ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರ್ಕಾರ ಕಚೇರಿ ತೆರೆಯಬೇಕು: ಮತ್ತೆ ಶಿವಸೇನೆ ಉದ್ಧಟತನ

By Kannadaprabha NewsFirst Published Apr 19, 2021, 8:57 AM IST
Highlights

ಮರಾಠಿಗರ ಅಭಿವೃದ್ಧಿಗೆಂದು ಈ ಕಚೇರಿ ಸ್ಥಾಪನೆ ಆಗಬೇಕು| ಮಹಾರಾಷ್ಟ್ರದ ಸಚಿವರು, ವಕೀಲರು ಆಗಾಗ ಬೆಳಗಾವಿಗೆ ಹೋಗಬೇಕು| ಶಿವಸೇನೆಯ ಹೊಸ ತಗಾದೆ| ಕರ್ನಾಟಕದ ಬಸ್ಸು ಪುಡಿಗಟ್ಟಿದ್ದಕ್ಕೆ ಸಮರ್ಥನೆ| ಸಾಮ್ನಾ ದೈನಿಕದಲ್ಲಿ ಶಿವಸೇನೆ ಮುಖಂಡ ಲೇಖನ| ಕರ್ನಾಟಕದ ಬಸ್ಸು ಪುಡಿಗಟ್ಟಿದ್ದಕ್ಕೆ ಸಮರ್ಥನೆ| 

ಮುಂಬೈ(ಏ.19):  ಬೆಳಗಾವಿ ಗಡಿ ತಗಾದೆಯನ್ನು ಆಗೊಮ್ಮೆ ಈಗೊಮ್ಮೆ ಕಾರಣವಿಲ್ಲದೇ ಕೆದಕುವ ಶಿವಸೇನೆ, ಭಾನುವಾರ ಹೊಸ ತಗಾದೆ ಶುರು ಮಾಡಿದೆ. ಮಹಾರಾಷ್ಟ್ರದ ಉದ್ಧವ್‌ ಠಾಕ್ರೆ ಸರ್ಕಾರವು ಬೆಳಗಾವಿಯಲ್ಲಿ ‘ಕಲ್ಯಾಣ ಕಚೇರಿ’ಯನ್ನು ತೆರೆಯಬೇಕು. ಈ ಕಚೇರಿಯು ಬೆಳಗಾವಿಯಲ್ಲಿನ ಮರಾಠಿಗರ ಅಭಿವೃದ್ಧಿಗೆ ಶ್ರಮಿಸಬೇಕು ಹಾಗೂ ಬೆಳಗಾವಿ ಮಹಾರಾಷ್ಟ್ರದಲ್ಲಿ ವಿಲೀನಗೊಳ್ಳಬೇಕು ಎಂದು ಆಗ್ರಹಿಸಿದೆ.

ಶಿವಸೇನೆ ಮುಖವಾಣಿ ‘ಸಾಮ್ನಾ’ ದೈನಿಕದಲ್ಲಿನ ತಮ್ಮ ‘ರೋಕ್‌ಠೋಕ್‌’ ಅಂಕಣದಲ್ಲಿ ಭಾನುವಾರ ಈ ವಿಷಯ ಪ್ರಸ್ತಾಪಿಸಿರುವ ಪಕ್ಷದ ಮುಖಂಡ ಸಂಜಯ ರಾವುತ್‌, ಗಡಿ ವಿವಾದದ ಸಮನ್ವಯ ಸಮಿತಿ ಸಚಿವ ಏಕನಾಥ ಶಿಂಧೆ ಆಗಾಗ ಬೆಳಗಾವಿಗೆ ಭೇಟಿ ನೀಡಬೇಕು. ಇದಲ್ಲದೆ ಸುಪ್ರೀಂ ಕೋರ್ಟ್‌ನಲ್ಲಿ ಮಹಾರಾಷ್ಟ್ರದ ಪರ ಗಡಿ ವಿವಾದದಲ್ಲಿ ವಾದಿಸುತ್ತಿರುವ ಸರ್ಕಾರದ ಪರ ವಕೀಲರು ಕೂಡ ಬೆಳಗಾವಿಗೆ ಭೇಟಿ ನೀಡಿ, ಪ್ರಕರಣದ ಸ್ಥಿತಿಗತಿ ಬಗ್ಗೆ ವಿವರಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ಗೆ ನೆರವಾಗಲು ಬೆಳಗಾವಿಗೆ ಸಂಜಯ ರಾವುತ್‌: ಫಡ್ನವೀಸ್‌

ಕರ್ನಾಟಕದ ಮರಾಠಿ ಭಾಷಿಕ ಪ್ರದೇಶದ ಶಾಲೆಗಳಿಗೆ ಮಹಾರಾಷ್ಟ್ರ ಸರ್ಕಾರ ಅನುದಾನ ನೀಡುವ ಉದ್ದೇಶ ಹೊಂದಿದೆ. ಇದಕ್ಕಾಗಿ ಠಾಕ್ರೆ ಸರ್ಕಾರವು ಶಾಲೆಗಳ ನೋಂದಣಿ ಮಾಡಿಕೊಳ್ಳಬೇಕು. ಆದರೆ ಇದಕ್ಕೆ ಕರ್ನಾಟಕ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದೂ ಅವರು ಆಪಾದಿಸಿದ್ದಾರೆ. ಬೆಳಗಾವಿಯಲ್ಲಿ ಭಾಷಾ ಅಲ್ಪಸಂಖ್ಯಾತ ಇಲಾಖೆ ಇತ್ತು. ಆದರೆ ಮರಾಠಿಗರನ್ನು ಅವಮಾನ ಮಾಡಬೇಕು ಎಂಬ ಉದ್ದೇಶದಿಂದ ಅದನ್ನು ಚೆನ್ನೈಗೆ ಸ್ಥಳಾಂತರಿಸಲಾಗಿದೆ ಎಂದು ರಾವುತ್‌ ಕಿಡಿಕಾರಿದ್ದಾರೆ.

ಕನ್ನಡಿಗರ ಮೇಲೆ ಹಲ್ಲೆಗೆ ಸಮರ್ಥನೆ

ಬೆಳಗಾವಿಯಲ್ಲಿ ಇತ್ತೀಚೆಗೆ ಕನ್ನಡಿಗರು ಮರಾಠಿಗರ ಮೇಲೆ ದಾಳಿ ಮಾಡಿದರು. ಇದಕ್ಕೆ ಪ್ರತೀಕಾರವಾಗಿ ಶಿವಸೈನಿಕರು ಕರ್ನಾಟಕದ ಬಸ್ಸು ಧ್ವಂಸ ಮಾಡಿದರು ಎಂದು ಹಿಂಸಾಚಾರವನ್ನು ಶಿವಸೇನಾ ಮುಖಂಡ ಸಮರ್ಥಿಸಿಕೊಂಡಿದ್ದಾರೆ. ಆದರೆ, ‘ಮುಂಬೈನಲ್ಲೂ ಕನ್ನಡಿಗರಿದ್ದಾರೆ. ಅವರ ಮೇಲೆ ನಾವು ಯಾವತ್ತೂ ದಾಳಿ ಮಾಡಲಿಲ್ಲ’ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಮಂಗಲ ಅಂಗಡಿ ಪರ ಫಡ್ನವೀಸ್‌ ಪ್ರಚಾರ: ಶಿವಸೇನೆ ಕಿಡಿ

ಬೆಳಗಾವಿ ಲೋಕಸಭೆ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರ ಪರ ಬಿಜೆಪಿ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಪ್ರಚಾರ ಮಾಡಿದ್ದಕ್ಕೆ ಶಿವಸೇನೆ ಆಕ್ಷೇಪಿಸಿದೆ. ‘ಬೆಳಗಾವಿಯಲ್ಲಿ ಎಂಇಎಸ್‌ ಅಭ್ಯರ್ಥಿ ಶುಂಭ ಶೇಳಕೆ ಕಣನಕ್ಕಿಳಿದಿದ್ದಾರೆ. ಅವರು ಮರಾಠಿಗರ ಪ್ರತಿನಿಧಿ. ಅವರ ವಿರುದ್ಧ ಫಡ್ನವೀಸ್‌ ಪ್ರಚಾರ ಮಾಡಬಾರದಿತ್ತು’ ಎಂದು ಸೇನಾ ಮುಖ್ಯ ವಕ್ತಾರ ಸಂಜಯ ರಾವುತ್‌ ಹೇಳಿದ್ದಾರೆ.
 

click me!