ಸೇನಾ ಮುಖ್ಯಸ್ಥ ಜ. ಕಾರ್ಯಪ್ಪ ಹತ್ಯೆಗೆ ಸಂಚು ನಡೆದಿತ್ತೇ..?

Published : Jan 29, 2017, 03:14 PM ISTUpdated : Apr 11, 2018, 12:42 PM IST
ಸೇನಾ ಮುಖ್ಯಸ್ಥ ಜ. ಕಾರ್ಯಪ್ಪ ಹತ್ಯೆಗೆ ಸಂಚು ನಡೆದಿತ್ತೇ..?

ಸಾರಾಂಶ

'ಇದೊಂದು ಅಸಂಬದ್ಧವಾದ ವರದಿ. ಈ ಬಗ್ಗೆ ನಾನೆಂದೂ ಕೇಳಿಲ್ಲ. ಅಷ್ಟೇ ಏಕೆ ಯಾರೊಬ್ಬರೂ ಕೇಳಿಲ್ಲ. ಸೇನಾ ಮುಖ್ಯಸ್ಥರಾದ ಒಂದೇ ವರ್ಷದಲ್ಲಿ ರಾಜಕಾರಣಿಗಳ ಜತೆ ಕಾರ್ಯಪ್ಪ ಉತ್ತಮ ಬಾಂಧವ್ಯ ಹೊಂದಿದ್ದರು'. - ನಿವೃತ್ತ ಏರ್ ಮಾರ್ಷಲ್ ನಂದಾ ಕಾರ್ಯಪ್ಪ, ಕಾರ್ಯಪ್ಪ ಪುತ್ರ

ನವದೆಹಲಿ(ಜ.29): ಕೊಡಗಿನ ವೀರಪುತ್ರ, ದೇಶದ ಮೊದಲ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರನ್ನು ಕೊಲ್ಲಲು 1950ರಲ್ಲಿ ಸಂಚು ನಡೆದಿತ್ತು ಎಂಬ ಅತ್ಯಂತ ರಹಸ್ಯ ಹಾಗೂ ಸ್ಫೋಟಕ ಮಾಹಿತಿಯೊಂದು ಇದೀಗ ಬಹಿರಂಗವಾಗಿದೆ. ಈ ಪ್ರಕರಣದಲ್ಲಿ ಕಾರ್ಯಪ್ಪ ವಿರುದ್ಧದ ಆಕ್ರೋಶಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತುಪ್ಪ ಸುರಿಯಲು ಯತ್ನಿಸಿತ್ತು ಎಂಬುದು ಅಚ್ಚರಿಗೆ ಕಾರಣವಾಗಿದೆ.

ದಕ್ಷಿಣ ಭಾರತದ ಕಾರ್ಯಪ್ಪ ಅವರು ಸೇನಾ ಮುಖ್ಯಸ್ಥರಾಗುವುದು ಉತ್ತರ ಭಾರತೀಯ ಸಿಖ್ಖರಿಗೆ ಇಷ್ಟವಿರಲಿಲ್ಲ. ಆದರೆ ಟ್ರಾವಾಂಕೂರು (ಈಗಿನ ಕೇರಳ), ಮದ್ರಾಸ್ ಹಾಗೂ ಮಹಾರಾಷ್ಟ್ರದ ಅಧಿಕಾರಿಗಳು ಕಾರ್ಯಪ್ಪ ಅವರ ಪರವಾಗಿ ಬಲಿಷ್ಠವಾಗಿ ನಿಂತಿದ್ದರು. ಇದರಿಂದಾಗಿ ಸೇನೆಯಲ್ಲಿ ಒಡಕು ಕಾಣಿಸಿಕೊಂಡಿತ್ತು. ಈ ಹಂತದಲ್ಲಿ ಲಾಭ ಪಡೆಯಲು ಆರೆಸ್ಸೆಸ್ ಯತ್ನಿಸಿತ್ತು. ಸೇನೆಯಲ್ಲಿನ ಒಡಕನ್ನು ಹೆಚ್ಚಿಸಲು ನಿಷ್ಠೆ ಇಲ್ಲದ, ನಂಬಿಕಸ್ಥರಲ್ಲದ ಸಿಖ್ ಅಧಿಕಾರಿಗಳಿಗೆ ಕುಮ್ಮಕ್ಕು ನೀಡಿತ್ತು ಎಂಬ ಅಂಶ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಬಿಡುಗಡೆ ಮಾಡಿರುವ ‘ರಿಫ್ಟ್ ಇನ್ ಆಫೀಸರ್ಸ್‌ ಕೋರ್ಸ್‌ ಆಫ್ ದ ಇಂಡಿಯನ್ ಆರ್ಮಿ’ ಎಂಬ ರಹಸ್ಯ ವರದಿಯಲ್ಲಿದೆ.

ದೇಶ ವಿಭಜನೆ ನಂತರ ಪಂಜಾಬ್ ಪ್ರಾಂತ್ಯ ಪೂರ್ವ ಹಾಗೂ ಪಶ್ಚಿಮ ಪಂಜಾಬ್ ಎಂದು ವಿಭಜನೆಯಾಗಿತ್ತು. ಪೂರ್ವ ಭಾಗ ಭಾರತದ ಪಾಲಾಗಿತ್ತು. ಅದನ್ನು 1950ರಲ್ಲಿ ಭಾರತ ಸರ್ಕಾರ ಪಂಜಾಬ್ ಎಂದು ಮರುನಾಮಕರಣ ಮಾಡಿತ್ತು. ಭಾರತ ಹಾಗೂ ಪಾಕಿಸ್ತಾನ ನಡುವಣ ಸೇನಾ ಆಸ್ತಿಯನ್ನು ವಿಭಜನೆ ಮಾಡುವ ಹೊಣೆಗಾರಿಕೆಯನ್ನು ಕೆ.ಎಂ. ಕಾರ್ಯಪ್ಪ ಅವರಿಗೆ ವಹಿಸಲಾಗಿತ್ತು. ಕಾರ್ಯಪ್ಪ ಅವರು ಪೂರ್ವ ಪಂಜಾಬ್‌'ಗೆ ಪರಿಶೀಲನೆಗೆಂದು ತೆರಳಿದ್ದಾಗ ಅವರ ಹತ್ಯೆಗೆ ಯತ್ನ ನಡೆದಿತ್ತು. ಈ ಸಂಬಂಧ ಆರು ಮಂದಿಗೆ ಆಗಲೇ ಗಲ್ಲು ಶಿಕ್ಷೆ ವಿಧಿಸಲಾಗಿತ್ತು ಎಂದು ವರದಿ ಹೇಳುತ್ತದೆ. ಆದರೆ ಆ ಆರು ಮಂದಿಯನ್ನು ನೇಣುಗಂಬಕ್ಕೇರಿಸಲಾಯಿತೇ ಎಂಬ ಕುರಿತು ಸ್ಪಷ್ಟ ಮಾಹಿತಿ ಇಲ್ಲ. ವಿಶೇಷ ಎಂದರೆ ಕಾರ್ಯಪ್ಪ ಹತ್ಯೆ ಸಂಚಿನ ವಿಷಯ ಈವರೆಗೂ ಬಹುತೇಕ ಮಂದಿಗೆ ಗೊತ್ತಿಲ್ಲ. ಇಂಟರ್ನೆಟ್‌'ನಲ್ಲೂ ಈ ಮಾಹಿತಿ ಇಲ್ಲ.

50ರ ದಶಕದಲ್ಲಿ ಹಾಗೂ ನಂತರದ ದಶಕಗಳಲ್ಲಿ ಆರ್‌ಎಸ್‌ಎಸ್ ನಾಯಕತ್ವ ಮಹಾರಾಷ್ಟ್ರದ ಬ್ರಾಹ್ಮಣವಾದದಿಂದ ಪ್ರಭಾವಿತವಾಗಿತ್ತಾದರೂ, ಕಾರ್ಯಪ್ಪ ವಿರುದ್ಧ ನಿಂತಿದ್ದು ಏಕೆ ಎಂಬುದರ ಬಗ್ಗೆ ಕೂಡ ಸ್ಪಷ್ಟತೆ ಇಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೀರವೈಶ ಲಿಂಗಾಯತ ಸಮಾಜ ಒಡೆದಾಳಲು ಯತ್ನ: ವಿಜಯೇಂದ್ರ
ತಾಕತ್ತಿದ್ರೆ ನೋಟಲ್ಲಿರುವ ಗಾಂಧಿ ಚಿತ್ರ ತೆಗೆಯಿರಿ: ಕೇಂದ್ರಕ್ಕೆ ಡಿಕೆಶಿ ಸವಾಲು!