ಚಂದ್ರನ ಅಂಗಳಕ್ಕೆ ನೌಕೆ; ಹೊಸ ಇತಿಹಾಸಕ್ಕೆ ಬೆಂಗಳೂರಿನ ಖಾಸಗಿ ಕಂಪನಿ ಸಜ್ಜು

By Suvarna Web DeskFirst Published Jul 23, 2017, 9:01 AM IST
Highlights

* ಚಂದ್ರನ ಮೇಲೆ 600 ಕೆ.ಜಿ. ತೂಕದ ನೌಕೆ ಇಳಿಸಿ ಅಲ್ಲಿಂದ ದೃಶ್ಯಗಳನ್ನು ಭೂಮಿಗೆ ಕಳುಹಿಸುವುದು ಯೋಜನೆಯ ಗುರಿ.

* ಟೀಂ ಇಂಡಸ್ ಸಂಸ್ಥೆಯು ಶೇ.90 ಖಾಸಗಿ ಹಣಕಾಸು ನೆರವಿನಿಂದ ಮಾಡಿದ ಯೋಜನೆ.

* ಟೀಂ ಇಂಡಸ್ ಕಂಪನಿಯ ನೌಕೆ ಡಿಸೆಂಬರ್‌'ನಲ್ಲಿ ಚಂದ್ರನ ಅಂಗಳದಲ್ಲಿ ಇಳಿಯಲಿದೆ.

* ಚಂದ್ರನ ಮೇಲೆ ನೌಕೆ ಇಳಿಸಿದ ವಿಶ್ವದ ಮೊದಲ ಖಾಸಗಿ ಕಂಪನಿ ಎಂಬ ದಾಖಲೆ ಟೀಂ ಇಂಡಸ್'ದ್ದಾಗಲಿದೆ.

ಚೆನ್ನೈ: ಅಗ್ಗದ ವೆಚ್ಚದಲ್ಲಿ ಚಂದ್ರಯಾನ, ಮಂಗಳಯಾನ ಕೈಗೊಂಡು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಜಗತ್ತಿನ ಗಮನ ಸೆಳೆಯುತ್ತಿರುವಾಗಲೇ, ಕರ್ನಾಟಕದ ‘ಐಟಿ ಸಿಟಿ’ ಬೆಂಗಳೂರಿನ ಖಾಸಗಿ ಕಂಪನಿಯೊಂದು ಚಂದ್ರಯಾನ ಕೈಗೊಳ್ಳಲು ಮುಂದಾಗಿದೆ.

ಕಂಪನಿ ಸದ್ಯ ಚಂದ್ರಯಾನ ನೌಕೆಯ ಹಾರಾಟದ ಮಾದರಿಯೊಂದನ್ನು ಸಿದ್ಧಪಡಿಸುತ್ತಿದೆ. ಬರುವ ಡಿಸೆಂಬರ್‌ನಲ್ಲಿ ಪಿಎಸ್‌ಎಲ್‌ವಿ ಉಡಾವಣಾ ವಾಹನದ ಮೂಲಕ ಶ್ರೀಹರಿಕೋಟಾ ಬಾಹ್ಯಾಕಾಶ ನೆಲೆಯಿಂದ ನೌಕೆಯನ್ನು ಉಡಾವಣೆ ಮಾಡಲು ಉದ್ದೇಶಿಸಿದೆ. ಈ ನೌಕೆ ಹಿಂದೆ ರಷ್ಯಾ ಹಾಗೂ ಚೀನಾ ಇಳಿಸಿದ್ದ ಜಾಗದಲ್ಲೇ ಇಳಿಯುತ್ತದೆ ಎಂಬುದು ವಿಶೇಷ.

Latest Videos

ಬಾಹ್ಯಾಕಾಶ ನೌಕೆಯ ಪರೀಕ್ಷಾರ್ಥ ಮಾದರಿಯೊಂದನ್ನು ತಯಾರಿಸಲಾಗಿದ್ದು, ಅದು ಆಗಸ್ಟ್‌'ನಲ್ಲಿ ಇಸ್ರೋದ ಪರೀಕ್ಷಾ ನೆಲೆಯಲ್ಲಿ ಕಠಿಣ ಪರೀಕ್ಷೆಗೆ ಒಳಗಾಗಲಿದೆ. ಮುಂದಿನ ಹಂತದಲ್ಲಿ ಹಾರಾಟದ ಮಾದರಿಯನ್ನು ಸಿದ್ಧಪಡಿಸಲಾಗುವುದು. ಅದು ಚಂದ್ರನ ನೆಲದ ಮೇಲೆ ನೌಕೆಯನ್ನು ಇಳಿಸಲಿದೆ ಎಂದು ಕಂಪನಿಯ ವ್ಯವಸ್ಥಾಪಕ ಮುಖಸ್ಥ ಶೀಲಿಕಾ ರವಿಶಂಕರ್ ತಿಳಿಸಿದ್ದಾರೆ.

ಚೆನ್ನೈನ ಇಂಟರ್‌'ನ್ಯಾಷನಲ್ ಸೆಂಟರ್‌'ನಲ್ಲಿ ಆಯೋಜಿಸಿದ್ದ ಸಂವಹನ ಗೋಷ್ಠಿಯ ವೇಳೆ ಚಂದ್ರಯಾನ ಯೋಜನೆಯ ಬಗ್ಗೆ ಟೀಮ್ ಇಂಡಸ್ ಕಂಪನಿಯ ಸ್ಥಾಪಕ ರಾಹುಲ್ ನಾರಾಯನ್ ಅವರು ಶುಕ್ರವಾರ ಪ್ರಾತ್ಯಕ್ಷಿಕೆ ನೀಡಿದ್ದಾರೆ.

ಇಸ್ರೋದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾದ 2 ಡಜನ್ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ 100ಕ್ಕೂ ಹೆಚ್ಚು ಜನರ ತಂಡ 600 ಕೆ.ಜಿ. ತೂಕದ ಬಾಹ್ಯಾಕಾಶ ನೌಕೆಯೊಂದನ್ನು ಸಿದ್ಧಪಡಿಸಿದೆ. ‘ಇಸಿಎ’ (ಏಕ್ ಛೋಟೀಸಿ ಆಶಾ- ಒಂದು ಆಶಾಭಾವ) ಎಂಬ ರೋವರ್ ಅನ್ನೂ ಅಭಿವೃದ್ಧಿಪಡಿಸಿದೆ. ಜೊತೆಗೆ ಜಪಾನಿನ ತಂಡವೊಂದು ನಿರ್ಮಿಸಿದ ರೋವರ್‌'ವೊಂದನ್ನು ಚಂದ್ರನ ಅಂಗಳಕ್ಕೆ ಬಾಹ್ಯಾಕಾಶ ನೌಕೆ ಒಯ್ಯಲಿದೆ. ಫ್ರೆಂಚ್ ಬಾಹ್ಯಾಕಾಶ ಸಂಸ್ಥೆಯ ಕ್ಯಾಮೆರಾವೊಂದನ್ನು ನೌಕೆ ಒಯ್ಯಲಿದೆ.

ಶೇ.90ರಷ್ಟು ಖಾಸಗಿ ಅನುದಾನದ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲೆ ಇಳಿಸಿ, ಅದರಿಂದ ಚಿತ್ರ ಮತ್ತು ವಿಡಿಯೋಗಳನ್ನು ಭೂಮಿಗೆ ಕಳುಹಿಸುವ ನಿಟ್ಟಿನಲ್ಲಿ ಗೂಗಲ್ ಆಯೋಜಿಸಿದ್ದ ಲೂನಾರ್ ಎಕ್ಸ್ ಪ್ರೈಜ್ ಕಾಂಪಿಟೀಷನ್‌'ನಲ್ಲಿ ಫೈನಲ್ ತಲುಪಿದ 5 ತಂಡಗಳ ಪೈಕಿ ಟೀಮ್ ಇಂಡಸ್ ಕಂಪನಿ ಒಂದಾಗಿತ್ತು.

ನೌಕೆ ಹೇಗೆ ಕಾರ್ಯನಿರ್ವಹಿಸಲಿದೆ?:
ಉಡಾವಣಾ ವಾಹನದಿಂದ ಬೇರ್ಪಟ್ಟ ಬಳಿಕ ಬಾಹ್ಯಾಕಾಶ ನೌಕೆ ಭೂಮಿಯನ್ನು ಎರಡು ಸುತ್ತು ಸುತ್ತಲಿದೆ. ಪ್ರತಿಬಾರಿಯೂ ತನ್ನ ಕಕ್ಷೆಯನ್ನು ಎತ್ತರಿಸಿಕೊಳ್ಳಲಿದೆ. ಬಳಿಕ ನೌಕೆಯ ಎಂಜಿನ್ ದಹಿಸಿ ಪಥವನ್ನು ಚಂದ್ರನ ಎಡೆಗೆ ಒಯ್ಯಲಾಗುತ್ತದೆ. ಬಾಹ್ಯಾಕಾಶ ನೌಕೆ 5 ದಿನಗಳ ಯಾನದಲ್ಲಿ ಭೂಮಿಯಿಂದ ಚಂದ್ರನೆಡೆಗೆ 3.8 ಲಕ್ಷ ಕಿ.ಮೀ. ಸಂಚರಿಸಲಿದೆ. ಚಂದ್ರನಿಂದ 120 ಕಿ.ಮೀ. ಎತ್ತರದಲ್ಲಿ ಎಂಜಿನ್ ಸ್ಥಗಿತಗೊಂಡು ಮತ್ತೊಮ್ಮೆ ದಹಿಸುವ ಮೂಲಕ ಕಕ್ಷೆಯನ್ನು ತಗ್ಗಿಸುತ್ತಾ ಚಂದ್ರನ ಮೇಲೆ ಇಳಿಸಲಾಗುತ್ತದೆ. ಚಂದ್ರನ ಮೇಲ್ಭಾಗದಲ್ಲಿರುವ ಅತಿದೊಡ್ಡ ಕುಳಿಯಲ್ಲಿ ನೌಕೆ ಇಳಿಯಲಿದೆ. ರಷ್ಯಾ ಮತ್ತು ಚೀನಾಗಳು ಕೂಡ ಇಲ್ಲಿಯೇ ನೌಕೆಯನ್ನು ಇಳಿಸಿವೆ ಎಂದು ಚಂದ್ರಯಾನ ಯೋಜನೆಯನ್ನು ರಾಹುಲ್ ನಾರಾಯನ್ ವಿವರಿಸಿದ್ದಾರೆ.

ಚಂದ್ರನ ಮೇಲೆ ನೌಕೆಯನ್ನು ಇಳಿಸುವುದು ಅತ್ಯಂತ ಕ್ಲಿಷ್ಟಕರ ಪ್ರಕ್ರಿಯೆಯಾಗಿದ್ದು, ನೌಕೆ ತನ್ನ ವೇಗವನ್ನು ಪ್ರತಿ ಸೆಕೆಂಡ್‌'ಗೆ 1.3 ಕಿ.ಮೀ. ಯಿಂದ ಶೂನ್ಯ ಕಿ.ಮೀ.ಗೆ ತಗ್ಗಿಸಲಿದೆ. ಅಲ್ಲದೇ ಅದು ತನ್ನ ಎತ್ತರವನ್ನು ಸರಿಪಡಿಸಿಕೊಂಡು ಇಳಿಯುವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಿದೆ. ನೌಕೆ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ಶೇ. 93ರಷ್ಟು ಸಾಧ್ಯತೆ ಗೋಚರಿಸಿದೆ ಎಂದು ನಾರಾಯನ್ ಹೇಳಿದ್ದಾರೆ.

ಇಸ್ರೋ ಕೂಡ 2018ರ ಮೊದಲ ಭಾಗದಲ್ಲಿ ಚಂದ್ರನ ಮೇಲೆ ನೌಕೆ ಕಳುಹಿಸುವ ಚಂದ್ರಯಾನ-2 ಯೋಜನೆಯನ್ನು ರೂಪಿಸಿದೆ.

ಏನಿದು ಯೋಜನೆ?
ಚಂದ್ರನ ಮೇಲೆ ಈಗ ಸಿದ್ಧವಾಗುತ್ತಿರುವ 600 ಕೆ.ಜಿ. ತೂಕದ ನೌಕೆ ಇಳಿಸಿ ದಾಖಲೆ ನಿರ್ಮಿಸುವುದಷ್ಟೇ ಅಲ್ಲದೆ, ಅಲ್ಲಿಂದ ಚಿತ್ರಗಳು, ದೃಶ್ಯಗಳನ್ನು ಭೂಮಿಗೆ ಕಳುಹಿಸಿ ಅಧ್ಯಯನಕ್ಕೆ ನೆರವಾಗುವುದು ಯೋಜನೆಯ ಗುರಿ.

ಹಣ ಎಲ್ಲಿಂದ?
ಜಗದ್ವಿಖ್ಯಾತ ಹುಡುಕು ತಾಣ ಗೂಗಲ್ ನಡೆಸಿದ ‘ಲೂನಾರ್ ಎಕ್ಸ್ ಪ್ರೈಜ್ ಕಾಂಪಿಟೀಷನ್’ (Lunar XPrize Competition) ಸ್ಪರ್ಧೆಯಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದ ಟೀಂ ಇಂಡಸ್ ಶೇ.90 ಖಾಸಗಿ ಹಣಕಾಸು ನೆರವಿನಿಂದ ಯೋಜನೆ ಕೈಗೆತ್ತಿಕೊಂಡಿದೆ.

ಯಾರ ಯೋಜನೆ?
ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) 2 ಡಜನ್ ನಿವೃತ್ತ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ 100ಕ್ಕೂ ಹೆಚ್ಚು ವಿಜ್ಞಾನಿಗಳ ತಂಡ ‘ಏಕ್ ಛೋಟೀಸಿ ಆಶಾ’ ಹೆಸರಿನ ಬಾಹ್ಯಾಕಾಶನೌಕೆಯನ್ನು ಸಿದ್ಧಪಡಿಸಿದೆ.

ವಿಶ್ವದ ಮೊದಲ ಖಾಸಗಿ ಕಂಪನಿ:
ಎಲ್ಲವೂ ಅಂದುಕೊಂಡಂತೆಯೇ ನಡೆದರೆ, ಟೀಂ ಇಂಡಸ್ ಕಂಪನಿಯ ನೌಕೆ ಡಿಸೆಂಬರ್‌'ನಲ್ಲಿ ಚಂದ್ರನ ಅಂಗಳದಲ್ಲಿ ಇಳಿಯಲಿದೆ. ತನ್ಮೂಲಕ ಚಂದ್ರನ ಮೇಲೆ ನೌಕೆ ಇಳಿಸಿದ ವಿಶ್ವದ ಮೊದಲ ಖಾಸಗಿ ಕಂಪನಿ ಎಂಬ ದಾಖಲೆಯನ್ನು ಟೀಂ ಇಂಡಸ್ ಸೃಷ್ಟಿಸಲಿದೆ.

epaperkannadaprabha.com

click me!