ಕೈಕೊಟ್ಟ ಪೂರ್ವ ಮುಂಗಾರು, ಯಾತಕ್ಕೆ ಮಳೆ ಹೋದವೋ ಶಿವ ಶಿವಾ...

By Web DeskFirst Published Jun 2, 2019, 4:59 PM IST
Highlights

ಈಗಾಗಲೇ ಬೇಸಿಗೆ ಬಿಸಿ ತಾಳಲಾರದೆ ಭೂಮಿ ಕಾದ ಹಂಚಿನಂತಾಗಿದೆ. ಹನಿ-ಹನಿ ನೀರಿಗೂ ತತ್ವಾರ ಶುರುವಾಗಿದೆ. ಕೃಷಿಗೆ ಇರಲಿ ಕುಡಿಯುವುದಕ್ಕೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇದೆಲ್ಲದರ ನಡುವೆ ಹವಾಮಾನ ಇಲಾಖೆ ಕೊಟ್ಟ ಸುದ್ದಿಯೊಂದನ್ನು ಅರಗಿಸಿಕೊಳ್ಳಲೇಬೇಕಾಗಿದೆ.

ನವದೆಹಲಿ[ಜೂ. 02] ಈ ಬಾರಿಯ ಮಳೆಗಾಲ ಹೇಗೆ? ಕಳೆದ ವರ್ಷದಂತೆ ಅಣೆಕಟ್ಟುಗಳೆಲ್ಲಾ ಭರ್ತಿ ಆಗಬಹುದಾ? ನಮ್ಮ ರಾಜ್ಯದ ಕತೆ ಎಂಥದು?..ಜೂನ್ ತಿಂಗಳು ಎದುರಾದ ತಕ್ಷಣ ಎಲ್ಲರ ತಲೆಯಲ್ಲೂ ಈ ಪ್ರಶ್ನೆ ಉದ್ಭವವಾಗುತ್ತದೆ.

ಭಾರತ ಕೃಷಿ ಪ್ರಧಾನ ರಾಷ್ಟ್ರ ಎನ್ನುವುದನ್ನು ಪದೇ ಪದೇ ಕೇಳುತ್ತಲೇ ಇರುತ್ತವೆ. ಮುಂಗಾರು ಮಳೆಯನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಹೊಲ-ಗದ್ದೆ-ಜಮೀನಿಗೆ ಇಳಿಯುತ್ತವೆ. ಜೂನ್ ತಿಂಗಳು ಎದುರಾದಾಗ ಸಹಜವಾಗಿಯೇ ಮಳೆಗಾಲದ ಚರ್ಚೆ ಶುರುವಾಗುತ್ತದೆ.

ಈ ಸಾರಿ ಬಂದು ಹೋದ ಚಂಡಮಾರುತಗಳು

ಹವಾಮಾನ ಇಲಾಖೆ ನೀಡಿರುವ ವರದಿಯನ್ನು ಅರಗಿಸಿಕೊಂಡೇ ಮುಂದೆ ಹೆಜ್ಜೆ ಹಾಕಬೇಕು ಬೇರೆ ದಾರಿ ಇಲ್ಲ. 1954 ರ ನಂತರ ಅಂದರೆ ಬರೋಬ್ಬರಿ 65 ವರ್ಷಗಳ ನಂತರ ಅತಿ ಕಡಿಮೆ ಮಳೆ ಸುರಿಸುವ ಪೂರ್ವ ಮಾನ್ಸೂನ್ ಮಾರುತಗಳನ್ನು ಈ ಸಾರಿ ಕಂಡಾಗಿದೆ.

ಇಲ್ಲಿಯವರೆಗೆ ಪೂರ್ವ ಮಾನ್ಸೂನ್ ಕಾಲ ಅಂದರೆ  ಮಾರ್ಚ್, ಏಪ್ರಿಲ್ ಮತ್ತು ಮೇ ನಲ್ಲಿ 99 ಮಿಮೀ ಮಳೆಯಾಗಿದೆ. ಇತಿಹಾಸ ಕೆದಕಿದರೆ 1954ರಲ್ಲಿ ಇದೆ ಅವಧಿಯಲ್ಲಿ 93.9 ಮಿಮೀ ಮಳೆ ಆಗಿತ್ತು ಎಂದು ದಾಖಲೆಗಳು ಹೇಳುತ್ತವೆ. 2009, 2012 ಮತ್ತು ಈ ಸಾರಿ ಅಂದರೆ 2019ರಲ್ಲಿ 100 ಮಿಮೀ ಪೂರ್ವ ಮಾನ್ಸೂನ್ ಮಳೆ ಕಾಣಲು ವಿಫಲವಾಗಿದೆ.

ಮಧ್ಯ ಮಹಾರಾಷ್ಟ್ರ, ಮರಾಠವಾಡ, , ವಿದರ್ಭ, ಗೋವಾ-ಕೊಂಕಣ್, ಗುಜರಾತ್ ನ ಕಛ್, ಕರ್ನಾಟಕದದ ಕರಾವಳಿ, ತಮಿಳುನಾಡು ಪಾಂಡಿಚೇರಿ ಭಾಗದಲ್ಲಿ ಅತಿ ಕಡಿಮೆ ಮಳೆಯಾದೆ. ಜಮ್ಮುಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಕರ್ನಾಟಕದ ಉತ್ತರ ಒಳನಾಡು,ತೆಲಂಗಾಣ, ಆಂಧ್ರದ ರಾಯಲ್ ಸೀಮಾ ಸಹ  ಕಡಿಮೆ ಮಳೆ ಪಡೆದುಕೊಂಡಿದೆ.

ಪೂರ್ವ ಮಾನ್ಸೂನ್ ಮಳೆ ಕೃಷಿಗೆ ಮತ್ತು ಅಂತರ್ಜಲ ಕಾಪಾಡಲು ನೆರವಾಗುತ್ತದೆ  ಎಂಬುದು ಜಲತಜ್ಞರ ಮಾತು. ಆದರೆ ಈ ಬಾರಿ ಬಿದ್ದಿರುವ ಪೂರ್ವ ಮಾನ್ಸೂನ್ ಮಳೆ 100 ಮಿಮೀ ಯನ್ನು ಕ್ರಾಸ್ ಮಾಡಿಲ್ಲ. ಮುಂಗಾರು ಪೂರ್ವ ಮಳೆ ಕೈಕೊಟ್ಟಿರುವುದು ಸರಕಾರಗಳ ಮೇಲಿನ ಜವಾಬ್ದಾರಿಯನ್ನು ಹೆಚ್ಚು ಮಾಡಿದೆ. ಮಳೆಗಾಲವೂ ವಿಳಂಬವಾದಲ್ಲಿ ಬರ ಪರಿಹಾರಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳಾದಿಯಾಗಿ ಎಲ್ಲರೂ ಸಮರೋಪಾದಿಯಲ್ಲಿ ಈಗಲೇ ಸಿದ್ಧವಾಗಿ ನಿಲ್ಲಬೇಕಾಗುತ್ತದೆ.

ಮಳೆ ಬಿದ್ದು ಭೂಮಿ ಹಸನಾಗಲಿ, ತೇವಾಂಶ ಹೆಚ್ಚಿ ಉತ್ತಮ ಬೆಳೆ ಬರಲಿ.. ಮಳೆಗಾಗಿ ನಡೆಯುತ್ತಿರುವ ಪೂಜೆ-ಪುನಸ್ಕಾರ ಫಲ ನೀಡಲಿ, ದೇಶದ ಅನ್ನದಾತನಿಗೆ ನೆರವು ನೀಡುವಂತೆ ಮುಂದಿನ ಮಳಗಾಲ ಇರಲಿ ಎಂಬುದು ಎಲ್ಲರ ಆಶಯ. 

click me!