Kalaburagi election 2024: ಶೋಕದ ಮನೆಯಿಂದ ಬಂದು ಮತದಾನ ಮಾಡಿದ ಮಾಜಿ ಶಾಸಕ ದಿ.ನಾಗರೆಡ್ಡಿ ಕುಟುಂಬಸ್ಥರು

By Sathish Kumar KHFirst Published May 7, 2024, 6:26 PM IST
Highlights

ಕಲಬುರಗಿ ಮಾಜಿ ಶಾಸಕ ನಾಗರೆಡ್ಡಿ ಪಾಟೀಲ್ ಅವರು ನಿನ್ನೆಯಷ್ಟೇ ಸಾವನ್ನಪ್ಪಿದ್ದು, ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಆದರೆ, ನಾಗರೆಡ್ಡಿ ಕುಟುಂಬದ 20 ಸದಸ್ಯರು ಶೋಕದ ನಡುವೆಯೂ ಬಂದು ಮತ ಚಲಾವಣೆ ಮಾಡಿದ್ದಾರೆ.

ಕಲಬುರಗಿ (ಮೇ 07): ಮಾಜಿ ಶಾಸಕರು, ಶಿಕ್ಷಣ ಪ್ರೇಮಿಗಳಾದ ಡಾ.ನಾಗರೆಡ್ಡಿ ಪಾಟೀಲರು ನಿನ್ನೆಯಷ್ಟೇ ನಿಧನರಾಗಿದ್ದು, ಇಡೀ‌ ಸೇಡಂ ತಾಲೂಕು ಶೋಕದಲ್ಲಿ ಮುಳುಗಿತ್ತು. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಹ ಟ್ವಿಟ್ ಮೂಲಕ ಹಿರಿಯ ಚೇತನಕ್ಕೆ ಗೌರವ ಸಂತಾಪ ಸಲ್ಲಿಸಿದ್ದರು. ಸರಕಾರಿ ಗೌರವದೊಂದಿಗೆ ನಾಗರೆಡ್ಡಿ ಗೌಡರ ಅಂತ್ಯಕ್ರಿಯೆ ನಡೆದಿತ್ತು. ಈ ನೋವಿನಿಂದ ಹೊರ ಬರುವ ಮುನ್ನವೇ ಮನೆಯ ಎಲ್ಲ ಸದಸ್ಯರು ಸೇರಿ ಮತದಾನ ಮಾಡುವ ಮೂಲಕ ಸಾಂವಿಧಾನಿಕ ಹಕ್ಕನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.

ಹೌದು, ಕುಟುಂಬದ ಹಿರಿಯ ಚೇತನವನ್ನು ಕಳೆದುಕೊಂಡ ನೋವಿನಿಂದ ಇನ್ನೂ ಚೇತರಿಸಿಕೊಂಡಿರದ ನಾಗರೆಡ್ಡಿ ಪಾಟೀಲರ ಕುಟುಂಬದವರು ಇಂದಿನ ಲೋಕಸಭೆ ಮತದಾನದಲ್ಲಿ ಪಾಲ್ಗೊಳ್ಳುವುದನ್ನು ಹಾಗೂ ಎಲ್ಲರೂ ಮತ ಚಲಾವಣೆ ಮಾಡುವುದನ್ನು ಮರೆಯಲಿಲ್ಲ. ನಾಗರೆಡ್ಡಿಯವರ ಅಗಲಿಕೆ ನೋವಿನಲ್ಲೂ, ಇಂದಿನ ಲೋಕಸಭೆ ಚುನಾವಣೆಯ ಮತದಾನಕ್ಕೆ ಆಗಮಿಸಿ ಎಲ್ಲರೂ ಮತ ಹಾಕಿದರು. ಈ ಮೂಲಕ ನಮ್ಮ ಮತ ನಮ್ಮ ಹಕ್ಕು, ಅದನ್ನು ಚಲಾಯಿಸುವ ಮೂಲಕ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾದ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಎಂಬ ಸಂದೇಶ ಸಾರಿದರು.

ಶಿವಮೊಗ್ಗ ಗಂಡನ ಸಾವಿಗೆ ಮತದಾನ ಸಮರ್ಪಿಸಿದ ಹೆಂಡತಿ; ಶವ ಬಿಟ್ಟುಬಂದು ಮತ ಹಾಕಿದ ಮಹಿಳೆ

ನಾಗರೆಡ್ಡಿ ಕುಟುಂಬದ 20ಕ್ಕೂ ಹೆಚ್ಚು ಸದಸ್ಯರು  ಮತದಾನದ ಕರ್ತವ್ಯವನ್ನು‌ ನೆರವೇರಿಸಿದರು. ಒಮ್ಮೆಲೆ ಎಲ್ಲರೂ ಮತದಾನಕ್ಕೆ ತೆರಳುವ ಮೂಲಕ ಪ್ರಜಾಪ್ರಭುತ್ವದ ಪರಮ ಮತದಾನದ ಕರ್ತವ್ಯವನ್ನು ನೆರವೇರಿಸಿ ಗಮನ ಸೆಳೆದರು. ದಿ. ನಾಗರೆಡ್ಡಿ ಕುಟುಂಬದ ಎಲ್ಲ ಸದಸ್ಯರು ಸೇರಿ ಮತಗಟ್ಟೆಗೆ ಹೋಗಿ ಸರತಿ ಸಾಲಿನಲ್ಲಿ ನಿಂತುಕೊಂಡರು. ನಂತರ, ಹಿರಿಯರ ಹಾದಿಯಾಗಿ ಆದ್ಯತೆಯ ಮೇರೆಗೆ ಒಬ್ಬೊಬ್ಬರೇ ಮತಗಟ್ಟೆಯೊಳಗೆ ತೆರಳಿ ಮತದಾನ ಮಾಡುವ ಮೂಲಕ ಇನ್ನಿತರರಿಗೆ ಮಾದರಿಯಾಗಿದ್ದಾರೆ.

ನನ್ನನ್ನು ನೋಡಿಕೊಳ್ಳದ ಮಕ್ಕಳು ಸಂಬಂಧಿಕರಿಗೆ ಬದುಕಿದ್ದೇನೆಂದು ತೋರಿಸಲು ಮತ ಹಾಕಿದೆ, ವೃದ್ಧನ ಕಣ್ಣೀರು

ಮನೆಯಲ್ಲಿ ಶೋಕದ ವಾತಾವರಣ ಇದೆ, ಹೊರಗಡೆ ಕೆಂಡ ಕಾರುವ ಬಿಸಿಲಿದೆ ಎಂಬ ನೆಪವನ್ನು ಹೇಳದೇ ಚಿಕ್ಕವರು, ಹಿರಿಯರು, ನವ ಮತದಾರರು ಎಲ್ಲರೂ ಮತಗಟ್ಟೆಗೆ ತೆರಳಿದ್ದು ನೋಡಿದರೆ ಪ್ರಜಾಪ್ರಭುತ್ವದ ಮತದಾನ ಹಬ್ಬ ಇಲ್ಲಿಯೇ ನಡೆಯುತ್ತಿದೆ ಎಂಬಂತೆ ಭಾಸವಾಗುತ್ತಿತ್ತು. ಈ ಮೂಲಕ ಮತದಾನ ಮಾಡಲು ಅರ್ಹರಿರುವ ಪ್ರತಿಯೊಬ್ಬರೂ ಯಾವುದೇ ಕುಂಟು ನೆಪವನ್ನು ಹೇಳದೇ ಅಗತ್ಯವಾಗಿ ಮತಗಟ್ಟೆಗೆ ಹೋಗಿ ಮತದಾನ ಮಾಡುವಂತೆ ಮನವಿ ಮಾಡಿದರು. ಇನ್ನು ನಾಗರೆಡ್ಡಿ ಅವರ ಕುಟುಂಬದ ಎಲ್ಲ ಸದಸ್ಯರ ಮತದಾನ ಮಾಡಿದ ಗುಂಪು ಫೋಟೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

click me!