ಕ್ಷಿಪಣಿ ರಕ್ಷಣಾ ಕವಚದಲ್ಲಿ ದೆಹಲಿ: ದಾಳಿಯ ಭೀತಿ ಇನ್ನೆಲ್ಲಿ?

First Published Jul 29, 2018, 3:20 PM IST
Highlights

ರಾಜಧಾನಿ ದೆಹಲಿಗೆ ಕ್ಷಿಪಣಿ ರಕ್ಷಣಾ ಕವಚ

ವಾಷಿಂಗ್ಟನ್. ಮಾಸ್ಕೋಗಿರುವ ರಕ್ಷಣೆ ದೆಹಲಿಗೆ

ದೆಹಲಿ ರಕ್ಷಣೆಗೆ ಕೇಂದ್ರ ಸರ್ಕಾರ ಯೋಜನೆ

ರಕ್ಷಣಾ ಸ್ವಾಧೀನ ಸಮಿತಿಯಿಂದ ಅನಿಮೋದನೆ

ಯುಎಸ್ ಜೊತೆ ಮಹತ್ವದ ಒಪ್ಪಂದಕ್ಕೆ ಮುನ್ನುಡಿ

ಸಂಭಾವ್ಯ ಕ್ಷಿಪಣಿ ದಾಳಿಯನ್ನು ತಡೆಯಬಲ್ಲ ಸಾಮರ್ಥ್ಯ

ನವದೆಹಲಿ(ಜು.29): ಅಮೆರಿಕ ರಾಜಧಾನಿ ವಾಷಿಂಗ್ಟನ್, ರಷ್ಯಾ ರಾಜಧಾನಿ ಮಾಸ್ಕೋ  ನಗರಗಳು ಕ್ಷಿಪಣಿ ದಾಳಿಗೂ ಅಲುಗಾಡಲ್ಲ. ಅಂತಹ ವಿಶೇಷ ಕ್ಷಿಪಣಿ ರಕ್ಷಾ ಕವಚವನ್ನು ಈ ನಗರಗಳು ಹೊಂದಿವೆ. ಅದೇ ರೀತಿ ರಾಷ್ಟ್ರ ರಾಜಧಾನಿ ದೆಹಲಿಗೂ ಕ್ಷಿಪಣಿ ರಕ್ಷಾ ಕವಚ ಅಳವಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ದೆಹಲಿ ಸುತ್ತಮುತ್ತಲ ಪ್ರದೇಶಗಳಲ್ಲಿ ಕ್ಷಿಪಣಿ ಸಹಿತ ಭದ್ರತಾ ಕೋಟೆಯನ್ನು ನಿರ್ಮಿಸಲು ಚಿಂತಿಸಲಾಗುತ್ತಿದ್ದು, 9/11 ರೀತಿಯ ಯಾವುದೇ ವೈಮಾನಿಕ, ಕ್ಷಿಪಣಿ ಮತ್ತು ಡ್ರೋನ್ ದಾಳಿಗಳಿಂದ ದೆಹಲಿಯನ್ನು ರಕ್ಷಿಸಲು ಕೇಂದ್ರ ಸರ್ಕಾರ  ಯೋಚಿಸುತ್ತಿದೆ. 

ದೆಹಲಿ ಸೇರಿದಂತೆ ದೆಹಲಿ ಹೊರಭಾಗದ ಪ್ರಮುಖ ಪ್ರದೇಶಗಳಲ್ಲಿ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಅಳವಡಿಸಲು ಚಿಂತಿಸಲಾಗುತ್ತಿದೆ.  ಹಳತಾದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಬದಲಿಸುವುದು, ವಿಐಪಿ ಪ್ರದೇಶದ ಮೇಲೆ ವಿಮಾನ ಹಾರಾಟ ನಿರ್ಬಂಧವನ್ನು ಮತ್ತಷ್ಟು ಬಿಗುಗೊಳಿಸುವುದು, ಅನುಮಾನಾಸ್ಪದ ವಿಮಾನಗಳನ್ನು ಹೊಡೆದುರುಳಿಸುವಂತೆ ನಿಯಮದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.

ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ  ರಕ್ಷಣಾ ಸ್ವಾಧೀನ ಸಮಿತಿ ಈ ಯೋಜನೆಗೆ ಒಪ್ಪಿಗೆ ನೀಡಿದ್ದು, ಅಮೆರಿಕದೊಂದಿಗೆ ಸುಮಾರು 1 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದಕ್ಕೆ ಈಗಾಗಲೇ ಮುಂದಡಿ ಇಡಲಾಗಿದೆ. ಅಮೆರಿಕದಿಂದ ಭೂಮಿಯಿಂದ ವಾಯುಗುರಿಗಳನ್ನು ಛಿದ್ರ ಮಾಡಬಲ್ಲ ಸುಧಾರಿತ ನಾಸಾಮ್ಸ್-2 ಕ್ಷಿಪಣಿ ವ್ಯವಸ್ಥೆಯನ್ನು ಖರೀದಿ ಮಾಡಲು ನಿರ್ಧರಿಸಲಾಗಿದೆ. 

ದೆಹಲಿ ಪ್ರಾದೇಶಿಕ ವಾಯು ರಕ್ಷಣಾ ವ್ಯವಸ್ಥೆಯಡಿ, ಈಗಾಗಲೇ ಭದ್ರತಾ ವ್ಯವಸ್ಥೆಯಲ್ಲಿರುವ ವಿಐಪಿ-89 ಪ್ರದೇಶವನ್ನೂ ಒಳಗೊಳ್ಳುವ ಮೂಲಕ ರಾಷ್ಟ್ರಪತಿ ಭವನ, ಸಂಸತ್‌ ಭವನ, ರೈಸಿನಾ ಹಿಲ್ಸ್ ಒಳಗೊಂಡಂತೆ ಪ್ರಮುಖ ಪ್ರದೇಶಗಳಲ್ಲಿ ಈ ಕ್ಷಿಪಣಿ ವ್ಯವಸ್ಥೆಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಅಂತೆಯೇ ಯಾವುದೇ ರೀತಿಯ ವಿಧ್ವಂಸದ ಸುಳಿವು ಸಿಕ್ಕರೂ ಅದನ್ನು ಅಲ್ಲೇ ಹೊಡೆದುರುಳಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದ ವಾಷಿಂಗ್ಟನ್, ರಷ್ಯಾದ ಮಾಸ್ಕೋ ನಗರಗಳಲ್ಲಿ ಈಗಾಗಲೇ ಕ್ಷಿಪಣಿ ರಕ್ಷಣಾ ಕವಚ ಅಳವಡಿಸಲಾಗಿದೆ.  ಇಷ್ಟೇ ಅಲ್ಲದೇ ಇಸ್ರೇಲ್, ಮತ್ತು ಯೂರೋಪ್ ನ ಕೆಳ ಪ್ರಮುಖ ನಗರಗಳಲ್ಲೂ ಇಂತಹ ವ್ಯವಸ್ಥೆ ಇದೆ.  

ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ರಾಜಧಾನಿ ಮುಂಬೈ ನಂತಹ ನಗರಗಳ ರಕ್ಷಣೆಗೆಂದೇ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ರಕ್ಷಣಾ ಅಭಿವೃದ್ಧಿ ಸಂಶೋಧನಾ ಸಂಸ್ಥೆ(ಡಿಆರ್‌ಡಿಓ) ಅಭಿವೃದ್ಧಿಪಡಿಸುತ್ತಿದೆ. ಒಮ್ಮೆ ಈ ಅಭಿವೃದ್ಧಿ ಫಲಿಸಿದಲ್ಲಿ, 2000 ಕಿಮೀಗಂತಲೂ ಹೆಚ್ಚು ದೂರದಿಂದ ಬರುವ ಅಣ್ವಸ್ತ್ರ ಸಜ್ಜಿತ ಕ್ಷಿಪಣಿಗಳಿಂದ ನಗರಗಳನ್ನು ರಕ್ಷಿಸಿಕೊಳ್ಳಬಹುದಾಗುತ್ತದೆ.

click me!