ನಾವೀನ್ಯತೆ ಸೂಚ್ಯಂಕ: ಕರ್ನಾಟಕ ದೇಶದ ನಂ.1

By Kannadaprabha NewsFirst Published Oct 18, 2019, 7:06 AM IST
Highlights

ನೀತಿ ಆಯೋಗದ ನಾವೀನ್ಯತಾ ಸೂಚ್ಯಂಕದಲ್ಲಿ ಕರ್ನಾಟಕ ನಂ. 1 ಸ್ಥಾನ ಗಳಿಸಿದೆ. ಉಳಿದ ರಾಜ್ಯಗಳು ಯಾವ ಸ್ಥಾನದಲ್ಲಿವೆ?

ನವದೆಹಲಿ [ಅ.18]: ಜಾಗತಿಕ ನಾವೀನ್ಯತಾ ಸೂಚ್ಯಂಕದ ಮಾದರಿಯಲ್ಲೇ ಭಾರತದಲ್ಲೂ ರಾಜ್ಯಗಳಲ್ಲಿನ ನಾವೀನ್ಯತೆಯನ್ನು ಪಟ್ಟಿಮಾಡುವ ನಿಟ್ಟಿನಲ್ಲಿ ಇದೆ ಮೊದಲ ಬಾರಿಗೆ ನೀತಿ ಆಯೋಗವು ರಾಜ್ಯಗಳ ನಾವೀನತ್ಯಾ ಸೂಚ್ಯಂಕವೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ.

ಭಾರತದ ವಿವಿಧ ರಾಜ್ಯಗಳಲ್ಲಿನ ನಾವೀನ್ಯತಾ ಪರಿಸರಗಳ ಅವಲೋಕನದ ಜೊತೆಗೆ, ಇಡೀ ವಲಯದಲ್ಲಿ ಹೊಸತನಕ್ಕೆ ಪ್ರೋತ್ಸಾಹ ನೀಡುವ ಉದ್ದೇಶವನ್ನು ಹೊಂದಿರುವ ಸೂಚ್ಯಂಕವನ್ನು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಮತ್ತು ಸಿಇಒ ಅಮಿತಾಭ್‌ ಕಾಂತ್‌ ದೆಹಲಿಯಲ್ಲಿ ಗುರುವಾರ ಬಿಡುಗಡೆ ಮಾಡಿದರು.

ನೀತಿ ಆಯೋಗ ನಾವೀನ್ಯತೆ ಶ್ರೇಯಾಂಕವನ್ನು ಪ್ರಮುಖ ರಾಜ್ಯಗಳು, ಈಶಾನ್ಯ ಹಾಗೂ ಗುಡ್ಡಗಾಡು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ/ನಗರ ಹಾಗೂ ಸಣ್ಣ ರಾಜ್ಯಗಳು- ಹೀಗೆ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಪ್ರಮುಖ ರಾಜ್ಯಗಳ ವಿಭಾಗದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದಿದ್ದು, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ ಮತ್ತು ಹರ್ಯಾಣ ನಂತರದ ಸ್ಥಾನ ಪಡೆದುಕೊಂಡಿವೆ. ಈಶಾನ್ಯ ರಾಜ್ಯಗಳ ಪಟ್ಟಿಗಳ ಪಟ್ಟಿಯಲ್ಲಿ ಸಿಕ್ಕಿಂ ಮೊದಲ ಸ್ಥಾನ ಪಡೆದಿದ್ದು, ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಗೆ ಮೊದಲ ಸ್ಥಾನ ಲಭಿಸಿದೆ.

ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿಯೂ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದ್ದು, ನಂತರದಲ್ಲಿ ಮಹಾರಾಷ್ಟ್ರ, ಹರ್ಯಾಣ, ಕೇರಳ, ತಮಿಳುನಾಡು, ಗುಜರಾತ್‌, ತೆಲಂಗಾಣ ಮತ್ತು ಉತ್ತರ ಪ್ರದೇಶಗಳಿವೆ. ಬಿಹಾರ, ಜಾರ್ಖಂಡ್‌ ಮತ್ತು ಪಂಜಾಬ್‌ ಬಂಡವಾಳ ಹೂಡಿಕೆಯಲ್ಲಿ ಕೊನೆಯ ಸ್ಥಾನದಲ್ಲಿವೆ.

ಸೂಚ್ಯಂಕ ಏಕೆ ಅಗತ್ಯ?

ಭಾರತದಂತಹ ದೊಡ್ಡ ದೇಶಕ್ಕೆ ನಾವೀನ್ಯತೆಯನ್ನು ಪ್ರಾದೇಶಿಕ ಮಟ್ಟದಲ್ಲಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಕೇವಲ ರಾಷ್ಟ್ರಮಟ್ಟದಲ್ಲಿ ಯೋಜನೆಗಳನ್ನು ಜಾರಿಗೊಳಿಸಿದರೆ ಸಾಲದು. ಪ್ರತಿಯೊಂದು ರಾಜ್ಯವೂ ತನ್ನ ವಿಶಿಷ್ಟಸಂಪನ್ಮೂಲಗಳು ಮತ್ತು ಸಾಮರ್ಥ್ಯ ಹಾಗೂ ಅಗತ್ಯಕ್ಕೆ ತಕ್ಕಂತೆ ಆಧಾರದ ಮೇಲೆ ತನ್ನದೇ ಆದ ಯೋಜನೆಯನ್ನು ರೂಪಿಸುವ ಅಗತ್ಯವಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ.

ದೇಶದ ಮೊದಲ ನಾವೀನ್ಯತೆ ಸೂಚ್ಯಂಕ ದೇಶದೆಲ್ಲೆಡೆ ನಾವೀನ್ಯತೆಗೆ ಅನುಕೂಲಕರ ಪರಿಸರ ವ್ಯವಸ್ಥೆವನ್ನು ಸೃಷ್ಟಿಸಲು ನೆರವಾಗಲಿದೆ. ಅಲ್ಲದೇ ನಾವೀನ್ಯತೆ ಪರಿಸರವನ್ನು ಬೆಳೆಸಲು ತನ್ನದೇ ಆದ ತಂತ್ರಗಾರಿಕೆಯನ್ನು ರೂಪಿಸಲು ನೆರವಾಗಲಿದೆ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

click me!