ಇನ್ನೂ 10 ವರ್ಷ ಇಲ್ಲ ಕೊಡಗಲ್ಲಿ ಕಾಫಿ !

By Web DeskFirst Published Aug 30, 2018, 9:26 AM IST
Highlights

ಕೊಡಗಿನಲ್ಲಿ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಹಾಗೂ ಪ್ರವಾಹ ಕಾಫಿ ಬೆಲೆ ಮೇಲೆ ಮಾರಕವಾದ ಪರಿಣಾಮವನ್ನು ಉಂಟು ಮಾಡಿದೆ. ಇದರಿಂದ ಸುಮಾರು 10 ವರ್ಷಗಳ ಕಾಲ ಕಾಫಿ ಬೆಳೆಗೆ ಸಂಚಕಾರ ಉಂಟಾಗಿದೆ. 

ಕೊಡಗು :  ಅತಿವೃಷ್ಟಿಯಿಂದ ಮನೆ, ಸೊತ್ತು, ಸಂಪತ್ತುಗಳನ್ನು ಕಳೆದುಕೊಂಡ ಕೊಡಗಿನಲ್ಲಿ ಈಗ ಹೊಸ ಸಮಸ್ಯೆಉದ್ಭವವಾಗಿದೆ. ‘ಕಾಫಿ ನಾಡು ಕೊಡಗು’ ಎಂಬ ಹೆಗ್ಗಳಿಕೆಗೇ ಸಂಚಕಾರ ಬರುವ ಸಾಧ್ಯತೆ ಇದೆ.

ಹೌದು, ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಪ್ರಾಕೃತಿಕ ವಿಕೋಪದಲ್ಲಿ ಹೆಕ್ಟೇರ್‌ಗಟ್ಟಲೆ ಕಾಫಿ ತೋಟಗಳೂ ನಾಶವಾಗಿವೆ. ಕಾಫಿ ಬೆಳೆಯುತ್ತಿದ್ದ ಕಪ್ಪು ಮಿಶ್ರಿತ ಮಣ್ಣು ಮೇಲ್ಪದರದಿಂದ ಪಾತಾಳಕ್ಕೆ ಕುಸಿದು ಹೋಗಿದೆ. ಜೇಡಿ ಮಿಶ್ರಿತ ಮಣ್ಣು ಮೇಲ್ಪದರಕ್ಕೆ ಬಂದು ಶೇಖರಣೆಯಾಗಿದೆ. ಈ ಮಣ್ಣಿನಲ್ಲಿ ಸದ್ಯಕ್ಕಂತು ಯಾವುದೇ ಕಾರಣಕ್ಕೂ ಕಾಫಿ ಬೆಳೆಯಲು ಸಾಧ್ಯವಿಲ್ಲ. ಆ ಮಣ್ಣಿನಲ್ಲಿ ಕಾಫಿ ಬೆಳೆಯಲು ಕನಿಷ್ಠ 10 ವರ್ಷವಾದರೂ ಬೇಕು ಎಂದು ಸ್ವತಃ ಕಾಫಿ ಬೆಳೆಗಾರರು ಹಾಗೂ ಕಾಫಿ ಬೋರ್ಡ್‌ ಹೇಳುತ್ತಿದೆ. ಇದರಿಂದಾಗಿ ಕೊಡಗಿನಲ್ಲಿ ತಾತ್ಕಾಲಿಕವಾಗಿ ಕಾಫಿ ವೈಭವ ಮರೆಯಾಗುವ ಆತಂಕ ಗೋಚರಿಸಿದೆ.

ನೆಲಸಮಗೊಂಡ ಕಾಫಿ ತೋಟ:  ಮೂರು ವಾರದ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಮಹಾಮಳೆ ಹಾಗೂ ಭಾರೀ ಭೂಕುಸಿತಕ್ಕೆ ಸುಮಾರು 3500 ಹೆಕ್ಟೇರ್‌ನಷ್ಟುಕಾಫಿ ತೋಟಗಳು ನೆಲಸಮಗೊಂಡಿವೆ. ಉಳಿದೆಡೆ ಹಲವು ತೋಟಗಳಿಗೆ ನೇರವಾಗಿ ಹಾನಿಯಾಗದಿದ್ದರೂ ದೊಡ್ಡ ಹೊಡೆತವೇ ಬಿದ್ದಿದೆ. ಒಟ್ಟಾರೆ ಮಹಾ ಮಳೆಗೆ ಜಿಲ್ಲೆಯಲ್ಲಿ ಅಂದಾಜು 27 ಸಾವಿರ ಟನ್‌ ಮೆಟ್ರಿಕ್‌ ಟನ್‌ ಕಾಫಿ ಬೆಳೆ ನಾಶವಾಗಿದೆ. ಅನೇಕ ಕಡೆ ಕಾಫಿ ಗಿಡ ಉಳಿದುಕೊಂಡರೂ ನಿರೀಕ್ಷಿತ ಫಸಲು ತೆಗೆಯುವುದು ಕಷ್ಟಎನ್ನುವ ಸ್ಥಿತಿ ಇದೆ. ಇಂತಹ ಸನ್ನಿವೇಶದಲ್ಲಿ ಮತ್ತೆ ಕಾಫಿ ಉತ್ಪಾದನೆ ಭಾರೀ ಪ್ರಮಾಣದಲ್ಲಿ ಕುಸಿಯಲಿದೆ ಎನ್ನುತ್ತಾರೆ ಕಾಫಿ ಬೆಳೆಗಾರರು ಹಾಗೂ ಕಾಫಿ ಬೋರ್ಡ್‌ನವರು.

ಮೇಲ್ಪದರಕ್ಕೆ ಬಂದ ಜೇಡಿ ಮಣ್ಣು:

ಬೆಟ್ಟದ ಇಳಿಜಾರು ಪ್ರದೇಶದಲ್ಲಿ ಕಾಫಿ ಬೆಳೆಗೆ ಮೇಲ್ಪದರದಲ್ಲಿ ಕಪ್ಪು ಮಿಶ್ರಿತ ಮಣ್ಣು ಬೇಕು. ಈಗ ಪ್ರಾಕೃತಿಕ ದುರಂತದಿಂದ ಏಕಾಏಕಿ ಮೇಲ್ಪದರದಲ್ಲಿದ್ದ ಕಪ್ಪು ಮಿಶ್ರಿತ ಮಣ್ಣು ಪ್ರವಾಹಕ್ಕೆ ಹಾಗೂ ಭೂಕುಸಿತಕ್ಕೆ ಪಾತಾಳಕ್ಕೆ ಹೋಗಿದೆ. ಸದ್ಯ ಬಹುತೇಕ ಕಡೆ ಮೇಲ್ಭಾಗದಲ್ಲಿ ಮೆದು ಜೇಡಿ ಮಣ್ಣಷ್ಟೇ ಕಾಣಸಿಗುತ್ತಿದೆ. ಅನೇಕ ಕಡೆ ಅಲ್ಲಲ್ಲಿ ಬಿರುಕುಬಿಟ್ಟಭೂಮಿ, ಅತಿ ಸಡಿಲ ಮಣ್ಣಿದ್ದು ಯಾವಾಗ ಬೇಕಾದರೂ ಕುಸಿಯುವ ಆತಂಕವಿದೆ. ಇಂಥ ಪರಿಸ್ಥಿತಿಯಲ್ಲಿ ಕಾಫಿ ಸಸಿ ನೆಡಲು ಸಾಧ್ಯವೇ ಇಲ್ಲ. ಇದರಿಂದ ಅನಿವಾರ್ಯವಾಗಿ ಪಾರಂಪರಿಕವಾಗಿ ಬೆಳೆಸುತ್ತಿದ್ದ ಕಾಫಿ ಬೆಳೆಯನ್ನು ಕೈಬಿಡಬೇಕಾಗಿ ಬಂದಿದೆ ಎನ್ನುತ್ತಾರೆ ಕಾಫಿ ಬೆಳೆಗಾರ ಮಕ್ಕಂದೂರಿನ ರವಿ ಕಾಳಪ್ಪ.

‘‘ನನ್ನ ಕಾಫಿ ತೋಟ ಮೇಘತ್ತಾಳು ಗ್ರಾಮದ ಮುಕ್ಕೋಡ್ಲು ಎಂಬಲ್ಲಿದೆ. ಸುಮಾರು 25 ಎಕರೆ ಕಾಫಿ ತೋಟ ಸಮಾಧಿಯಾಗಿದೆ. ಸದ್ಯ ತೋಟವಿರುವ ಜಾಗಕ್ಕೆ ಹೋಗಲೂ ಸಾಧ್ಯವಾಗದ ಸ್ಥಿತಿ ಇದೆ. ಈಗಿರುವ ಸಡಿಲ ಮಣ್ಣಿನಲ್ಲಿ ಕಾಫಿ ಸಸಿ ನೆಡುವುದು ಕಷ್ಟ. ಜೇಡಿ ಮಿಶ್ರಿತ ಮಣ್ಣಿನಲ್ಲಿ ಫಲವತ್ತತೆ ಇಲ್ಲ. ಇನ್ನು ಕಾಪಿಗೆ ಪರಾರ‍ಯಯ ಬೆಳೆ ಏನೆಂಬುದನ್ನು ಸರ್ಕಾರವೇ ಹೇಳಬೇಕು ಎನ್ನುತ್ತಾರೆ ಅವರು.

ಶತಮಾನ ಕಂಡ ಕಾಫಿ ಬೆಳೆ

ಕೊಡಗಿನ ಕಾಫಿಗೆ ಶತಮಾನದ ಇತಿಹಾಸವಿದೆ. 1856ರಿಂದ ಕೊಡಗಿನಲ್ಲಿ ಕಾಫಿ ಪ್ರಧಾನ ವಾಣಿಜ್ಯ ಬೆಳೆಯಾಗಿ ಬೆಳೆದುಕೊಂಡು ಬಂದಿದೆ. ಪ್ರಸಕ್ತ ಶೇ.90ರಷ್ಟುಕಾಫಿಯೇ ಕೊಡಗಿನ ಪ್ರಮುಖ ಬೆಳೆ. ಸುಮಾರು 45 ಸಾವಿರ ಹೆಕ್ಟೇರ್‌ ವಿಸ್ತೀರ್ಣ ಪ್ರದೇಶದಲ್ಲಿ ಕಾಫಿ ಬೆಳೆ ಇದೆ. ಅದರಲ್ಲೂ ಸಣ್ಣ ಪ್ರಮಾಣದಲ್ಲಿ ಕಾಫಿ ಬೆಳೆಗಾರರೇ ಶೇ.90 ಮಂದಿ ಇದ್ದಾರೆ. ಉಳಿದ ಶೇ.10 ಮಂದಿ ದೊಡ್ಡ ಬೆಳೆಗಾರರು. ಕೊಡಗಿನಲ್ಲಿ ವಾರ್ಷಿಕ 1.32 ಲಕ್ಷ ಮೆಟ್ರಿಕ್‌ ಟನ್‌ ಕಾಫಿ ಉತ್ಪಾದನೆಯಾಗುತ್ತಿದೆ. ಕಾಫಿ ಬೀಜವನ್ನು ನರ್ಸರಿ ಮಾಡುತ್ತಾರೆ. 2 ವಾರಗಳಲ್ಲಿ ಮೊಳಕೆಯೊಡೆದ ಕಾಫಿ ಸಸಿಯನ್ನು ಕಪ್ಪು ಮಿಶ್ರಿತ ಪ್ರದೇಶಗಳಲ್ಲಿ ನೆಡುತ್ತಾರೆ. 4 ವರ್ಷಕ್ಕೆ ಕಾಫಿ ಫಸಲು ಬರಲಾರಂಭಿಸುತ್ತದೆ. ಪೂರ್ಣ ಪ್ರಮಾಣದ ಫಸಲಿಗೆ 10 ವರ್ಷ ಬೇಕು.

ಕಾಫಿಯನ್ನು ಕಪ್ಪು ಮಿಶ್ರಿತ ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಆದರೆ ಅತಿವೃಷ್ಟಿಯಿಂದ ಜೇಡಿ ಮಿಶ್ರಿತ ಮೆದು ಮಣ್ಣು ಮೇಲ್ಪದರಕ್ಕೆ ಬಂದಿದೆ. ಆ ಮಣ್ಣಿನಲ್ಲಿ ಕಾಫಿ ಗಿಡ ಬೆಳೆಸಲು ಸಾಧ್ಯವಿಲ್ಲ. ಮುಂದೆ ಪರ್ಯಾಯ ಬೆಳೆ ಏನು ಎಂಬ ಬಗ್ಗೆ ಆಲೋಚನೆ ಮಾಡಬೇಕು.

-ರೀನಾ ಪ್ರಕಾಶ್‌, ಉಪಾಧ್ಯಕ್ಷೆ, ಭಾರತೀಯ ಕಾಫಿ ಮಂಡಳಿ

’ನಷ್ಟಪ್ರಮಾಣ ಪತ್ತೆಗೆ ತಂಡ: ಭಾರತೀಯ ಕಾಫಿ ಮಂಡಳಿಯಿಂದ ಈಗಾಗಲೇ 9 ತಂಡಗಳಲ್ಲಿ ನಾಶಗೊಂಡ ಕಾಫಿ ತೋಟಗಳ ಸರ್ವೆ ನಡೆಸಲಾಗುತ್ತಿದೆ. ಪ್ರಾಥಮಿಕ ವರದಿ ಪ್ರಕಾರ ಮಡಿಕೇರಿಯಲ್ಲಿ 1,188 ಹೆಕ್ಟೇರ್‌, ಸೋಮವಾರ ಪೇಟೆಯಲ್ಲಿ 7,100 ಹೆಕ್ಟೇರ್‌ ಹಾಗೂ ವಿರಾಜಪೇಟೆಯಲ್ಲಿ 1,811 ಹೆಕ್ಟೇರ್‌ ಕಾಫಿ ತೋಟ ನಾಶವಾಗಿದೆ. ಇದರ ಜೊತೆಗೆ ಕೊಯ್ಲಿಗೆ ಸಿದ್ಧವಾದ ಕಾಫಿ ಹಣ್ಣು ಕೂಡ ಮಣ್ಣುಪಾಲಾಗಿದೆ. ಮತ್ತೆ ಈಗ ಕಾಫಿ ಮಂಡಳಿ ಎರಡನೇ ಹಂತದಲ್ಲಿ ಸಮಗ್ರ ಸರ್ವೆ ಕಾರ್ಯ ನಡೆಸಲು ಮುಂದಾಗಿದೆ. 28 ಮಂದಿಯ ತಂಡ ನಾಶಗೊಂಡ ಕಾಫಿ ತೋಟಗಳ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಕೃಷಿ, ಕಂದಾಯ, ತೋಟಗಾರಿಕೆ ಹಾಗೂ ಕಾಫಿ ಬೋರ್ಡ್‌ ಜಂಟಿಯಾಗಿ ಈ ಸರ್ವೆ ಕಾರ್ಯ ನಡೆಸುತ್ತಿದೆ ಎನ್ನುತ್ತಾರೆ ಭಾರತೀಯ ಕಾಫಿ ಮಂಡಳಿ ಉಪಾಧ್ಯಕ್ಷೆ ರೀನಾ ಪ್ರಕಾಶ್‌.

ಆತ್ಮಭೂಷಣ್

click me!