ಸಿದ್ದರಾಮಯ್ಯಗೆ ರೇವಣ ಸಿದ್ದಯ್ಯ ಶಾಕ್‌

First Published Apr 23, 2018, 8:45 AM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಿಡಿದೆದ್ದು ಕಾಂಗ್ರೆಸ್‌ ಸದಸ್ಯತ್ವಕ್ಕೆ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಮತ್ತು ಪ್ರಬಲ ವೀರಶೈವ ಲಿಂಗಾಯತ ಮುಖಂಡ ಎಲ್‌. ರೇವಣಸಿದ್ದಯ್ಯ ರಾಜೀನಾಮೆ ನೀಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಿಡಿದೆದ್ದು ಕಾಂಗ್ರೆಸ್‌ ಸದಸ್ಯತ್ವಕ್ಕೆ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಮತ್ತು ಪ್ರಬಲ ವೀರಶೈವ ಲಿಂಗಾಯತ ಮುಖಂಡ ಎಲ್‌. ರೇವಣಸಿದ್ದಯ್ಯ ರಾಜೀನಾಮೆ ನೀಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ವರುಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಎರಡೂ ಕ್ಷೇತ್ರಗಳನ್ನು ಪ್ರತಿಷ್ಠೆಯ ಕಣಗಳಾಗಿ ತೆಗೆದುಕೊಂಡಿದ್ದು, ಈ ಭಾಗದ ಪ್ರಬಲ ಮುಖಂಡ ರೇವಣಸಿದ್ದಯ್ಯ ಅವರ ಜೊತೆ ಮಾತುಕತೆ ಕೂಡ ನಡೆಸಿದ್ದರು. ಚುನಾವಣೆಗೆ ಕೆಲವೇ ದಿನಗಳಿರುವಾಗ ರೇವಣಸಿದ್ದಯ್ಯ ಅವರು ಸಿದ್ದರಾಮಯ್ಯ ಅವರ ವಿರುದ್ಧ ಬಂಡೆದ್ದಿರುವುದು ಮತ್ತು ವೀರಶೈವ ಲಿಂಗಾಯತ ಧರ್ಮ ವಿಚಾರವಾಗಿ ಸಿಎಂ ವಿರುದ್ಧ ಕೆಂಡಕಾರಿರುವುದು ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಮೈಸೂರಿನಲ್ಲಿ ಭಾನುವಾರ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇವಣಸಿದ್ದಯ್ಯ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ವೀರಶೈವರನ್ನು ಒಡೆದು ಆಳಲು ಮುಂದಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಆ ಕಾರಣಕ್ಕೆ ಚಾಮುಂಡೇಶ್ವರಿಯಲ್ಲಿ ಅವರ ವಿರುದ್ಧ ಪ್ರಚಾರ ನಡೆಸುತ್ತೇನೆ. ಒಂದು ಸಮುದಾಯಕ್ಕೆ ನಾಲ್ಕು ಟಿಕೆಟ್‌ ಕೊಟ್ಟು, ಮತ್ತೊಂದು ಸಮಾಜಕ್ಕೆ ಒಂದೂ ಟಿಕೆಟ್‌ ಕೂಡದ ಇವರಿಂದ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವುದು ಭೂತದ ಬಾಯಲ್ಲಿ ಭಗವದ್ಗೀತೆಯಂತೆ ಎಂದು ತರಾಟೆಗೆ ತೆಗೆದುಕೊಂಡರು. ಇವರನ್ನು ಹೀಗೆ ಬಿಟ್ಟರೆ ಮುಂದೆ ಮತ್ತೊಂದು ಜನಾಂಗವನ್ನು ಇದೇ ರೀತಿ ಇಬ್ಭಾಗ ಮಾಡುವ ಮುನ್ಸೂಚನೆ ಇದೆ. ಅದಕ್ಕಾಗಿ ಸದಾಶಿವ ಆಯೋಗದ ವರದಿಯನ್ನು ಇರಿಸಿಕೊಂಡಿದ್ದಾರೆ ಎಂದು ಸೂಚ್ಯವಾಗಿ ನುಡಿದರು.

ವರುಣ ವಂಶದ ಆಸ್ತಿಯೇ?:

ವರುಣ ಕ್ಷೇತ್ರ ನಿಮ್ಮ ಅನುವಂಶದ ಆಸ್ತಿಯೇ ಸಿದ್ದರಾಮಯ್ಯ? ನಿಮ್ಮ ಮಗನಿಗೆ ಅನುಕೂಲ ಮಾಡಿಕೊಡಲು ಯಾರನ್ನು ಮೂಲೆಗುಂಪು ಮಾಡಿದ್ದೀರಿ ಎಂಬುದನ್ನು ಹತ್ತು ವರ್ಷದ ಹುಡುಗನನ್ನು ಕೇಳಿದರೂ ಹೇಳುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾಕುಪ್ರಾಣಿಯಂತೆ ಬಳಸಿಕೊಂಡರು:

2013ರ ಚುನಾವಣೆ ವೇಳೆ ನನ್ನ ಮನೆಗೆ ಬಂದು ನೀವು ಬೆಂಬಲ ನೀಡಬೇಕು ಎಂದರು. ನಮ್ಮ ಸರ್ಕಾರ ಬಂದರೆ ನಿಮಗೆ ಮತ್ತು ನಿಮ್ಮ ಸಮಾಜಕ್ಕೆ ಸೂಕ್ತ ಸ್ಥಾನ ಕೊಡುವ ಭರವಸೆ ನೀಡಿದ್ದರು. ಸಾಕುಪ್ರಾಣಿಯಂತೆ ಆಸೆ ತೋರಿಸುವ ಕೆಲಸ ಮಾಡಿದರು. ನನ್ನಿಂದ ಸಹಾಯ ಪಡೆದ ಸಿದ್ದರಾಮಯ್ಯ ಮೊನ್ನೆ ಅಪ್ಪ, ಮಗ ನಾಮಪತ್ರ ಸಲ್ಲಿಸುವಾಗ ಸೌಜನ್ಯಕ್ಕೂ ಕರೆಯಲಿಲ್ಲ ಎಂದು ಟೀಕಿಸಿದರು.

click me!