Bengaluru: ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್‌ ತೆರವಿಗೆ ಬಾಡಿಗೆದಾರರ ವಿರೋಧ

Published : May 19, 2024, 11:46 PM IST
Bengaluru: ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್‌ ತೆರವಿಗೆ ಬಾಡಿಗೆದಾರರ ವಿರೋಧ

ಸಾರಾಂಶ

ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಮಾಲ್‌ಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್‌ ಹಳೆಯ ಕಟ್ಟಡ ತೆರವುಗೊಳಿಸುವುದಕ್ಕೆ ವ್ಯಾಪಾರಿಗಳು ತೀವ್ರವಾಗಿ ವಿರೋಧಿಸಿದ್ದು, ಪ್ರತಿಭಟನೆ ವ್ಯಕ್ತವಾಗಿದೆ.   

ಬೆಂಗಳೂರು (ಮೇ.19): ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಮಾಲ್‌ಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ, ಕೋರಮಂಗಲ ಬಿಡಿಎ ಕಾಂಪ್ಲೆಕ್ಸ್‌ ಹಳೆಯ ಕಟ್ಟಡ ತೆರವುಗೊಳಿಸುವುದಕ್ಕೆ ವ್ಯಾಪಾರಿಗಳು ತೀವ್ರವಾಗಿ ವಿರೋಧಿಸಿದ್ದು, ಪ್ರತಿಭಟನೆ ವ್ಯಕ್ತವಾಗಿದೆ. ಬಿಡಿಎ ಎಂಜಿನಿಯರ್‌ಗಳು ಕೋರಮಂಗಲ 3ನೇ ಬ್ಲಾಕ್‌ನಲ್ಲಿರುವ ಬಿಡಿಎ ಕಾಂಪ್ಲೆಕ್ಸ್‌ ಮಳಿಗೆಗಳನ್ನು ತೆರವುಗೊಳಿಸಲು ಮುಂದಾಗಿದ್ದರು. ಕೆಳಭಾಗದಲ್ಲಿ ಅಂಗಡಿಗಳು ತೆರೆದಿರುವಾಗಲೇ ಮೊದಲ ಮಹಡಿಯಲ್ಲಿದ್ದ ಕೆಲ ಮಳಿಗೆಗಳನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದರು. ಇದರಿಂದ ಸಿಟ್ಟುಗೊಂಡ ವ್ಯಾಪಾರಿಗಳು ಬಿಡಿಎ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.

ಕಳೆದ ಕೆಲ ತಿಂಗಳ ಹಿಂದಷ್ಟೇ ಕೋಟ್ಯಂತರ ರುಪಾಯಿಗಳನ್ನು ಖರ್ಚು ಮಾಡಿ ಕಾಂಪ್ಲೆಕ್ಸ್‌ ನವೀಕರಣ ಮಾಡಲಾಗಿದೆ. ಆದರೆ, ನೋಟಿಸ್‌ ನೀಡದೆ ಶನಿವಾರ ಬಿಡಿಎ ಅಧಿಕಾರಿಗಳು ಏಕಾಏಕಿ ಮಳಿಗೆಗಳ ತೆರವುಗೊಳಿಸಲು ಮುಂದಾಗಿದ್ದು, 2ನೇ ಮಹಡಿಯಲ್ಲಿರುವ ಮಳಿಗೆಗಳ ಬಾಗಿಲುಗಳನ್ನು ಒಡೆದು ಹಾಕಿದ್ದಾರೆ. ಕಾಂಪ್ಲೆಕ್ಸ್‌ನಲ್ಲಿ 150ಕ್ಕೂ ಹೆಚ್ಚು ಮಳಿಗೆಗಳಿದ್ದು, ಸಾವಿರಾರು ಕುಟುಂಬಗಳು ಇಲ್ಲಿನ ಮಳಿಗೆಗಳನ್ನು ನಂಬಿಕೊಂಡು ಬದುಕು ನಡೆಸುತ್ತಿವೆ. ನೋಟಿಸ್‌ ಕೊಟ್ಟು ಸಮಯಾವಕಾಶವೂ ನೀಡದೇ ಸುಸಜ್ಜಿತವಾದ ಕಟ್ಟಡವನ್ನು ಒಡೆದು ಹಾಕುತ್ತಿರುವುದು ಖಂಡನೀಯ ಎಂದು ವ್ಯಾಪಾರಿಗಳು, ಸಾರ್ವಜನಿಕರು ಬಿಡಿಎ ವಿರುದ್ಧ ಕಿಡಿಕಾರಿದರು.

ಈ ಸಂದರ್ಭದಲ್ಲಿ ಘಟನಾ ಸ್ಥಳಕ್ಕೆ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, ಬಿಡಿಎ ಕಾಂಪ್ಲೆಕ್ಸ್‌ ನೆಲಸಮಗೊಳಿಸದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಕಟ್ಟಡ ತೆರವು ಕಾರ್ಯಾಚರಣೆಯನ್ನು ಅಧಿಕಾರಿಗಳು ನಿಲ್ಲಿಸಿದ್ದು, ವಾಪಸ್ ಬಂದಿದ್ದಾರೆ ಎಂದು ಬಿಡಿಎ ಮೂಲಗಳು ಮಾಹಿತಿ ನೀಡಿವೆ.

ಕಾಂಪ್ಲೆಕ್ಸ್‌ ಭೋಗ್ಯ ಬಿಜೆಪಿ ಸರ್ಕಾರದ ತೀರ್ಮಾನ: ಆರ್.ಅಶೋಕ್ ಡೀಕೆಗೆ ಡಿ.ಕೆ.ಶಿವಕುಮಾರ್ ತಿರುಗೇಟು

ನಷ್ಟ ಭರಿಸಲು ಕಾಂಪ್ಲೆಕ್ಸ್‌ಗಳನ್ನು ಭೋಗ್ಯಕ್ಕೆ ನೀಡಲು ತೀರ್ಮಾನ: ಆರ್ಥಿಕವಾಗಿ ನಷ್ಟದಲ್ಲಿರುವ ಬಿಡಿಎ, ಏಳು ಬಿಡಿಎ ಕಾಂಪ್ಲೆಕ್ಸ್‌ಗಳನ್ನು ಖಾಸಗಿ ಕಂಪನಿಗಳಿಗೆ ಭೋಗ್ಯಕ್ಕೆ ನೀಡಲು ತೀರ್ಮಾನಿಸಿದೆ. ಎಂಬೆಸ್ಸಿ ಕಂಪನಿಯ ಅಂಗ ಸಂಸ್ಥೆಯಾದ ಎಂಎಫ್‌ಎಆರ್‌ ಕನ್‌ಸ್ಟ್ರಕ್ಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಗೆ 30 ವರ್ಷಗಳ ಅವಧಿಗೆ ಗುತ್ತಿಗೆ ನೀಡುವ ಪ್ರಸ್ತಾವನೆ ಇದೆ. ಬಿಡಿಎ ಕಾಂಪ್ಲೆಕ್ಸ್‌ಗಳಿಗೆ ಅತ್ಯಾಧುನಿಕ ಸ್ಪರ್ಶ ನೀಡಿ, ಬಾಡಿಗೆಗೆ ನೀಡುವ ಯೋಜನೆಯೂ ಇದೆ. ಇದರಿಂದ ಬಂದ ಆದಾಯದಲ್ಲಿ ಶೇ.30ರಷ್ಟು ಬಿಡಿಎಗೆ ಸಿಗಲಿದ್ದು, ಶೇ.70ರಷ್ಟು ಪಾಲು ಖಾಸಗಿ ಕಂಪನಿ ಪಾಲಾಗಲಿದೆ. ಕೋರಮಂಗಲ, ಇಂದಿರಾನಗರ, ಆಸ್ಟಿನ್‌ಟೌನ್‌, ದೊಮ್ಮಲೂರು, ಎಚ್‌ಎಸ್‌ಆರ್‌ ಲೇಔಟ್‌, ನಾಗರಭಾವಿ, ಆರ್‌ಎಂವಿ ಮಿನಿ ಮಾರುಕಟ್ಟೆ, ಆರ್‌.ಟಿ.ನಗರ, ಎಚ್‌ಬಿಆರ್‌ ಲೇಔಟ್‌ನಲ್ಲಿರುವ ಕಾಂಪ್ಲೆಕ್ಸ್‌ಗಳನ್ನು ಗುತ್ತಿಗೆ ನೀಡಲು ಬಿಡಿಎ ನಿರ್ಧರಿಸಿದೆ.

PREV
Read more Articles on
click me!

Recommended Stories

Breaking: ಕನ್ನಡ ನಾಡಿನ ಭೀಷ್ಮ ಭೀಮಣ್ಣ ಖಂಡ್ರೆ ಇನ್ನಿಲ್ಲ: ಕಳಚಿಬಿದ್ದ ಸ್ವಾತಂತ್ರ್ಯ ಹೋರಾಟ ಮತ್ತು ಏಕೀಕರಣದ ಕೊಂಡಿ!
ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?