ಪರಿಹಾರಕ್ಕೆ ಚಾತಕಪಕ್ಷಿಯಂತೆ ಕಾಯುತ್ತಿರುವ ಬಾಗಲಕೋಟೆ ಸಂತ್ರಸ್ತರು
ಘಟಪ್ರಭಾ ನದಿ ಪ್ರವಾಹಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡು, ಮರಳಿ ಬದುಕು ಕಟ್ಟಿಕೊಳ್ಳಲು ಜನರು ಹೆಣಗಾಡುತ್ತಿದ್ದಾರೆ| ಸ್ಪಂದಿಸಬೇಕಾದ ಸರ್ಕಾರ ಇನ್ನೂ ಹಲವಾರು ಕುಟುಂಬಗಳಿಗೆ ತುರ್ತು ಪರಿಹಾರವಾಗಿ ಕೊಡಬೇಕಾದ 10 ಸಾವಿರ ಹಣವನ್ನು ಬಿಡುಗಡೆ ಮಾಡದಿರುವುದರಿಂದ ಜನರ ಗೋಳಾಟಕ್ಕೆ ಮುಕ್ತಿ ದೊರೆತಿಲ್ಲ| ಜಿಲ್ಲಾಡಳಿತ ಪ್ರವಾಹ ಸಂತ್ರಸ್ತರ ಪಟ್ಟಿ ಮಾಡಿ ಅವರ ಕುಟುಂಬಕ್ಕೆ ತುರ್ತು ಪರಿಹಾರ 10,000 ಖಾತೆಗೆ ಜಮಾ ಮಾಡಿತು| ಇನ್ನೂ ಹಲವಾರು ಪ್ರವಾಹ ಸಂತ್ರಸ್ತ ಕುಟುಂಬಸ್ಥರಿಗೆ ಈ ತುರ್ತು ಪರಿಹಾರ ಧನವೂ ಸಿಗದೆ ನೆಲೆ ಕಾಣಲು ಅಲೆದಾಡುತ್ತಿದ್ದಾರೆ|
ಚಂದ್ರಶೇಖರ ಹಡಪದ
ಕಲಾದಗಿ(ಅ.7) ಘಟಪ್ರಭಾ ನದಿ ಪ್ರವಾಹಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡು, ಮರಳಿ ಬದುಕು ಕಟ್ಟಿಕೊಳ್ಳಲು ಜನರು ಹೆಣಗಾಡುತ್ತಿದ್ದಾರೆ. ಇದಕ್ಕೆ ಸ್ಪಂದಿಸಬೇಕಾದ ಸರ್ಕಾರ ಇನ್ನೂ ಹಲವಾರು ಕುಟುಂಬಗಳಿಗೆ ತುರ್ತು ಪರಿಹಾರವಾಗಿ ಕೊಡಬೇಕಾದ 10 ಸಾವಿರ ಹಣವನ್ನು ಬಿಡುಗಡೆ ಮಾಡದಿರುವುದರಿಂದ ಜನರ ಗೋಳಾಟಕ್ಕೆ ಮುಕ್ತಿ ದೊರೆತಿಲ್ಲ.
ಆ.8 ರಿಂದ ಗ್ರಾಮದಲ್ಲಿ ನದಿ ನೆರೆ ಪ್ರವಾಹ ಉಂಟಾಗಿ ಮನೆಯೊಳಗೆ ನೀರು ನುಗ್ಗಿ ಜನರು ಹದಿನೈದು ದಿನಗಳ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಪ್ರವಾಹ ಇಳಿಮುಖವಾಗುತ್ತಿದ್ದಂತೆ ಸಂತ್ರಸ್ತರು ಮನೆಯತ್ತ ಮುಖ ಮಾಡಿದರೆ ಮನೆಗಳು ಬಿದ್ದು ಹಾನಿಯಾಗಿದ್ದವು. ಜಿಲ್ಲಾಡಳಿತ ಪ್ರವಾಹ ಸಂತ್ರಸ್ತರ ಪಟ್ಟಿ ಮಾಡಿ ಅವರ ಕುಟುಂಬಕ್ಕೆ ತುರ್ತು ಪರಿಹಾರ 10,000 ಖಾತೆಗೆ ಜಮಾ ಮಾಡಿತು. ಇನ್ನೂ ಹಲವಾರು ಪ್ರವಾಹ ಸಂತ್ರಸ್ತ ಕುಟುಂಬಸ್ಥರಿಗೆ ಈ ತುರ್ತು ಪರಿಹಾರ ಧನವೂ ಸಿಗದೆ ನೆಲೆ ಕಾಣಲು ಅಲೆದಾಡುತ್ತಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗ್ರಾಮವೊಂದರಲ್ಲೇ 703 ಕುಟುಂಬಗಳು ಪ್ರವಾಹ ಸಂತ್ರಸ್ತ ಕುಟುಂಬಗಳೆಂದು ಪರಿಗಣಿಸಿ ಆ ಕುಟುಂಬಗಳಿಗೆ ತುರ್ತು ಪರಿಹಾರ ಧನದ ಜೊತೆಗೆ ಸರ್ಕಾರ ಪರಿಹಾರದ ಕಿಟ್ ಕೊಡಲಾಗಿದೆ. ಪ್ರವಾಹದಲ್ಲಿ ಹೆಚ್ಚಿನ ಸಂತ್ರಸ್ತ 92 ಕುಟುಂಬಗಳಿಗೆ ಈ ತುರ್ತು ಪರಿಹಾರ ಧನವೂ ನೀಡಿಲ್ಲ. ಗ್ರಾಮದಲ್ಲಿನ ರಾಜಶೇಖರ ಪರಸಪ್ಪ ವಗ್ಯಾನ್ನವರ್, ಸದಾಶಿವ ಆಸಂಗಿ, ಬಾಬುಸಾಬ ಬೂದಿಹಾಳ, ಕೃಷ್ಣಾ ಲಚ್ಚಪ್ಪ ಬಡಿಗೇರ, ಈರಣ್ಣ ಸಂಗಡಿ ಮುಂತಾದವರಿಗೆ ತುರ್ತು ಪರಿಹಾರ ಧನ ಸಿಕ್ಕಲ್ಲ ಎನ್ನುತ್ತಿದ್ದಾರೆ. ಹೀಗಾಗಿ ಗ್ರಾಮದಲ್ಲಿನ ಹಲವಾರು ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಪರಿಹಾರ ಧನ ನೀಡಿಲ್ಲವಾದ್ದರಿಂದ ಬದುಕು ಕಟ್ಟಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಶೀಘ್ರವೇ ಸರ್ಕಾರ ಪ್ರವಾಹ ಸಂತ್ರಸ್ತ ಕುಟುಂಬಗಳಿಗೆ ತುರ್ತು ಪರಿಹಾರ ಧನವನ್ನೂ ನೀಡಿ ಸಂತ್ರಸ್ತ ಕುಟುಂಬಕ್ಕೆ ಆಸರೆಯಾಗಬೇಕೆಂದು ಸಂತ್ರಸ್ತ ಕುಟುಂಬಗಳ ಅಳಲಾಗಿದೆ.
ಸರ್ಕಾರದತ್ತ ನೋಟ:
ನದಿ ಪ್ರವಾಹಕ್ಕೆ ಸಾವಿರಾರು ಜೀವನ ಅಸ್ತವ್ಯಸ್ಥಗೊಂಡು ಬೀದಿ ಬದುಕು ನಡೆಸಿದರೆ, ಇತ್ತ ಪ್ರವಾಹಕ್ಕೆ ರೈತನ ಬೆಳೆ ಹಾನಿಯಾಗಿ ಹಾನಿಯಾದ ಬೆಳೆಗೆ ಪರಿಹಾರ ಹಣಕ್ಕಾಗಿ ರೈತ ಜಾತಕಪಕ್ಷಿಯಂತೆ ಕಾದು ಕಂಗಾಲಾಗಿದ್ದಾನೆ. ನದಿ ಪ್ರವಾಹ ಎಂಬ ಪಿಶಾಚಿಗೆ ರೈತನ ಬದಕು ಮೂರಾಬಟ್ಟೆಯಾಗಿದೆ. ಬಿತ್ತಿದ ಬೆಳೆಗಳು ಪ್ರವಾಹಕ್ಕೆ ಸಿಲುಕಿ ಹಾನಿಯಾಗಿವೆ. ಇದರಿಂದ ರೈತನಿಗೆ ಬಾರಿ ಹಾನಿ ನಷ್ಟವಾಗಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಬಹುದೆಂದು ಭರವಸೆಯ ಸರ್ಕಾರದತ್ತ ನೋಡುವಂತಾಗಿದೆ.
ಎಷ್ಟು ಹಾನಿ?:
ಕಲಾದಗಿ ಹೋಬಳಿ ವ್ಯಾಪ್ತಿಯಲ್ಲಿ 902 ಹೆಕ್ಟೇರ್ ಪ್ರದೇಶದ ದಾಳಿಂಬೆ ಬೆಳೆ ಹಾನಿಯಾಗಿದೆ. ಚಿಕ್ಕು 150 ಹಕ್ಟೇರ್, ಲಿಂಬೆ, 28 ಹೆಕ್ಟೇರ್, ಮಾವು 20 ಹೆಕ್ಟೇರ್, ಬಾಳೆ, 20 ಹೆಕ್ಟೇರ್, ಪಾಪ್ಪಾಯಾ 2 ಹೆಕ್ಟೇರ್, ಈರುಳ್ಳಿ 430 ಹೆಕ್ಟೇರ್, ಇತರೆ ತರಕಾರಿ ಬೆಳೆ 30 ಹೆಕ್ಟೇರ್ ಪ್ರದೇಶ, 2348 ರೈತರ ಒಟ್ಟು 1612 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದ್ದು ಈ ಎಲ್ಲಾ ರೈತರೂ ಬೆಳೆ ಹಾನಿ ಸಂಕಷ್ಟ ಅನುಭವಿಸುತ್ತಿದ್ದಾರೆ.
ಹೊಲದಲ್ಲಿ ಬೆಳೆದ ಕಬ್ಬು ಪ್ರವಾಹಕ್ಕೆ ಸಂಪೂರ್ಣ ನೆಲಕಚ್ಚಿದ್ದು ಹಾನಿಯ ಕಬ್ಬಿನ ಬೆಳೆಯನ್ನು ತೋಟದಲ್ಲಿಯೇ ಇಟ್ಟುಕೊಂಡು ರೈತ ಕಣ್ಣೀರು ಸುರಿಸುತ್ತಿದ್ದಾನೆ. ಸರ್ಕಾರ ಪರಿಹಾರದ ಮೊತ್ತದ ಕಡೆಗೆ ನೋಟ ನೆಟ್ಟಿದ್ದು ಎಷ್ಟು ಪರಿಹಾರ ಏನೆಂಬುವುದು ತಿಳಿಯುತ್ತಿಲ್ಲ. ಈಗಾಗಲೇ ಎರಡು ತಿಂಗಲು ಕಳೆಯುತ್ತಿದ್ದು ಇನ್ನೆಷ್ಟುದಿನ ಕಾಯಬೇಕೋ ಏನು ಎನ್ನುತ್ತಾ ಇತ್ತ ಹಾನಿಯಾದ ಬೆಳೆಯನ್ನು ತೆರವು ಮಾಡಲು ಹಣವಿಲ್ಲದೆ ಒದ್ದಾಡುತ್ತಿದ್ದಾನೆ.