ಲಿಂಗನಮಕ್ಕಿ ಟು ಬೆಂಗಳೂರು; ಶರಾವತಿ ನೀರು ತರೋದಕ್ಕೆ ವಿರೋಧ ಏಕೆ?

By Web DeskFirst Published Jun 24, 2019, 12:07 PM IST
Highlights

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ಬಗ್ಗೆ ಚಿಂತನೆ ನಡೆಯುತ್ತಿದೆ. ಆದರೆ ಮಲೆನಾಡಿನ ಭಾಗದಲ್ಲಿ ಈ ಯೋಜನೆ ಅನುಷ್ಠಾನ ವಿರೋಧಿಸಿ ವ್ಯಾಪಕ ಹೋರಾಟ ಶುರುವಾಗಿದೆ. ಪರಿಸರವಾದಿಗಳು, ಸ್ಥಳೀಯ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಪಕ್ಷಾತೀತವಾಗಿ ವಿರೋಧಿಸುತ್ತಿದ್ದಾರೆ. ಅಷ್ಟಕ್ಕೂ ಏನಿದು ಯೋಜನೆ?

ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ಬಗ್ಗೆ ಚಿಂತನೆ ನಡೆಯುತ್ತಿದೆ. ಆದರೆ ಮಲೆನಾಡಿನ ಭಾಗದಲ್ಲಿ ಈ ಯೋಜನೆ ಅನುಷ್ಠಾನ ವಿರೋಧಿಸಿ ವ್ಯಾಪಕ ಹೋರಾಟ ಶುರುವಾಗಿದೆ. ಪರಿಸರವಾದಿಗಳು, ಸ್ಥಳೀಯ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಪಕ್ಷಾತೀತವಾಗಿ ವಿರೋಧಿಸುತ್ತಿದ್ದಾರೆ.

ಅಷ್ಟಕ್ಕೂ ಏನಿದು ಯೋಜನೆ? ಈ ಪ್ರಸ್ತಾಪ ಮುಂದಿಟ್ಟಿದ್ದು ಯಾರು? ಮಲೆನಾಡಿಗರೇಕೆ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ? ಈ ಯೋಜನೆ ಜಾರಿಯಿಂದಾಗುವ ಸಮಸ್ಯೆ ಏನು? ಈ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು ದಾಹ ಇಂಗಿಸಲು ಲಿಂಗನಮಕ್ಕಿ ಮೇಲೆ ಕಣ್ಣು

ಏನಿದು ಲಿಂಗನಮಕ್ಕಿ ನೀರು ತರುವ ಯೋಜನೆ?

ನಾಡಿಗೆ ಬೆಳಕು ನೀಡುವಲ್ಲಿ ಮಹತ್ತರ ಪಾತ್ರ ವಹಿಸಿರುವ ಲಿಂಗನಮಕ್ಕಿ ಜಲಾಶಯ ನೀರಿಲ್ಲದೆ ಉಸಿರುಗಟ್ಟಿವಿದ್ಯುತ್‌ ಉತ್ಪಾದಿಸುತ್ತಿದೆ. ತನ್ನೊಡಲೇ ಖಾಲಿ ಇರುವಾಗ ಇರುವ ನೀರಲ್ಲಿ ಒಂದಿಷ್ಟುಪಾಲು ಹಂಚಬೇಕು ಎಂಬ ಆದೇಶ ಹೊರಡಿಸಲು ಸಿದ್ಧತೆ ಆರಂಭಗೊಂಡಿದೆ.

ಇದುವೇ ಲಿಂಗನಮಕ್ಕಿಯಿಂದ-ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ. 2021ರಿಂದ 2050ರ ವರೆಗಿನ ಬೆಂಗಳೂರಿನ ಕುಡಿಯುವ ನೀರಿನ ಬೇಡಿಕೆಯನ್ನು ಆಧಾರವಾಗಿಟ್ಟು ಲಿಂಗನಮಕ್ಕಿಯಿಂದ ನೀರು ಪೂರೈಸುವ ಯೋಜನೆಯಿದು.

ಮೊದಲ ಹಂತದಲ್ಲಿ 10 ಟಿಎಂಸಿ ನೀರನ್ನು ಸರಬರಾಜು ಮಾಡುವುದು. ನಂತರದ ದಿನಗಳಲ್ಲಿ 20 ಟಿಎಂಸಿ ನೀರನ್ನು ಪೂರೈಸುವ ಪ್ರಸ್ತಾಪ ಯೋಜನೆಯಲ್ಲಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚುವರಿಯಾಗಿ 30 ಟಿಎಂಸಿ ನೀರನ್ನು ಒಯ್ದಲ್ಲಿ ಬೆಂಗಳೂರು ಮಾತ್ರವಲ್ಲದೆ, ನೆರೆಯ ಜಿಲ್ಲೆಗಳಾದ ಕೋಲಾರ ಸೇರಿದಂತೆ ನೆರೆಯ ಬರಪೀಡಿತ ಜಿಲ್ಲೆಗಳಿಗೂ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಸುಧಾರಿಸಬಹುದು ಎಂಬುದು ಯೋಜನೆಯ ಆರಂಭದ ಚಿಂತನೆ.

ಲಿಂಗನಮಕ್ಕಿ ನೀರು ಬೆಂಗಳೂರಿಗೆ; ಉನ್ನತ ಮಟ್ಟದ ಸಮಿತಿ

ಎಲ್ಲಿಂದ ಬಂತು ಈ ಪ್ರಸ್ತಾಪ?

ಬೆಂಗಳೂರು ನೀರು ಮತ್ತು ಒಳಚರಂಡಿ ಮಂಡಳಿಯ ಮಾಜಿ ಅಧ್ಯಕ್ಷ ಬಿ.ಎನ್‌. ತ್ಯಾಗರಾಜ್‌ ನೇತೃತ್ವದ ಸಮಿತಿಯೊಂದನ್ನು ಹಿಂದಿನ ಸರ್ಕಾರ ರಚಿಸಿತ್ತು. ಈ ಸಮಿತಿ ಕಳೆದ ವರ್ಷ ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತು. ಈ ವರದಿಯಲ್ಲಿ ಶರಾವತಿಯಿಂದ ನೀರು ತರುವ ಯೋಜನೆ ಬಗ್ಗೆ ವಿವರವಾಗಿ ಪ್ರಸ್ತಾಪಿಸಲಾಗಿದ್ದು, ಯೋಜನೆಯಿಂದ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬಹುದು ಎಂದು ಹೇಳಿದೆ.

12 ಸಾವಿರ ಕೋಟಿ ವೆಚ್ಚದ ಯೋಜನೆ!

ವಿದ್ಯುತ್‌ ಉತ್ಪಾದನೆಯ ಉದ್ದೇಶವನ್ನೇ ಕೇಂದ್ರವಾಗಿಟ್ಟುಕೊಂಡು ಲಿಂಗನಮಕ್ಕಿ ಜಲಾಶಯ ನಿರ್ಮಿಸಿದ್ದು. ಸರ್‌ ಎಂ.ವಿಶ್ವೇಶ್ವರಯ್ಯನವರ ಕನಸಿನ ಕೂಸು ಇದು. ಅತ್ಯಂತ ಕಡಿಮೆ ವೆಚ್ಚದಲ್ಲಿ ವಿದ್ಯುತ್‌ ಉತ್ಪಾದಿಸುವ ಯೋಜನೆಯಿದು. ಆದರೆ ಈ ಯೋಜನೆ ಕುರಿತು ವರದಿ ನೀಡಿರುವ ತ್ಯಾಗರಾಜ್‌ ನೇತೃತ್ವದ ಸಮಿತಿಯು ಲಿಂಗನಮಕ್ಕಿ ಜಲಾಶಯಲ್ಲಿ ವಿದ್ಯುತ್‌ ಉತ್ಪಾದನೆ ಕಡಿತಗೊಳಿಸಿ ಎಂದು ಹೇಳಿದೆ.

ಸುಮಾರು 12 ಸಾವಿರ ಕೋಟಿ ರು. ವೆಚ್ಚದ ಯೋಜನೆಯಿದು ಎಂದು ಆರಂಭದಲ್ಲಿ ಅಂದಾಜಿಸಿದೆ. ಲಿಂಗನಮಕ್ಕಿಯಿಂದ ಪಂಪ್‌ ಮೂಲಕ ನೀರನ್ನು ಮೇಲೆತ್ತಿ ಪೈಪ್‌ ಮೂಲಕ ಅದನ್ನು ಬೆಂಗಳೂರಿಗೆ ಕೊಂಡೊಯ್ಯುವುದು ಯೋಜನೆಯ ತಿರುಳು.

ಅವೈಜ್ಞಾನಿಕ ಯೋಜನೆ: ತಜ್ಞರು, ಪರಿಸರವಾದಿಗಳು

ತಜ್ಞರು, ಪರಿಸರವಾದಿಗಳ ಪ್ರಕಾರ ಇದೊಂದು ಸಂಪೂರ್ಣ ಅವೈಜ್ಞಾನಿಕವಾದ ಯೋಜನೆ. ಎಲ್ಲಿಯ ಬೆಂಗಳೂರು, ಎಲ್ಲಿಯ ಲಿಂಗನಮಕ್ಕಿ. ಒಂದಕ್ಕೊಂದು ಸಂಬಂಧವೇ ಇಲ್ಲ. ಆದರೂ ನಮ್ಮ ರಾಜಕಾರಣಿಗಳಿಗೆ ಲಿಂಗನಮಕ್ಕಿಯಿಂದ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಅಪೂರ್ವ ಯೋಜನೆ ಹೊಳೆದದ್ದಾದರೂ ಹೇಗೆ ಎಂಬ ಪ್ರಶ್ನೆಯನ್ನು ಮುಂದಿಡುತ್ತಿದ್ದಾರೆ.

ಹಾಗೆಂದು ಲಿಂಗನಮಕ್ಕಿ ಜಲಾಶಯ ಪ್ರತಿ ವರ್ಷ ಉಕ್ಕಿ ಹರಿದು ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆಯೇ? ಹಾಗಿಲ್ಲ. ತುಂಬುವ ಸಾಧ್ಯತೆಯೇ ಕಡಿಮೆ. ಇನ್ನು ವ್ಯರ್ಥವಾಗಿ ಹರಿಯುವ ಪ್ರಶ್ನೆಯೇ ಇಲ್ಲ. ಇರುವ ನೀರನ್ನು ಸುಮ್ಮನೆ ಬಿಟ್ಟಿಲ್ಲ. ಹನಿ ಹನಿ ನೀರನ್ನು ಜೋಪಾನವಾಗಿ ಬಳಕೆ ಮಾಡಲಾಗುತ್ತಿದೆ.

ಇಷ್ಟಿದ್ದರೂ ಬೇಸಿಗೆ ಕೊನೆಯಲ್ಲಿ ನೀರು ಪಾತಾಳ ಮುಟ್ಟಿರುತ್ತದೆ. ವಿದ್ಯುತ್‌ ಉತ್ಪಾದನೆಗೆ ಸಿಗದೆ ಕಡಿಮೆ ವಿದ್ಯುತ್‌ ಉತ್ಪಾದಿಸಲಾಗುತ್ತದೆ. ಇರುವ ನೀರಿನಲ್ಲಿ ಇಡೀ ವರ್ಷ ಸಮ ಪ್ರಮಾಣದಲ್ಲಿ ವಿದ್ಯುತ್‌ ಉತ್ಪಾದಿಸಲು ಅಧಿಕಾರಿಗಳು ಇನ್ನಿಲ್ಲದ ಶ್ರಮಹಾಕುತ್ತಾರೆ. ಹಾಗಿರುವ ಇಲ್ಲದ ನೀರನ್ನು ಕೊಂಡೊಯ್ಯುವುದಾದರೂ ಹೇಗೆಂಬ ಪ್ರಶ್ನೆ ಎದುರಾಗಿದೆ.

ನೀರು ಕೊಡಬೇಕು ನಿಜ. ಆದರೆ ನೀರೆಲ್ಲಿದೆ?

ಬೆಳೆಯುತ್ತಿರುವ ಬೆಂಗಳೂರಿಗೆ ನೀರು ಬೇಕು. ಮಾನವೀಯತೆಯ ದೃಷ್ಟಿಯಿಂದ ಕೊಡಬೇಕಾಗುತ್ತದೆ ಎಂಬುದು ನಿಜ. ಆದರೆ ನೀರೆಲ್ಲಿದೆ ಎಂಬುದು ಇಲ್ಲಿನ ಜನರ ಪ್ರಶ್ನೆ. ಬೆಂಗಳೂರಿಗೆ ಬೇಕಾಗುವ ನೀರನ್ನು ಅಲ್ಲಿಯೇ ಸಂಗ್ರಹಿಸುವ ಯೋಜನೆ ರೂಪಿಸಬೇಕೇ ಹೊರತು ದೂರದ ಮಲೆನಾಡಿನಿಂದ ಕೊಂಡೊಯ್ಯುತ್ತೇವೆ ಎನ್ನುವುದು ಸರಿಯಲ್ಲ.

ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಮಲೆನಾಡಿನ ಜನ ಎಂದು ದೂಷಿಸಲಾಗುತ್ತಿದೆ. ಆದರೆ ಮಲೆನಾಡನ್ನು ದೊಡ್ಡ ಪ್ರಮಾಣದಲ್ಲಿ ನಾಶ ಮಾಡಿದ್ದು ಆಧುನಿಕತೆಯ ರಾಕ್ಷಸ. ಸರ್ಕಾರ ರೂಪಿಸುವ ಯೋಜನೆಗಳು ಎನ್ನುತ್ತಾರೆ.

1964ರಲ್ಲಿ ನಿರ್ಮಾಣಗೊಂಡ ಲಿಂಗನಮಕ್ಕಿ ಜಲಾಶಯ ಇದುವರೆಗೆ ತುಂಬಿದ್ದು 18 ಬಾರಿ ಮಾತ್ರ. ಅದರಲ್ಲಿಯೂ ಬಹುತೇಕ ಸಂದರ್ಭದಲ್ಲಿ ತುಂಬಿತೇ ಹೊರತು, ಹೆಚ್ಚುವರಿ ನೀರು ಹರಿದು ಎಂದೂ ಸಮುದ್ರ ಸೇರಿಲ್ಲ. ಎರಡು ಬಾರಿ ಮಾತ್ರ ಪರವಾಗಿಲ್ಲ ಎನ್ನುವಷ್ಟುನೀರು ಹೊರ ಹರಿದಿದೆ. ಜಲಾಶಯ ತುಂಬಿಲ್ಲ ಎನ್ನುವುದಾದರೆ ಹೆಚ್ಚುವರಿ ನೀರೇ ಇಲ್ಲ ಎಂದರ್ಥ. ನೀರೇ ಇಲ್ಲದಾಗ ಬೆಂಗಳೂರಿಗೆ ಕೊಂಡೊಯ್ಯುವುದಾದರೂ ಏನನ್ನು?

1,330 ಅಡಿ ಎತ್ತರಕ್ಕೆ ನೀರನ್ನು ಪಂಪ್‌ ಮಾಡಲು ಸಾಧ್ಯವೇ?

ಲಿಂಗನಮಕ್ಕಿ ಜಲಾಶಯ ತುಂಬಿದಾಗ ಅದರ ಎತ್ತರ ಸಮುದ್ರ ಮಟ್ಟದಿಂದ 1819 ಅಡಿ. ಬೆಂಗಳೂರು ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿದ್ದು, ಬೆಂಗಳೂರಿನ ಅತಿ ಎತ್ತರದ ಸ್ಥಳದ ದೊಡ್ಡಬೆಟ್ಟನಹಳ್ಳಿ ಇರುವುದು ಸಮುದ್ರ ಮಟ್ಟದಿಂದ 3,150 ಅಡಿ ಎತ್ತರದಲ್ಲಿ. ಅಂದರೆ ಲಿಂಗನಮಕ್ಕಿಗಿಂತ ಬೆಂಗಳೂರು 1,330 ಅಡಿ ಎತ್ತರದಲ್ಲಿದೆ.

ಲಿಂಗನಮಕ್ಕಿಯಿಂದ ಪಂಪ್‌ ಮೂಲಕ ನೀರನ್ನು ಎತ್ತಿ, ಬಳಿಕ 400 ಕಿ.ಮೀ. ದೂರದವರೆಗೆ ಸಾಗಿಸಬೇಕು. ಇದಕ್ಕೆ ಬೇಕಾಗುವ ವಿದ್ಯುತ್‌ ಸರಿಸುಮಾರು 375 ಮೆ.ವ್ಯಾ. ವಿದ್ಯುತ್‌ ಬೇಕು. ಹಾಗಿದ್ದರೆ ಇದೆಲ್ಲ ಕಾರ್ಯ ಸಾಧುವೆ?

ಯೋಜನೆ ಜಾರಿಯಾದರೆ ವಿದ್ಯುತ್‌ ಉತ್ಪಾದನೆಗೆ ಸಮಸ್ಯೆ

ಇಡೀ ರಾಜ್ಯಕ್ಕೆ ಬೇಕಾದ ವಿದ್ಯುತ್‌ನಲ್ಲಿ ಶೇ.30ರಷ್ಟುವಿದ್ಯುತ್‌ ಪೂರೈಸುವ ಲಿಂಗನಮಕ್ಕಿಯಲ್ಲಿ ಈ ಯೋಜನೆಯಿಂದ ನೀರಿನ ಕೊರತೆ ಎದುರಾದರೆ ಮಲೆನಾಡು ಸೇರಿದಂತೆ ರಾಜ್ಯದ ಶೇ.30ರಷ್ಟುಭಾಗಕ್ಕೆ ವಿದ್ಯುತ್‌ ಪೂರೈಸುವುದು ಕಷ್ಟವಾಗುತ್ತದೆ.

ಸದ್ಯ ಲಿಂಗನಮಕ್ಕಿ ವಿದ್ಯುತ್‌ ಯೋಜನೆಯಿಂದ ಒಟ್ಟಾರೆ ವಿದ್ಯುತ್‌ ಉತ್ಪಾದನೆಯ ಸರಾಸರಿ ವೆಚ್ಚ ಕಡಿಮೆಯಾಗಿದೆ. ಆದರೆ ಲಿಂಗಮನಮಕ್ಕಿ ಸ್ಥಗಿತಗೊಂಡರೆ ವಿದ್ಯುತ್‌ ದುಬಾರಿಯಾಗಬಹುದು.

ತ್ಯಾಗ ಮಾಡಿದವರಿಗೆ ಸೌಲಭ್ಯ, ಪರಿಹಾರ ಯಾವಾಗ?

ಲಿಂಗನಮಕ್ಕಿ ತಟದಲ್ಲಿರುವ ಸಾಗರ ಪಟ್ಟಣ ಸೇರಿ ನೂರಾರು ಹಳ್ಳಿಗಳು ನೀರಿನ ಬವಣೆಯಿಂದ ಬಳಲುತ್ತಿವೆ. ವಿದ್ಯುತ್‌ ಇಲ್ಲದೆ ಕತ್ತಲಲ್ಲಿ ಇವೆ. ಆದರೆ ಇದರ ಬಗ್ಗೆ ಸರ್ಕಾರಕ್ಕೆ ಯೋಚಿಸಲು ಕೂಡ ಸಮಯವಿಲ್ಲ. ನಾಡಿನ ಜನತೆಗಾಗಿ ತ್ಯಾಗ ಮಾಡಿದವರಿಗೆ ಸೌಲಭ್ಯ ನೀಡಲು, ಪರಿಹಾರ ಒದಗಿಸಲು ಹಣ ಇಲ್ಲ. ಆದರೆ ಇಲ್ಲಿನ ಜನರಿಗೆ ನೀರಿನ ಹಕ್ಕನ್ನು ನಿರಾಕರಿಸಿ ಬೆಂಗಳೂರಿಗೆ ಕೊಂಡೊಯ್ಯಲು ಹಣ ಹೇಗೆ ನೀಡಲಾಗುತ್ತದೆ ಎಂದು ಈ ಭಾಗದ ಜನರು ಪ್ರಶ್ನಿಸುತ್ತಿದ್ದಾರೆ.

ಮಲೆನಾಡಿನ ಮೇಲೆ ಒತ್ತಡ ನೈಸರ್ಗಿಕ ದುರಂತಕ್ಕೆ ಮುನ್ನುಡಿ

ಒಂದು ಪಕ್ಷ ಯೋಜನೆ ಜಾರಿಯಾಗಿದ್ದೇ ಆದರೆ ಈಗಾಗಲೇ ತನ್ನ ಧಾರಣ ಶಕ್ತಿಗಿಂತ ಹೆಚ್ಚು ಒತ್ತಡ ಹೊರುತ್ತಿರುವ ಮಲೆನಾಡು ಇನ್ನೊಂದು ದುರಂತಕ್ಕೆ ಸಾಕ್ಷಿಯಾಗಲಿದೆ. ಹಲವಾರು ಯೋಜನೆಗಳಲ್ಲಿ ಮಲೆನಾಡಿನ ದಟ್ಟಾರಣ್ಯಗಳು ನೀರಿನ ಅಡಿ ಮುಳುಗಿ ಹೋಗಿವೆ.

ಇಲ್ಲಿನ ಜೀವ ವೈವಿಧ್ಯದ ಮೇಲೆ ಭಾರೀ ಪರಿಣಾಮ ಬೀರಿದೆ. ಪರಿಸರದ ಅಸಮತೋಲನದಿಂದ ಪ್ರಕೃತಿ ಮುನಿದು ಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ನೀರಾವರಿ ಯೋಜನೆಗಳಿಂದ ಜನ ವಾಸಿಸುತ್ತಿದ್ದ ಕೃಷಿ ಭೂಮಿ,ಅರಣ್ಯ, ಗೋಮಾಳ ಎಲ್ಲವೂ ನೀರಿನಲ್ಲಿ ಮುಳುಗಿ ಹೋಗಿವೆ.

ಇನ್ನೊಂದೆಡೆ ಹುಲಿ ಸಂರಕ್ಷಣಾವಲಯ, ರಾಷ್ಟ್ರೀಯ ಉದ್ಯಾನವನ ಹೆಸರಿನಲ್ಲಿ ಜನರನ್ನು ಅವರ ವಾಸ ಸ್ಥಳದಿಂದ ಹೊರಹಾಕಲಾಗುತ್ತಿದೆ. ಇದರ ನಡುವೆ ಕಸ್ತೂರಿರಂಗನ್‌ ವರದಿ ಹೆಸರಿನಲ್ಲಿ ಜನರನ್ನು ನಿರ್ಬಂಧಿಸಲಾಗುತ್ತದೆ. ಅವರ ಕೃಷಿ ಚಟುವಟಿಕೆ, ದೈನಂದಿನ ಬದುಕನ್ನು ನಿಯಂತ್ರಿಸಲಾಗುತ್ತಿದೆ. ಇಂತಹ ಹೊತ್ತಿನಲ್ಲಿ ಪುನಃ ಹೊಸ ಯೋಜನೆಯೊಂದು ಬೇಕಾ ಎಂಬ ಪ್ರಶ್ನೆ ಎದ್ದಿದೆ.

ಭುಗಿಲೆದ್ದ ಹೋರಾಟ: ಜು.10ಕ್ಕೆ ಶಿವಮೊಗ್ಗ ಬಂದ್‌

ಬೆಂಗಳೂರಿನಲ್ಲಿ ಈ ಯೋಜನೆ ಸಂಬಂಧ ಡಿಪಿಆರ್‌ ಸಿದ್ಧಪಡಿಸಲು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅಧಿಕಾರಿಗಳಿಗೆ ಸೂಚಿಸಿದ ಬೆನ್ನಲ್ಲೇ, ಮಲೆನಾಡಿನಲ್ಲಿ ಹೋರಾಟದ ಕಿಚ್ಚು ಹೊತ್ತಿದೆ. ಸಾಹಿತಿಗಳು, ಚಿಂತಕರು, ಪರಿಸರವಾದಿಗಳು, ರಾಜಕಾರಣಿಗಳು, ಸಾಮಾಜಿಕ ಹೋರಾಟಗಾರರು, ಪತ್ರಕರ್ತರು ಪಕ್ಷಾತೀತವಾಗಿ ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಕೊಂಡೊಯ್ಯುವ ಯೋಜನೆ ವಿರುದ್ಧ ಹೋರಾಟಕ್ಕೆ ಸಿದ್ಧರಾಗಿದ್ದಾರೆ.

ಯೋಜನೆಯ ಸಾಧಕ ಬಾಧಕ, ಇದರಿಂದ ಮಲೆನಾಡಿನ ಮೇಲೆ ಆಗಬಹುದಾದ ಪರಿಣಾಮ ಕುರಿತ ಸಮಗ್ರ ಮಾಹಿತಿಯುಳ್ಳ ವರದಿಯೊಂದನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಬಳಿಕ ಹೋರಾಟದ ಸ್ಪಷ್ಟರೂಪರೇಷೆಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಅದರ ಜೊತೆಗೇ ಜು.10ರಂದು ಶಿವಮೊಗ್ಗ ಬಂದ್‌ಗೆ ಕರೆ ನೀಡಲಾಗಿದೆ. ಹಿರಿಯ ಸಾಹಿತಿ ನಾ.ಡಿಸೋಜಾ ನೇತೃತ್ವದಲ್ಲಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ.

ಎತ್ತಿನಹೊಳೆ ಯೋಜನೆಯ ಎಡವಟ್ಟು ಸಾಲದೇ?

ಈಗಾಗಲೇ ನೇತ್ರಾವತಿ ನದಿಯಿಂದ ಬರಪೀಡಿತ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ತರಲು ಸಾವಿರಾರು ಕೋಟಿ ರು. ಯೋಜನೆ ಆರಂಭಿಸಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ನೇತ್ರಾವತಿಯಲ್ಲಿ ನೀರು ತೀವ್ರ ವೇಗದಲ್ಲಿ ಬತ್ತುತ್ತಿರುವುದರಿಂದ ಇಡೀ ಯೋಜನೆ ಸಂದಿಗ್ಧದಲ್ಲಿದೆ.

ಯೋಜನೆಗಾಗಿ ಮಾಡಿದ ಕಾಡಿನ ನಾಶ, ವೆಚ್ಚ ಮಾಡಿದ ಹಣವೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ ಎಂಬ ಕೂಗು ಕೇಳಿಬಂದಿದೆ. ಹಾಗಿರುವಾಗ ಆ ತಪ್ಪನ್ನು ಸರಿಪಡಿಸಿಕೊಳ್ಳದೆ ಅಂತಹುದೇ ಮತ್ತೊಂದು ಅವೈಜ್ಞಾನಿಕ ಯೋಜನೆ ಬೇಕೆ ಎಂದು ಮಲೆನಾಡಿಗರು ಪ್ರಶ್ನಿಸುತ್ತಿದ್ದಾರೆ.

ಮಲೆನಾಡನ್ನು ಬಲಿಕೊಡುವ ಯೋಜನೆಗೆ ಅವಕಾಶ ಇಲ್ಲ

ಬೆಂಗಳೂರಿಗೆ ನೀರು ಕೊಂಡ್ಯೊಲು ಜಲಾಶಯದಲ್ಲಿ ನೀರು ಎಲ್ಲಿದೆ? ಈ ಬಗ್ಗೆ ಸರ್ಕಾರ ಗಮನ ಹರಿಸಿದೆಯೇ? ಜಲಾಶಯದಲ್ಲಿ ಎಷ್ಟುಹೂಳು ತುಂಬಿದೆ ಎಂದು ಗೊತ್ತಿದೆಯೇ? ನೀರು ಕೊಂಡೊಯ್ಯಲು ಬಳಸುವ ಮಾರ್ಗದಲ್ಲಿನ ಅರಣ್ಯದ ಕತೆ ಏನು? ಯೋಜನೆಗೆ ಖರ್ಚಾಗುವ ಹಣ ನೇರವಾಗಿ ಜನರ ಮೇಲೆ ಬೀಳುತ್ತದೆ. ಇದೆಲ್ಲ ಸರ್ಕಾರಕ್ಕೆ ಅರಿವಿಲ್ಲವೇ? ಸರಿಯಾದ ಲೆಕ್ಕಾಚಾರ, ಮಾಹಿತಿ ಇಟ್ಟುಕೊಳ್ಳದೆ, ಸಾಧಕ ಬಾಧಕ ನೋಡದೆ ಮಲೆನಾಡನ್ನು ಬಲಿಕೊಡುವ ಯೋಜನೆಗೆ ಅವಕಾಶ ನೀಡಲು ಸಾಧ್ಯವೇ ಇಲ್ಲ.

ಆನ್‌ಲೈನಲ್ಲೂ ‘ಶರಾವತಿ ಉಳಿಸಿ’ ಹೋರಾಟ

ಸಮಾಜವಾದಿ ಚಳವಳಿ, ಭೂಮಿ ಹಕ್ಕಿನ ಗೇಣಿ ಹೋರಾಟ, ಇತ್ತೀಚೆಗಿನ ‘ತುಂಗಾ ಉಳಿಸಿ’ ಹೋರಾಟಗಳಂತಹ ಚಳವಳಿಗಳು ನಡೆದಿದ್ದ ನೆಲದಲ್ಲಿ ಇದೀಗ ‘ಶರಾವತಿ ಉಳಿಸಿ’ ಹೋರಾಟ ಬಲವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್‌ಟ್ಯಾಗ್‌ ಬಳಸುವ ಮೂಲಕ, ಫೇಸ್‌ಬುಕ್‌ ಗ್ರೂಪ್‌ ರಚಿಸಿ ಯೋಜನೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ.

- ಗೋಪಾಲ್ ಯಡಗೆರೆ 

click me!