ನೊಬೆಲ್‌ ಗೆದ್ದ ಕ್ರೇಮರ್‌ಗೆ ಕರ್ನಾಟಕದ ಕಾಫಿ ನಂಟು

By Kannadaprabha NewsFirst Published Oct 18, 2019, 7:22 AM IST
Highlights

ಭಾರತೀಯ ಮೂಲದ  ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿಯೊಂದಿಗೆ ಈ ಬಾರಿಯ ಆರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ಹಂಚಿಕೊಂಡ ಹಾರ್ವಡ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಮೈಕಲ್‌ ಕ್ರೇಮರ್‌ಗೆ ಕರುನಾಡಿನ ಜತೆಗೆ ಸಂಬಂಧ ಇರುವ ಕುತೂಹಲಕಾರಿ ಮಾಹಿತಿ ತಿಳಿದು ಬಂದಿದೆ.

ನವದೆಹಲಿ [ಅ.18]: ಭಾರತೀಯ ಮೂಲದ ಅಮೆರಿಕ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿಯೊಂದಿಗೆ ಈ ಬಾರಿಯ ಆರ್ಥಶಾಸ್ತ್ರ ನೊಬೆಲ್‌ ಪ್ರಶಸ್ತಿ ಹಂಚಿಕೊಂಡ ಹಾರ್ವಡ್‌ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಮೈಕಲ್‌ ಕ್ರೇಮರ್‌ಗೆ ಕರುನಾಡಿನ ಜತೆಗೆ ಸಂಬಂಧ ಇರುವ ಕುತೂಹಲಕಾರಿ ಮಾಹಿತಿ ತಿಳಿದು ಬಂದಿದೆ.

ಕ್ರೇಮರ್‌ ಸಹ ಮಾಲಿಕತ್ವದ ಪರ್ಸೀಶನ್‌ ಅಗ್ರಿಕಲ್ಚರ್‌ ಡೆವಲಪ್ಮೆಂಟ್‌ ಸಂಸ್ಥೆ (ಪ್ಯಾಡ್‌)ಯ ಸಹಯೋಗದೊಂದಿಗೆ ಕಾಫಿ ಮಂಡಳಿ ಜಾರಿಗೆ ತಂದ ‘ಕಾಫಿ ಕೃಷಿ ತರಂಗ ಸೇವೆ’ ಯೋಜನೆಯು ಕಾಫಿ ಬೆಳೆಗಾರರ ಆದಾಯ ಹೆಚ್ಚಿಸುವಲ್ಲಿ ಗಣನೀಯ ಪಾತ್ರ ವಹಿಸಿತ್ತು ಎಂಬ ಮಾಹಿತಿ ಹೊರಬಿದ್ದಿದೆ.

2018 ಜೂನ್‌ ಬಳಿಕ ಹಲವು ಬಾರಿ ಭಾರತಕ್ಕೆ ಭೇಟಿ ಕೊಟ್ಟಿದ್ದ ಕ್ರೇಮರ್‌ ತಂಡ, ಚಿಕ್ಕಮಗಳೂರು ಹಾಗೂ ಹಾಸನದಲ್ಲಿ ತಮ್ಮ ಯೋಜನೆಯನ್ನು ಜಾರಿಗೆ ತಂದಿತ್ತು. ನಿಯಮಿತವಾಗಿ ಅನುಷ್ಠಾನದ ವರದಿಯನ್ನು ವಿಶ್ಲೇಷಣೆ ಮಾಡುವುದರ ಜತೆಗೆ ಬೆಳೆ ಹಾಗೂ ಮಾರುಕಟ್ಟೆಮಾಹಿತಿಗಳನ್ನು ರೈತರಿಗೆ ಮಿಸ್ಡ್‌ ಕಾಲ್‌ ಮೂಲಕ ತಲುಪಿಸುವ ವ್ಯವಸ್ಥೆ ಕೂಡ ಮಾಡಲಾಗಿತ್ತು. ಕ್ರೇಮರ್‌ ಈ ಯೋಜನೆಯಿಂದ ಸುಮಾರು 15 ಸಾವಿರ ಕಾಫಿ ಬೆಳೆಗಾರರಿಗೆ ಉಪಯೋಗವಾಗಿದ್ದು, ಶೇ.28 ಇಳುವರಿ ಹೆಚ್ಚಳದೊಂದಿಗೆ ರೈತರ ತಲಾ ಆದಾಯ ವಾರ್ಷಿಕವಾಗಿ 7000 ರು. ನಷ್ಟುಹೆಚ್ಚಳವಾಗಿದೆ ಎಂದು ಪ್ಯಾಡ್‌ನ ಭಾರತೀಯ ನಿರ್ದೇಶಕ ಮಧುರ್‌ ಜೈನ್‌ ಹೇಳುತ್ತಾರೆ.

ಕೇವಲ ಭಾರತದಲ್ಲಿ ಮಾತ್ರವಲ್ಲದೇ ಭಾರತದ ವಿವಿಧ ರಾಜ್ಯಗಳಲ್ಲಿ ರೈತರ ಆದಾಯ ಹೆಚ್ಚಳ ಹಾಗೂ ಇಳುವರಿ ಏರಿಕೆಗೆ ಕ್ರೇಮರ್‌ ಯೋಜನೆ ಸಹಾಯ ಮಾಡಿದ್ದು, ಗುಜರಾತ್‌ನ ಹತ್ತಿ, ಒಡಿಶಾದ ಭತ್ತ ಬೆಳೆಗೂ ಪ್ಯಾಡ್‌ ಕೈ ಜೋಡಿಸಿದೆ. 2016ರಲ್ಲಿ ಗುಜರಾತ್‌ನ 2000 ರೈತರೊಂದಿಗೆ ಕೆಲಸ ಪ್ರಾರಂಭಿಸಿದ್ದ ಸಂಸ್ಥೆ ಈಗ 6 ಲಕ್ಷಕ್ಕೂ ಅಧಿಕ ರೈತರಿಗೆ ನೆರವು ನೀಡುತ್ತಿದೆ. ಒಡಿಶಾದಲ್ಲಿ ಈಗಾಗಲೇ 5.25 ಲಕ್ಷ ಸಂಸ್ಥೆಯಿಂದ ಪ್ರಯೋಜನ ಪಡೆದುಕೊಂಡಿದ್ದು, ಕರ್ನಾಟಕದಲ್ಲಿ ಶೀಘ್ರವೇ 50 ಸಾವಿರ ಕಾಫಿ ಬೆಳೆಗಾರರಿಗೆ ಈ ಯೋಜನೆ ತಲುಪಿಸುವ ಉದ್ದೇಶವಿದೆಯಂತೆ. ಅಲ್ಲದೇ ಕೇಂದ್ರ ಸರ್ಕಾರದೊಂದಿಗೆ ಈ ಬಗ್ಗೆ ಮಾತುಕತೆ ನಡೆಯುತ್ತಿದ್ದು, ದೇಶಾದ್ಯಂತ ಯೋಜನೆ ಜಾರಿಯಾದರೆ 1 ಕೋಟಿ ರೈತರಿಗೆ ಉಪಯೋಗವಾಗಲಿದೆ ಎನ್ನುವುದು ಜೈನ್‌ ಅಭಿಪ್ರಾಯ.

ಫೋನ್‌ ಮೂಲಕ ರೈತರಿಗೆ ಬೀಜ, ಗೊಬ್ಬರ ಪ್ರಮಾಣ, ಕೃಷಿ ಪದ್ಧತಿ ಬಗ್ಗೆ ಮಾಹಿತಿ ನೀಡುವ ಈ ಯೋಜನೆಗೆ ದೇಶಾದ್ಯಂತ ಭಾರೀ ಬೇಡಿಕೆ ಇದ್ದು, ದಿನನಿತ್ಯ 800-1000 ಕರೆಗಳು ಬರುತ್ತದೆ. ಸ್ಥಳೀಯ ಭಾಷೆಯಲ್ಲಿ ಸಂವಹನ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಲ್ಲಿ ಶೇ. 72ರಷ್ಟು ಪ್ರಶ್ನೆಗಳಿಗೆ ಎರಡು ಗಂಟೆಯೊಳಗೆ ಉತ್ತರಿಸಲಾಗುತ್ತದೆ. 24 ಗಂಟೆಯೊಳಗಾಗಿ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಲಾಗುತ್ತದೆ.

ಯೋಜನೆಯ ಪರಿಣಾಮ ಏನು?

ಪ್ಯಾಡ್‌ ಸಂಸ್ಥೆ ಮತ್ತು ಕಾಫಿ ಮಂಡಳಿ ಯೋಜನೆಯಿಂದಾಗಿ ಕಾಫಿ ಇಳುವರಿ ಹೆಚ್ಚಾಗಿದೆ, ಕಾಫಿ ಬೆಳೆ ನಿರ್ವಹಣೆಯಲ್ಲಿ ಸುಧಾರಣೆ ಕಂಡುಬಂದಿದೆ. ಬೆಳೆಗಾರರಿಗೆ ಕಾಫಿಯಿಂದ ಬರುವ ಆದಾಯ ಹೆಚ್ಚಾಗಿದೆ. ಪರಿಸರ ಸ್ನೇಹಿ ಕ್ರಮಗಳ ಉತ್ತೇಜನಕ್ಕೆ ನೆರವಾಗಿದೆ. 15000 ಬೆಳೆಗಾರರಿಗೆ ಆದ ಲಾಭವನ್ನು ಇದೀಗ 50000 ರೈತರಿಗೆ ವಿಸ್ತರಿಸಲು ನಿರ್ಧರಿಸಲಾಗಿದೆ.

ನೆರವು ಹೇಗೆ?

ಮಿಸ್ಡ್‌ ಕಾಲ್‌ ಯೋಜನೆಯಡಿ ಬೆಳೆಗಾರರು ಕಾಫಿ ಮಂಡಳಿಯಲ್ಲಿ ಹೆಸರು ನೋಂದಾಯಿಸಬೇಕು. ನಿರ್ದಿಷ್ಟಸಂಖ್ಯೆಗೆ ಮಿಸ್ಡ್‌ ಕಾಲ್‌ ನೀಡಿದರೆ, ವಿಜ್ಞಾನಿಗಳು ಬೆಳೆ, ದರ ಮತ್ತಿತರ ಕಾಫಿ ಸಂಬಂಧಿ ಮಾಹಿತಿ ಮಾಹಿತಿಯನ್ನು ದೂರವಾಣಿ ಮೂಲಕವೇ ಉಚಿತವಾಗಿ ನೀಡುತ್ತಾರೆ. ಚಿಕ್ಕಮಗಳೂರು, ಹಾಸನ ಜಿಲ್ಲೆಯ 15000 ಬೆಳೆಗಾರರು ಯೋಜನೆ ಲಾಭ ಪಡೆದುಕೊಂಡಿದ್ದಾರೆ.

click me!