2018ರ ಆಗಸ್ಟ್’ನೊಳಗೆ ಮಹದಾಯಿ ತೀರ್ಪು?

By ರಾಕೇಶ್ ಎನ್.ಎಸ್, ನವದೆಹಲಿFirst Published Sep 24, 2017, 12:22 PM IST
Highlights

ಅತ್ತ ಕಳಸಾ- ಬಂಡೂರಿ ಯೋಜನೆ ಮೂಲಕ ಮಹದಾಯಿ ನೀರು ಪಡೆದು ತಮ್ಮ ಕುಡಿಯುವ ನೀರಿನ ಬವಣೆಗೆ ಕೊನೆ ಹಾಡಬೇಕು ಎಂದು ಧಾರವಾಡ ಭಾಗದ ರೈತರು ನಡೆಸುತ್ತಿರುವ ಹೋರಾಟ 800 ದಿನ ಪೂರೈಸಿದ್ದರೆ, ಇತ್ತ ಮಹದಾಯಿ ನ್ಯಾಯಾಧಿಕರಣ ಕೂಡ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಮುಂದಾಗಿದೆ.

ನವದೆಹಲಿ: ಅತ್ತ ಕಳಸಾ- ಬಂಡೂರಿ ಯೋಜನೆ ಮೂಲಕ ಮಹದಾಯಿ ನೀರು ಪಡೆದು ತಮ್ಮ ಕುಡಿಯುವ ನೀರಿನ ಬವಣೆಗೆ ಕೊನೆ ಹಾಡಬೇಕು ಎಂದು ಧಾರವಾಡ ಭಾಗದ ರೈತರು ನಡೆಸುತ್ತಿರುವ ಹೋರಾಟ 800 ದಿನ ಪೂರೈಸಿದ್ದರೆ, ಇತ್ತ ಮಹದಾಯಿ ನ್ಯಾಯಾಧಿಕರಣ ಕೂಡ ಪ್ರಕರಣವನ್ನು ತ್ವರಿತವಾಗಿ ಇತ್ಯರ್ಥ ಪಡಿಸಲು ಮುಂದಾಗಿದೆ.

ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರಗಳಿಗೆ ತಮ್ಮ ಸಾಕ್ಷಿಗಳ ಸಂಖ್ಯೆಯಲ್ಲಿ ಕಡಿತ ಮಾಡಲು ಸೂಚಿಸಿರುವುದು ಹಾಗೂ ಪಾಟಿ ಸವಾಲಿನ ಸಂದರ್ಭದಲ್ಲಿ 25 ಪ್ರಶ್ನೆಗಳನ್ನು ಮಾತ್ರ ಕೇಳುವಂತೆ ನ್ಯಾಯಾಧಿಕರಣ ಹೇಳಿರುವುದು ಪ್ರಕರಣ ಶೀಘ್ರ ತೀರ್ಮಾನಗೊಳ್ಳುವ ಭರವಸೆ ಮೂಡಿಸಿದೆ.

ಇದು ಕರ್ನಾಟಕಕ್ಕೆ ಒಂದೆಡೆ ಸಂತೋಷ ತಂದಿದ್ದರೆ ಇನ್ನೊಂದೆಡೆ ಆತಂಕಕ್ಕೂ ಕಾರಣವಾಗಿದೆ. ಕಳೆದ ಆಗಸ್ಟ್‌ನಲ್ಲಿ ನ್ಯಾಯಾಧಿಕರಣದ ಅವಧಿಯನ್ನು ಮತ್ತೆ ಒಂದು ವರ್ಷ ವಿಸ್ತರಿಸಲಾಗಿದ್ದು ಆಗಸ್ಟ್ 21, 2018ರೊಳಗೆ ಅದು ಐ ತೀರ್ಪು ನೀಡಬೇಕಿದೆ.

ಈ ಹಿನ್ನೆಲೆಯಲ್ಲಿ ಸಾಕ್ಷಿಗಳ ಸಂಖ್ಯೆಯಲ್ಲಿ ಕಡಿತ ಮತ್ತು ಪ್ರಶ್ನೆಗಳ ಸಂಖ್ಯೆಗೆ ಕಡಿವಾಣ ಹಾಕಿರುವುದು ಈ ಅವಧಿಯೊಳಗೆ ತೀರ್ಪು ಬರಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ.

ಪ್ರಕರಣದಲ್ಲಿ ಗೋವಾ 11 ಸಾಕ್ಷಿಗಳನ್ನು ನೀಡುವುದಾಗಿ ಹೇಳಿತ್ತು. ಕರ್ನಾಟಕ 5 ಸಾಕ್ಷಿಗಳನ್ನು ಒದಗಿಸಲು ಮುಂದಾಗಿತ್ತು. ಗೋವಾದ ಪರ ಇಬ್ಬರು ಸಾಕ್ಷಿಗಳಾದ ಚೇತನ್ ಪಂಡಿತ್ ಮತ್ತು ಜ್ಯೋತಿ ಪ್ರಕಾಶ್ ಅವರ ಪಾಟಿ ಸವಾಲನ್ನು ಕರ್ನಾಟಕದ ಪರ ವಕೀಲರು ನಡೆಸಿದ್ದಾರೆ. ಕರ್ನಾಟಕದ ಪರ ಸಾಕ್ಷಿಗಳಾದ ಕೇಂದ್ರ ಜಲ ಆಯೋಗದ ಮಾಜಿ ಮುಖ್ಯಸ್ಥ ಎ.ಕೆ. ಬಜಾಜ್ ಮತ್ತು ಜಲತಜ್ಞ ಎ.ಕೆ.ಗೋಸೆನ್ ಅವರ ಪಾಟಿ ಸವಾಲನ್ನು ಗೋವಾದ ಪರ ವಕೀಲರು ನಡೆಸಿದ್ದಾರೆ.

ಆದರೆ ಇದೀಗ ನ್ಯಾಯಾಧಿಕರಣವು ಗೋವಾಕ್ಕೆ ಐದು ಸಾಕ್ಷಿಗಳನ್ನು ಮಾತ್ರ ಹಾಜರು ಪಡಿಸಲು ಅವಕಾಶ ನೀಡಿದರೆ, ಕರ್ನಾಟಕಕ್ಕೆ ನಾಲ್ಕು ಸಾಕ್ಷಿಗಳ ಮಿತಿ ಹಾಕಿದೆ. ಮಹದಾಯಿಯಲ್ಲಿ 3 ಟಿಎಂಸಿ ನೀರು ಕೇಳುತ್ತಿರುವ ಮಹಾರಾಷ್ಟ್ರ ಒಬ್ಬರು ಸಾಕ್ಷಿಯನ್ನು ಹಾಜರು ಪಡಿಸುವ ಅವಕಾಶ ಪಡೆದಿದೆ. ಅಲ್ಲದೆ, ಪಾಟಿ ಸವಾಲಿನ ಸಂದರ್ಭದಲ್ಲಿ ಕೇವಲ 25 ಪ್ರಶ್ನೆಗಳನ್ನು ಕೇಳಲು ಮಾತ್ರ ಅವಕಾಶ ನೀಡುವ ನ್ಯಾಯಾಧಿಕರಣದ ಕ್ರಮವು ಕೂಡ ಪ್ರಕರಣ ಬೇಗ ಇತ್ಯರ್ಥಗೊಳ್ಳಲು ಪೂರಕವಾಗಲಿದೆ. ಕರ್ನಾಟಕವು ಈ ಪ್ರಕರಣ ಶೀಘ್ರವೇ ಇತ್ಯರ್ಥಗೊಳ್ಳಲಿ ಎಂದು ಬಯಸುತ್ತಿದೆ.

ಆದರೆ ಪ್ರಕರಣದ ತ್ವರಿತ ವಿಲೇವಾರಿಗಾಗಿ ಸಾಕ್ಷಿಗಳನ್ನು ಕಳೆದುಕೊಳ್ಳುವ ರಾಜ್ಯದ ನಡೆಗೆ ಕರ್ನಾಟಕದ ಪರ ವಾದಿಸುವ ವಕೀಲರಲ್ಲೇ ಭಿನ್ನ ಅಭಿಪ್ರಾಯಗಳು ಮೂಡಿವೆ. ನಮಗೆ ಪ್ರಕರಣ ಶೀಘ್ರ ಇತ್ಯರ್ಥ ಆಗಬೇಕು ಎನ್ನುವುದಕ್ಕಿಂತ ನ್ಯಾಯ ಸಿಗುವುದು ಮುಖ್ಯ. ಪ್ರಕರಣದ ಶೀಘ್ರ ಇತ್ಯರ್ಥಕ್ಕಾಗಿ ನಾವೂ ನಮ್ಮ ಕಾನೂನು ಹೋರಾಟ ಸಡಿಲಗೊಳಿಸಲಾಗದು ಎನ್ನುವುದು ಭಿನ್ನ ಅಭಿಪ್ರಾಯ ಹೊಂದಿರುವವರ ತಕರಾರು.

ರಾಜ್ಯದ ಪರಸ್ಪರ ತಜ್ಞರ ಪಾಟಿ ಸವಾಲಿಲ್ಲ: ಕಳಸಾ-ಬಂಡೂರಿಯಿಂದ ನೀರೆತ್ತುವ ಯೋಜನೆಗೆಇರುವ ಪ್ರಮುಖ ಆಕ್ಷೇಪ ಎಂದರೆ ಈ ಯೋಜನೆಯಿಂದ ಪರಿಸರ ನಾಶವಾಗಲಿದೆ ಎಂಬುದು. ಅದರಲ್ಲೂ ನ್ಯಾಯಾಧಿಕರಣವು ತಾನು ನೀಡಿರುವ ಮಧ್ಯಂತರ ತೀರ್ಪಿನಲ್ಲಿ ಯೋಜನೆಯ ಪರಿಸರ ಪರಿಣಾಮಗಳ ಬಗ್ಗೆ ಉಲ್ಲೇಖಿಸಿದೆ.

ಕರ್ನಾಟಕ ಸರ್ಕಾರವು ಕಳಸಾ-ಬಂಡೂರಿ ಯೋಜನೆಯಿಂದ ಪರಿಸರಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂಬುದನ್ನು ನ್ಯಾಯಾಧಿಕರಣಕ್ಕೆ ಮನದಟ್ಟು ಮಾಡಿಕೊಡಬೇಕಿದೆ. ಕರ್ನಾಟಕದ ಪರ ಸಾಕ್ಷಿ ನುಡಿಯಲು ಪರಿಸರ ತಜ್ಞ ನೀಮಾ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಇದೀಗ ಅವರು ಸಾಕ್ಷಿ ಹೇಳುವುದನ್ನು ಹಿಂಪಡೆಯಲಾಗಿದೆ. ಇದರಿಂದ ಪ್ರಕರಣದಲ್ಲಿ ರಾಜ್ಯದ ನಿಲುವಿನ ಮೇಲೆ ಕೆಟ್ಟ ಪರಿಣಾಮವಾಗಲಿದೆ ಎಂಬುದು ಈ ನಡೆ ಬಗ್ಗೆ ಅಸಮಾಧಾನ ಹೊಂದಿರುವ ವಕೀಲರ ಅಭಿಪ್ರಾಯ. ಸಮಾಲೋಚಿಸಿಯೇ ತೀರ್ಮಾನ: ಆದರೆ ಈ ಆತಂಕವನ್ನು ಅಲ್ಲಗಳೆದು ರಾಜ್ಯದ ನಡೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ವಕೀಲರ ತಂಡದಲ್ಲೇ ನಡೆಯುತ್ತಿದೆ. ಸಾಕ್ಷಿ ಹಿಂಪಡೆಯುವ ಸಾಧಕ ಬಾಧಕಗಳ ಬಗ್ಗೆ ರಾಜ್ಯ ಕಾನೂನು ತಂಡ ದೀರ್ಘವಾಗಿ ಸಮಾಲೋಚನೆ ನಡೆಸಿದೆ. ನ್ಯಾಯಾಧಿಕರಣ ನೀರು ಹಂಚಿಕೆಗೆ ಸೀಮಿತವಾಗಿ ವಿಚಾರಣೆ ನಡೆಸಿ ಐ ತೀರ್ಪು ನೀಡಬೇಕೇ ಹೊರತು ಪರಿಸರ ಸಂಬಂಧಿ ವಿಷಯಗಳ ವ್ಯಾಪ್ತಿ ಅದಕ್ಕಿಲ್ಲ. ಯೋಜನೆಗೆ ಪರಿಸರ ಅನುಮತಿ ನೀಡುವುದು, ಬಿಡುವುದು ಕೇಂದ್ರ ಪರಿಸರ ಸಚಿವಾಲಯವೇ ಹೊರತು ನ್ಯಾಯಾಧಿಕರಣವಲ್ಲ. ಅಗತ್ಯ ಬಿದ್ದರೆ ಪ್ರಕರಣದ ಕೊನೇ ಹಂತದಲ್ಲಿ ನಮಗೆ ಸಾಕ್ಷಿಗಳನ್ನು ಮಂಡಿಸುವ ಅವಕಾಶ ಇದ್ದೇ ಇದೆ. ಆದ್ದರಿಂದ ಈ ಆತಂಕ ನಿರಾಧಾರವಾದದ್ದು. ರಾಜ್ಯದ ನಡೆ ಸೂಕ್ತವಾಗಿದೆ ಎಂದು ವಕೀಲರ ತಂಡ ಈ ನಡೆಯನ್ನು ಸಮರ್ಥಿಸಿದೆ.


 

click me!