ಗೂಡಂಗಡಿ, ಗುಡಿಸಲಿಗೂ ರಾಜ್ಯ ಸರ್ಕಾರದಿಂದಲೇ ನೆರೆ ಪರಿಹಾರ

By Web DeskFirst Published Oct 10, 2019, 11:59 AM IST
Highlights

ಪ್ರವಾಹದಿಂದ ಗುಡಿಸಲು, ಗೂಡಂಗಡಿ, ಮಗ್ಗಗಳಿಗೆ ಹಾನಿಯಾಗಿರುವುದಕ್ಕೆ ಕೇಂದ್ರ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ಪರಿಹಾರ ನೀಡಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದಲೇ ಸೂಕ್ತ ಪರಿಹಾರ ನೀಡಲು ಉದ್ದೇಶಿಸಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ಬೆಂಗಳೂರು (ಅ. 11):  ಪ್ರವಾಹದಿಂದ ಗುಡಿಸಲು, ಗೂಡಂಗಡಿ, ಮಗ್ಗಗಳಿಗೆ ಹಾನಿಯಾಗಿರುವುದಕ್ಕೆ ಕೇಂದ್ರ ವಿಪತ್ತು ಪರಿಹಾರ ನಿಧಿಯಿಂದ (ಎನ್‌ಡಿಆರ್‌ಎಫ್‌) ಪರಿಹಾರ ನೀಡಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದಲೇ ಸೂಕ್ತ ಪರಿಹಾರ ನೀಡಲು ಉದ್ದೇಶಿಸಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ನಡೆದ ಬರ ಮತ್ತು ನೆರೆ ಪರಿಹಾರ ಕುರಿತ ಸಂಪುಟ ಉಪಸಮಿತಿ ಸಭೆ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಅಂದಾಜು ಮೂರು ಸಾವಿರ ಗುಡಿಸಲು, 1200ಕ್ಕೂ ಹೆಚ್ಚು ಗೂಡಂಗಡಿ ಸೇರಿದಂತೆ ಬೆಳಗಾವಿ ಭಾಗದಲ್ಲಿ ಮಗ್ಗಗಳು ಪ್ರವಾಹದಿಂದ ಹಾನಿಯಾಗಿವೆ.

ದಸರಾ ಯಶಸ್ವಿ, ಇನ್ನೇನಿದ್ದರೂ ನಿರಾಶ್ರಿತರಿಗೆ ಮನೆ: ಸೋಮಣ್ಣ

ಕೇಂದ್ರದ ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ಇವುಗಳಿಗೆ ಪರಿಹಾರ ಕೊಡಲು ಅವಕಾಶ ಇಲ್ಲ. ಹಾಗಾಗಿ ಇಂದಿನ ಸಭೆಯಲ್ಲಿ ಇವುಗಳಿಗೆ ರಾಜ್ಯ ಸರ್ಕಾರದಿಂದ ಪರಿಹಾರ ಕೊಡಬೇಕು ಎಂದು ನಿರ್ಧರಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಬೆಳೆ ಹಾನಿಗೆ ಪರಿಹಾರ:

ಕೇಂದ್ರ ಸರ್ಕಾರ ಪ್ರವಾಹ ಪರಿಹಾರಕ್ಕೆ ನೀಡಿರುವ 1200 ಕೋಟಿ ರು. ಹಣದ ಪೈಕಿ 1035 ಕೋಟಿ ರು. ಹಣವನ್ನು ಬೆಳೆಹಾನಿಗೆ ಬಳಸಲಾಗುವುದು, ಉಳಿದ ಹಣವನ್ನು ಶಾಲೆ, ಜಿ.ಪಂ. ರಸ್ತೆಗಳ ದುರಸ್ತಿ ಮುಂತಾದವುಗಳಿಗೆ ಉಪಯೋಗಿಸಲು ಸಭೆ ನಿರ್ಧರಿಸಿದೆ. ರಸ್ತೆಗಳ ದುರಸ್ತಿಗೆ ಈಗಾಗಲೇ ಲೋಕೋಪಯೋಗಿ ಇಲಾಖೆಗೆ 500 ಕೋಟಿ ರು. ಬಿಡುಗಡೆ ಮಾಡಲಾಗಿದೆ. 50 ಲಕ್ಷ ರು.ಗಿಂತ ಕಡಿಮೆ ಮೊತ್ತ ಇರುವ ಕಾಮಗಾರಿಗಳಿಗೆ ನೇರವಾಗಿ ಬಿಡುಗಡೆ ಮಾಡಲಾಗುವುದು, 50 ಲಕ್ಷ ರು.ಗಿಂತ ಹೆಚ್ಚು ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ನೀಡಲಾಗುವುದು ಎಂದು ಸಚಿವರು ವಿವರಿಸಿದರು.

ಪರಿಹಾರಕ್ಕೆ ಚಾತಕ ಪಕ್ಷಿಯಂತೆ ಕಾಯುತ್ತಿರುವ ಬಾಗಲಕೋಟೆ ಸಂತ್ರಸ್ತರು

ಬರ ತಾಲೂಕು ಗುರುತಿಗೆ ಸೂಚನೆ:

ರಾಜ್ಯದಲ್ಲಿ ಪ್ರಸಕ್ತ ವರ್ಷ ವಾಡಿಕೆಗಿಂತ ಶೇ.15ರಷ್ಟುಮಳೆಯಾಗಿದೆ. ಈಗಲೂ ರಾಜ್ಯದ ಅನೇಕ ಕಡೆ ಮಳೆ ಬೀಳುತ್ತಿದೆ. ಹಾನಿಯಾಗುವಂತಹ ಮಳೆ ಬರುವ ಸಾಧ್ಯತೆ ಇಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ರಾಜ್ಯದ ನಾಲ್ಕೈದು ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿ ಬರ ಪರಿಸ್ಥಿತಿ ಎದುರಿಸುತ್ತಿವೆ.

ಪ್ರಮುಖವಾಗಿ ಕೋಲಾರ, ಬೀದರ್‌, ಯಾದಗಿರಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಇಂತಹ ತಾಲೂಕುಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬರಪೀಡಿತ ತಾಲೂಕುಗಳ ಪಟ್ಟಿಯನ್ನು ಈ ತಿಂಗಳೊಳಗೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಪರಿಹಾರ ಕೇಳಲಾಗುವುದು ಎಂದು ಆರ್‌. ಅಶೋಕ್‌ ತಿಳಿಸಿದರು.

ಪರಿಹಾರ ನೀಡಿದ್ದು ಪ್ರವಾಹಕ್ಕೇ ಹೊರತು ಬರಕ್ಕೆ ಅಲ್ಲ

ಕೇಂದ್ರ ಸರ್ಕಾರ ನೀಡಿರುವ 1200 ಕೋಟಿ ರು. ಪರಿಹಾರ ಬರ ಸಂಬಂಧ ಅಲ್ಲ. ಕೇಂದ್ರದ ಆದೇಶದಲ್ಲಿ 2019ನೇ ಸಾಲಿನ ಪ್ರವಾಹ ಪೀಡಿತ ಪ್ರದೇಶದಲ್ಲಿ ಆಗಿರುವ ಹಾನಿಗೆ ಪರಿಹಾರ ಒದಗಿಸುವ ಉದ್ದೇಶದಿಂದ ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಈ ಬಗ್ಗೆ ದೇವೇಗೌಡ ಅಥವಾ ಕುಮಾರಸ್ವಾಮಿ ಅವರು ಅನುಮಾನ ಪಡುವ ಅವಶ್ಯಕತೆ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಸಿಎಂ-ಸ್ಪೀಕರ್‌ ಮಧ್ಯೆ ಅಸಮಾಧಾನ ಇಲ್ಲ

ವಿಧಾನಸಭೆ ಕಲಾಪದ ಚಿತ್ರೀಕರಣಕ್ಕೆ ವಿದ್ಯುನ್ಮಾನ ಮಾಧ್ಯಮಗಳಿಗೆ ನಿರ್ಬಂಧ ಹೇರುವ ಕುರಿತಂತೆ ಸಭಾಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳ ನಡುವೆ ಯಾವುದೇ ಅಸಮಾಧಾನ, ಬೇಸರ ಇಲ್ಲ. ನಿರ್ಬಂಧಿಸುವ ಕುರಿತು ಕಳೆದ ಏಳೆಂಟು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಆದರೆ ಈಗ ವಿದ್ಯುನ್ಮಾನ ಮಾಧ್ಯಮಗಳಿಗೆ ಚಿತ್ರೀಕರಣಕ್ಕೆ ನಿರ್ಬಂಧಿಸುವ ವಿಷಯದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವುದಾಗಿ ಸಚಿವ ಆರ್‌. ಅಶೋಕ್‌ ತಿಳಿಸಿದರು.

click me!