ಮೈಸೂರಿನಲ್ಲಿ ಕ್ಯಾನ್ಸರ್‌ ಗೆ ಸೈಡ್ ಎಫೆಕ್ಟ್ ಇಲ್ಲದ ಚಿಕಿತ್ಸೆ ಶೋಧ

By Web DeskFirst Published Oct 10, 2018, 8:33 AM IST
Highlights

ಮೈಸೂರಿನ ವಿಜ್ಞಾನಿಗಳು ಮಹತ್ವದ ಸಂಶೋಧನೆ ಮಾಡಿದ್ದಾರೆ. ಕ್ಯಾನ್ಸರ್‌ ಪ್ರತಿರೋಧಕ ರಾಸಾಯನಿಕವೊಂದನ್ನು ಸಂಶೋಧಿಸಿದ್ದಾರೆ. ಈ ರಾಸಾಯನಿಕ ಅಂಶವನ್ನು ಇಂಜೆಕ್ಷನ್‌ ರೂಪದಲ್ಲಿ ರೋಗಿಗೆ ನೀಡಬಹುದಾಗಿದ್ದು, ಈ ಸಂಶೋಧನೆಗೆ ಪೇಟೆಂಟ್‌ ಕೂಡ ಪಡೆಯಲಾಗಿದೆ. 

ಮೈಸೂರು :  ಕ್ಯಾನ್ಸರ್‌ ಚಿಕಿತ್ಸೆಗೆ ಸಂಬಂಧಿಸಿ ಮೈಸೂರಿನ ವಿಜ್ಞಾನಿಗಳು ಮಹತ್ವದ ಸಂಶೋಧನೆ ಮಾಡಿದ್ದಾರೆ. ಕ್ಯಾನ್ಸರ್‌ ಪ್ರತಿರೋಧಕ ರಾಸಾಯನಿಕವೊಂದನ್ನು ಸಂಶೋಧಿಸಿದ್ದಾರೆ. ಈ ರಾಸಾಯನಿಕ ಅಂಶವನ್ನು ಇಂಜೆಕ್ಷನ್‌ ರೂಪದಲ್ಲಿ ರೋಗಿಗೆ ನೀಡಬಹುದಾಗಿದ್ದು, ಈ ಸಂಶೋಧನೆಗೆ ಪೇಟೆಂಟ್‌ ಕೂಡ ಪಡೆಯಲಾಗಿದೆ. ಕ್ಲಿನಿಕಲ್‌ ಪರೀಕ್ಷೆ ನಂತರ ಸುಮಾರು ಒಂದು ವರ್ಷದ ಅವಧಿಯಲ್ಲಿ ಔಷಧ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ಕ್ಯಾನ್ಸರ್‌ಗೆ ಸಂಬಂಧಿಸಿ ಮೈಸೂರು ವಿಶ್ವವಿದ್ಯಾಲಯ, ನ್ಯಾಷನಲ್‌ ಯೂನಿವರ್ಸಿಟಿ ಆಫ್‌ ಸಿಂಗಾಪುರ್‌ ಮತ್ತು ಸಿಂಗ್ವ ಬರ್ಕಿ ಶೆಂಜೆನ್‌ ಇನ್ಸ್‌ಟಿಟ್ಯೂಟ್‌ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಸಂಶೋಧನೆಯಲ್ಲಿ ಈ ಹೊಸ ಔಷಧವನ್ನು ಕಂಡುಹಿಡಿಯಲಾಗಿದೆ.

ಸಂಶೋಧನೆ ವೇಳೆ ಕ್ಯಾನ್ಸರ್‌ ಕೋಶಗಳ ನಿರ್ನಾಮಕ್ಕೆ ನೆರವಾಗಲಿರುವ ಪರಿಣಾಮಕಾರಿ ಗುಣಗಳುಳ್ಳ ಹೊಸ ರಾಸಾಯನಿಕ ಅಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈ ರಾಸಾಯನಿಕ ಅಂಶಕ್ಕೆ ‘ಎನ್‌ಪಿಬಿ’ ಎಂದು ನಾಮಕರಣ ಮಾಡಲಾಗಿದೆ. ಈ ಹೊಸ ಆವಿಷ್ಕಾರ ಕ್ಯಾನ್ಸರ್‌ ಕೋಶದ ಒಳಗೆ ನಿಷ್ಕಿ್ರಯ ರೂಪದಲ್ಲಿರುವ ‘ಬ್ಯಾಡ್‌’(ಬಿಸಿಎಲ್‌2-ಅಗೋನಿಸ್ಟ್‌ ಆಫ್‌ ಸೆಲ್‌ ಡೆತ್‌) ಎಂಬ ಪ್ರೊಟೀನ್‌ ಅನ್ನು ಸಕ್ರಿಯಗೊಳಿಸುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್‌ಪೀಡಿತ ವ್ಯಕ್ತಿಯ ಕ್ಯಾನ್ಸರ್‌ ಕೋಶದಲ್ಲಿ ಈ ‘ಬ್ಯಾಡ್‌’ ಪ್ರೊಟೀನ್‌ ನಿಷ್ಕಿ್ರಯವಾಗಿರುತ್ತದೆ. ‘ಬ್ಯಾಡ್‌’ ಪ್ರೊಟೀನ್‌ ನಿಷ್ಕಿ್ರಯವಾಗಿದ್ದರೆ ಕ್ಯಾನ್ಸರ್‌ ಕೋಶಕ್ಕೆ ಸಾವಿನಿಂದ ಮುಕ್ತಿ ಸಿಗುತ್ತದೆ. ಒಂದು ರೀತಿಯಲ್ಲಿ ಕ್ಯಾನ್ಸರ್‌ ಕೋಶಕ್ಕೆ ಜೀವ ರಕ್ಷಣೆ ಸಿಕ್ಕಿರುತ್ತದೆ. ಆದರೆ, ಮೈಸೂರು ವಿವಿ ವಿಜ್ಞಾನಿಗಳು ಕಂಡು ಹಿಡಿದಿರುವ ಈ ಹೊಸ ರಾಸಾಯನಿಕ ಅಂಶದಿಂದ ಬ್ಯಾಡ್‌ ಪ್ರೊಟೀನ್‌ ಮತ್ತೆ ಸಕ್ರಿಯವಾಗಿ ಕ್ಯಾನ್ಸರ್‌ ಕೋಶಗಳ ನಾಶ ಸುಲಭವಾಗುತ್ತದೆ.

ಅಡ್ಡ ಪರಿಣಾಮಗಳಿಲ್ಲ:  ಪ್ರಸ್ತುತ ಕಿಮೋಥೆರಪಿ, ವಿಕಿರಣ ಚಿಕಿತ್ಸೆ, ಇಮ್ಯುನೋಥೆರಪಿ ವಿಧಾನಗಳ ಮೂಲಕ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುತ್ತದೆ. ಈ ಚಿಕಿತ್ಸೆಯಿಂದ ರೋಗಿ ಮೇಲೆ ಸಾಕಷ್ಟುಅಡ್ಡಪರಿಣಾಮಗಳು ಆಗುತ್ತವೆ. ಆದರೆ, ಈ ಹೊಸ ಎನ್‌ಪಿಬಿ ಚಿಕಿತ್ಸೆಯಿಂದ ಅಂತಹ ಅಡ್ಡ ಪರಿಣಾಮಗಳಿರುವುದಿಲ್ಲ. ರೋಗಿಯ ದೇಹವೂ ನಾನಾ ಚಿಕಿತ್ಸೆಗಳಿಂದ ಜರ್ಝರಿತವೂ ಆಗುವುದಿಲ್ಲ ಎನ್ನುವುದು ವಿಶೇಷ.

ನಾವು ಸಂಶೋಧಿಸಿರುವ ಹೊಸ ರಾಸಾಯನಿಕ ಅಂಶಕ್ಕೆ ಪೇಟೆಂಟ್‌ ಪಡೆದುಕೊಳ್ಳಲಾಗಿದೆ. ಈ ರಾಸಾಯನಿಕ ಅಂಶವನ್ನು ಕ್ಯಾನ್ಸರ್‌ ರೋಗಿಗೆ ಇಂಜೆಕ್ಷನ್‌ ರೂಪದಲ್ಲಿ ನೀಡಬಹುದು ಎಂದು ಮೈಸೂರು ವಿವಿ ವಿಶ್ರಾಂತ ಕುಲಪತಿ, ಖ್ಯಾತ ರಸಾಯನಶಾಸ್ತ್ರಜ್ಞ ಪ್ರೊ. ರಂಗಪ್ಪ ವಿವರಿಸಿದ್ದಾರೆ.

ಸಂಶೋಧಿಸಿದ ಟೀಂ:  ಪ್ರೊ.ಕೆ.ಎಸ್‌.ರಂಗ​ಪ್ಪ, ಆಸ್ಪ್ರೇಲಿಯಾ ಮೂಲದ, ಪ್ರಸ್ತುತ ನ್ಯಾಷನಲ್‌ ಯೂನಿವರ್ಸಿಟಿ ಆಫ್‌ ಸಿಂಗಾಪುರದಲ್ಲಿರುವ ಪ್ರೊ.ಪೀಟರ್‌ ಇ.ಲಾಬಿ ನೇತೃತ್ವದ ಸಂಶೋಧನಾ ತಂಡದಲ್ಲಿ ಮೈಸೂರಿನ ಡಾ.ಬಸಪ್ಪ, ಡಾ. ಮೋಹನ್‌, ಆದಿಚುಂಚನಗಿರಿ ಇನ್ಸ್‌ಟಿಟ್ಯೂಟ್‌ ಫಾರ್‌ ಮಾಲಿಕ್ಯುಲರ್‌ ಮೆಡಿಸಿನ್‌ನ ಡಾ.ಆರ್‌.ಶೋಭಿತ್‌ ಹಾಗೂ ಡಾ.ಗಿರೀಶ್‌, ಸಿಂಗಾಪುರ್‌ನ ವಿಜಯಪಾಂಡೆ ಇದ್ದಾರೆ.

click me!