ಚುನಾವಣಾ ವರ್ಷ: ಕರ್ನಾಟಕಕ್ಕೆ ರೈಲ್ವೇ ಬಂಪರ್?

By Suvarna Web DeskFirst Published Jan 30, 2018, 2:08 PM IST
Highlights

ಚುನಾವಣಾ ವರ್ಷವಾಗಿರುವುದರಿಂದ ಮುಂಬರುವ ಬಜೆಟ್‌ನಲ್ಲಿ ರಾಜ್ಯಕ್ಕೆ ಹೊಸ ರೈಲು ಮಾರ್ಗ ಘೋಷಣೆ, ಅನೇಕ ವರ್ಷಗಳ ಹಿಂದೆ ಆಮೆಗತಿಯಲ್ಲಿ ನಡೆಯುತ್ತಿರುವ ಹಲವು ಯೋಜನೆಗಳ ತ್ವರಿತಗತಿ ಅನುಷ್ಠಾನಕ್ಕೆ ಹೆಚ್ಚಿನ ಹಣ ನೀಡುವ ಸಾಧ್ಯತೆ ಇದೆ.

ಬೆಂಗಳೂರು (ಜ.30): ಚುನಾವಣಾ ವರ್ಷವಾಗಿರುವುದರಿಂದ ಮುಂಬರುವ ಬಜೆಟ್‌ನಲ್ಲಿ ರಾಜ್ಯಕ್ಕೆ ಹೊಸ ರೈಲು ಮಾರ್ಗ ಘೋಷಣೆ, ಅನೇಕ ವರ್ಷಗಳ ಹಿಂದೆ ಆಮೆಗತಿಯಲ್ಲಿ ನಡೆಯುತ್ತಿರುವ ಹಲವು ಯೋಜನೆಗಳ ತ್ವರಿತಗತಿ ಅನುಷ್ಠಾನಕ್ಕೆ ಹೆಚ್ಚಿನ ಹಣ ನೀಡುವ ಸಾಧ್ಯತೆ ಇದೆ.

ಕಳೆದ ವರ್ಷದ ಬಜೆಟ್‌ನಲ್ಲಿ ನೈಋತ್ಯ ರೈಲ್ವೆಗೆ 3174 ಕೋಟಿ ರು. ಲಭಿಸಿತ್ತು. ಈ ಬಾರಿ ಇನ್ನೂ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆ ಇದೆ. ಪ್ರಮುಖವಾಗಿ ಅರಸಿಕೆರೆ-ತುಮಕೂರು, ಹುಬ್ಬಳ್ಳಿ-ಚಿಕ್ಕಜಾಜೂರು, ಲೋಂಡಾ-

ಮೀರಜ್ ನಡುವೆ ಜೋಡಿ ಮಾರ್ಗ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಗಳಿಗೆ ಈ ಬಾರಿ ಬಜೆಟ್‌'ನಲ್ಲಿ ಹೆಚ್ಚಿನ ಅನುದಾನ ಸಿಕ್ಕರೆ ಕಾಮಗಾರಿಗೆ  ಮತ್ತಷ್ಟು ವೇಗ ದೊರೆಯಲಿದೆ. ಹುಬ್ಬಳ್ಳಿ-ಅಂಕೋಲಾ ನಡುವಿನ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಗೆ ಸಿಇಸಿ ಸಮಿತಿಯಿಂದ ವೈಡ್‌'ಲೈಫ್ ಕ್ಲಿಯರೆನ್ಸ್ ಪಡೆದು ಯೋಜನೆ ಪೂರ್ಣಗೊಳಿಸಬೇಕು. ಬೆಂಗಳೂರು-ಹಾಸನ ಮಾರ್ಗವನ್ನು ಜೋಡಿ ಮಾರ್ಗವಾಗಿ ಪರಿವರ್ತಿಸಬೇಕು. ಇದರಿಂದ ಈ ಮಾರ್ಗದಲ್ಲಿ ಹೆಚ್ಚಿನ ರೈಲು ಸೇವೆ ಕಲ್ಪಿಸಬಹುದು.

ಬಿಡದಿ-ಸೋಲೂರು ನಡುವೆ ಬೈಪಾಸ್ ಮಾರ್ಗ ನಿರ್ಮಿಸಿದರೆ ಸರಕು ಸಾಗಣೆಗೆ ಅನುಕೂಲವಾಗುತ್ತದೆ ಎಂಬುದು ರೈಲ್ವೆ ತಜ್ಞ ಪ್ರಕಾಶ್ ಮಂಡೋತ್ ಅಭಿಪ್ರಾಯ. ಕುಡಚಿ-ಬಾಗಲಕೋಟೆ, ತುಮಕೂರು- ರಾಯದುರ್ಗ ಮಾರ್ಗಗಳ ನಿರ್ಮಾಣ ಯೋಜನೆ ಸೇರಿದಂತೆ ರಾಜ್ಯದಲ್ಲಿ ಹಲವು ಯೋಜನೆಗಳು ಪ್ರಗತಿಯಲ್ಲಿದ್ದು, ನಿಧಾನಗತಿಯಲ್ಲಿ ಸಾಗುತ್ತಿವೆ. ಹಾಗಾಗಿ ಬಜೆಟ್‌ನಲ್ಲಿ ಯೋಜನೆಗಳಿಗೆ ಹೆಚ್ಚಿನ ಅನುದಾನ ಕಲ್ಪಿಸುವ ನಿರೀಕ್ಷೆಯಿದೆ.

ಅಂತೆಯೇ ಹಾವೇರಿ-ಶಿರಸಿ (80 ಕಿ.ಮೀ), ಮೈಸೂರು- ಮಡಿಕೇರಿ (110 ಕಿ.ಮೀ), ಧಾರವಾಡ-ಬೆಳಗಾವಿ (91 ಕಿ.ಮೀ), ಹೆಜ್ಜಾಲ-ಚಾಮರಾಜನಗರ (200 ಕಿ.ಮೀ) ಹೊಸ ಮಾರ್ಗ ನಿರ್ಮಾಣ ಮತ್ತು ಬೆಂಗಳೂರು-ಹುಬ್ಬಳ್ಳಿ ಮಾರ್ಗದ ವಿದ್ಯುದೀಕರಣಕ್ಕೆ ಮಂಜೂರಾತಿ ಸಿಕ್ಕರೆ ರಾಜ್ಯದ ರೈಲ್ವೆ ಸಂಪರ್ಕ ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ 66  ಸಾವಿರ ಕಿ.ಮೀ. ರೈಲ್ವೆ ಮಾರ್ಗವಿದೆ. ಈ ಪೈಕಿ ಬಹುತೇಕ ನೈಋತ್ಯ ರೈಲ್ವೆ ವಲಯಕ್ಕೆ ಒಳಪಡುತ್ತದೆ. ನೈಋತ್ಯ ರೈಲ್ವೆಯಲ್ಲಿ ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ವಿಭಾಗಗಳಿವೆ. ಮಂಗಳೂರು ಮತ್ತು ಕಲಬುರಗಿಯನ್ನು ವಿಭಾಗಗಳಾಗಿ ಘೋಷಿಸಿ ನೈಋತ್ಯ ರೈಲ್ವೆ ವಲಯಕ್ಕೆ ಸೇರಿಸಬೇಕೆಂಬ ಬಹುದಿನಗಳ ಬೇಡಿಕೆಯಿದೆ. ಇದು ಸಾಧ್ಯವಾದರೆ ಕರ್ನಾಟಕದ ರೈಲ್ವೆ ಜಾಲ ವೃದ್ಧಿಯಾಗಲಿದೆ ಎಂದು ಪ್ರಕಾಶ್ ಮಂಡೋತ್ ಹೇಳುತ್ತಾರೆ.

-ಲೇಖನ: ಮೋಹನ್ ಹಂಡ್ರಂಗಿ

  

click me!