ಬದುಕು ಹಾವು ಏಣಿ ಆಟದಂತೆ : ಜಯಂತ್‌ ಕಾಯ್ಕಿಣಿ

Published : Jan 28, 2019, 09:37 AM IST
ಬದುಕು ಹಾವು ಏಣಿ ಆಟದಂತೆ : ಜಯಂತ್‌ ಕಾಯ್ಕಿಣಿ

ಸಾರಾಂಶ

ಬದುಕಿನ ದೊಡ್ಡ ದೊಡ್ಡ ಸಂಗತಿಗಳು ನನಗೆ ಮುಖ್ಯವಲ್ಲ. ಅಂತಿಮವಾಗಿ ಮನುಷ್ಯನಿಗೆ ಏನಾಗುತ್ತಿದೆ ಅನ್ನುವುದರ ಕಡೆಗೆ ನಾನು ಹೆಚ್ಚು ಮಹತ್ವ ಕೊಡುತ್ತೇನೆ. ನನಗೆ ಊರಿಗಿಂತ ವ್ಯಕ್ತಿ ಮುಖ್ಯ ಎಂದು ಜೈಪುರ ಸಾಹಿತ್ಯ ಉತ್ಸವದಲ್ಲಿ ಜಯಂತ್ ಕಾಯ್ಕಿಣಿ ಮಾತನಾಡಿದರು.

ಜೈಪುರ :  ಬದುಕು ಹಾವು ಏಣಿ ಆಟದಂತೆ ಇರುತ್ತದೆ. ಅಲ್ಲಿ ಅಸಮಾನತೆ, ಒಡೆದು ಆಳುವ ನೀತಿ, ಅನ್ಯಾಯ, ಹೆಣ್ಣಿನ ಮೇಲಿನ ದೌರ್ಜನ್ಯ, ಜಾತಿಯ ಹೆಸರಲ್ಲಿ ನಿಂದಿಸುವುದು ಇವೆಲ್ಲ ಹಾವುಗಳಿದ್ದಂತೆ. ಕಲೆ, ಸಾಹಿತ್ಯ, ಸಂಗೀತ ಇವುಗಳು ಏಣಿಯಿದ್ದಂತೆ. ಈ ಏಣಿಗಳನ್ನು ಬಳಸಿಕೊಂಡು ನಾವು ಸಮಾಜದಲ್ಲಿರುವ ಹಾವುಗಳನ್ನು ದಾಟಿ ಮುಂದಕ್ಕೆ ಸಾಗಬೇಕು ಎಂದು ಜಯಂತ ಕಾಯ್ಕಿಣಿ ಅಭಿಪ್ರಾಯ ಪಟ್ಟರು.

ಜೈಪುರ ಸಾಹಿತ್ಯೋತ್ಸವದ ಪ್ರಧಾನ ವೇದಿಕೆಯಲ್ಲಿ ಜಯಂತ ಕಾಯ್ಕಿಣಿ ಅವರ ಕತೆಗಳ ಇಂಗ್ಲಿಷ್‌ ಅನುವಾದ ನೋ ಪ್ರೆಸೆಂಟ್ಸ್‌ ಪ್ಲೀಸ್‌ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತಾಡಿದರು.

ಬದುಕಿನ ದೊಡ್ಡ ದೊಡ್ಡ ಸಂಗತಿಗಳು ನನಗೆ ಮುಖ್ಯವಲ್ಲ. ಅಂತಿಮವಾಗಿ ಮನುಷ್ಯನಿಗೆ ಏನಾಗುತ್ತಿದೆ ಅನ್ನುವುದರ ಕಡೆಗೆ ನಾನು ಹೆಚ್ಚು ಮಹತ್ವ ಕೊಡುತ್ತೇನೆ. ನನಗೆ ಊರಿಗಿಂತ ವ್ಯಕ್ತಿ ಮುಖ್ಯ. ಎಲ್ಲರೂ ಬೀದಿಯಲ್ಲಿ ಕ್ಯಾಮೆರಾ ಹಿಡಿದು ನಿಂತಿದ್ದರೆ, ನಾನು ಹಿತ್ತಲ ಬಾಗಿಲಲ್ಲಿ ಹೋಗಿ ಬೆಳಗ್ಗೆ ಕೆಲಸಕ್ಕೆ ಹೋದ ಮಗ ಯಾಕೆ ಮನೆಗೆ ಬರಲಿಲ್ಲ ಎಂದು ವಿಚಾರಿಸುವವನು. ಅದು ನನ್ನ ಬರಹದ ರೀತಿ ಎಂದು ಅವರು ವರ್ಣಿಸಿದರು.

ತನ್ನ ಕತೆಗಳನ್ನು ತೇಜಸ್ವಿನಿ ನಿರಂಜನ ಅನುವಾದಿಸಿದ ರೀತಿಯನ್ನು ಮೆಚ್ಚಿಕೊಂಡ ಜಯಂತ್‌, ಅನುವಾದವು ಯಾವತ್ತೂ ಒಬ್ಬ ಕವಿಯ ಕೈಯಲ್ಲಿ ಸುರಕ್ಷಿತವಾಗಿರುತ್ತದೆ. ಕವಿಗೆ ಶಬ್ದಗಳನ್ನು ಹೇಗೆ, ಎಷ್ಟುಬಳಸಬೇಕು ಅನ್ನುವುದು ಚೆನ್ನಾಗಿ ಗೊತ್ತಿರುತ್ತದೆ. ನಾನು ಕವಿಯಾಗಿದ್ದರಿಂದಲೇ ರೂಪಕಗಳ ಮೂಲಕ ಕತೆ ಹೇಳಲು ಅನುಕೂಲವಾಯಿತು. ಉದಾಹರಣೆಗಳ ಮೂಲಕ ಹೇಳಿದಾಗಲೇ ಜೀವನಾನುಭವ ಬೇಗ ಅರ್ಥವಾಗುತ್ತದೆ ಎಂದು ಹೇಳಿದರು.

ನಾನು ಗೋಕರ್ಣದಲ್ಲಿ ಹುಟ್ಟಿದವನು. ಮುಂಬಯಿಯಲ್ಲಿದ್ದಾಗ ನನ್ನ ಮನೆ ಭಾಷೆ ಕೊಂಕಣಿ, ರೈಲಿನಲ್ಲಿ ಹೋಗುವಾಗ ಮಾತಾಡುತ್ತಿದ್ದದ್ದು ಹಿಂದಿ ಮತ್ತು ಮರಾಠಿ, ಕಚೇರಿಯಲ್ಲಿ ಇಂಗ್ಲಿಷ್‌, ಬರೆಯುತ್ತಿದ್ದದ್ದು ಕನ್ನಡ. ಹೀಗೆ ನನ್ನ ಪಾತ್ರಗಳೂ ಹಲವು ಭಾಷೆಗಳನ್ನು ಮಾತಾಡುತ್ತಾರೆ. ಮುಂಬಯಿಯಲ್ಲಿ ಇರುವವರಿಗೆ ಮನೆ ಚಿಕ್ಕದು. ಹೀಗಾಗಿ ಹೆಚ್ಚಿನ ಸಮಯವನ್ನು ಬೀದಿಯಲ್ಲೇ ಕಳೆಯುತ್ತಾರೆ. ಅವರಿಗೆಲ್ಲ ಮುಂಬಯಿಯೇ ಮನೆ. ನಾನು ಕೆಲಸಕ್ಕೆಂದು ಮುಂಬಯಿಗೆ ಹೋದೆ. ಟೀ ಶರ್ಟನ್ನು ಒಗೆದ ನಂತರ ಒಳಬದಿಯನ್ನು ಹೊರಗೆ ಮಾಡಿ ಒಣಗಲು ಹಾಕುವಂತೆ ಮುಂಬಯಿ ನನ್ನ ಒಳಗನ್ನು ಹೊರಗು ಮಾಡಿ ನನ್ನನ್ನು ಬದಲಾಯಿಸಿತು ಎಂದು ಜಯಂತ್‌ ಮುಂಬಯಿ ಅನುಭವ ತೆರೆದಿಟ್ಟರು.

ಸಿನಿಮಾ ನನ್ನ ಜೀವನದ ಒಂದು ಭಾಗವೇ ಆಗಿತ್ತು. ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ದಿನಸಿ ಅಂಗಡಿಯಲ್ಲಿ ಲೆಕ್ಕದ ಪುಸ್ತಕ ಇತ್ತು. ನಾವು ದಿನಸಿ ತಂದು ಅಲ್ಲಿ ಲೆಕ್ಕ ಬರೆಸುತ್ತಿದ್ದೆವು. ನಾವು ಸಿನಿಮಾಕ್ಕೆ ಹೋಗುವಾಗ ಅದೇ ಅಂಗಡಿಯಿಂದ ಐದು ರುಪಾಯಿ ತೆಗೆದುಕೊಂಡು ಹೋಗುತ್ತಿದ್ದೆವು. ಅಂಗಡಿಯಾತ ಲೆಕ್ಕದ ಪುಸ್ತಕದಲ್ಲಿ ಸಿನಿಮಾ ಎಂದೇ ಬರೆಯುತ್ತಿದ್ದ. ತಿಂಗಳ ಕೊನೆಗೆ ಲೆಕ್ಕ ನೋಡಿದರೆ ತೊಗರಿಬೇಳೆ ಐದು ರುಪಾಯಿ, ಅಕ್ಕಿ ಹತ್ತು ರುಪಾಯಿ, ಸಿನಿಮಾ ಐದು ರುಪಾಯಿ ಎಂದು ಬರೆದಿರುತ್ತಿತ್ತು. ನಮಗೆ ಅಕ್ಕಿ ಬೇಳೆಯ ಹಾಗೆ ಸಿನಿಮಾ ಕೂಡ ದಿನಸಿ ಅಂಗಡಿಯಲ್ಲಿ ಸಿಗುತ್ತಿತ್ತು ಎಂದು ಜಯಂತ್‌ ತಮಾಷೆ ಮಾಡಿದರು.

ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ ಪ್ರೇಮಿಗಳಿಗೆ ಪ್ರೇಮ ಪತ್ರ ಬರೆದುಕೊಡುತ್ತಿದ್ದೆ. ಪ್ರತಿಯೊಬ್ಬರಿಗೂ ಬೇರೆ ಬೇರೆ ಶೈಲಿಯ ಪ್ರೇಮಪತ್ರ ಬರೆದುಕೊಡಬೇಕಾಗಿತ್ತು. ಇಲ್ಲದೇ ಹೋದರೆ ಒಬ್ಬನೇ ಬರೆದಿದ್ದಾನೆಂದು ಅನುಮಾನ ಬರುತ್ತಿತ್ತು. ಹೀಗೆ ವಿವಿಧ ಶೈಲಿಯಲ್ಲಿ ಪ್ರೇಮಪತ್ರ ಬರೆದದ್ದು ಸಿನಿಮಾಕ್ಕೆ ಪ್ರೇಮಗೀತೆಗಳನ್ನು ಬರೆಯಲು ಸ್ಪೂರ್ತಿಯಾಯಿತು ಎಂದು ತಾರುಣ್ಯದ ದಿನಗಳನ್ನು ಕಾಯ್ಕಿಣಿ ಮೆಲುಕು ಹಾಕಿ ಸಭಿಕರನ್ನು ನಗಿಸಿದರು.

ಜೈಪುರದಲ್ಲಿರುವ ಬಹುತೇಕ ಕನ್ನಡಿಗರು ಜಯಂತ್‌ ಕಾಯ್ಕಿಣಿ ಮಾತುಕತೆ ಕೇಳಲು ನೆರೆದಿದ್ದರು. ಅನೇಕರು ಕನ್ನಡದಲ್ಲೇ ಪ್ರಶ್ನೆಗಳನ್ನೂ ಕೇಳಿದರು. ಜಯಂತ್‌ ಕೂಡ ಕನ್ನಡದಲ್ಲಿಯೇ ಮಾತು ಆರಂಭಿಸಿದರು. ಮೂರು ದಿನಗಳ ಕಾಲ ಇಂಗ್ಲಿಷ್‌ ಮತ್ತು ಹಿಂದಿ ಲೇಖಕರ ಮಾತುಕತೆಯಲ್ಲೇ ಮೆರೆದ ಜೈಪುರ ಸಾಹಿತ್ಯೋತ್ಸವಕ್ಕೆ ಕನ್ನಡದ ಸಿಂಚನವಾಗಿದ್ದು ಕನ್ನಡಿಗರನ್ನು ಸಂತೋಷಗೊಳಿಸಿತು.

ವರದಿ : ಜೋಗಿ

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!