ಮೂವರನ್ನು ಭಾರತಕ್ಕೆ ಗಡೀಪಾರು ಮಾಡಲು ಬ್ರಿಟನ್ ಕೋರ್ಟ್ ನಕಾರ; ಮಲ್ಯ ಕೂಡ ಬಚಾವ್ ಸಾಧ್ಯತೆ

By Suvarna Web DeskFirst Published Nov 5, 2017, 4:52 PM IST
Highlights

* ಬೆಟ್ಟಿಂಗ್ ಆರೋಪಿ ಸಂಜೀವ್ ಕುಮಾರ್ ಚಾವ್ಲಾ ಗಡೀಪಾರಿಗೆ ಲಂಡನ್ ಕೋರ್ಟ್ ನಕಾರ

* ಬ್ಯಾಂಕ್ ವಂಚನೆ ಆರೋಪಿಗಳಾದ ಅಂಗುರಾಲ ದಂಪತಿ ಖುಲಾಸೆ

* ಲಂಡನ್'ನ ವೆಸ್ಟ್ ಮಿನ್'ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್'ನಿಂದ ಭಾರತ ಸರಕಾರಕ್ಕೆ ನಿರಾಸೆ

* ನ.20ರಂದು ಇದೇ ಕೋರ್ಟ್'ನಲ್ಲಿ ಮಲ್ಯ ಕೇಸ್ ವಿಚಾರಣೆ

ಲಂಡನ್(ನ. 05): ವಿಜಯ್ ಮಲ್ಯರನ್ನು ಗಡೀಪಾರು ಮಾಡಿ ತನ್ನ ವಶಕ್ಕೆ ಒಪ್ಪಿಸುವಂತೆ ಭಾರತ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ಬ್ರಿಟನ್ ನ್ಯಾಯಾಲಯವೊಂದು ಇತ್ತೀಚೆಗೆ ಇಂಥದ್ದೇ ಕೆಲ ಪ್ರಕರಣಗಳಲ್ಲಿ ಭಾರತದ ಕೋರಿಕೆಯನ್ನು ತಿರಸ್ಕರಿಸಿರುವ ವಿಷಯ ಬೆಳಕಿಗೆ ಬಂದಿದೆ. ಇಲ್ಲಿಯ ವೆಸ್ಟ್'ಮಿನ್'ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಎರಡು ಪ್ರಕರಣಗಳಲ್ಲಿ ಬೇರೆ ಬೇರೆ ಕಾರಣಗಳನ್ನೊಡ್ಡಿ ಭಾರತ ಸರಕಾರದ ಮನವಿಯನ್ನು ತಿರಸ್ಕರಿಸಿದೆ. ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದ ದೋಷಿ ಸಂಜೀವ್ ಕುಮಾರ್ ಚಾವ್ಲಾ ಮತ್ತು ವಂಚನೆ ಪ್ರಕರಣದ ಆರೋಪಿಗಳಾದ ಆಶಾರಾಣಿ-ಜತೀಂದರ್ ಅಂಗುರಾಲ ದಂಪತಿಯನ್ನು ಭಾರತದ ವಶಕ್ಕೆ ಒಪ್ಪಿಸಲು ನಕಾರ ಹೇಳಿದೆ. ಚಾವ್ಲಾ ಪ್ರಕರಣದಲ್ಲಿ ತಿಹಾರ್ ಜೈಲಿನ ಅವ್ಯವಸ್ಥೆ ಹಾಗೂ ಅಂಗುರಾಲ ವಿಷಯದಲ್ಲಿ 25 ವರ್ಷದ ಹಿಂದಿನ ಪ್ರಕರಣವೆಂಬ ಕಾರಣಗಳನ್ನೊಡ್ಡಿ ಕೋರ್ಟ್ ಅ. 12 ಮತ್ತು 16ರಂದು ಮಹತ್ವದ ತೀರ್ಪು ನೀಡಿತ್ತು.

ಚಾವ್ಲಾ ಬೆಟ್ಟಿಂಗ್ ಪ್ರಕರಣವೇನು?
2000ನೇ ವರ್ಷದಲ್ಲಿ ಹ್ಯಾನ್ಸಿ ಕ್ರೋನಿಯೇ ನೇತೃತ್ವದ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಭಾರತದ ಪ್ರವಾಸದ ವೇಳೆ ಆಡಿದ ಕ್ರಿಕೆಟ್ ಪಂದ್ಯಗಳು ಫಿಕ್ಸಿಂಗ್ ಆಗಿದ್ದವೆಂಬುದು ಸಾಬೀತಾಗಿದೆ. ಆಗ ಬುಕ್ಕೀ ಆಗಿದ್ದ ಸಂಜೀವ್ ಕುಮಾರ್ ಚಾವ್ಲಾ ಕೂಡ ಪ್ರಮುಖ ಆರೋಪಿ. ಪ್ರಕರಣ ಬೆಳಕಿಗೆ ಬರುತ್ತಲೇ ಚಾವ್ಲಾ ಬ್ರಿಟನ್'ಗೆ ತಪ್ಪಿಸಿಕೊಂಡು ಹೋಗಿರುತ್ತಾನೆ. ಇದೀಗ, ಬ್ರಿಟನ್ ಕೋರ್ಟ್'ನಲ್ಲಿ ಚಾವ್ಲಾ ಆರೋಪ ಸಾಬೀತಾಗಿದೆ. ಭಾರತವು ಈತನನ್ನು ತನ್ನ ವಶಕ್ಕೆ ಒಪ್ಪಿಸಬೇಕೆಂದು ಅರ್ಜಿ ಕೂಡ ಸಲ್ಲಿಸಿತು. ಆದರೆ, ಚಾವ್ಲಾನನ್ನು ಬಂಧಿಸಿಡಲಾಗುವ ತಿಹಾರ್ ಜೈಲಿನಲ್ಲಿ ಸರಿಯಾದ ವೈದ್ಯಕೀಯ ಸೌಲಭ್ಯವಿಲ್ಲ; ಭದ್ರತೆ ಇಲ್ಲ ಎಂದು ಕಾರಣದಿಂದ ಚಾವ್ಲಾನನ್ನು ಗಡೀಪಾರು ಮಾಡಲು ಕೋರ್ಟ್ ನಿರಾಕರಿಸಿದೆ. ತಿಹಾರ್ ಜೈಲಿನಲ್ಲಿ ಪೊಲೀಸರು ಅಪರಾಧಿಗಳನ್ನು ಹಿಂಸಿಸುವ ಸಾಧ್ಯತೆ ಸಾಧ್ಯತೆ ಇದೆ; ಹಾಗೂ ಸಹ-ಕೈದಿಗಳಿಂದ ಹಲ್ಲೆಯಾಗುವ ಸಾಧ್ಯತೆಯೂ ಇದೆ ಎಂಬ ಆತಂಕವೂ ವ್ಯಕ್ತವಾಗಿದೆ. ತಿಹಾರ್ ಜೈಲಿನಲ್ಲಿ ಕೈದಿಗಳನ್ನು ಅಮಾನವೀಯವಾಗಿ ನೋಡಿಕೊಳ್ಳಲಾಗುತ್ತದೆ. ಇದು ಮಾನವ ಹಕ್ಕು ಉಲ್ಲಂಘನೆಯಾಗುತ್ತದೆಂದು ಬ್ರಿಟನ್ ಕೋರ್ಟ್ ಅಭಿಪ್ರಾಯಪಟ್ಟು, ಅ.16ರಂದು ಭಾರತದ ಕೋರಿಕೆಯನ್ನು ರಿಜೆಕ್ಟ್ ಮಾಡಿತು.

ಅಂಗುರಾಲ ಕೇಸ್:
ಜತೀಂದರ್ ಕುಮಾರ್ ಮತ್ತಾತನ ಪತ್ನಿ ಆಶಾರಾಣಿ ಅಂಗುರಾಲ ಸೇರಿದಂತೆ ಹಲವರು ಭಾರತದಲ್ಲಿ 1990-1993ರ ಅವಧಿಯಲ್ಲಿ 24 ಸಾವಿರ ಪೌಂಡ್ ಹಣದ ವಂಚನೆ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ. ಜತೀಂದರ್ ಅಂಗುರಾಲ ಪಂಜಾಬ್'ನ ಜಲಂಧರ್'ನ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಬ್ರ್ಯಾಂಚ್ ಮ್ಯಾನೇಜರ್ ಆಗಿದ್ದರು. ಸುಳ್ಳು ಸಾಲಗಳನ್ನು ಸೃಷ್ಟಿಸಿ ಬ್ಯಾಂಕ್'ಗೆ ಪಂಗನಾಮ ಹಾಕಿದ ಆರೋಪ ಇವರ ಮೇಲಿದೆ. ಇವನ ಕೃತ್ಯಕ್ಕೆ ಈತನ ಪತ್ನಿ ಸೇರಿದಂತೆ ಹಲವರು ಕೈಜೋಡಿಸಿದ್ದರು. 1993ರಲ್ಲಿ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಈತನನ್ನು ಬ್ಯಾಂಕ್ ಅಮಾನತುಗೊಳಿಸಿತು. ಅದೇ ವರ್ಷ ಇವರಿಬ್ಬರು ಬ್ರಿಟನ್'ಗೆ ವಲಸೆ ಹೋಗಿ ಅಲ್ಲಿಯ ಪೌರತ್ವ ಪಡೆದರು.

ಆದರೆ, ಜತೀಂದರ್ ಅಂಗುರಾಲ ಸಭ್ಯ ವ್ಯಕ್ತಿಯಾಗಿದ್ದಾರೆ. ಇಲ್ಲಿಂದಲೇ ಅವರು ಭಾರತದಲ್ಲಿರುವ ತಮ್ಮ ಸಾಲವನ್ನು ತೀರಿಸುತ್ತಿದ್ದಾರೆ. ಈತ ಹಣ ಕಳುಹಿಸುವಾಗ ನೀಡುತ್ತಿದ್ದ ವಿಳಾಸವನ್ನು ಹುಡುಕಿ ಬಂಧಿಸುವ ಅವಕಾಶವಿತ್ತಾದರೂ ಸಿಬಿಐ ಏನೂ ಮಾಡದೇ ಇಷ್ಟು ವರ್ಷ ಸುಮ್ಮನೆ ಇದ್ದದ್ದು ಯಾಕೆ ಎಂದು ಕೋರ್ಟ್ ಪ್ರಶ್ನಿಸಿದೆ. "ಪ್ರಕರಣ ನಡೆದು 25 ವರ್ಷವಾಗಿಬಿಟ್ಟಿದೆ. ಈಗ ಅವರಿಗೆ 69 ವರ್ಷವಾಗಿದೆ. ಈಗ ಅವರನ್ನು ಗಡೀಪಾರು ಮಾಡಿದರೆ ತಪ್ಪಾಗುತ್ತದೆ," ಎಂದು ಲಂಡನ್ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಮೂಲಕ ಅಂಗುರಾಲ ದಂಪತಿಯ ವಶಕ್ಕೆ ಭಾರತ ಸಲ್ಲಿಸಿದ ಕೋರಿಕೆಯನ್ನು ಕೋರ್ಟ್ ತಿರಸ್ಕರಿಸಿದೆ. ಈ ತೀರ್ಪು ಬಂದಿದ್ದು ಅ. 12ರಂದು.

ವಿಜಯ್ ಮಲ್ಯದ್ದು ಮುಂದಿನ ಸರದಿ:
ಬ್ಯಾಂಕುಗಳಿಗೆ 9 ಸಾವಿರ ಕೋಟಿ ರೂ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ವಿಜಯ್ ಮಲ್ಯ ಕೂಡ ಬ್ರಿಟನ್'ನಲ್ಲಿದ್ದು, ಅಲ್ಲಿಯ ಪೌರತ್ವ ಹೊಂದಿದ್ದಾರೆ. ಇವರ ಗಡೀಪಾರಿಗಾಗಿ ಭಾರತ ಸರಕಾರ ಅರ್ಜಿ ಹಾಕಿದೆ. ಇದರ ವಿಚಾರಣೆ ಕೂಡ ಪ್ರಗತಿಯಲ್ಲಿದೆ. ನ. 20ರಂದು ಕೇಸ್ ಮ್ಯಾನೇಜ್ಮೆಂಟ್ ವಿಚಾರಣೆ ನಡೆಯಲಿದೆ. ಡಿ.4ರಿಂದ ಗಡೀಪಾರು ಅರ್ಜಿಯ ವಿಚಾರಣೆ ನಡೆಯಲಿದೆ. ವಿಜಯ್ ಮಲ್ಯ ಅಷ್ಟೇ ಅಲ್ಲ ಇನ್ನೂ 6 ಇಂಥ ಪ್ರಕರಣಗಳು ಇದೇ ವೆಸ್ಟ್ ಮಿನ್'ಸ್ಟರ್ ಕೋರ್ಟ್'ನಲ್ಲಿವೆ. ಚಾವ್ಲಾ ಮತ್ತು ಅಂಗುರಾಲ ಪ್ರಕರಣಗಳಲ್ಲಿ ಇದೇ ಕೋರ್ಟ್ ನೀಡಿದ ತೀರ್ಪು ಮಲ್ಯ ಮತ್ತಿತರರ ಪ್ರಕರಣ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಮಲ್ಯಗೂ ರಿಲೀಫ್ ಸಿಗಬಹುದೆನ್ನಲಾಗಿದೆ. ಮಲ್ಯ ಆರೋಪ ಸಾಬೀತಾದರೂ ಅವರನ್ನು ಭಾರತಕ್ಕೆ ಕಳುಹಿಸಿಕೊಡಲು ಲಂಡನ್ ಕೋರ್ಟ್ ಹಿಂದೇಟು ಹಾಕಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.

click me!