ಶಿಥಿಲ ನಿಲ್ದಾಣಕ್ಕೆ ತರಾತುರಿಯ ಕಳಪೆ ಕಾಮಗಾರಿ

By suvarna Web DeskFirst Published Nov 26, 2017, 1:42 PM IST
Highlights

ಶ್ರವಣಬೆಳಗೊಳದ ಬಸ್ ನಿಲ್ದಾಣದ ಕಟ್ಟಡದ ಮೇಲೆ ಮತ್ತೊಂದು ಅಂತಸ್ತು ಕಟ್ಟುವ ಕಾಮಗಾರಿ ಹಾಗೂ ಶ್ರವಣಬೆಳಗೊಳದ ನಾಲ್ಕು ಕಡೆಗಳಲ್ಲಿ ತಾತ್ಕಾಲಿಕ ಬಸ್ ಶೆಲ್ಟರ್‌'ಗಳನ್ನು ನಿರ್ಮಿಸಲು 3.23 ಕೋಟಿ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಆದರೆ, ಬಸ್ ನಿಲ್ದಾಣ ಕಟ್ಟಡ ನಿರ್ಮಾಣ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

ಚನ್ನರಾಯಪಟ್ಟಣ (ನ.26):  ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟದ ಬಾಹುಬಲಿ ಮೂರ್ತಿಗೆ 2018ರ ಫೆಬ್ರವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿಷೇಕಕ್ಕೆ ರಾಜ್ಯ ಸರ್ಕಾರ ಹಲವು ಶಾಶ್ವತ ಹಾಗೂ ತಾತ್ಕಾಲಿಕ ಯೋಜನೆಗಳನ್ನು ರೂಪಿಸಿಕೊಂಡು ₹175 ಕೋಟಿ ಬಿಡುಗಡೆ ಮಾಡಿದೆ. ಶ್ರವಣಬೆಳಗೊಳದ ಬಸ್ ನಿಲ್ದಾಣದ ಕಟ್ಟಡದ ಮೇಲೆ ಮತ್ತೊಂದು ಅಂತಸ್ತು ಕಟ್ಟುವ ಕಾಮಗಾರಿ ಹಾಗೂ ಶ್ರವಣಬೆಳಗೊಳದ ನಾಲ್ಕು ಕಡೆಗಳಲ್ಲಿ ತಾತ್ಕಾಲಿಕ ಬಸ್ ಶೆಲ್ಟರ್‌'ಗಳನ್ನು ನಿರ್ಮಿಸಲು 3.23 ಕೋಟಿ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಆದರೆ, ಬಸ್ ನಿಲ್ದಾಣ ಕಟ್ಟಡ ನಿರ್ಮಾಣ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.

ಶೀತಪೀಡಿತ ಹಳೆಯ ಕಟ್ಟಡ: 35 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಶ್ರವಣಬೆಳಗೊಳ ಬಸ್ ನಿಲ್ದಾಣದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಿಂದ ಕೂಡಿದೆ. ಪೂರ್ವದಲ್ಲಿ ಕಲ್ಯಾಣಿ, ಉತ್ತರದಲ್ಲಿ ವಿಂಧ್ಯಗಿರಿ ಬೆಟ್ಟದಿಂದ ಬರುವ ನೀರು, ಉತ್ತರದಲ್ಲಿ ಚಿಕ್ಕಬೆಟ್ಟ ಸೇರಿದಂತೆ ಗ್ರಾಮದ ಅರ್ಧ ನೀರು ಬಸ್ ನಿಲ್ದಾಣದ ಪಕ್ಕದಲ್ಲಿಯೇ ಹರಿದು ಹೋಗುತ್ತದೆ. ಇದರಿಂದ ಬಸ್ ನಿಲ್ದಾಣದ ಕಟ್ಟಡ ಸಂಪೂರ್ಣ ಶೀತ ಪೀಡಿತವಾಗಿದ್ದು, ಕಟ್ಟಡದ ಕೆಳಭಾಗದಲ್ಲಿ ವರ್ಷವಿಡೀ ತೇವಾಂಶದಲ್ಲಿಯೇ ಕೂಡಿರುತ್ತದೆ.

ಶಿಥಿಲ ಕಟ್ಟಡದ ಮೇಲೆ ಅಂತಸ್ತು ನಿರ್ಮಾಣ: ಈಗಾಗಲೇ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದರೂ ಅದರ ಮೇಲ್ಭಾಗದಲ್ಲಿ ಮತ್ತೊಂದು ಅಂತಸ್ತು ಕಟ್ಟಡ ಕಟ್ಟಲು ಇಲಾಖೆ ಟೆಂಡರ್ ಕರೆದಿರುವುದಕ್ಕೆ ಸ್ಥಳೀಯರ ವಿರೋಧವಿದೆಯಾದರೂ, ಕೆಲಸಕ್ಕೆ ವಿರೋಧ ಏಕೆ ಮಹಾಮಸ್ತಕಾಭಿಷೇಕ ಎಂದರೆ ಅದು ಕೇವಲ ಇಂತಿಷ್ಟು ದಿನ ಅದು ಚೆನ್ನಾಗಿ ನಡೆದರೆ ಸಾಕು ಎಂದು ಸುಮ್ಮನಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ. ಸಾರಿಗೆ ಸಂಸ್ಥೆಯ ಕಟ್ಟಡ 1981ರಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ನಿರ್ಮಾಣವಾಗಿದ್ದು, ಕಟ್ಟಡವನ್ನು ಪಿಲ್ಲರ್ ಹಾಕಿ ನಿರ್ಮಿಸಿದ್ದರೂ ತಳಭಾಗದಲ್ಲಿ ಪಿಲ್ಲರ್‌ಗಳಿಗೆ ಹಾಕಿರುವ ಕಬ್ಬಿಣದ ರಾಡುಗಳು ಶೀತದಿಂದ ಸಂಪೂರ್ಣವಾಗಿ ತುಕ್ಕು ಹಿಡಿದಿವೆ. ತಂತ್ರಜ್ಞರಿಗೆ ಇದರ ಅರಿವಿಲ್ಲದೆ ಅದರ ಮೇಲೆ ಕಟ್ಟಡ ನಿರ್ಮಿಸುತ್ತಿದ್ದಾರೆ.ಮುಖ್ಯಮಂತ್ರಿ ವೀಕ್ಷಣೆಗೆ ಬರುವ ವೇಳೆ ಎರಡು ಬದಿಯಲ್ಲಿ ಬೀಮ್ ಗೆ ಕಬ್ಬಿಣ ಕಟ್ಟಿ ಕೆಲವು ಅಡಿಗಳಷ್ಟು ಕಾಂಕ್ರಿಟ್ ಹಾಕಿ ಮಧ್ಯದಲ್ಲಿ ಉಳಿದಿದ್ದ ಜಾಗಕ್ಕೆ ಟಾರ್ಪಾಲು ಹಾಕಿ ಮುಚ್ಚಲಾಗಿತ್ತು ಎಂದು ಸ್ಥಳಿಯರು ದೂರುತ್ತಾರೆ. ಮೇಲಂತಸ್ತಿನ ಕಟ್ಟಡಕ್ಕೆ 1.82 ಕೋಟಿ ನೀಡಿದ್ದು, ಇದರ ಜತೆಗೆ ಮತ್ತೊಂದು ಕೋಟಿ ನೀಡಿ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಹೊಸದಾಗಿ ಕಟ್ಟಡ ನಿರ್ಮಿಸಿದ್ದರೆ 50 ವರ್ಷ ಶಾಶ್ವತವಾದ ಕಟ್ಟಡ ಉಳಿಯುತ್ತಿತ್ತು.

ಅದನ್ನು ಬಿಟ್ಟು ಇಲಾಖೆಯ ಎಂಜನಿಯರ್‌'ಗಳು ಎಲ್ಲಿಯೋ ಕುಳಿತು ಅದರ ಮೇಲೆ ಕಟ್ಟಡ ಕಟ್ಟಬಹುದು ಎಂದು ನೀಡಿದ ವರದಿ ಮೇಲೆ ಕಟ್ಟಡ ನಿರ್ಮಾಣವಾಗುತ್ತಿದೆ. ಮನಬಂದಂತೆ ಕಾಮಗಾರಿ: ಬಸ್ ನಿಲ್ದಾಣದ ಪ್ಲಾಟ್‌'ಫಾರಂ ನಿರ್ಮಾಣದಲ್ಲಿ ಗುತ್ತಿಗೆದಾರರು ತಮಗಿಚ್ಛೆ ಬಂದಂತೆ ಕಾಮಗಾರಿ ನಡೆಸುತ್ತಿದ್ದು, ಪ್ಲಾಟ್‌'ಫಾರಂ ಕಾಂಕ್ರೀಟ್ ಹಾಕುವ ಸಂದರ್ಭದಲ್ಲಿ ಒಂದೊಂದು ಬ್ಲಾಕ್‌'ಗಳಿಗೆ ಒಂದೇ ಸಮಯದಲ್ಲಿ ಕಾಂಕ್ರೀಟ್ ಹಾಕಬೇಕಾಗಿದೆ. ಆದರೆ ಕಾಂಕ್ರೀಟ್ ಮಿಶ್ರಣ ಉಳಿಯಿತೆಂದು ಪಕ್ಕದ ಬ್ಲಾಕ್‌'ಗೆ ಒಂದು ಕಡೆ ಮುಕ್ಕಾಲು ಭಾಗ ಹಾಕಿ ಕೇವಲ ಒಂದೂವರೆ ಇಂಚಿನಷ್ಟು ಮಾತ್ರ ಕಾಂಕ್ರೀಟ್ ಹಾಕುವುದನ್ನು ನಿಲ್ಲಿಸಿಕೊಂಡಿರುವುದರಿಂದ ಬಸ್'ಗಳ ತೂಕದಿಂದ ಅದು ಕಿತ್ತು ಬರುವುದು ಖಚಿತ ಎಂದು ಹಿರಿಯ ಎಂಜನಿಯರ್‌ಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಾಂಕ್ರೀಟ್ ಹಾಕಲು ಮರಳು ಸಿಗುತ್ತಿಲ್ಲ ಎಂಬ ನೆಪದಿಂದ ಸ್ಥಳೀಯವಾಗಿ ಸಿಗುವ ಎಂ. ಸ್ಯಾಂಡ್‌'ನ್ನು ಮಿಶ್ರಣಗೊಳಿಸಿಕೊಂಡು ಕಾಂಕ್ರೀಟ್ ಹಾಕಲಾಗುತ್ತಿದೆ.

ವರದಿ: ಮಾದಿಹಳ್ಳಿ ವೆಂಕಟೇಶ - ಕನ್ನಡಪ್ರಭ

click me!