'ಮೈತ್ರಿ ಸರ್ಕಾರಕ್ಕೆ ಉರುಳಾಗಲಿದೆ ಈ ಸಂಗತಿ'

By Web DeskFirst Published Nov 10, 2018, 8:55 AM IST
Highlights

ಈ ವಿಚಾರವೆ ಮೈತ್ರಿ ಸರ್ಕಾರಕ್ಕೆ ಮುಳುವಾಗಲಿದೆ ಎಂದು  ಮುಖಂಡರು ವಾಗ್ದಾಳಿ ನಡೆಸಿದ್ದಾರೆ.  ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಮಾಡಿದರೆ ಮೈತ್ರಿ ಸರ್ಕಾರ ಬಹಳ ದಿನ ಉಳಿಯಲ್ಲ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಳಾಗಿ ಹೋಗುತ್ತಾರೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು : ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆ ಮಾಡಿದರೆ ಮೈತ್ರಿ ಸರ್ಕಾರ ಬಹಳ ದಿನ ಉಳಿಯಲ್ಲ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಳಾಗಿ ಹೋಗುತ್ತಾರೆ ಎಂದು ಉಪಮುಖ್ಯಮಂತ್ರಿ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಶುಕ್ರವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪು ಜಯಂತಿಗೆ ಎಲ್ಲೆಡೆ ವಿರೋಧ ವ್ಯಕ್ತವಾಗುತ್ತಿದೆ. ಆದರೂ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಲು ತೀರ್ಮಾನಿಸಿದೆ. ಯಾರಿಗೂ ಬೇಡವಾಗಿರುವ ಟಿಪ್ಪು ಜಯಂತಿ ಆಚರಣೆ ಮಾಡಿದರೆ ಮೈತ್ರಿ ಸರ್ಕಾರ ಬಹಳ ದಿನ ಉಳಿಯುವುದಿಲ್ಲ. ಅಲ್ಲದೇ, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗವಹಿಸಿದರೆ ಹಾಳಾಗಿ ಹೋಗಲಿದ್ದಾರೆ ಎಂದು ಟೀಕಿಸಿದರು.

ಟಿಪ್ಪು ಹೆಸರಲ್ಲಿ ವೋಟ್‌ ಬ್ಯಾಂಕ್‌ ರಾಜಕಾರಣ ಮಾಡಲು ಸರ್ಕಾರ ಮುಂದಾಗಿದೆ. ನಗೆಲ್ಲಾ ಮಹಾತ್ಮಾಗಾಂಧಿ, ಶ್ರೀರಾಮ, ವಾಲ್ಮೀಕಿ ಕನಸಲ್ಲಿ ಬಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಟಿಪ್ಪು ಕನಸಿನಲ್ಲಿ ಬಂದು ಜನ್ಮ ದಿನಾಚರಣೆ ಮಾಡಲು ಹೇಳಿದ್ದರಂತೆ. ಹೀಗಾಗಿ ಟಿಪ್ಪು ಜಯಂತಿಯನ್ನು ಕಾಂಗ್ರೆಸ್‌ ಆಚರಣೆ ಮಾಡುತ್ತಿದೆ. ಜಯಂತಿ ಮಾಡುವುದು ಸರಿಯಲ್ಲ. ಟಿಪ್ಪು ಹಿಂದೆ ಬಿದ್ದವರೆಲ್ಲಾ ಹಾಳಾಗಿ ಹೋಗಲಿದ್ದಾರೆ. ಮುಖ್ಯಮಂತ್ರಿಗಳಿಗೂ ಅದೇ ಪರಿಸ್ಥಿತಿ ಬರಲಿದೆ. ಮಕ್ಕಳನ್ನು ಅಡವಿಟ್ಟು ಯುದ್ಧ ಭೂಮಿಯಿಂದ ಓಡಿ ಹೋದ ಟಿಪ್ಪು ಆಡಳಿತ ಭಾಷೆಯಾಗಿ ಪರ್ಷಿಯನ್‌ ಭಾಷೆ ಹೇರಿದ್ದ. ಟಿಪ್ಪುಗೆ ತಾಕತ್ತಿದ್ದರೆ ರಾಜ್ಯ ಕಟ್ಟಬೇಕಿತ್ತು. ಹೀನಾಯವಾಗಿ ಮೈಸೂರು ರಾಜ್ಯರನ್ನು ಬಂಧಿಸಿದ ಎಂದು ಹರಿಹಾಯ್ದರು.

ಟಿಪ್ಪು ಮೃತವಾಗಿ 200 ವರ್ಷ ಕಳೆದಿದೆ. ಈಗ ಯಾವ ಕಾರಣಕ್ಕಾಗಿ ಜಯಂತಿ ಮಾಡಲಾಗುತ್ತಿದೆ. ಟಿಪ್ಪುವನ್ನು ಹುಲಿ ಎಂದು ಕರೆಯಲಾಗುತ್ತಿದೆ. ನಿಜವಾದ ಹುಲಿಯಾದರೆ ಯುದ್ಧಕ್ಕೆ ಹೆದರಿ ಓಡಿಹೋಗುತ್ತಿರಲಿಲ್ಲ. ನಿಜವಾದ ಹುಲಿ ಮದಕರಿ ನಾಯಕ. ಅವರು ಎಂದಿಗೂ ಯುದ್ಧಕ್ಕೆ ಹೆದರಿ ಓಡಿಹೋದವರಲ್ಲ. ಟಿಪ್ಪು ಒಬ್ಬ ದೇಶದ್ರೋಹಿ, ಮತಾಂಧ ಆಗಿರುವ ಕಾರಣ ಆತನ ಜಯಂತಿ ಆಚರಿಸುವುದನ್ನು ವಿರೋಧಿಸುತ್ತೇವೆ ಎಂದು ಕಿಡಿಕಾರಿದ ಅವರು, ಟಿಪ್ಪು ಜಯಂತಿ ಆಚರಿಸಿದರೆ ಅಧಿಕಾರ ಕಳೆದುಕೊಳ್ಳುವ ಭೀತಿಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರ್ಯಕ್ರಮಕ್ಕೆ ಗೈರಾಗುತ್ತಿದ್ದಾರೆ. ಟಿಪ್ಪುವಿನ ಬಗ್ಗೆ ವ್ಯಾಮೋಹ ಹೊಂದಿದ ಎಲ್ಲರಿಗೂ ಕೆಡುಕು ಉಂಟಾಗಿದೆ. ಹೀಗಾಗಿ ಜೆಡಿಎಸ್‌ ತಟಸ್ಥ ನೀತಿ ಅನುಸರಿಸುತ್ತಿದೆ ಎಂದು ತಿಳಿಸಿದರು.

ಪಕ್ಷದ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಮಾತನಾಡಿ, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದ್ದನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ವಿರೋಧ ಮಾಡುತ್ತಿದ್ದರು. ಆದರೆ, ಈಗ ಮೈತ್ರಿ ಸರ್ಕಾರದಲ್ಲಿ ಅವರೇ ಜಯಂತಿ ಆಚರಣೆಗೆ ಮುಂದಾಗಿರುವುದು ವಿಪರ್ಯಾಸ. ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ ಟಿಪ್ಪು ಜಯಂತಿ ಆಚರಣೆ ಮಾಡಿರುತ್ತಿರುವುದು ಕರಾಳ ಸನ್ನಿವೇಶವಾಗಿದ್ದು, ಕನ್ನಡ ವಿರೋಧಿ, ಹಿಂದೂ ವಿರೋಧಿ ಟಿಪ್ಪು ಸುಲ್ತಾನ್‌ ಆಚರಣೆಗೆ ಬಿಡುವುದಿಲ್ಲ. ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸಂಸದ ಪಿ.ಸಿ.ಮೋಹನ್‌, ಮಹಾನಗರ ಅಧ್ಯಕ್ಷ ಸದಾಶಿವ, ನಗರ ಜಿಲ್ಲಾ ಅಧ್ಯಕ್ಷ ಮುನಿರಾಜು ಸೇರಿದಂತೆ ಬಿಜೆಪಿ ಬಿಬಿಎಂಪಿ ಸದಸ್ಯರು, ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸುಲ್ತಾನ್‌ ಎನ್ನಬೇಡಿ​; ಉಗ್ರಗಾಮಿ ಎನ್ನಿ- ರವಿಕುಮಾರ್‌

ಟಿಪ್ಪುನನ್ನು ಸುಲ್ತಾನ್‌ ಎಂದು ಕರೆಯಬಾರದು. ದೇಶದ್ರೋಹಿಯಾಗಿದ್ದ ಆತನನ್ನು ಉಗ್ರಗಾಮಿ, ಭಯೋತ್ಪಾದಕ ಎಂದು ಉಚ್ಛರಿಸಬೇಕು ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್‌ ಹೇಳಿದ್ದಾರೆ.

ಕೊಡಗಿನಲ್ಲಿ ಶಿವ ದೇವಾಲಯ ಸೇರಿದಂತೆ ಎಂಟು ಸಾವಿರಕ್ಕೂ ಹೆಚ್ಚು ದೇಗುಲಗಳನ್ನು ನಾಶ ಮಾಡಿದ್ದಾನೆ. ಅಂತಹವನ ಜಯಂತಿ ಆಚರಣೆ ಮಾಡುತ್ತಿರುವುದು ಸರಿಯಲ್ಲ. ಟಿಪ್ಪು ಜಯಂತಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭಾಗಿಯಾಗದಿರುವ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಆದರೆ, ಧೈರ್ಯವಾಗಿ ಹೇಳಲು ಆಗದೆ ಅನಾರೋಗ್ಯ ಎಂಬ ಕಾರಣ ಕೊಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

click me!