ಅಂದಿನ ಸಭೆಯಲ್ಲೇನಾಯ್ತು ಎಲ್ರಿಗೂ ಹೇಳಿ: ಮೋದಿಗೆ ಖರ್ಗೆ ಸವಾಲ್!

By Web DeskFirst Published Jan 15, 2019, 4:51 PM IST
Highlights

ಅಲೋಕ್ ವರ್ಮಾ ವಜಾ ಅಸಾಂವಿಧಾನಿಕ ಎಂದ ಖರ್ಗೆ| ಪ್ರಧಾನಿ ನೇತೃತ್ವದ ಸಮಿತಿಯಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ| ‘ಸಿಬಿಐ ನಿರ್ದೇಶಕರನ್ನಾಗಿ ಎಂ.ನಾಗೇಶ್ವರರಾವ್ ನೇಮಕಾತಿ ಕಾನೂನುಬಾಹಿರ’| ಜ.10ರ ಸಭೆಯ ನಡಾವಳಿಗಳನ್ನು ಸಾರ್ವಜನಿಕರೆದುರು ಮುಕ್ತಗೊಳಿಸಲು ಆಗ್ರಹ

ನವದೆಹಲಿ(ಜ.15): ಸಿಬಿಐ ನಿರ್ದೇಶಕ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ವಜಾಗೊಳಿಸಿದ್ದು ಅಸಾಂವಿಧಾನಿಕ ಕ್ರಮ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಆರೋಪಿಸಿದ್ದಾರೆ.

ಪ್ರಧಾನಿ ನೇತೃತ್ವದ ಸಮಿತಿಯಲ್ಲಿದ್ದ ಮಲ್ಲಿಕಾರ್ಜುನ ಖರ್ಗೆ, ಇದೀಗ ಸಿಬಿಐ ನಿರ್ದೇಶಕರನ್ನಾಗಿ ಎಂ.ನಾಗೇಶ್ವರರಾವ್ ಅವರ ನೇಮಕಾತಿ ಕಾನೂನುಬಾಹಿರ ಎಂದು ಹರಿಹಾಯ್ದಿದ್ದಾರೆ. 

ಈ ಕುರಿತಂತೆ ಪ್ರಧಾನಿಗೆ ಪತ್ರ ಬರೆದಿರುವ ಖರ್ಗೆ, ಜ.10ರ ಸಭೆಯ ನಡಾವಳಿಗಳನ್ನು ಸಾರ್ವಜನಿಕರೆದುರು ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ತನಿಖಾ ಸಂಸ್ಥೆಯ ಹೊಸ ಮುಖ್ಯಸ್ಥರನ್ನು ನೇಮಕ ಮಾಡಲು ಆಯ್ಕೆ ಸಮಿತಿಯ ಸಭೆಯನ್ನು ತಕ್ಷಣವೇ ಕರೆಯಬೇಕು ಎಂದು ಒತ್ತಾಯಿಸಿದ್ದಾರೆ.

ವರ್ಮಾ ಅವರ ವರ್ಗಾವಣೆ ಬಳಿಕ ನಾಗೇಶ್ವರರಾವ್ ನೇಮಕಾತಿಯಾಗಿದ್ದು ಕಾನೂನುಬದ್ದವಾದ ಕ್ರಮವಲ್ಲ. ಇದು ಆಯ್ಕೆ ಸಮಿತಿಯ ಅನುಮೋದನೆಯನ್ನೂ ಪಡೆದಿಲ್ಲ ಎಂದಿರುವ ಖರ್ಗೆ ಸಿಬಿಐಗೆ ಸ್ವತಂತ್ರ ನಿರ್ದೇಶಕರನ್ನು ನೇಮಕ ಮಾಡುವುದಕ್ಕೆ ಸರ್ಕಾರ ಹೆದರುತ್ತಿದೆ ಎಂದು ಆರೋಪಿಸಿದ್ದಾರೆ.

ಕಳೆದ ವಾರ ನಡೆದಿದ್ದ ಆಯ್ಕೆ ಸಮಿತಿ ಸಭೆಯಲ್ಲಿ ಸಿಬಿಐ ಮುಖ್ಯಸ್ಥ ಸ್ಥಾನದಿಂದ ಅಲೋಕ್ ವರ್ಮಾ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಲಾಗಿತ್ತು.

click me!