದಿಂದ ಮತ್ತು ಉತ್ಪನ್ನಗಳಿಗೆ ವಾರಂಟಿ ಮತ್ತು ಖರೀದಿಯ ನಂತರದ ಸೇವೆಗಳನ್ನು ಒದಗಿಸುವ ಕಾರಣಕ್ಕಾಗಿ ಗ್ರಾಹಕರು ನಮ್ಮ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ವಿವರಿಸಿದ್ದಾರೆ.

ಮೋದಿ ಮೋಡಿ: ಲೋಕಸಭಾ ಚುನಾವಣಾ ಕಾಳಜಿ, ಸವಾಲು, ಗಿರೀಶ್ ಲಿಂಗಣ್ಣ

ಐಎಲ್ಎಸ್ 734 ವ್ಯವಸ್ಥೆಯ ಖರೀದಿಗೂ ಮುನ್ನ, ಭಾರತದ ಪ್ರಮುಖ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಇನ್ಸ್ಟ್ರುಮೆಂಟ್ ಲ್ಯಾಂಡಿಂಗ್ ವ್ಯವಸ್ಥೆಗಳಿದ್ದವು. ಈ ವ್ಯವಸ್ಥೆಗಳು ಅತ್ಯಂತ ಕನಿಷ್ಠ ಗೋಚರತೆಯ ಸಂದರ್ಭದಲ್ಲೂ ಸುರಕ್ಷಿತ ಲ್ಯಾಂಡಿಂಗ್ ನಡೆಸಲು ನೆರವಾಗುವ ಗುಣಮಟ್ಟದ ಉಪಕರಣಗಳಾಗಿದ್ದವು. ಐಎಲ್ಎಸ್ 734 ವ್ಯವಸ್ಥೆಯನ್ನು ಭಾರತೀಯ ವಿಮಾನ ನಿಲ್ದಾಣಗಳಲ್ಲಿ ಪರಿಚಯಿಸಿರುವುದು ಈಗಾಗಲೇ ಇರುವ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಿದಂತಾಗಿದೆ. ಇದರಿಂದಾಗಿ ಸ್ಥಳೀಯ ವಿಮಾನ ನಿಲ್ದಾಣಗಳಿಗೂ ಸಹ ಆಧುನಿಕ ಲ್ಯಾಂಡಿಂಗ್ ನೆರವು ಲಭಿಸುತ್ತದೆ.

click me!