ಪತ್ನಿಗೆ ಒಪ್ಪಿಗೆ ಇರಲಿ, ಇಲ್ಲದಿರಲಿ, ಆಕೆ 15 ವರ್ಷಕ್ಕಿಂತ ದೊಡ್ಡವಳಾಗಿದ್ದರೆ ಅವಳೊಂದಿಗೆ ಅಸ್ವಾಭಾವಿಕ ಸಂಭೋಗ ಅತ್ಯಾಚಾರವಲ್ಲ ಎಂದು ಮಧ್ಯ ಪ್ರದೇಶ ಹೈಕೋರ್ಟ್ ಹೇಳಿದೆ.
ಮಧ್ಯಪ್ರದೇಶ ಹೈಕೋರ್ಟ್ ತನ್ನ ಇತ್ತೀಚಿನ ತೀರ್ಪಿನಲ್ಲಿ ಹೆಂಡತಿಯೊಂದಿಗೆ ಅಸಹಜ ಸಂಭೋಗದಲ್ಲಿ ಪುರುಷ ತೊಡಗಿದರೆ ಅದು ಅತ್ಯಾಚಾರವಲ್ಲ, ಏಕೆಂದರೆ ವೈವಾಹಿಕ ಅತ್ಯಾಚಾರವನ್ನು ಭಾರತೀಯ ಕಾನೂನಿನಡಿಯಲ್ಲಿ ಗುರುತಿಸಲಾಗಿಲ್ಲ ಮತ್ತು ಅಂತಹ ಸಂದರ್ಭಗಳಲ್ಲಿ ಆಕೆಯ ಒಪ್ಪಿಗೆಯು ಅಪ್ರಸ್ತುತವಾಗುತ್ತದೆ ಎಂದು ಹೇಳಿದೆ.
ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ನೇತೃತ್ವದ ಏಕಸದಸ್ಯ ಪೀಠದ ಪ್ರಕಾರ, ಪತಿಯು ತನ್ನ ಹೆಂಡತಿಯೊಂದಿಗೆ ಸಮ್ಮತಿಯಿಲ್ಲದ ಗುದ ಸಂಭೋಗದಲ್ಲಿ ತೊಡಗಿದರೆ, ಹೆಂಡತಿಯು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿರದಿದ್ದರೆ ಅದು ಅತ್ಯಾಚಾರವಾಗುವುದಿಲ್ಲ ಎಂದಿದೆ.
ಪತಿಯು ತನ್ನೊಂದಿಗೆ ಅನೇಕ ಬಾರಿ ಅಸಹಜ ಲೈಂಗಿಕತೆಯನ್ನು ಹೊಂದಿದ್ದನೆಂದು ಪತ್ನಿ ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಬುಧವಾರ (ಮೇ 1) ನೀಡಲಾದ ತೀರ್ಪು, ಎಫ್‌ಐಆರ್ ಅನ್ನು ವಜಾಗೊಳಿಸಿದೆ.
ಐಪಿಸಿಯ ಸೆಕ್ಷನ್ 375 ರ ಅಡಿಯಲ್ಲಿ 'ಅತ್ಯಾಚಾರ'ದ ತಿದ್ದುಪಡಿ ವ್ಯಾಖ್ಯಾನದ ದೃಷ್ಟಿಯಿಂದ, ಇದು ಅತ್ಯಾಚಾರವಲ್ಲ. ಹದಿನೈದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಂಡತಿಯಲ್ಲದಿದ್ದರೆ ಪತಿಯ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ, ಈ ಸಂದರ್ಭಗಳಲ್ಲಿ, ವೈವಾಹಿಕ ಅತ್ಯಾಚಾರಕ್ಕೆ ಹೆಂಡತಿಯ ಒಪ್ಪಿಗೆ ಬೇಕಿಲ್ಲ ಎಂದು ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಜಿಎಸ್ ಅಹ್ಲುವಾಲಿಯಾ ಅವರು ತಮ್ಮ ಕಾನೂನುಬದ್ಧವಾಗಿ ವಿವಾಹವಾದ ಪತ್ನಿಯೊಂದಿಗೆ ವಾಸಿಸುವ ಪತಿಯು ಅಸಹಜ ಲೈಂಗಿಕತೆಯನ್ನು ಹೊಂದಿರುವುದರಿಂದ ಐಪಿಸಿಯ ಸೆಕ್ಷನ್ 377ರ ಅಡಿಯಲ್ಲಿ ಅದು ಅಪರಾಧವಲ್ಲ. ಕ್ಷುಲ್ಲಕ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆಯೇ ಎಂಬ ಬಗ್ಗೆ ಹೆಚ್ಚಿನ ಚರ್ಚೆಯ ಅಗತ್ಯವಿಲ್ಲ ಎಂದಿದ್ದಾರೆ.
ಆದಾಗ್ಯೂ, ಐಪಿಸಿಯ ಸೆಕ್ಷನ್ 376 ಬಿ ಪ್ರತ್ಯೇಕವಾಗಿ ವಾಸಿಸುತ್ತಿರುವಾಗ ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರೆ ಅದನ್ನು ಅತ್ಯಾಚಾರ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳುತ್ತದೆ.
ಈ ಪ್ರಕರಣವು 2019ರ ಹಿಂದಿನದು, ಮಹಿಳೆಯು ತಮ್ಮ ಪತಿ ವಿರುದ್ಧ ಎಫ್‌ಐಆರ್ ದಾಖಲಿಸಿ, ಆತ ತನ್ನೊಡನೆ ಹಲವಾರು ಬಾರಿ ಅಸ್ವಾಭಾವಿಕ ಲೈಂಗಿಕ ಅಭ್ಯಾಸಗಳನ್ನು ನಡೆಸಿದ್ದಾನೆ ಎಂದು ಹೇಳಿದ್ದಾಳೆ.
ನಂತರ ಪತಿ ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಎಫ್‌ಐಆರ್ ಅನ್ನು ಪ್ರಶ್ನಿಸಿ ಮತ್ತು ವಜಾಗೊಳಿಸುವಂತೆ ಅರ್ಜಿ ಸಲ್ಲಿಸಿದ್ದಾನೆ. ಅವನ ಮತ್ತು ಅವನ ಹೆಂಡತಿಯ ನಡುವೆ ಯಾವುದೇ ಅಸ್ವಾಭಾವಿಕ ಲೈಂಗಿಕ ಕ್ರಿಯೆಯು ಅಪರಾಧವಾಗುವುದಿಲ್ಲ ಎಂದು ಅವನು ಪ್ರತಿಪಾದಿಸಿದನು.