ಫೇಸ್'ಬುಕ್ ಟ್ವಿಟರ್'ನಲ್ಲಿ ಲೈಂಗಿಕ ಕಿರುಕುಳದ ಸಂಕಟ ಹೇಳಿಕೊಂಡ ನೀತು

By Suvarna Web DeskFirst Published Oct 17, 2017, 6:14 PM IST
Highlights

ಇದು ನಟಿ ನೀತೂ ಫೇಸ್‌ಬುಕ್ ಆರಂಭಿಸಿದ ಅಭಿಯಾನ. ಯಾರೆಲ್ಲಾ ಲೈಂಗಿಕ ಕಿರುಕುಳ ಅನುಭವಿಸಿದ್ದಾರೋ ಅವರೆಲ್ಲಾ ತಮ್ಮ ತಮ್ಮ ಫೇಸ್‌ಬುಕ್ ಗೋಡೆಯಲ್ಲಿ #ಮೀಟೂ ಎಂದು ಬರೆಯುವ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಮೂಲಕವಾದರೂ ಜನರಿಗೆ ಈ ಸಮಸ್ಯೆಯ ಆಳ ಅರಿವಾಗಲಿ ಅನ್ನೋದು ಅವರ ಆಸೆ. ಇವರ ಮನವಿಗೆ ಸ್ಪಂದಿಸಿದ ಅದೆಷ್ಟೋ ಮಂದಿ ತಕ್ಷಣ ತಮ್ಮ ವಾಲ್‌ನಲ್ಲಿ #ಮೀಟೂ ಎಂದು ಬರೆದಿದ್ದಾರೆ. ಈ ಬಗ್ಗೆ ನೀತೂ ಏನಂತಾರೆ

1)ಒಬ್ಬಳೇ ಹೊರಗೆ ಹೋಗುವುದಕ್ಕೆ ನಂಗೆ ಭಯವಾಗುತ್ತದೆ. ಮೊದಲೆಲ್ಲಾ ನಾನು ಪಾರ್ಕಲ್ಲಿ ಒಬ್ಬಳೇ ವಾಕಿಂಗ್ ಹೋಗುತ್ತಿದ್ದೆ. ಆದರೆ ಈಗ ಅಪ್ಪಿತಪ್ಪಿಯೂ ಒಬ್ಬಳೇ ಹೊರಗೆ ಕಾಲಿಡುವುದಿಲ್ಲ. ಕೆಟ್ಟ ಅನುಭವವಾಗಿದೆ. ಒಂದೊಂದು ಸಲ ಪಾರ್ಕಲ್ಲಿ ಒಬ್ಬಳೇ ವಾಕ್ ಮಾಡುತ್ತಿದ್ದರೆ ತುಂಬಾ ತೊಂದರೆ ಅನುಭವಿಸಿದ್ದೇನೆ. ಕೆಲವೊಂದು ತೊಂದರೆಯನ್ನು ಹೇಳಿಕೊಳ್ಳಬಹುದು. ಇನ್ನು ಕೆಲವನ್ನು ಹೇಳಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ನನಗೂ ಕಷ್ಟ. ಯಾಕೆಂದರೆ ನಾನು ಅಷ್ಟೊಂದು ಬೋಲ್ಡ್ ಆಗಿಲ್ಲ ಇನ್ನೂ.

2) ನಿರ್ಜನ ಓಣಿಯಲ್ಲಿ ಓಡಾಡುತ್ತಿದ್ದರೆ ಇದ್ದಕ್ಕಿದ್ದಂತೆ ವಾಹನವೊಂದು ಬಂದು ನಿಲ್ಲುತ್ತದೆ. ತೊಂದರೆ ಆಗುತ್ತದೆ. ಇನ್ನು ಹೆಣ್ಣುಮಕ್ಕಳ ಕಾಲೇಜಿನ ಬಳಿಯಲ್ಲಂತೂ ತುಂಬಾ ಕಿರಿಕಿರಿ. ಬೈಕಲ್ಲಿ ಬರುತ್ತಾರೆ. ಹುಡುಗಿಯರು ಇದ್ದಲ್ಲಿ ಪ್ಯಾಂಟ್ ಜಾರಿಸುವ ಥರ ಮಾಡುತ್ತಾರೆ. ಹೆಣ್ಣು ಮಕ್ಕಳು ಇದನ್ನೆಲ್ಲಾ ಓಪನ್ ಆಗಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಹಾಗಾಗಿ ಅವರ ಕಾಟ ಮುಂದುವರಿಯುತ್ತಲೇ ಇರುತ್ತದೆ. ಹೀಗೆ ಆತಂಕದಲ್ಲೇ ದಿನ ಕಳೆಯುವ ಪರಿಸ್ಥಿತಿ ನನ್ನನ್ನೂ ಸೇರಿ ಅನೇಕರಿಗೆ ಇದೆ.

3) ಸೆಲೆಬ್ರಿಟಿಯಾದ ಮೇಲೆ ಇದೆಲ್ಲಾ ಸಮಸ್ಯೆ ಆಗತ್ತಾ ಎನ್ನುತ್ತಾರೆ ಕೆಲವರು. ಖಂಡಿತಾ ಆಗತ್ತೆ. ಆದರೆ ಮೊದಲಿನಷ್ಟಿಲ್ಲ. ಈಗ ತುಂಬಾ ಜನ ಸೇರಿದ್ದರೆ ಯಾರು ಯಾವಾಗ ಕಿರುಕುಳ ಕೊಡುತ್ತಾರೆ ಗೊತ್ತಾಗಲ್ಲ. ಪಕ್ಕದಲ್ಲೇ ನಿಂತು ಚಿವುಟುತ್ತಾರೆ. ಮುಟ್ಟುತ್ತಾರೆ. ಹಿಂಸೆಯಾಗುತ್ತದೆ. ಎಲ್ಲರೆದುರಿಗೆ ಹಾಗೆಲ್ಲಾ ಆದಾಗ ಅವಮಾನದಿಂದ ತುಂಬಾ ಕುಗ್ಗಿ ಹೋಗುತ್ತೇವೆ.

4) ಆಟೋದಲ್ಲಿ ಹೋಗುವಾಗ, ಬಸ್ಸಲ್ಲಿ ಸಾಗುವಾಗ, ಆಸ್ಪತ್ರೆಯಲ್ಲಿ ಹೀಗೆ ಎಲ್ಲಾ ಕಡೆ ನಾವು ಹುಷಾರಾಗಿರಬೇಕು. ನಮ್ಮ ನೆರೆಹೊರೆ ಆಂಟಿಯೊಬ್ಬರು ಒಂದು ಕತೆ ಹೇಳಿದರು. ಅವರಿಗೆ ಸರ್ಜರಿ ಆಗಿದೆ. ಅವರು ಆ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅನಸ್ತೇಷಿಯಾ ತೆಗೆದುಕೊಂಡು ಮಲಗಿದ್ದಾಗ ಆ ಆಸ್ಪತ್ರೆಯ ಪುರುಷ ಸಿಬ್ಬಂದಿ ಅವರಿಗೆ ಕಿರುಕೊಳ ಕೊಟ್ಟಿದ್ದ ನಂತೆ. ಇದನ್ನೆಲ್ಲಾ ಹೊರಗೆ ಹೇಳುವುದು ಹೇಗೆ? ನನಗಂತೂ ಅದನ್ನು ಕೇಳಿ ಬಹಳ ಬೇಜಾರಾಗಿತ್ತು.

5)ಇದು ನಮ್ಮ ದೇಶದಲ್ಲಿ ಮಾತ್ರ ಅಲ್ಲ. ನಾನು ಒಂದು ಸಲ ಇರಾನ್‌ಗೆ ಹೋಗಿದ್ದೆ. ಅಲ್ಲಿ ಬುರ್ಕಾ ಹಾಕಿಕೊಂಡೇ ತಿರುಗಾಡಬೇಕು. ಹಾಗಿದ್ದರೂ ನಾನು ಅಲ್ಲಿ ಓಡಾಡುತ್ತಿದ್ದಾಗ ಯಾರೋ ಒಬ್ಬ ಬೈಕಲ್ಲಿ ಬಂದು ಚಿವುಟಿ ಹೋಗಿದ್ದ. ನನ್ನ ಗೆಳತಿಯೊಬ್ಬಳು ಇಟಲಿಗೆ ಹೋಗಿದ್ದಳು. ಅವಳಿಗೂ ಇದೇ ಥರದ ಅನುಭವ ಆಗಿತ್ತಂತೆ.

6) ನಾನು ನನ್ನ ತಂಗಿ, ಗೆಳತಿ ಜೊತೆ ಇದ್ದಾಗ ಹೀಗೆಲ್ಲಾ ತೊಂದರೆ ಆದರೆ ಜಗಳ ಆಡುತ್ತೇನೆ. ಎಲ್ಲರಿಗೂ ಹೇಳಿ ಗಲಾಟೆ ಮಾಡುತ್ತೇನೆ. ಆದರೆ ಇಂಥಾ ಸಂದರ್ಭದಲ್ಲಿ ಸಿಕ್ಕಿಹಾಕಿಕೊಂಡಾಗ ತುಂಬಾ ಹಿಂಸೆಯಾಗುತ್ತದೆ. ಇದೆಲ್ಲಾ ಯಾಕೆ ಅನುಭವಿಸಬೇಕು ಅನ್ನಿಸುತ್ತದೆ. ಯಾರಿಗಾದರೂ ಹೇಳಿದರೆ ನೀವು ಈ ಬಗ್ಗೆ ಮಾತಾಡಬೇಡಿ, ಜನ ನಿಮ್ಮ ಬಗ್ಗೆ ತಪ್ಪು ತಿಳಿದುಕೊಳ್ಳುತ್ತಾರೆ ಅನ್ನುತ್ತಾರೆ. ಹೆಣ್ಣು ಮಕ್ಕಳು ಹುಷಾರಾಗಿರಬೇಕು, ಸಂಜೆ ಹೊತ್ತು ಹೊರಗೆ ಹೋಗಲೇಬಾರದು ಅನ್ನುತ್ತಾರೆ. ಅದು ತಪ್ಪು.

7) ಈ ಮೀ ಟೂ ಅಭಿಯಾನ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಶುರು ಮಾಡಿದ್ದು. ಬಹುತೇಕ ಹೆಣ್ಣು ಮಕ್ಕಳು ಈ ಕಷ್ಟವನ್ನು ಎದುರಿಸುತ್ತಿದ್ದಾರೆ ಅನ್ನುವುದು ಎಲ್ಲರಿಗೂ ತಿಳಿಯಲಿ. ಆಗಲಾದರೂ ಹೆಣ್ಣು ಮಕ್ಕಳಿಗೆ ಹಿಂಸೆ ಕೊಡುವವರ ಉಪಟಳ ನಿಲ್ಲಲಿ. ಹಾಗಂತ ನಾನು ಎಲ್ಲರೂ ತೊಂದರೆ ಕೊಡುತ್ತಾರೆ ಅಂತ ಹೇಳುವುದಿಲ್ಲ. ಆದರೆ ಬಹುತೇಕ ಕಡೆಗಳಲ್ಲಿ ನಮಗೆ ತೊಂದರೆ ಆಗುವುದು ತಪ್ಪುವುದಿಲ್ಲ. ಈ ಪರಿಪಾಠ ನಿಲ್ಲಬೇಕು. ಇದು ಒಂದು ದಿನದಲ್ಲಿ, ಒಬ್ಬರಿಂದ ಸಾಧ್ಯ ಆಗುವುದಲ್ಲ. ಎಲ್ಲರೂ ಈ ಬಗ್ಗೆ ಮಾತನಾಡಬೇಕು. ಹೆಣ್ಣು ಮಕ್ಕಳು ಓಪನ್ ಆಗಿ ತಮ್ಮ ಸಮಸ್ಯೆ ಹೇಳಿಕೊಳ್ಳಬೇಕು. ಆಗಲಾದರೂ ಸಮಾಜದಲ್ಲಿ ಬದಲಾವಣೆ ಯಾಗುತ್ತದೋ ನೋಡೋಣ.

(ಕನ್ನಡಪ್ರಭ)

click me!