ಆನ್'ಲೈನ್ ವಿದ್ಯುತ್ ಸಂಪರ್ಕ: ಗುತ್ತಿಗೆದಾರರಿಗೆ ಆತಂಕ

By Suvarna Web DeskFirst Published Aug 1, 2017, 12:11 PM IST
Highlights

* 7.5 ಕೆ.ವಿ.ಗಿಂತ ಕಡಿಮೆ ವಿದ್ಯುತ್ ಸಂಪರ್ಕ ಪಡೆಯಲು ಅನ್‌'ಲೈನ್ ಅರ್ಜಿ ವ್ಯವಸ್ಥೆ ಯತ್ನ

* ಹೊಸ ವ್ಯವಸ್ಥೆಯಿಂದ ಸಣ್ಣ ಗುತ್ತಿಗೆದಾರರ ದುಡಿಮೆಗೆ ಕುತ್ತು

* ಹೊಸ ವ್ಯವಸ್ಥೆ ಜಾರಿಗೆ ಮಾಡುವ ಮೂಲಕ ಗುತ್ತಿಗೆದಾರರು ಬೆಸ್ಕಾಂ ಕಚೇರಿಗೆ ಬಾರದಂತೆ ತಡೆಯುವ ದುರುದ್ದೇಶವಿದೆ

* ಈ ಮೊದಲು ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಗ್ರಾಹಕ ಎಲ್ಲ ಕೆಲಸವನ್ನು ಗುತ್ತಿಗೆದಾರನಿಗೆ ವಹಿಸಿ ಬಿಡುತ್ತಿದ್ದ. ಈಗ ಗ್ರಾಹಕನೇ ಎಲ್ಲ ಕಡೆಗೆ ಓಡಾಡಬೇಕಾಗುತ್ತದೆ.

ಕನ್ನಡಪ್ರಭ ವಿಶೇಷ ವರದಿ

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) 7.5 ಕಿಲೋ ವ್ಯಾಟ್‌'ಗಿಂತ ಕಡಿಮೆ ವಿದ್ಯುತ್ ಬಳಸಲು ವಿದ್ಯುತ್ ಸಂಪರ್ಕ ಪಡೆಯುವ ಗ್ರಾಹಕರು ನೇರವಾಗಿ ಆನ್‌'ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಜಾರಿಗೆ ತರುವ ಪ್ರಯತ್ನ ನಡೆಸುವ ಮೂಲಕ ರಾಜ್ಯದಲ್ಲಿನ ಸಾವಿರಾರು ಮಂದಿ ಸಣ್ಣ ಪ್ರಮಾಣದ ವಿದ್ಯುತ್ ಗುತ್ತಿಗೆದಾರರನ್ನು ಆತಂಕಕ್ಕೆ ತಳ್ಳಿದೆ.

ಈವರೆಗೆ ಗುತ್ತಿಗೆದಾರರೇ ಗ್ರಾಹಕರ ಪರವಾಗಿ ಎಲ್ಲ ಕೆಲಸ ಮಾಡಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ಗುತ್ತಿಗೆದಾರರನ್ನು ಹೊರಗಿಟ್ಟು ಗ್ರಾಹಕರೇ ನೇರವಾಗಿ ಸಂಬಂಧಪಟ್ಟ ಕಚೇರಿಗೆ ಓಡಾಡಿ ಅನುಮತಿ ಪಡೆದು ಸಂಪರ್ಕ ಪಡೆಯುವಂತಹ ವ್ಯವಸ್ಥೆ ಜಾರಿಗೆ ತರಲು ಹೊರಟಿದೆ.

ಮೇಲ್ನೋಟಕ್ಕೆ ಮಧ್ಯವರ್ತಿಗಳು (ಗುತ್ತಿಗೆದಾರರು) ಇಲ್ಲದೇ ನೇರವಾಗಿ ಗ್ರಾಹಕರೇ ಬೆಸ್ಕಾಂ ಕಂಪೆನಿಯಿಂದ ಅನುಮತಿ ಪಡೆಯಬೇಕು ಎಂಬ ಉದ್ದೇಶ ಕಂಡು ಬರುತ್ತಿದ್ದರೂ, ವಾಸ್ತವವಾಗಿ ವಿದ್ಯುತ್ ಗುತ್ತಿಗೆಯನ್ನು ಕೆಲವೇ ಜನರು ಅಥವಾ ಅಧಿಕಾರಿಗಳಿಗೆ ಬೇಕಾದ ಗುತ್ತಿಗೆದಾರರು ಪಡೆಯಲು ಅನುಕೂಲ ಮಾಡಿಕೊಡಲು ಮುಂದಾಗಿರುವ ಶಂಕೆಯನ್ನು ಸಣ್ಣ ಗುತ್ತಿಗೆದಾರರು ವ್ಯಕ್ತಪಡಿಸುತ್ತಿದ್ದಾರೆ.

ರಾಜ್ಯದಲ್ಲಿ ಇರುವ ಗುತ್ತಿಗೆದಾರರ ಪೈಕಿ ಶೇ. 80ರಷ್ಟು ಜನ ಮನೆ, ಅಂಗಡಿ ಇತ್ಯಾದಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಾರೆ. ಉಳಿದ ಶೇ. 20ರಷ್ಟು ಗುತ್ತಿಗೆದಾರರು ಟೆಂಡರ್ ಮೂಲಕ ದೊಡ್ಡ ಪ್ರಮಾಣದ ಯೋಜನೆಗಳಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈಗ ಬೆಸ್ಕಾಂ ಹೊಸ ಪದ್ಧತಿ ಜಾರಿಗೆ ಬಂದರೆ, ಸಣ್ಣಪುಟ್ಟ ವಿದ್ಯುತ್ ಗುತ್ತಿಗೆ ಮಾಡುತ್ತಿದ್ದವರ ದುಡಿಮೆಗೆ ಕಲ್ಲು ಬೀಳಲಿದೆ ಎಂಬುದು ಸಣ್ಣ ಗುತ್ತಿಗೆದಾರರ ಅಳಲು.

ಏನು ಬದಲಾವಣೆ?:
ಪ್ರಮುಖವಾಗಿ ಈ ಮೊದಲು ಅರ್ಜಿದಾರ (ಗ್ರಾಹಕ) ಅರ್ಜಿಯಲ್ಲಿ ಒಳಾಂಗಣದ ವೈರಿಂಗ್ ಮಾಡುವ ಅನುಮತಿ ಪಡೆದ ಗುತ್ತಿಗೆದಾರನ ಹೆಸರು ಹಾಗೂ ವಿಳಾಸವನ್ನು ನಮೂದಿಸಬೇಕಿತ್ತು. ಆದರೆ ಈಗ ಈ ಅಂಶವನ್ನು ತೆಗೆದುಹಾಕಲಾಗಿದೆ. ಎರಡನೇಯದಾಗಿ ‘ವೈರಿಂಗ್ ಡಯಾಗ್ರಾಮ್’ನ ನಕಲು ಪ್ರತಿಯೊಂದಿಗೆ ಗುತ್ತಿಗೆದಾರನಿಂದ ಕೆಲಸ ಮುಗಿಸಿದ ಹಾಗೂ ತಪಾಸಣಾ ವರದಿಯನ್ನು ಸಲ್ಲಿಸಬೇಕಿತ್ತು. ಆದರೆ ಇನ್ನು ಮುಂದೆ ‘ಅನುಮತಿ ಪಡೆದ ಗುತ್ತಿಗೆದಾರ’ನ ವರದಿಯನ್ನು ಸಲ್ಲಿಸಬೇಕಾಗುತ್ತದೆ.

ಗುತ್ತಿಗೆದಾರರ ಹೊರಗಿಡುವ ಯತ್ನ:
ಹೊಸ ವ್ಯವಸ್ಥೆ ಜಾರಿಗೆ ಮಾಡುವ ಮೂಲಕ ಗುತ್ತಿಗೆದಾರರು ಬೆಸ್ಕಾಂ ಕಚೇರಿಗೆ ಬಾರದಂತೆ ತಡೆಯುವ ದುರುದ್ದೇಶವಿದೆ. ಏಕೆಂದರೆ, ಸಣ್ಣ ಗುತ್ತಿಗೆದಾರರು ಈಗ ಸಂಘಟಿತರಾಗಿದ್ದು, ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದಿದ್ದರೆ ನಿಗದಿತ ಅವಧಿಯಲ್ಲಿ ವಿದ್ಯುತ್ ಸಂಪರ್ಕ ಕೊಡದಿದ್ದರೆ ನಿಯಮ, ಕಾನೂನು ಬದ್ದವಾಗಿ ಯಾಕೆ ತಡ ಮಾಡಲಾಗುತ್ತಿದೆ ಎಂದು ಗುತ್ತಿಗೆದಾರರು ಸಂಬಂಧ ಪಟ್ಟ ಅಧಿಕಾರಿಗಳನ್ನು ಪ್ರಶ್ನಿಸುತ್ತಿದ್ದರು. ಸ್ವಲ್ಪ ಗಟ್ಟಿಯಾಗಿರುವ ಗುತ್ತಿಗೆದಾರರು ಪಟ್ಟು ಹಿಡಿದು ವಿವಿಧ ಕಚೇರಿಗಳಿಗೆ ಓಡಾಡಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿದ್ದರು. ಇದು ಅಧಿಕಾರಿಶಾಹಿಗೆ ಇಷ್ಟವಿಲ್ಲ. ಗ್ರಾಹಕರು ಸಂಘಟಿತರಾಗಿರುವುದಿಲ್ಲ. ಗ್ರಾಹಕರಿಗೆ ವಿಳಂಬ ಮಾಡಿದರೂ, ಕಿರಿಕಿರಿ ನೀಡಿದರೂ ಅದನ್ನು ಸಂಘಟಿತವಾಗಿ ಪ್ರಶ್ನಿಸುವ ಧೈರ್ಯ ಸಾಮಾನ್ಯವಾಗಿ ತೋರುವುದಿಲ್ಲ. ಇದು ಅಧಿಕಾರಿಶಾಹಿಗೆ ಅಪ್ಯಾಯಮಾನ. ಇದನ್ನು ತಡೆಯಲು ಬೆಸ್ಕಾಂನ ಹಿರಿಯ ಅಧಿಕಾರಿಗಳು ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ತಪ್ಪು ಮಾಹಿತಿ ನೀಡಿ ಅವರ ದಾರಿ ತಪ್ಪಿಸಿ, ಇಂತಹದೊಂದು ಮಾರಕ ಆದೇಶ ಹೊರಬೀಳುವಂತೆ ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಗುತ್ತಿಗೆದಾರರೊಬ್ಬರು ಆರೋಪಿಸುತ್ತಾರೆ.

ಕೆಲವು ಅಧಿಕಾರಿಗಳು ಹಾಗೂ ಉದ್ಯೋಗಿಗಳು ತಮ್ಮ ಹತ್ತಿರದ ಸಂಬಂಧಿಕರ ಹೆಸರಿನಲ್ಲಿ ವಿದ್ಯುತ್ ಗುತ್ತಿಗೆದಾರರಾಗಿ ಅನುಮತಿ ಪಡೆದಿದ್ದಾರೆ. ಹೊಸ ವ್ಯವಸ್ಥೆಯಡಿ ಗ್ರಾಹಕರು ವಿದ್ಯುತ್ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸುವ ವೇಳೆ ಅಧಿಕಾರಿಗಳು ತಮಗೆ ಬೇಕಾದವರ ಗುತ್ತಿಗೆದಾರರ ಬಳಿ ವೈರಿಂಗ್ ಮಾಡಿಸುವಂತೆ ಶಿಫಾರಸು ಮಾಡುವ ಸಂಭವ ಇರುತ್ತದೆ. ಆ ಮೂಲಕ ಇತರೇ ಗುತ್ತಿಗೆದಾರರನ್ನು ಹೊರಗಿಡುವ ಹುನ್ನಾರ ನಡೆಯುತ್ತಿದೆ ಎಂದು ಅವರು ಹೇಳುತ್ತಾರೆ.

ಗ್ರಾಹಕನಿಗೂ ಸುಲಭದ ತುತ್ತಲ್ಲ:
ಈ ಮೊದಲು ವಿದ್ಯುತ್ ಸಂಪರ್ಕ ಪಡೆಯಬೇಕಾದರೆ ಗ್ರಾಹಕ ಎಲ್ಲ ಕೆಲಸವನ್ನು ಗುತ್ತಿಗೆದಾರನಿಗೆ ವಹಿಸಿ ಬಿಡುತ್ತಿದ್ದ. ಗುತ್ತಿಗೆದಾರ ಸಂಬಂಧಪಟ್ಟ ಕಚೇರಿಯಲ್ಲಿ ಓಡಾಡಿ ಅನುಮತಿ ಪಡೆದುಕೊಂಡು ಕೆಲಸ ಮಾಡಿಕೊಡುತ್ತಿದ್ದ, ಜೊತೆಗೆ ವೈರಿಂಗ್ ಮಾಡಿದ ಬಗ್ಗೆ ತಪಾಸಣಾ ವರದಿಯನ್ನು ಕೊಡುತ್ತಿದ್ದ. ಆದರೆ ಈಗ ಗ್ರಾಹಕನೇ ಎಲ್ಲ ಕಡೆಗೆ ಓಡಾಡಬೇಕಾಗುತ್ತದೆ. ಆದರೆ ಈಗ ಗ್ರಾಹಕ ಯಾರಿಂದ ಬೇಕಾದರೂ ವೈರಿಂಗ್ ಮಾಡಿಸಿ ಕೊನೆಗೆ ಅನುಮತಿ ಪಡೆದ ಗುತ್ತಿಗೆದಾರನಿಂದ ತಪಾಸಣಾ ವರದಿಯನ್ನು ಸಲ್ಲಿಸಿದರೆ ಸಾಕಾಗುತ್ತದೆ. ಒಟ್ಟಾರೆ ವಿದ್ಯುತ್ ಗುತ್ತಿಗೆದಾರರು ವಿದ್ಯುತ್ ಸಂಪರ್ಕಕ್ಕಾಗಿ ಸಂಬಂಧಪಟ್ಟ ಕಚೇರಿಗಳಿಗೆ ಬರದಂತೆ ತಡೆಯುವ ಉದ್ದೇಶ ಹೊಂದಲಾಗಿದೆ ಎಂದು ಸಂಘದ ಪದಾಧಿಕಾರಿಗಳು ಹೇಳುತ್ತಾರೆ.

epaperkannadaprabha.com

click me!