
ಪ್ಯಾರಿಸ್(ಜೂನ್ 19): ಅತ್ಯಾಧುನಿಕ ಮತ್ತು ಶಕ್ತಿಶಾಲಿ ಎಫ್-16 ಫೈಟರ್ ಪ್ಲೇನ್'ಗಳನ್ನ ಭಾರತದಲ್ಲಿ ತಯಾರಿಸಲು ಅಮೆರಿಕದ ಲಾಕ್'ಹೀಡ್ ಮಾರ್ಟಿನ್ ಸಂಸ್ಥೆ ಹಾಗೂ ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಸಂಸ್ಥೆಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಇದರೊಂದಿಗೆ ಭಾರತದ ರಕ್ಷಣಾ ಕ್ಷೇತ್ರಕ್ಕೆ ಭರ್ಜರಿಯಾಗಿ ಪುಷ್ಟಿ ಸಿಗಲಿದೆ.
ಪ್ಯಾರಿಸ್ ಏರ್'ಶೋ ವೇಳೆ ಈ ಒಪ್ಪಂದವನ್ನು ಎರಡೂ ಸಂಸ್ಥೆಗಳು ಜಗಜ್ಜಾಹೀರುಗೊಳಿಸಿವೆ. ಭಾರತದಲ್ಲಿ ಈ ಯುದ್ಧ ವಿಮಾನಗಳ ಉತ್ಪಾದನೆ ನಡೆಯಲಿದೆಯಾದರೂ ಅಮೆರಿಕದಲ್ಲಿ ಬಹುತೇಕ ಉದ್ಯೋಗಗಳು ಉಳಿದುಕೊಳ್ಳಲಿವೆ. ಎಫ್-16 ಯುದ್ಧವಿಮಾನಗಳ ವಸ್ತುಗಳ ಪೂರೈಕೆದಾರರ ಸಂಖ್ಯೆ ಸಾವಿರಾರು ಇವೆ. ಇದೇ ವೇಳೆ, ಭಾರತದಲ್ಲಿ ಉತ್ಪಾದನೆಯಾಗುವುದರಿಂದ ಇಲ್ಲಿಯೂ ಉದ್ಯೋಗ ಸೃಷ್ಟಿಯಾಗಲಿದೆ. ಇದು ಎರಡೂ ದೇಶಗಳಿಗೆ ವಿನ್-ವಿನ್ ಸ್ಥಿತಿಯಂತಿದೆ.
ಟ್ರಂಪ್ ವರ್ಸಸ್ ಮೋದಿ:
ಎಫ್-16 ಯುದ್ಧವಿಮಾನ ತಯಾರಿಕೆ ಒಪ್ಪಂದಕ್ಕೆ ಟ್ರಂಪ್ ಯಾವಾಗ ಬೇಕಾದರೂ ಕೊಕ್ಕೆ ಹಾಕುವ ಅಪಾಯವಿದೆ. ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಇಬ್ಬರ ಬ್ಯುಸಿನೆಸ್ ಧೋರಣೆ ಒಂದೇ ತೆರನಾಗಿವೆ. ಮೋದಿಯದ್ದು ಮೇಡ್ ಇನ್ ಇಂಡಿಯಾ ಕಾನ್ಸೆಪ್ಟ್ ಆದರೆ, ಟ್ರಂಪ್'ರದ್ದು ಅಮೆರಿಕ ಫಸ್ಟ್ ಪಾಲಿಸಿ. ಹೀಗಾಗಿ, ಎಫ್-16 ವಿಮಾನ ತಯಾರಿಕೆಯ ಒಪ್ಪಂದದಲ್ಲಿ ಬಹುತೇಕ ಉದ್ಯೋಗಗಳು ಭಾರತದ ಪಾಲಾಗುವ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಇದಕ್ಕೆ ತಡೆಯೊಡ್ಡುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.
ಎಫ್-16 ಸ್ಪೆಷಾಲಿಟಿ:
ಅಮೆರಿಕದ ಎಫ್-16 ವಿಶ್ವದ ಅತ್ಯುತ್ತಮ ಯುದ್ಧವಿಮಾನಗಳಲ್ಲಿ ಪ್ರಮುಖವಾದುದು. ಭಾರತ ಒಪ್ಪಂದ ಮಾಡಿಕೊಂಡಿರುವ ಎಫ್-16 ಮಾಡೆಲ್ ಇರುವುದರಲ್ಲೇ ಅತ್ಯಾಧುನಿಕವಾದುದು. ಬ್ಲಾಕ್ 70 ಮಾಡೆಲ್'ನ ಎಫ್-16 ಯುದ್ಧವಿಮಾನಗಳು ಈಗಾಗಲೇ ಸಾಕಷ್ಟು ಯುದ್ಧಗಳಲ್ಲಿ ಯಶಸ್ವಿಯಾಗಿ ಬಳಕೆಯಾಗಿ ತಮ್ಮ ತಾಕತ್ತು ಸಾಬೀತುಪಡಿಸಿವೆ. 26 ರಾಷ್ಟ್ರಗಳು ಸದ್ಯ ಎಫ್-16 ಯುದ್ಧವಿಮಾನಗಳನ್ನ ಹೊಂದಿವೆ. ಒಂದು ಅಂದಾಜಿನಂತೆ ವಿಶ್ವಾದ್ಯಂತ 3200 ಎಫ್-16 ಜೆಟ್ ಯುದ್ಧವಿಮಾನಗಳಿವೆ.
ರಫ್ತು ಮಾಡುವ ಅವಕಾಶ ಭಾರತಕ್ಕಿದೆ:
ಭಾರತದಲ್ಲಿ ಎಷ್ಟು ಎಫ್-16 ವಿಮಾನಗಳನ್ನು ತಯಾರಿಸಲಾಗುವುದು ಎಂಬುದು ಖಚಿತವಾಗಿಲ್ಲ. ಇನ್ನೂ ಕೂಡ ಬಿಡ್ಡಿಂಗ್ ಕರೆಯಬೇಕಿದೆ. 100-250 ಯುದ್ಧವಿಮಾನಗಳ ಉತ್ಪಾದನೆ ನಡೆಯುವ ಸಾಧ್ಯತೆ ಇದೆ. ಭಾರತವು ಈ ಜೆಟ್ ವಿಮಾನಗಳನ್ನ ಬೇರೆ ದೇಶಗಳಿಗೆ ಮಾರಾಟ ಮಾಡುವ ಹಕ್ಕನ್ನು ಈ ಒಪ್ಪಂದಲ್ಲಿ ನೀಡಿರುವುದು ಗಮನಾರ್ಹ. ಭಾರತದಲ್ಲಿ ಉತ್ಪಾದನೆಯಾಗುತ್ತಿರುವುದರಿಂದ ಖರ್ಚು ಕಡಿಮೆಯಾಗುತ್ತದೆ. ಈ ವಿಮಾನಗಳ ಮರುಮಾರಾಟದ ಮೂಲಕ ನಾವು ಲಾಭ ಮಾಡಿಕೊಳ್ಳಲು ಸಾಧ್ಯವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.