ವನ್ಯ ಜೀವಿಗಳ ಸಾವಿನ ತನಿಖೆಗೆ ಲ್ಯಾಬ್‌

By Web DeskFirst Published Jul 2, 2019, 9:21 AM IST
Highlights

ಅರಣ್ಯ ಪ್ರದೇಶ, ವನ್ಯ ಜೀವಿಧಾಮ ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ವನ್ಯಜೀವಿಗಳು ಸಾವನ್ನಪ್ಪುತ್ತಿವೆ. ಸಾವಿಗೆ ನಿಖರ ಕಾರಣ ಪತ್ತೆ ಮಾಡಲು ಪ್ರತ್ಯೇಕ ವಿಧಿ ವಿಜ್ಞಾನ ಪ್ರಯೋಗಾಲಯ ಆರಂಭಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಬೆಂಗಳೂರು [ಜು.2] :  ರಾಜ್ಯದ ವಿವಿಧ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳ ಸಾವಿಗೆ ನಿಖರ ಕಾರಣ ಪತ್ತೆ ಮಾಡಲು ಪ್ರತ್ಯೇಕ ವಿಧಿ ವಿಜ್ಞಾನ ಪ್ರಯೋಗಾಲಯ ಆರಂಭಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಅರಣ್ಯ ಪ್ರದೇಶ, ವನ್ಯ ಜೀವಿಧಾಮ ಹಾಗೂ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ವಿವಿಧ ರೀತಿಯಲ್ಲಿ ವನ್ಯಜೀವಿಗಳು ಸಾವನ್ನಪ್ಪುತ್ತಿವೆ. ಪ್ರಮುಖವಾಗಿ ವಿಷಪ್ರಾಶನ, ಕಾಯಿಲೆ, ಹತ್ಯೆ ಮುಂತಾದ ಕಾರಣಗಳಿಂದ ಪ್ರಾಣಿಗಳು ಸಾಯುತ್ತಿವೆ. ಪ್ರಾಣಿಗಳು ಸತ್ತ ಎಷ್ಟೋ ದಿನ ಇಲ್ಲವೇ ತಿಂಗಳ ನಂತರ ಅದರ ಅವಶೇಷಗಳು ಪತ್ತೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸಾವಿಗೆ ನಿರ್ದಿಷ್ಟಕಾರಣಗಳನ್ನು ಪತ್ತೆ ಹಚ್ಚಲು ಕಷ್ಟಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಾವಿಗೆ ಕಾರಣವಾದ ಅಂಶಗಳನ್ನು ತಿಳಿದುಕೊಳ್ಳಲು ಪ್ರತ್ಯೇಕ ಪ್ರಯೋಗಾಲಯ ಪ್ರಾರಂಭಿಸಲು ಇಲಾಖೆ ನಿರ್ಧರಿಸಿದೆ.

ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ವನ್ಯ ಜೀವಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ಅವುಗಳ ಸಾಯುವ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಕೆಲವು ಪ್ರಕರಣಗಳು ನೈಸರ್ಗಿಕವಾಗಿದ್ದರೆ, ಹಲವು ಪ್ರಕರಣಗಳಲ್ಲಿ ಕಾಡುಗಳ್ಳರ ಗುರಿಗೆ ವನ್ಯಜೀವಿಗಳು ಬಲಿಯಾಗುತ್ತಿವೆ. ಈ ರೀತಿಯ ಅಪರಾಧ ಕೃತ್ಯಗಳಲ್ಲಿ ತಪ್ಪಿ ತಸ್ಥರನ್ನು ಶಿಕ್ಷೆಗೆ ಗುರಿ ಪಡಿಸಲು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಅತ್ಯಂತ ಮುಖ್ಯ. ಆದರೆ, ಪ್ರಸ್ತುತ ಸಕಾಲದಲ್ಲಿ ವರದಿ ಲಭ್ಯವಾಗುತ್ತಿಲ್ಲ.

ಅರಣ್ಯ ಅಪರಾಧ ಕೃತ್ಯಗಳಲ್ಲಿ 90 ದಿನಗಳಲ್ಲಿ ಆರೋಪ ಪಟ್ಟಿಸಲ್ಲಿಸಬೇಕು ಎಂಬ ನಿಯಮವಿದೆ. ಕೆಲ ಪ್ರಕರಣಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಲು 90 ದಿನಕ್ಕೂ ಹೆಚ್ಚು ದಿನ ಬೇಕಾಗುತ್ತದೆ. ಇದರಿಂದ ನ್ಯಾಯಾಲಯದಲ್ಲಿ ಅರಣ್ಯ ಇಲಾಖೆಗೆ ಹಿನ್ನಡೆಯಾಗುತ್ತಿದ್ದು, ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಅರಣ್ಯ ಇಲಾಖೆಗೆ ಪ್ರತ್ಯೇಕ ಪ್ರಯೋಗಾಲಯ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಖರತೆ ಕಡಿಮೆ :  ಅರಣ್ಯ ಪ್ರದೇಶಗಳಲ್ಲಿ ಸಾವನ್ನಪ್ಪುವ ಕೆಲ ಪ್ರಕರಣಗಳನ್ನು ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಆದರೆ, ಈ ಕೇಂದ್ರದಲ್ಲಿನ ವರದಿ ಅಸ್ಪಷ್ಟವಾಗಿರುತ್ತದೆ. ಜೊತೆಗೆ ನಿಖರತೆ ಕಡಿಮೆ ಇರುತ್ತದೆ. ಪರಿಣಾಮ ಸೂಕ್ತ ಸಾಕ್ಷ್ಯವನ್ನಾಗಿ ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ, ಕೆಲ ಪ್ರಕರಣಗಳಲ್ಲಿ ಬೆಂಗಳೂರಿನ ಕೇಂದ್ರದಲ್ಲಿನ ವರದಿಯನ್ನು ಹೈದರಾಬಾದ್‌ ಹಾಗೂ ಡೆಹರಾಡೂನ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಅರಣ್ಯಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ವಿಧಿ ವಿಜ್ಞಾನ ಪ್ರಯೋಗಾಲಯ ಪ್ರಾರಂಭಿಸುವ ಸಂಬಂಧ ಈಗಾಗಲೇ ಚರ್ಚೆ ನಡೆಸಲಾಗಿದೆ. ಮತ್ತೊಂದು ಸುತ್ತಿನ ಚರ್ಚೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿದೆ. ಸರ್ಕಾರದಿಂದ ಅನುಮತಿ ಸಿಕ್ಕಲ್ಲಿ ಪ್ರಯೋಗಾಲಯ ಪ್ರಾರಂಭಿಸಲಾಗುವುದು.

- ಸಂಜಯ್‌ ಮೋಹನ್‌, ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ)

ವರದಿಗೆ ಕಾಯುತ್ತಿರುವ ಪ್ರಕರಣಗಳು

ಮಲೇಮಹದೇಶ್ವರ ವನ್ಯಜೀವಿಧಾಮ -5

ಭದ್ರಾ ಹುಲಿ ಸಂರಕ್ಷಿತ ಪ್ರದೇಶ - 2

ಬಂಡೀಪುರದ ಹುಲಿ ಯೋಜನೆ - 2

ರಾಣೆಬೆನ್ನೂರು ವನ್ಯಜೀವಿ ಉಪವಿಭಾಗ -2

ದಾಂಡೇಲಿಯ ಕಾಳಿ ಹುಲಿ ಸಂರಕ್ಷಿತ ಪ್ರದೇಶ - 1

click me!