ಸರಳತೆ, ಪಾರದರ್ಶಕತೆಯ ಉದ್ದೇಶದಿಂದ ಟೀ ಶರ್ಟ್ ಧರಿಸುವೆ: ರಾಹುಲ್‌ ಗಾಂಧಿ

By Kannadaprabha NewsFirst Published May 6, 2024, 5:43 AM IST
Highlights

ಸರಳತೆ ಮತ್ತು ಪಾರದರ್ಶಕತೆಯ ಉದ್ದೇಶದಿಂದ ತಾವು ಸದಾ ಟೀ ಶರ್ಟ್‌ ಧರಿಸುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. 

ನವದೆಹಲಿ (ಮೇ.06): ಸರಳತೆ ಮತ್ತು ಪಾರದರ್ಶಕತೆಯ ಉದ್ದೇಶದಿಂದ ತಾವು ಸದಾ ಟೀ ಶರ್ಟ್‌ ಧರಿಸುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಕರ್ನಾಟಕದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ರಾಹುಲ್, ಈ ವೇಳೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಲಘು ವಿಷಯಗಳ ಕುರಿತು ಹರಟಿದ್ದಾರೆ. ಈ ಕುರಿತ ವಿಡಿಯೋವೊಂದನ್ನು ಕಾಂಗ್ರೆಸ್‌ ತನ್ನ ಜಾಲತಾಣ ಪುಟದಲ್ಲಿ ಹಂಚಿಕೊಂಡಿದೆ.

ಈ ವೇಳೆ ಪ್ರಚಾರದಲ್ಲಿ ಅತ್ಯುತ್ತಮ ಭಾಗ ಯಾವುದು ಎಂಬ ಪ್ರಶ್ನೆಗೆ, ‘ಅದು ಮುಗಿದಾಗ’ ಎಂದು ರಾಹುಲ್‌ ಉತ್ತರಿಸಿದ್ದಾರೆ. ಇನ್ನೊಂದೆಡೆ ಖರ್ಗೆಗೆ ರಾಹುಲ್‌, ಚುನಾವಣೆಯಲ್ಲಿ ಏನು ಇಷ್ಟವಾಯಿತು? ಏನು ಆಗಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಖರ್ಗೆ, ಬೇಸರ ವಿಷಯದ ಯಾವುದೂ ಇಲ್ಲ. ಏಕೆಂದರೆ ನಾವು ಇದನ್ನು ದೇಶಕ್ಕಾಗಿ ಮಾಡುತ್ತಿದ್ದೇವೆ. ಒಬ್ಬರು ದೇಶವನ್ನು ನಾಶ ಮಾಡುತ್ತಿರುವಾಗ, ನಾವು ಅದನ್ನು ತಡೆಯಲು ಯತ್ನಿಸುತ್ತಿರುವುದರ ಬಗ್ಗೆ ನಾವು ಹೆಮ್ಮೆ ಪಡುತ್ತೇವೆ’ ಎಂದಿದ್ದಾರೆ.

ಕಾಂಗ್ರೆಸ್‌ ಗೆದ್ದರೆ ಜಾತಿ ಗಣತಿ: ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾತಿಗಣತಿ ಮಾಡಲಿದೆ. ಒಮ್ಮೆ ಜಾತಿಗಣತಿ ಜನರ ಕೈ ಸೇರಿದ ಮೇಲೆ ದೇಶದಲ್ಲಿ ನಿಜವಾದ ರಾಜಕಾರಣ ಶುರುವಾಗಲಿದೆ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದರು. ಶಿವಮೊಗ್ಗ ಮತ್ತು ರಾಯಚೂರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಪ್ರಚಾರ ಆಯೋಜಿಸಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು 10 ವರ್ಷದಲ್ಲಿ ಕೇವಲ 22 ಮಂದಿಗಾಗಿ ಕೆಲಸ ಮಾಡಿದ್ದಾರೆ. ರಾಷ್ಟ್ರದ ಸಂಪತ್ತನ್ನು ಅಂಬಾನಿ, ಅದಾನಿ ಸೇರಿ 22 ಮಂದಿ ಜೇಬಿಗೆ ಹಾಕಿದ್ದಾರೆ. 22 ಮಂದಿ ಮಾಡಿದ್ದ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. 

Lok Sabha Elections 2024: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಶೇ.50 ಮೀಸಲು ಸವಾಲ್‌

ಅವರು ಕೇವಲ 22 ಮಂದಿ ಕೋಟ್ಯಧಿಪತಿ ಮಾಡಲು ಹೊರಟ್ಟಿದ್ದಾರೆ. ನಾವು ಕೋಟ್ಯಂತರ ಮಂದಿ ಕೋಟ್ಯಧಿಪತಿ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದು ಚಾಟಿ ಬೀಸಿದರು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಜಾತಿ ಜನಗಣತಿ ಮಾಡಿಸಿ, ದೇಶದ ಸಂಪತ್ತಿನಲ್ಲಿ ಯಾವ ಯಾವ ಜಾತಿಯವರ ಆಸ್ತಿ ಎಷ್ಟಿದೆ ಎಂಬುವುದನ್ನು ಬಯಲು ಮಾಡುತ್ತೇವೆ. ಜೊತೆಗೆ ದಲಿತರಿಗೆ, ಹಿಂದುಳಿದ ವರ್ಗ ಮತ್ತು ಆದಿವಾಸಿ ಜನಾಂಗದವರಿಗೆ ತಮ್ಮ ಆಸ್ತಿ ಎಷ್ಟಿದೆ ಎಂಬುವುದೂ ಗೊತ್ತಾಗಲಿದೆ. ಜಾತಿಗಣತಿ ನಿಮ್ಮ ಕೈ ಸೇರಿದ ಮೇಲೆ ದೇಶದಲ್ಲಿ ನಿಜವಾದ ರಾಜಕಾರಣ ಶುರುವಾಗಲಿದೆ ಎಂದು ಹೇಳಿದರು.

click me!