ವಾರ್ಷಿಕ ಲೆಕ್ಕದಲ್ಲಿ ಹಲ್ವಾ ಕಾರ್ಯಕ್ರಮ, ಲೆದರ್ ಬ್ರೀಫ್‌ಕೇಸ್, ಏನೀ ಸಂಪ್ರದಾಯ, ಪದ್ಧತಿ?

By Nirupama K SFirst Published Jan 31, 2018, 7:56 PM IST
Highlights

ತನ್ನದೇ ಸಂಪ್ರಾದಾಯಗಳನ್ನು ಹೊಂದಿರುವ ಬಜೆಟ್ ಪ್ರಕ್ರಿಯೆ ಈ ವರ್ಷ ತುಸು ವಿಭಿನ್ನವಾಗಿರಲಿದೆ. ವಿತ್ತ ಸಚಿವ ಅರುಮ್ ಜೇಟ್ಲಿ ಅವರು ಮಂಡಿಸುತ್ತಿರುವ ಈ ಬಜೆಟ್‌ನಲ್ಲಿ ಹಲವು ಬದಲಾವಣೆಗಳಾಗಿವೆ.  ಹೇಗೆ, ಏನು, ಇಲ್ಲಿದೆ ಸಣ್ಣ ಝಲಕ್....

ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಎಂದೇ ಹೇಳಲಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಯಾದ ನಂತರ ಇದೇ ಮೊದಲ ಬಾರಿಗೆ ಕೇಂದ್ರ ಆಯವ್ಯಯ ಮಂಡನೆಯಾಗುತ್ತಿದ್ದು, ಎನ್‌ಡಿಎ ಸರಕಾರದ ಕಡೆಯ  ಬಜೆಟ್ ಸಹ ಹೌದು. ತನ್ನದೇ ಸಂಪ್ರಾದಾಯಗಳನ್ನು ಹೊಂದಿರುವ ಬಜೆಟ್ ಪ್ರಕ್ರಿಯೆ ಈ ವರ್ಷ ತುಸು ವಿಭಿನ್ನವಾಗಿರಲಿದೆ. ವಿತ್ತ ಸಚಿವ ಅರುಮ್ ಜೇಟ್ಲಿ ಅವರು ಮಂಡಿಸುತ್ತಿರುವ ಈ ಬಜೆಟ್‌ನಲ್ಲಿ ಹಲವು ಬದಲಾವಣೆಗಳಾಗಿವೆ.  ಹೇಗೆ, ಏನು, ಇಲ್ಲಿದೆ ಸಣ್ಣ ಝಲಕ್....

- ವಿತ್ತ ಸಚಿವರು ಸೇರಿ ಹಲವು ಉನ್ನತಾಧಿಕಾರಿಗಳು ಹಲ್ವಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಶುಭ ಸಮಾರಂಭ ನಡೆಯುವ ಮುನ್ನ ಬಾಯಿಯನ್ನು ಸಿಹಿ ಮಾಡಿಕೊಳ್ಳೋ ಪದ್ಧತಿ, ಮುಂಚಿನಿಂದಲೂ ಇದೆ. ಈ ಕಾರ್ಯಕ್ರಮವಾದ ನಂತರ ಬಜೆಟ್‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಅಧಿಕಾರಿಯನ್ನೂ ಯಾವುದೇ ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕವಿಲ್ಲದೇ, ನಾರ್ಥ್ ಬ್ಲಾಕ್‌ನ ಬೇಸ್‌ಮೆಂಟ್‌ನಲ್ಲಿ ಇರಿಸಲಾಗುತ್ತದೆ.  ಯಾವುದೇ ಮಾಹಿತಿ ಸೋರಿಕೆಯಾಗಬಾರದೆಂದು ಈ ರೀತಿ ಮಾಡಲಾಗುತ್ತದೆ. ವಿತ್ತ ಸಚಿವರು ದೇಶದ ಜನತೆ ಮುಂದೆ ಬಜೆಟ್ ಮಂಡಿಸಿದ ನಂತರವೇ ಅವರೆಲ್ಲ ಹೊರ ಬರುತ್ತಾರೆ.

- ಬಜೆಟ್ ಎಂದ ಕೂಡಲೇ ವಿತ್ತ ಸಚಿವರು ಕೈಯಲ್ಲಿ ಲೆದರ್ ಬ್ರೀಫ್‌ಕೇಸ್ ಇಟ್ಟುಕೊಳ್ಳುವುದನ್ನು ಗಮನಿಸಿರುತ್ತೀರಿ. ಬ್ರಿಟಿಷರ ಕಾಲದಿಂದಲೂ ಈ ಪದ್ಧತಿ ಜಾರಿಗೆ ಬಂದಿದ್ದು, ಬಜೆಟ್ ಮುನ್ನವೇ ದಾಖಲೆ ಸೋರಿಕೆಯಾಗದಂತೆ ಕಾಪಾಡಿಕೊಳ್ಳಲು ಇಂಥ ಬ್ರೀಫ್‌ಕೇಸನ್ನು ಬಳಸಲಾಗುತ್ತದೆ. 

-2017ರವರೆಗೂ ರೈಲ್ವೆ ಬಜೆಟ್‌ ಅನ್ನು ಪ್ರತ್ಯೇಕವಾಗಿಯೇ ಮಂಡಿಸಲಾಗುತ್ತಿತ್ತು. ಆದರೆ, ಕಳೆದ ವರ್ಷ ಸಾಮಾನ್ಯ ಆಯವ್ಯಯದೊಂದಿಗೆ ರೈಲ್ವೆ ಬಜೆಟ್‌ ಅನ್ನೂ ಸೇರಿಸಲಾಯಿತು. ಆ ಮೂಲಕ 92 ವರ್ಷದ ಹಳೆ ಪದ್ಧತಿಗೆ ತಿಲಾಂಜಲಿ ಇಡಲಾಯಿತು.

- 2017ರಿಂದ ಫೆ.1ರಂದು ಬಜೆಟ್ ಮಂಡಿಸುವ ಪದ್ಧತಿ ಆರಂಭವಾಯಿತು. ಅದಕ್ಕೂ ಮುನ್ನ ಫೆಬ್ರವರಿ ಕಡೆಯ ದಿನದಂದು ಆಯವ್ಯಯ ಮಂಡನೆಯಾಗುತ್ತಿತ್ತು. ಹೊಸ ವಿತ್ತೀಯ ವರ್ಷದ ಆರಂಭದಿಂದಲೇ ನಿಗದಿಯಾದ ನಿಧಿ ಬಳಕೆಯಾಗಲೆಂದು ಹೊಸ ಪದ್ಧತಿಗೆ ಮೋದಿ ನೇತೃತ್ವದ ಸರಕಾರ ನಾಂದಿ ಹಾಡಿತು.

- ಭಾರತೀಯ ವಿತ್ತ ಸಚಿವಾಲಯದಲ್ಲಿ ಆರ್ಥಿಕ ವ್ಯವಹಾರ, ವೆಚ್ಚ ಇಲಾಖೆ, ಆದಾಯ ಇಲಾಖೆ, ವಿತ್ತೀಯ ಸೇವಾ ಇಲಾಖೆ, ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಎಂಬ ಪ್ರತ್ಯೇಕ ವಿಭಾಗಗಳಿವೆ. ಈ ಎಲ್ಲ ಇಲಾಖಾ ಅಧಿಕಾರಿಗಳು ಸೇರಿ ಬಜೆಟ್ ಅನ್ನು ಸಿದ್ಧಪಡಿಸುತ್ತಾರೆ. 

- ಏಪ್ರಿಲ್‌ನಿಂದ ಮಾರ್ಚ್‌ವರೆಗೆ 12 ತಿಂಗಳಿಗೆ ಸರಿ ಹೋಗುವಂತೆ ಈ ಬಜೆಟ್ ಮಂಡಿಸಲಾಗುತ್ತದೆ. ಅಕ್ಟೋಬರ್‌ ಅಥವಾ ನವೆಂಬರ್‌ನಲ್ಲಿಯೇ ಈ ಬಜೆಟ್ ಸುತ್ತೋಲೆಯನ್ನು ಕಳುಹಿಸಲಾಗುತ್ತದೆ. ಆಗಿನಿಂದಲೇ ಬಜೆಟ್ ಪ್ರಕ್ರಿಯೆ ಆರಂಭಗೊಳ್ಳುತ್ತದೆ.

- ಪಾರ್ಟ್ ಎ ಮತ್ತು ಬಿ ಎಂಬ ಎರಡು ಕಾರ್ಯಕ್ರಮಗಳೊಂದಿಗೆ ವಿತ್ತ ಸಚಿವರು ಬಜೆಟ್ ಭಾಷಣವನ್ನು ಆರಂಭಿಸುತ್ತಾರೆ. ಪಾರ್ಟ್ 'ಎ'ನಲ್ಲಿ ದೇಶದ ಸಾಮಾನ್ಯ ಆರ್ಥಿಕ ಸಮೀಕ್ಷೆ ಮತ್ತು ನೀತಿ ನಿರ್ಧಾರಗಳಿದ್ದರೆ, ಪಾರ್ಟ್ 'ಬಿ'ಯಲ್ಲಿ ತೆರಿಗೆ ಶಿಫಾರಸುಗಳಿರುತ್ತವೆ.

ಹೇಗಿರುತ್ತೆ ಮೋದಿ ನೀಡೋ ಲೆಕ್ಕ, ಕ್ಷಣ ಕ್ಷಣದ ಮಾಹಿತಿಗೆ ಸುವರ್ಣ ನ್ಯೂಸ್ ವೆಬ್‌ಸೈಟ್, ಫೇಸ್‌ಬುಕ್, ಟ್ವೀಟರ್ ಫಾಲೋ ಮಾಡಿ..
 

click me!