ಕೆಂಪು ಕೇರಳವನ್ನು ಕೇಸರಿಮಯ ಮಾಡಲು ಬಿಜೆಪಿಗೆ ಮೋಹನ್‌ಲಾಲ್‌?

By Web DeskFirst Published Sep 4, 2018, 1:43 PM IST
Highlights

ಕೇರಳದ ಪ್ರಸಿದ್ಧ ನಟ ಮೋಹನಲಾಲ್ಗೆ ಬಿಜೆಪಿ ಗಾಳ?! ಕಾಂಗ್ರೆಸ್ ಮುಖಂಡ ಶಶಿ ತರೂರ್ ವಿರುದ್ಧ ಮೋಹನ್ ಲಾಲ್ ಸ್ಪರ್ಧೆ?! ತಿರುವನಂತಪುರಂ ಕ್ಷೇತ್ರದಿಂದ ಮೋಹನ್ ಲಾಲ್ಗೆ ಬಿಜೆಪಿ ಟಿಕೆಟ್ ಸಾಧ್ಯತೆ!
ಮೋಹನ್ ಲಾಲ್ ಪ್ರಧಾನಿ ಮೋದಿ ಭೇಟಿಯಾದ ಬೆನ್ನಲ್ಲೇ ಮಹತ್ವದ ಬೆಳವಣಿಗೆ! ಕೇರಳದಿಂದ ಲೋಕಸಭೆ ಚುನಾವಣೆಯಲ್ಲಿ  ಮೋಹನಲಾಲ್ ಕಣಕ್ಕಿಳಿಸಲು ಬಿಜೆಪಿ ಸಿದ್ಧತೆ
 

ತಿರುವನಂತಪುರಂ(ಸೆ.4): ಕೇರಳದಲ್ಲಿ ಬಿಜೆಪಿ ನೆಲೆ ಗಟ್ಟಿಗೊಳಿಸಲು ಮುಂದಾಗಿರುವ ಆರ್‌ಎಸ್‌ಎಸ್‌, ಈ ಪ್ರಯತ್ನದ ಭಾಗವಾಗಿ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್‌ಲಾಲ್‌ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಯೋಜನೆ ರೂಪಿಸಿದೆ ಎನ್ನಲಾಗಿದೆ. 

ಮೋಹನ್‌ಲಾಲ್‌ ಅವರನ್ನು ಕೇರಳದ ತಿರುವನಂತಪುರಂನಿಂದ ಸ್ಪರ್ಧಿಸುವಂತೆ ಆರ್‌ಎಸ್‌ಎಸ್‌ ಈಗಾಗಲೇ ಕೇಳಿಕೊಂಡಿದೆ ಎಂಬ ಮಾತುಗಳೂ ಕೇಳಿ ಬರುತ್ತಿವೆ. 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಹರಡಿದೆಯಾದರೂ ಮೋಹನ್‌ಲಾಲ್‌ ಇದನ್ನು ಖಚಿತ ಪಡಿಸಿಲ್ಲ. 

ಮೋಹನ್‌ಲಾಲ್‌ರನ್ನ ಪಕ್ಷಕ್ಕೆ ಸೆಳೆಯಲು ಆರ್‌ಎಸ್ಎಸ್‌ ಹೆಚ್ಚಿನ ಆಸಕ್ತಿ ವಹಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಸ್ಪರ್ಧೆಗೆ ಮನವೋಲಿಸಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ವೈಯನಾಡಿನಲ್ಲಿ ತಮ್ಮ ಫೌಂಡೇಷನ್‌ ಆಯೋಜಿಸಿರುವ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲು ನಿನ್ನೆ ಮೋಹನ್‌ಲಾಲ್‌ ದೆಹಲಿ ಭೇಟಿ ನೀಡಿದ್ದರು. ಈ ಭೇಟಿಯ ಬಳಿಕ ಮೋಹನ್‌ಲಾಲ್ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 

ಮೋಹನ್‌ಲಾಲ್‌ ತಮ್ಮ ತಂದೆ ವಿಶ್ವನಾಥನ್‌ ನಾಯರ್‌ ಮತ್ತು ತಾಯಿ ಶಾಂತಾಕುಮಾರಿ ಅವರ ಸ್ಮರಣಾರ್ಥ ವಿಶ್ವಶಾಂತಿ ಫೌಂಡೇಷನ್‌ ಸ್ಥಾಪಿಸಿದ್ದಾರೆ. ವೈಯನಾಡಿನಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಸಂಸ್ಥೆ ನಿರ್ಮಿಸಲಾಗಿದ್ದು, ಇದರ ಉದ್ಘಾಟನೆಗೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿದೆ.

click me!