ಸಹ ಪ್ರಾಧ್ಯಾಪಕ ಹುದ್ದೆಗೆ ಪಿಎಚ್ ಡಿ ಕಡ್ಡಾಯ

First Published May 2, 2018, 11:08 AM IST
Highlights

ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕರಡು ನಿಯಮಗಳನ್ನು ಸಿದ್ಧಪಡಿಸಿದ್ದು, ಶೀಘ್ರ ಇದಕ್ಕೆ ಕೇಂದ್ರ ಸರ್ಕಾರ ಅಂಗೀಕಾರ ನೀಡುವ ನಿರೀಕ್ಷೆಯಿದೆ.

ನವದೆಹಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಕರಡು ನಿಯಮಗಳನ್ನು ಸಿದ್ಧಪಡಿಸಿದ್ದು, ಶೀಘ್ರ ಇದಕ್ಕೆ ಕೇಂದ್ರ ಸರ್ಕಾರ ಅಂಗೀಕಾರ ನೀಡುವ ನಿರೀಕ್ಷೆಯಿದೆ.
ಕರಡು ನಿಯಮಗಳಿಗೆ ಸರ್ಕಾರ ಅಸ್ತು ಎಂದರೆ ವಿಶ್ವವಿದ್ಯಾಲಯಗಳ ಸಹ-ಪ್ರಾಧ್ಯಾಪಕನಾಗಲು ಪಿಎಚ್‌ಡಿ ಕಡ್ಡಾಯವಾಗಲಿದೆ. ‘ನೆಟ್’ (ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್) ಹಾಗೂ ರಾಜ್ಯ ಪ್ರವೇಶ ಪರೀಕ್ಷೆ (ಸೆಟ್) ಜತೆಗೆ ವಿವಿಗಳಲ್ಲಿ ಸಹಾಯಕ ಪ್ರಾಧ್ಯಾಪಕನಾಗಲು ಪಿಎಚ್‌ಡಿ ಕಡ್ಡಾಯ ನಿಯಮ 2021ರ ಜುಲೈನಿಂದ ಜಾರಿಯಾಗುವ ನಿರೀಕ್ಷೆಯಿದೆ.
ಈವರೆಗೆ, ಸ್ನಾತಕೋತ್ತರ ಪದವಿ ಜತೆ ನೆಟ್ ಪಾಸಾದರೆ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಲು ಸಾಕಾಗಿತ್ತು. ಆದರೆ 2009 ಕ್ಕಿಂತ ಮುನ್ನ ಪಿಎಚ್‌ಡಿ ಮುಗಿಸಿದವರು ನೆಟ್ ಪಾಸಾಗಲೇಬೇಕು ಎಂಬ ನಿಯಮವೇನೂ ಇಲ್ಲ.  

ಇದೇ ವೇಳೆ, ಕಾಲೇಜುಗಳ ಸಹಾಯಕಪ್ರಾಧ್ಯಾಪಕರು ಹೆಚ್ಚಿನ ವೇತನ ಶ್ರೇಣಿಗೆ ಬಡ್ತಿ ಬೇಕು ಎಂದರೆ ಕಡ್ಡಾಯವಾಗಿ ಪಿಎಚ್‌ಡಿ ಮಾಡಿರಬೇಕು. ಇದು 2020ರ ಜುಲೈನಿಂದ ಜಾರಿಯಾಗಲಿದೆ. ಈವರೆಗೆ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಮಾತ್ರ ಪಿಎಚ್‌ಡಿ ಕಡ್ಡಾಯವಾಗಿತ್ತು.
ಏಕರೂಪದ ನಿಯಮ: ಇನ್ನು ಮುಂದೆ ದೇಶಾದ್ಯಂತ ಯುಜಿಸಿ ನೇಮಕಾತಿ ವೇಳೆ ಏಕರೂಪದ ನಿಯಮ ಜಾರಿಗೆ ಬರುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ಆಯಾ ವಿಶ್ವವಿದ್ಯಾಲಯಗಳು ಪ್ರತ್ಯೇಕ ನೇಮಕಾತಿ ನಿಯಮಗಳನ್ನು ಪಾಲಿಸುತ್ತಿದ್ದವು.
ಕರಡು ನಿಯಮಾವಳಿಗಳನ್ನು ಗಮನಿಸಿದರೆ ಪಿಎಚ್‌ಡಿಗಿಂತ ಡಿಗ್ರಿಯಲ್ಲಿನ ಅಂಕಗಳಿಗೆ ಸಹಾಯಕ ಪ್ರಾಧ್ಯಾಪಕರ ನೇಮಕದ ವೇಳೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಕಂಡುಬಂದಿದೆ.
ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಯು ಡಿಗ್ರಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ತೆಗೆದುಕೊಂಡಿದ್ದರೆ ನೇಮಕಾತಿ ವೇಳೆ ಆತನಿಗೆ 21 ಕೃಪಾಂಕಗಳನ್ನು ನೀಡಲಾಗುತ್ತದೆ. ಆದರೆ ಪಿಎಚ್‌ಡಿಗೆ ಅದಕ್ಕಿಂತ 1 ಅಂಕ ಕಮ್ಮಿ (20 ಕೃಪಾಂಕ) ನೀಡಲಾಗುತ್ತದೆ. 
ದೇಶದ ಸುಮಾರು 800 ವಿಶ್ವವಿದ್ಯಾಲಯಗಳು ಹಾಗೂ 40 ಸಾವಿರ ಕಾಲೇಜುಗಳಿಗೆ ಸಹ-ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಏಕರೂಪದ ನಿಯಮಾವಳಿಗಳನ್ನು ರೂಪಿಸಿ, ಯುಜಿಸಿ ಕರಡು ನಿಯಮ ಪ್ರಕಟಿಸಿದೆ. ಈವರೆಗೆ ಆಯ್ಕೆ ಪ್ರಕ್ರಿಯೆಯು ಆಯಾ ವಿಶ್ವವಿದ್ಯಾಲಯಗಳಿಗೆ ಬೇರೆ ಬೇರೆ ರೀತಿ ನಡೆಯುತ್ತಿತ್ತು. ಆದರೆ ಈ ನಿಯಮಕ್ಕೆ ಬದಲಾವಣೆ ತರಲು ಹೊರಟಿರುವ ಯುಜಿಸಿ, ಎಲ್ಲ ವಿಶ್ವವಿದ್ಯಾಲಯಗಳಿಗೆ ಏಕರೂಪದ ನೇಮಕಾತಿ ನಿಯಮ ರೂಪಿಸಿದೆ.

click me!