ಕಾವೇರಿಗೆ ಮತ್ತೊಂದು ಜಲಾಶಯ

By Web DeskFirst Published Aug 31, 2018, 11:32 AM IST
Highlights

ರಾಜ್ಯ ಸರ್ಕಾರದ ಮಹತ್ವಾಕ್ಷಾಂಕ್ಷಿ ಯೋಜನೆಯಾದ ಮೇಕೆದಾಟು ಬಳಿ ಜಲಾಶಯ ನಿರ್ಮಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಕುಡಿಯುವ ನೀರಿನ ಉದ್ದೇಶಕ್ಕಾಗಿ ಜಲಾಶಯ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರು :  ಮೇಕೆದಾಟು ಬಳಿ 67 ಟಿಎಂಸಿ ಸಾಮರ್ಥ್ಯದ ಜಲಾಶಯ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಆರು ಸಾವಿರ ಕೋಟಿ ರು. ನಷ್ಟುಜಲಾಶಯದ ನಿರ್ಮಾಣದ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಜಲಾಶಯ ನಿರ್ಮಿಸಿದ ಬಳಿಕ ಕುಡಿಯುವ ನೀರಿಗೆ ಬಳಕೆಯಾಗುವ ನೀರನ್ನು ಹೊರತು ಪಡಿಸಿ ಉಳಿದ ನೀರು ತಮಿಳುನಾಡಿಗೆ ಬಿಡಲಾಗುತ್ತದೆ. ಪ್ರತಿ ತಿಂಗಳು ಬಿಡಬೇಕಾದ ನೀರು ಮತ್ತು ನ್ಯಾಯಾಲಯದ ಆದೇಶದ ಪಾಲನೆಗೂ ಇದು ಸಹಕಾರಿಯಾಗಲಿದೆ. ಸುಮಾರು ನಾಲ್ಕು ಸಾವಿರ ಎಕರೆಯಷ್ಟುಅರಣ್ಯ, ಕೃಷಿ, ಕಂದಾಯ ಭೂಮಿ ಯೋಜನೆಯ ವ್ಯಾಪ್ತಿಗೆ ಬರಲಿದೆ ಎಂದು ವಿವರಿಸಿದರು.

ನೀರು ಕಳ್ಳತನದ ವಿರುದ್ಧ ಕ್ರಮ

ನಾಲೆಗಳಲ್ಲಿ ನಡೆಯುತ್ತಿರುವ ನೀರುಗಳ್ಳತನ ತಡೆಯುವ ಸಂಬಂಧ ಕರ್ನಾಟಕ ವಿದ್ಯುತ್‌ ಮಂಡಳಿ (ಕೆಇಬಿ) ಮಾದರಿಯಲ್ಲಿ ವಿಚಕ್ಷಣ ದಳವನ್ನು ರಚಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಲಾಖೆಯ ಆಸ್ತಿ-ಪಾಸ್ತಿಯನ್ನು ಉಳಿಸುವುದು ನಮ್ಮ ಜವಾಬ್ದಾರಿ ಯಾಗಿದೆ. ಹೀಗಾಗಿ ನಾಲ್ಕು ನೀರಾವರಿ ನಿಗಮಗಳಿಗೂ ವಿಚಕ್ಷಣ ದಳವನ್ನು ನಿಯೋಜಿಸಲಾಗುವುದು. ವಿದ್ಯುತ್‌ ಕಳ್ಳತನ ತಡೆಯಲು ಕೆಇಬಿಯಲ್ಲಿ ಪೊಲೀಸ್‌ ಇಲಾಖೆ ನೆರವಿನೊಂದಿಗೆ ವಿಚಕ್ಷಣ ದಳ ರಚನೆಯಾಗಿದೆ. ಅದೇ ಮಾದರಿಯಲ್ಲಿ ನಾಲೆಗಳಿಂದ ನೀರುಗಳ್ಳತನ ತಡೆಯುವ ಸಂಬಂಧ ಪೊಲೀಸ್‌ ಇಲಾಖೆ ಸಹಕಾರದಲ್ಲಿ ವಿಚಕ್ಷಣ ದಳ ರಚನೆ ಮಾಡಲಾಗುವುದು ಎಂದು ಹೇಳಿದರು.

ವಿಚಕ್ಷಣ ದಳ ರಚನೆ ವಿಚಾರಕ್ಕೆ ಸಂಬಂಧಪಟ್ಟಂತೆ ಇಲಾಖೆ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದ್ದು, ಶೀಘ್ರದಲ್ಲಿಯೇ ಸಚಿವರ ಮಟ್ಟದಲ್ಲಿ ಸಭೆ ನಡೆಸಲಾಗುವುದು. ಅಲ್ಲದೇ, ಪೊಲೀಸ್‌ ಇಲಾಖೆ ನೆರವಿನಲ್ಲಿ ದಳ ರಚನೆ ಮಾಡುವುದರಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರೊಂದಿಗೂ ಪ್ರತ್ಯೇಕ ಚರ್ಚಿಸಲಾಗುವುದು. ನಾಲೆಗಳಿಂದ ನೀರು ಬಿಟ್ಟವೇಳೆ ಕೊನೆಯ ಪ್ರದೇಶದವರೆಗೆ ನೀರು ತಲುಪುವುದಿಲ್ಲ. ಮಧ್ಯದಲ್ಲಿಯೇ ನೀರುಗಳ್ಳತನ ಮಾಡಲಾಗುತ್ತಿದೆ. ಇದನ್ನು ತಡೆಯಲು ವಿಚಕ್ಷಣ ದಳ ರಚನೆಗೆ ಉದ್ದೇಶಿಸಲಾಗಿದೆ. ಪೊಲೀಸರು ನಿಗಾವಹಿಸುವುದರಿಂದ ಕೊನೆಯ ಪ್ರದೇಶದ ಜನರಿಗೂ ನೀರು ತಲುಪಲಿದೆ ಎಂದರು.

ತ.ನಾಡಿಗೆ 310 ಟಿಎಂಸಿ ಬಿಡುಗಡೆ

ಕಾವೇರಿ ನದಿಯಿಂದ ಆಗಸ್ಟ್‌ ತಿಂಗಳ ಕೊನೆಯವರೆಗೆ 82 ಟಿಎಂಸಿ ನೀರು ತಮಿಳುನಾಡಿಗೆ ಬಿಡಬೇಕಾಗಿದ್ದು, 310 ಟಿಎಂಸಿ ನೀರು ಬಿಡಲಾಗಿದೆ ಎಂದು ಸಚಿವ ಡಿಕೆಶಿ ತಿಳಿಸಿದ್ದಾರೆ. ಕೊಡಗು ಜಿಲ್ಲಾ ಸಂತ್ರಸ್ತರ ಕಾರ್ಯವು ಮುಗಿದ ಬಳಿಕ ಶಿವನಸಮುದ್ರ, ಮೇಕೆದಾಟು, ಮಹಾದಾಯಿ ನದಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವ ಉದ್ದೇಶ ಹೊಂದಲಾಗಿದೆ. ಕೆರೆ ತುಂಬಿಸುವ ಕೆಲಸಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದಿದ್ದಾರೆ.

ಡ್ರೋನ್‌ ಬಳಸಿ ಡ್ಯಾಂಗಳ ಸಾಕ್ಷ್ಯಚಿತ್ರ

ರಾಜ್ಯದ ಪ್ರಮುಖ ಜಲಾಶಯಗಳು ಗರಿಷ್ಠ ಮಟ್ಟದಲ್ಲಿ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಡ್ರೋನ್‌ ಕ್ಯಾಮೆರಾ ಬಳಸಿಕೊಂಡು ಜಲಾಶಯಗಳ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಇದು ದಾಖಲೆಯಾಗಿ ಉಳಿಯಲಿದೆ. ನೀರಿನ ಸಂಗ್ರಹ, ಜಲಾಶಯಗಳಲ್ಲಿ ಗರಿಷ್ಠ, ಕನಿಷ್ಠ ಪ್ರಮಾಣದ ಅಳತೆ, ಜಲಾಶಯಗಳ ಸುರಕ್ಷತೆ, ಒತ್ತುವರಿ ಸೇರಿದಂತೆ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. ಅಲ್ಲದೇ, ಆಸ್ತಿ ರಕ್ಷಣೆ ಮಾಡಬಹುದಾಗಿದ್ದು, ಆಸ್ತಿ ರಕ್ಷಣೆಯನ್ನು ಸಹ ಮಾಡಬಹುದಾಗಿದೆ ಎಂದು ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಅಲ್ಲದೇ, ನೀರಾವರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಹಲವರ ಅಭಿಪ್ರಾಯಗಳನ್ನು ಕೇಳಲಾಗಿತ್ತು. ನೀರಾವರಿ ತಜ್ಞರು, ಹೋರಾಟಗಾರರು ಸೇರಿದಂತೆ 146 ಮಂದಿಯು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಅಧಿಕಾರಿಗಳು ವಿಂಗಡಣೆ ಮಾಡುವುದರಲ್ಲಿ ನಿರತರಾಗಿದ್ದಾರೆ. ತಾವು ಸಹ ಶೀಘ್ರದಲ್ಲಿಯೇ ಸಲಹೆ ನೀಡಿರುವವರ ಜತೆ ಕಾರ್ಯಾಗಾರವೊಂದನ್ನು ನಡೆಸಲಾಗುವುದು ಎಂದು ನುಡಿದರು.

click me!