ಜೂ.1ರಿಂದ ಕ್ಯಾಶ್‌ಲೆಸ್‌ ವಿಮೆ ಸೇವೆ ಬಂದ್?

By Web DeskFirst Published May 9, 2019, 7:52 AM IST
Highlights

ಜೂ.1ರಿಂದ ಕ್ಯಾಶ್‌ಲೆಸ್‌ ವಿಮೆ ಸೇವೆ ಬಂದ್‌ ಭೀತಿ| ವಿಮೆ ಸೇವಾ ದರ ಹೆಚ್ಚಳಕ್ಕೆ ಖಾಸಗಿ ಆಸ್ಪತ್ರೆಗಳ ಪಟ್ಟು| ಸರ್ಕಾರಿ ಸ್ವಾಮ್ಯದ 4 ವಿಮಾ ಕಂಪನಿಗಳ ಗ್ರಾಹಕರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಸಮಸ್ಯೆ ಸಾಧ್ಯತೆ

ಬೆಂಗಳೂರು[ಮೇ.09]: ರಾಜ್ಯದಲ್ಲಿ ಸಾರ್ವಜನಿಕ ವಲಯದ ನಾಲ್ಕು ವಿಮಾ ಕಂಪನಿ ಹಾಗೂ ಖಾಸಗಿ ಆಸ್ಪತ್ರೆ, ನರ್ಸಿಂಗ್‌ ಹೋಮ್‌ಗಳ ನಡುವೆ ವಿಮೆ ಸೇವಾ ದರ ಪರಿಷ್ಕರಣೆ ಕುರಿತು ಬಿಕ್ಕಟ್ಟು ಉಂಟಾಗಿದೆ. ಮೇ ಅಂತ್ಯದೊಳಗೆ ಸೇವಾ ದರ ಪರಿಷ್ಕರಣೆ ಮಾಡದಿದ್ದರೆ ಜೂ.1ರಿಂದ ನಗದು ರಹಿತ ಸೇವೆ ಸ್ಥಗಿತಗೊಳಿಸುವುದಾಗಿ ಖಾಸಗಿ ಆಸ್ಪತ್ರೆಗಳು ಎಚ್ಚರಿಕೆ ನೀಡಿವೆ.

ಇದರ ಬೆನ್ನಲ್ಲೇ ಬುಧವಾರ ಸಂಜೆ ವಿಮಾ ಕಂಪನಿಗಳು ಹಾಗೂ ಖಾಸಗಿ ಆಸ್ಪತ್ರೆಗಳು ಸಭೆ ನಡೆಸಿದ್ದು, ತಮ್ಮ ಅಂತಿಮ ನಿರ್ಧಾರವನ್ನು ಗುರುವಾರ ಘೋಷಿಸುವುದಾಗಿ ಖಾಸಗಿ ಆಸ್ಪತ್ರೆಗಳ ಒಕ್ಕೂಟ ಸ್ಪಷ್ಟಪಡಿಸಿದೆ.

ಆಸ್ಪತ್ರೆಗಳು ನಗದು ರಹಿತ ಸೇವೆ ಸ್ಥಗಿತಗೊಳಿಸಿದರೆ ಜನರಲ್‌ ಇನ್ಷೂರೆನ್ಸ್‌ ಪಬ್ಲಿಕ್‌ ಸೆಕ್ಟರ್‌ ಅಸೋಸಿಯೇಷನ್‌ (ಜಿಫ್ಸ್‌) ಅಡಿಯಲ್ಲಿ ಬರುವ ನಾಲ್ಕು ವಿಮಾ ಕಂಪನಿಗಳಾದ ನ್ಯಾಷನಲ್‌ ಇನ್ಷೂರೆನ್ಸ್‌ ಕಂಪನಿ ಲಿ., ನ್ಯೂ ಇಂಡಿಯಾ ಅಶ್ಯೂರೆನ್ಸ್‌ ಕಂಪನಿ ಲಿ., ಒರಿಯೆಂಟಲ್‌ ಇನ್ಷೂರೆನ್ಸ್‌ ಕಂಪನಿ ಲಿ. ಮತ್ತು ಯುನೈಟೆಡ್‌ ಇಂಡಿಯಾ ಇನ್ಷೂರೆನ್ಸ್‌ ಕಂಪನಿ ಲಿಮಿಟೆಡ್‌ಗಳ ವಿಮಾ ಕಂಪನಿಯ ಗ್ರಾಹಕರಿಗೆ ಸಮಸ್ಯೆ ಉಂಟಾಗಲಿದೆ.

ಸೇವಾ ದರ ಪರಿಷ್ಕರಣೆ ಮಾಡಲು ವಿಮಾ ಕಂಪನಿಗಳು ಒಪ್ಪದ ಕಾರಣ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್‌ ಹೋಮ್ಸ್‌ ಒಕ್ಕೂಟ (ಫಾನಾ) ಮತ್ತು ಫೆಡರೇಷನ್‌ ಆಫ್‌ ಹೆಲ್ತ್‌ಕೇರ್‌ ಅಸೋಸಿಯೇಷನ್‌ (ಎಫ್‌ಎಚ್‌ಎ) ಅಸಮಾಧಾನ ವ್ಯಕ್ತಪಡಿಸಿವೆ.

ತುರ್ತು ಸಂದರ್ಭ ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಹಣವಿಲ್ಲದಿದ್ದರೂ ಆರೋಗ್ಯ ವಿಮೆ ಹೊಂದಿದವರು ಧೈರ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮೆ ಸೌಲಭ್ಯ ಹೊಂದಿದವರಿಗೆ ವಿಮಾ ಕಂಪನಿಗಳೇ ನೇರವಾಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚ ಪಾವತಿಸುತ್ತಿವೆ. ಆದರೆ ಇದೀಗ ವಿಮಾ ಕಂಪನಿಗಳು ಸೇವಾ ದರ ಪರಿಷ್ಕರಣೆಗೆ ಮುಂದಾಗದ ಕಾರಣ ನಗದುರಹಿತ ಸೇವೆ ನೀಡದಿರಲು ಫಾನಾ ಮತ್ತು ಎಫ್‌ಎಚ್‌ಎ ಚಿಂತನೆ ನಡೆಸಿವೆ. ಇದರಿಂದ ಲಕ್ಷಾಂತರ ರೋಗಿಗಳು ಗುಣಮಟ್ಟದ ಚಿಕಿತ್ಸೆಗೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.

ಆಸ್ಪತ್ರೆಗಳ ವಾದವೇನು?

ಸಾರ್ವಜನಿಕ ವಲಯದಲ್ಲಿ ವಿಮಾ ಕಂಪನಿಗಳು ವರ್ಷದಿಂದ ವರ್ಷಕ್ಕೆ ತಮ್ಮ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸಿಕೊಳ್ಳುತ್ತಿವೆ. ಆದರೆ ಕಳೆದ ಐದು ವರ್ಷಗಳಿಂದ ಸೇವಾ ದರವನ್ನು ಪರಿಷ್ಕರಣೆ ಮಾಡಿಲ್ಲ. ಆದರೆ ವರ್ಷದಿಂದ ವರ್ಷಕ್ಕೆ ಆಸ್ಪತ್ರೆಯ ನಿರ್ವಹಣೆ, ವೈದ್ಯರು ಮತ್ತು ಸಿಬ್ಬಂದಿ ವೇತನ, ಚಿಕಿತ್ಸಾ ಪರಿಕರಗಳು ಹಾಗೂ ವೈದ್ಯಕೀಯ ಉಪಕರಣಗಳ ದರ ಏರಿಕೆಯಾಗುತ್ತಿದೆ. ಜತೆಗೆ ನೀರು, ವಿದ್ಯುತ್‌, ಇಂಧನ ಸೇರಿದಂತೆ ಮೂಲಸೌಕರ್ಯಗಳು ದುಬಾರಿಯಾಗಿವೆ. ಇದರಿಂದಾಗಿ ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸುವುದು ಕಷ್ಟವಾಗುತ್ತಿದೆ. ಚಿಕಿತ್ಸಾ ವೆಚ್ಚದ ಒಟ್ಟು ಮೊತ್ತದಲ್ಲಿ ಶೇ.35-40ರಷ್ಟುನಷ್ಟವಾಗುತ್ತಿದೆ. ಈ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಎಚ್ಚೆತ್ತುಕೊಳ್ಳದ ವಿಮಾ ಕಂಪನಿಗಳು ತಮ್ಮ ಲಾಭವನ್ನು ಮಾತ್ರ ನೋಡಿಕೊಳ್ಳುತ್ತಿದ್ದು, ಇತ್ತ ಆಸ್ಪತ್ರೆಗಳಿಗೆ ಹಾಗೂ ಅತ್ತ ಫಲಾನುಭವಿಗಳಿಗೆ ಇಬ್ಬರಿಗೂ ವಂಚಿಸುತ್ತಿವೆ ಎಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಆರೋಪಿಸಿದ್ದಾರೆ.

ಗ್ರಾಹಕರಿಗೆ ಏಕೆ ತೊಂದರೆ?

‘ಆಯುಷ್ಮಾನ್‌ ಭಾರತ್‌ ಹಾಗೂ ಆರೋಗ್ಯ ಕರ್ನಾಟಕ’ ಸರ್ಕಾರದ ಯೋಜನೆಗಳು. ಇವು ಕೇವಲ ಬಡ ರೋಗಿಗಳಿಗೆ ಅನ್ವಯ ಆಗಲಿವೆ. ಹೀಗಾಗಿ ಈ ಯೋಜನೆಗಳ ಅಡಿಯಲ್ಲಿ ಬಡ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಬಹುದು. ಆದರೆ ವಿಮಾ ಕಂಪನಿಗಳ ಫಲಾನುಭವಿಗಳು ಎಲ್ಲರೂ ಬಡವರಾಗಿರುವುದಿಲ್ಲ. ಅದಲ್ಲದೆ ಗುಣಮಟ್ಟದ ಸೇವೆ ಪಡೆಯಲೆಂದೇ ಆರೋಗ್ಯ ವಿಮೆ ಮಾಡಿಸಿಕೊಂಡಿರುತ್ತಾರೆ. ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬರುವ ಶೇ.70-80ರಷ್ಟುಜನರು ಖಾಸಗಿ ವಿಮೆಯ ಫಲಾನುಭವಿಗಳಾಗಿರುತ್ತಾರೆ. ಅವರಿಗೆಲ್ಲ ಕಡಿಮೆ ದರದಲ್ಲಿ ಸೇವೆ ನೀಡುತ್ತಾ ಹೋದರೆ ಆಸ್ಪತ್ರೆ ನಡೆಸುವುದಾದರೂ ಹೇಗೆ? ಆಸ್ಪತ್ರೆಗೆ ಸಾಮಾಜಿಕ ಕಳಕಳಿ ಇರಬೇಕು. ಹಾಗೆಯೇ ಆಸ್ಪತ್ರೆಯನ್ನು ನಡೆಸಲು ಹಾಗೂ ಗುಣಮಟ್ಟದ ಸೇವೆ ನೀಡಲು ಲಾಭವೂ ಬೇಕಲ್ಲವೆ?’ ಎಂದು ಆಸ್ಪತ್ರೆಗಳ ಮಾಲಿಕರು ವಾದಿಸುತ್ತಾರೆ.

ಆದರೆ, ವಿಮಾ ಕಂಪನಿಗಳೊಂದಿಗಿನ ವಿವಾದಕ್ಕೆ ಗ್ರಾಹಕರಿಗೆ ನಗದುರಹಿತ ವ್ಯವಸ್ಥೆ ರದ್ದುಪಡಿಸುವುದು ಯಾವ ನ್ಯಾಯ? ಆಸ್ಪತ್ರೆ ಹಾಗೂ ವಿಮಾ ಕಂಪನಿಗಳ ವಿವಾದಕ್ಕೆ ಗ್ರಾಹಕರ ಹಿತ ಏಕೆ ಬಲಿ ಕೊಡಬೇಕು ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ನಾವಿನ್ನೂ ನಗದುರಹಿತ ಸೇವೆ ಸ್ಥಗಿತಗೊಳಿಸುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಚಿಂತನೆ ನಡೆಸಿದ್ದೇವಷ್ಟೇ ಎನ್ನುತ್ತಾರೆ.

ಏನು ಒಪ್ಪಂದವಾಗಿತ್ತು?

2014ರಲ್ಲಿ ಖಾಸಗಿ ಆಸ್ಪತ್ರೆಗಳ ಸಂಘಟನೆಗಳ ಜತೆಗೆ ಜನರಲ್‌ ಇನ್ಷೂರೆನ್ಸ್‌ ಪಬ್ಲಿಕ್‌ ಸೆಕ್ಟರ್‌ ಅಸೋಸಿಯೇಷನ್‌ (ಜಿಫ್ಸ್‌) ಆರೋಗ್ಯ ವಿಮೆ ಸಂಬಂಧ ಒಡಂಬಡಿಕೆ ಮಾಡಿಕೊಂಡಿತ್ತು. ಇದರ ಅನುಸಾರ ಪ್ರತಿ ಚಿಕಿತ್ಸೆಗೆ ಪ್ಯಾಕೇಜ್‌ ದರ ನಿಗದಿಪಡಿಸಲಾಗಿತ್ತು. ಆದರೆ ವಿಮಾ ಕಂಪನಿಗಳು ಒಡಂಬಡಿಕೆ ಅನುಸಾರ ಹಣ ಪಾವತಿಸುತ್ತಿಲ್ಲ ಎಂದು ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಆರೋಪಿಸುತ್ತಿದ್ದಾರೆ. ಜೊತೆಗೆ, ವಿಮಾ ಮೊತ್ತವನ್ನು ಪರಿಷ್ಕರಿಸಿ, ನಿಗದಿತ ಮೊತ್ತವನ್ನು ಸರಿಯಾಗಿ ಪಾವತಿಸುವಂತೆ ಫಾನಾ ಮತ್ತು ಎಫ್‌ಎಚ್‌ಎ ಸೂಚನೆ ನೀಡಿದ್ದರೂ ವಿಮಾ ಕಂಪನಿಗಳು ಸೂಕ್ತ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಮೇ ಅಂತ್ಯದವರೆಗೆ ಗಡುವು ನೀಡಲಾಗಿದೆ ಎನ್ನುತ್ತಾರೆ ಎಫ್‌ಎಚ್‌ಎ ಸದಸ್ಯರು.

click me!