ಕೂಲಿಯ ಮಗ ಕೋಟ್ಯಧಿಪತಿಯಾದ ಕಥೆ

By Suvarna Web DeskFirst Published Jan 13, 2018, 12:44 PM IST
Highlights

ಕೇರಳದ ವಯನಾಡು ಮೂಲದ ಅನಕ್ಷರಸ್ಥ ಕೂಲಿ ಕೆಲಸಗಾರನ ಮಗನೀತ - ಕೋಟ್ಯಧಿಪತಿಯಾದ ಕಥೆ

ಕೇರಳ (ಜ.13): ಕೇರಳದ ವಯನಾಡು ಮೂಲದ ಅನಕ್ಷರಸ್ಥ ಕೂಲಿ ಕೆಲಸಗಾರನ ಮಗನೀತ. ಆರಂಭದಲ್ಲಿ ದಡ್ಡ ಅಂತ ಕರೆಸಿಕೊಂಡಿದ್ದ. ಮೇಷ್ಟ್ರು ಕಣ್ತೆರೆಸಿದರು, ಹುಡುಗ ಬೆಳೆದ, ಐಐಎಂ ಪದವೀಧರನಾಗಿ ಪ್ರತಿಷ್ಠಿತ ಕಂಪೆನಿಗಳಲ್ಲಿ ದುಡಿದು ಲಕ್ಷಾಂತರ ರು.ಸಂಬಳ ಪಡೆಯುತ್ತಿದ್ದ. ಇದ್ದಕ್ಕಿದ್ದ ಇದು ತನ್ನ ಕೆಲಸ ಅಲ್ಲ ಅನಿಸ್ತು. ಬಾಲ್ಯ, ಬಡತನ, ತನ್ನೂರ ನೆನಪಾಯ್ತು. ತಾನೊಂದು ಸ್ವತಂತ್ರ ಉದ್ಯಮ ಮಾಡಿ ಬಡತನದಲ್ಲಿರುವ ತನ್ನೂರಿನ ಜನಕ್ಕೆ ಉದ್ಯೋಗ ಕೊಡಬೇಕು ಎಂಬ ಯೋಚನೆ ರಾತ್ರಿಹಗಲು ಬಿಡದೆ ಕಾಡತೊಡಗಿತು.

ಕಂಪೆನಿಯ ಅತ್ಯುತ್ತಮ ಕೆಲಸಗಾರ ಎನಿಸಿಕೊಂಡಾತ ಒನ್ ಫೈನ್ ಮಾರ್ನಿಂಗ್ ಕೆಲಸಕ್ಕೆ ವಿದಾಯ ಹೇಳಿದ. ತನ್ನ ನಾಲ್ವರು ಕಸಿನ್ ಗಳೊಡಗೂಡಿ ಐಡಿ ಫ್ರೆಶ್ ಸ್ಥಾಪಿಸಿದ. ಬೆಂಗಳೂರಿನಲ್ಲಿ ದೋಸೆ, ಇಡ್ಲಿ ಹಿಟ್ಟನ್ನು ತಯಾರಿಸಿ ಪ್ಯಾಕೆಟ್ ಮಾಡಿ ಮಾರುವ ಉದ್ಯಮ ಪುಟ್ಟ ಗೂಡಿನಿಂದ ಶುರುವಾಯ್ತು. ಇವರು ತಯಾರಿಸುತ್ತಿದ್ದ ಹಿಟ್ಟಿನ ರುಚಿಗೆ ಬೆಂಗಳೂರಿನ ಜನ ಮಾರುಹೋದರು. ಹೀಗೆ ಶುರುವಾದ ಐಡಿ ಫ್ರೆಶ್‌ಗೆ ಆಗ ಹಾಕಿದ್ದು 25000 ರು. ಬಂಡವಾಳ. ಇಂದು ಅದು 150 ಕೋಟಿಗಳನ್ನು ಮೀರಿ ಬೆಳೆದಿದೆ.

2020ಕ್ಕೆ 1000 ಕೋಟಿ ವಹಿವಾಟಿನ ನಿರೀಕ್ಷೆಯಲ್ಲಿರುವ ಪಿ.ಸಿ ಮುಸ್ತಾಫ ಅವರ ಲೈಫ್‌ಸ್ಟೋರಿ ಇಲ್ಲಿದೆ.

ಕೇರಳದ ವಯನಾಡು ಸಮೀಪ ಕಲ್ಪಟ್ಟ ಎಂಬ ಹಳ್ಳಿ. ಅದೊಂದು ಕುಗ್ರಾಮ. ಐಡಿ ಫ್ರೆಶ್ ಸ್ಥಾಪಕ ಮುಸ್ತಾಫ ಹುಟ್ಟಿದ್ದು, ಬೆಳೆದದ್ದು ಇದೇ ಹಳ್ಳಿಯಲ್ಲಿ. ಊರಿಗೊಂದು ಸರ್ಕಾರಿ ಪ್ರಾಥಮಿಕ ಶಾಲೆ. ಮುಸ್ತಾಫ ನಿತ್ಯ ನಾಲ್ಕು ಕಿಲೋಮೀಟರ್ ನಡೆದು ಶಾಲೆಗೆ ಬರಬೇಕಿತ್ತು. ಹತ್ತಿರದಲ್ಲೆಲ್ಲೂ ಹೈಸ್ಕೂಲ್ ಇಲ್ಲದ ಕಾರಣ ಪ್ರಾಥಮಿಕ ಹಂತಕ್ಕೇ ಈ ಊರಿನ ಮಕ್ಕಳ ವಿದ್ಯಾಭ್ಯಾಸ ಮುಕ್ತಾಯವಾಗುತ್ತಿತ್ತು.

ಮುಸ್ತಾಫ ತಂದೆ ಅಹ್ಮದ್ ಇದೇ ಶಾಲೆಯಲ್ಲಿ ನಾಲ್ಕನೇ ಕ್ಲಾಸ್‌ವರೆಗೂ ಓದಿ ನಂತರ ಕಾಫಿ ಪ್ಲಾಂಟೇಶನ್‌ನಲ್ಲಿ ಕೂಲಿ ಮಾಡುತ್ತಿದ್ದರು. ಅಮ್ಮ ಫಾತಿಮಾ ಅನಕ್ಷರಸ್ಥೆ. 6ನೇ ಕ್ಲಾಸ್ ಫೇಲು!:  ಮುಸ್ತಾಫಾಗೆ ಕಲಿಕೆಯಲ್ಲಿ ಆಸಕ್ತಿ ಇರಲಿಲ್ಲ.

ಶಾಲೆಯ ನಂತರ, ವಾರಾಂತ್ಯದಲ್ಲಿ ಅಪ್ಪನಿಗೆ ಸಹಾಯ ಮಾಡಲು ಈತನೂ ದಿನಗೂಲಿ ಮಾಡುತ್ತಿದ್ದ. ಮುಸ್ತಾಫಗೆ ಲೆಕ್ಕ ಒಂದು ಬಿಟ್ಟರೆ ಉಳಿದದ್ದರಲ್ಲೆಲ್ಲ ಫೇಲ್‌ಮಾರ್ಕ್ಸ್. ಲೆಕ್ಕದಲ್ಲಿ ಮಾತ್ರ ಬುದ್ಧಿವಂತನಾಗಿದ್ದ. ಹೀಗೆ 6ನೇ ಕ್ಲಾಸ್ ಫೇಲಾಯ್ತು, ಮುಂದೆ ಸ್ಕೂಲಿಗೆ ಹೋಗುವ ಆಸೆಯೂ ಕಮರಿತು. ‘ತನ್ನೊಂದಿಗೆ ದಿನಗೂಲಿಗೆ ನನ್ನನ್ನು ಕರೆದೊಯ್ಯಲು ತಂದೆ ಉತ್ಸುಕರಾಗಿದ್ದರು. ಆದರೆ ನಮ್ಮ ಗಣಿತದ ಮೇಸ್ಟ್ರು ಮ್ಯಾಥ್ಯೂಸಾರ್ ಗೆ ನಾನು ಶಾಲೆ ಬಿಡೋದು ಇಷ್ಟ ಇರಲಿಲ್ಲ. ಅವರು ನಿನಗೆ ಕೂಲಿಯಾ ಗೋದು ಇಷ್ಟನೋ ಅಥವಾ ಟೀಚರ್ ಆಗೋದಿಷ್ಟನೋ ಅಂತ ಕೇಳಿದ್ರು. ನಾನಂದೆ, ನಂಗೆ ನಿಮ್ಮ ಹಾಗೆ ಟೀಚರ್ ಆಗ್ಬೇಕು’ ಎಂದ ಹುಡುಗ ಮುಸ್ತಫ ಗುರುವಿಗೆ ಕೊಟ್ಟ ಮಾತು ಮರೆಯಲಿಲ್ಲ.

ಫೇಲಾದ ಹುಡುಗ ಟಾಪರ್ ಆದ!: ಮ್ಯಾಥ್ಯೂ ಸಾರ್ ಸಹಾಯದಿಂದ ಹುಡುಗ ಮೇಲೆ ಬಿದ್ದ. ಏಳನೇ ಕ್ಲಾಸ್‌ನಲ್ಲಿ ಟಾಪರ್ ಆದ. ಆ ಬಳಿಕ ಮುಸ್ತಾಫ ಎಂದೂ ಹಿಂತಿರುಗಿ ನೋಡಲಿಲ್ಲ. ಕಷ್ಟದಿಂದ ಹೈಸ್ಕೂಲ್ ಸೇರಿ ಅಲ್ಲೂ ಪ್ರತಿಭಾವಂತ ಎನಿಸಿಕೊಂಡ. ಆದರೆ 10 ಕ್ಲಾಸ್ ಮುಗಿಯುತ್ತಿದ್ದ ಹಾಗೆ ಮತ್ತೆ ಸಮಸ್ಯೆ. ಕಾಲೇಜಿಗೆ ಕ್ಯಾಲಿಕಟ್‌ಗೆ ಹೋಗಬೇಕಿತ್ತು. ಆದರೆ ಬಡ ಕೂಲಿಯಾಗಿದ್ದ ಅವರ ಬಳಿ ಅಷ್ಟೊಂದು ಹಣ ಇರಲಿಲ್ಲ. ಅಪ್ಪನ ಗೆಳೆಯನ ಸಹಾಯದಿಂದ ಕ್ಯಾಲಿಕಟ್‌ನ ಫಾರೂಕ್ ಕಾಲೇಜ್‌ಗೆ ಮುಸ್ತಾಫನಿಗೆ ಪ್ರವೇಶ ಸಿಕ್ಕಿತು, ಊಟ, ವಸತಿ ವ್ಯವಸ್ಥೆಯೂ ಆಯ್ತು. ‘ಆದರೆ ಹಳ್ಳಿಯ ಬಡ ವಿದ್ಯಾರ್ಥಿಯನ್ನು ಸಿಟಿ ಹುಡುಗರು ಕೇವಲವಾಗಿ ನೋಡುತ್ತಿದ್ದರು.

ಓದಬೇಕು ಅನ್ನುವ ತುಡಿತಕ್ಕೆ ಅದನ್ನೆಲ್ಲ ಸಹಿಸಿಕೊಳ್ಳುತ್ತಿದ್ದೆ. ಹಳ್ಳಿಯಿಂದ ಬಂದ ಕಾರಣ ನನಗೆ ಇಂಗ್ಲೀಷ್ ಬರುತ್ತಿರಲಿಲ್ಲ. ಅದು ಅಂಗವಿಕಲತೆಯಂತೆ ಕಾಡುತ್ತಿತ್ತು. ಎಲ್ಲ ಪಾಠಗಳೂ ಇಂಗ್ಲಿಷ್‌ನಲ್ಲೇ ನಡೆಯುತ್ತಿದ್ದವು. ಗೆಳೆಯನೊಬ್ಬ ಇದನ್ನು ನನಗೆ ಅನುವಾದಿಸಿ ಹೇಳುತ್ತಿದ್ದ. ಬಹಳ ಶ್ರಮಪಟ್ಟು ಓದಿದ ಕಾರಣ ಉತ್ತಮ ಅಂಕಗಳು ಬಂದವು’ ಎನ್ನುತ್ತಾರೆ ಮುಸ್ತಫಾ. ನಂತರ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ರಾಜ್ಯಕ್ಕೇ 63ನೇ ರ್ಯಾಂಕ್ ಬಂತು.

ಅಮೆರಿಕಾದಲ್ಲಿ ಮೊದಲ ಟ್ರೈನಿಂಗ್ : ಬೆಂಗಳೂರು, ನಂತರ ಐರ್ಲೆಂಡ್, ದುಬೈ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಉದ್ಯೋಗ ಮಾಡಿದ್ದಾಯ್ತು. ಎಷ್ಟೇ ದುಡಿದರೂಒಳಗೊಳಗೇ ಕೊರಗು, ಕಾಡುವ ತನ್ನೂರ ನೆನಪು.‘ಏಳನೇ ಕ್ಲಾಸ್‌ಗೇ ಶಾಲೆ ತೊರೆಯುವ ನಮ್ಮೂರಿನ ಹುಡುಗರು ಪದೇ ಪದೇ ಕಣ್ಮುಂದೆ ಬರುತ್ತಿದ್ದರು. ಅವರ ಬಡತನ, ನಿರುದ್ಯೋಗ ನೆನೆದು ಸಂಕಟವಾಗುತ್ತಿತ್ತು.

ಇಷ್ಟೆಲ್ಲ ಓದಿಯೂ ತಾನು ಅವರಿಗೆ ಏನೂ ಸಹಾಯ ಮಾಡಲಾಗುತ್ತಿಲ್ಲವಲ್ಲ ಅನ್ನುವ ಕೊರಗಿತ್ತು’ ಎನ್ನುವ ಮುಸ್ತಾಫ ಮುಂದೆ ಆ ಕೆಲಸವನ್ನು ತೊರೆದು ಭಾರತಕ್ಕೆ ಹಿಂತಿರುಗಲು ನಿರ್ಧರಿಸಿದರು. ಬ್ಯುಸಿನೆಸ್‌ನಲ್ಲಿ ಓದು ಮುಂದುವರಿಸಿದರೆ ತನ್ನ ಕನಸು ನನಸಾಗಬಹುದು ಅನಿಸಿತು. ಕೆಲಸ ತೊರೆದು ದೇಶಕ್ಕೆ ಮರಳಿದ್ದು ಅವರ ಬಡ ಕುಟುಂಬಕ್ಕೆ ದೊಡ್ಡ ಆಘಾತ. ಆಗ ಇವರ ಬೆಂಬಲಕ್ಕೆ ನಿಂತಿದ್ದು ಚಿಕ್ಕಮ್ಮನ ಮಕ್ಕಳು.

ಬ್ಯುಸಿನೆಸ್ ಮಾಡಲು ನಿರ್ಧರಿಸಿದಾಗ ಎಂಬಿಎ ಓದಬೇಕು ಅಂತಾಯ್ತು. ಕ್ಯಾಟ್ ಎಕ್ಸಾಮ್ ಬರೆದು ಐಐಎಂ ಸೇರಿದರು. ಇದರ ಜೊತೆಗೇ ಹೊಸ ಬ್ಯುಸಿನೆಸ್ ಬಗ್ಗೆ ಸಹೋದರರ ಜೊತೆಗೆ ಚರ್ಚೆಯಾಗುತ್ತಿತ್ತು. ಸಂಶುದ್ದೀನ್ ಎಂಬ ಇವರ ಕಸಿನ್‌ಗೆ ಇಡ್ಲಿ ಹಿಟ್ಟನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ರಬ್ಬರ್‌ಬ್ಯಾಂಡ್ ನಲ್ಲಿ ಕಟ್ಟಿ ಶಾಪ್‌ಗಳಲ್ಲಿ ಮಾರೋದು ಕಣ್ಣಿಗೆ ಬಿತ್ತು. ತಾವೂ ಇದನ್ನು ಶುರು ಮಾಡಬಹುದು ಅನಿಸಿತ್ತು. ಮುಸ್ತಫಾ ಐಡಿಯಾ ಹಿಡಿಸಿತು. ಅವರು 25000 ಬಂಡವಾಳ ಹೂಡಿ ಹಿಟ್ಟು ತಯಾರಿಸಲು ಮುಂದಾದರು. ನಾಲ್ಕು ಜನ ಚಿಕ್ಕಮ್ಮನ ಮಕ್ಕಳು ಇದರಲ್ಲಿ ಕೈಜೋಡಿಸಿದರು. ಅದು 2005ರ ಮಧ್ಯಭಾಗ. ಚಿಕ್ಕ ಜಾಗದಲ್ಲಿ 2 ಗ್ರೈಂಡರ್, 1 ಮಿಕ್ಸರ್ ಮತ್ತು ಒಂದು ಸೀಲಿಂಗ್ ಮೆಶಿನ್‌ನೊಂದಿಗೆ ಹಿಟ್ಟಿನ ತಯಾರಿಕೆ ಶುರುವಾಯ್ತು!

ಐಡಿ ಎಂಬ ಐಡೆಂಟಿಟಿ!: ಕಂಪೆನಿಗೆ ಹೊಸ ಹೆಸರೇನೋ ತೋಚಲಿಲ್ಲ.‘ಐಡಿ’ ಅನ್ನೋದೆ ಬೆಸ್ಟ್ ಅನಿಸಿತು. ಐಡಿ ಅಂದರೆ ಇಡ್ಲಿ, ದೋಸಾ ಅಂತ. ‘ಐಡಿ ಫ್ರೆಶ್’ ಅನ್ನೋ ಹೆಸರಿನಲ್ಲಿ ಫ್ರೆಶ್ ಇಡ್ಲಿ, ದೋಸಾ ಹಿಟ್ಟು ಮಾರಾಟಕ್ಕೆ ಶುರುವಾಯ್ತು. ಆರಂಭದಲ್ಲಿ ಹತ್ತಿರದ 20 ಶಾಪ್‌ಗಳಲ್ಲಿ ‘ಐಡಿ ಪ್ರೆಶ್’ ಪ್ಯಾಕೆಟ್‌ಗಳು ಕಾಣಿಸಿಕೊಂಡವು. ಆರು ತಿಂಗಳೊಳಗೆ ದಿನಕ್ಕೆ 100 ಪ್ಯಾಕೆಟ್ ಸೇಲ್ ಮಾಡುವ ಗುರಿ ಇತ್ತು. ಆ ಹೊತ್ತಿಗೆ ಕೆಲಸಗಾರರು ಅಂತ ಯಾರೂ ಇರಲಿಲ್ಲ. ಮುಸ್ತಫಾ ಮತ್ತು ಸಹೋದರರೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದರು. ಆಗ ಶಾಪ್ ನವರು ಇವರ ಪ್ರಾಡಕ್ಟ್‌ಗಳನ್ನು ಇಟ್ಟುಕೊಳ್ಳಲು ಒಪ್ಪಲಿಲ್ಲ. ಆಗ ಅವರಿಗೆ ಸ್ಪೆಷಲ್ ಆಫರ್‌ಗಳನ್ನು ನೀಡಿ ‘ಐಡಿ ಫ್ರೆಶ್’ ಮಾರುವಂತೆ ಮಾಡಲು ಹರಸಾಹಸ ಪಡಬೇಕಾಯ್ತು.

ಮೊದಲ ದಿನದಿಂದಲೇ ಲಾಭ!: ಎಷ್ಟೇ ಕಷ್ಟಪಟ್ಟರೂ ‘ಐಡಿ ಪ್ರೆಶ್’ನ ರುಚಿಗೆ ಗ್ರಾಹಕರು ಮೊದಲ ದಿನದಿಂದಲೇ ಮಾರುಹೋದರು. ಆರಂಭದಲ್ಲಿ ಯಾರಿಗೂ ಸಂಬಳ ಇರಲಿಲ್ಲ. 500 ರು. ಬಾಡಿಗೆ, 200 ರುಪಾಯಿ ಅಡುಗೆ ಸಾಮಾನಿನ ಬೆಲೆ ಬಿಟ್ಟರೆ ಬೇರೆ ಖರ್ಚುಗಳಿರಲಿಲ್ಲ. ಬಂದ ಹಣ ಹೊಸ ಮೆಶಿನ್ ಖರೀದಿಗೆ ಹೋಯ್ತು.

ದಿನಕ್ಕೆ 100 ಪ್ಯಾಕೆಟ್‌ಗಳು ಮಾರಾಟವಾಗುತ್ತಿದ್ದ ಹಾಗೆ 6 ಲಕ್ಷ ರುಪಾಯಿ ಬಂಡವಾಳ ಹೂಡಲು ನಿರ್ಧರಿಸಿದರು. ಕಿಚನ್ ವಿಸ್ತಾರವಾಯಿತು. 15 ವೆಟ್ ಗ್ರೈಂಡರ್‌ಗಳು ಬಂದವು.2000 ಕೆಜಿ  ಸಾಮರ್ಥ್ಯದ 2000 ಪ್ಯಾಕೆಟ್‌ಗಳು ಮಾರುಕಟ್ಟೆಗೆ ಬಂದವು. ಇವರ ಊರಿನ ಐದು ಜನ ಕೆಲಸಗಾರರು ಸೇರ್ಪಡೆಗೊಂಡರು. ಹೊಸ ಸಿಇಒ ಮುಸ್ತಫಾ: ಎಂಬಿಎ ಪದವಿಯ ಬಳಿಕ ಕಂಪೆನಿಯ ಸಂಪೂರ್ಣ ಹಣಕಾಸಿನ ನಿರ್ವಹಣೆ ಮುಸ್ತಫಾ ನೋಡಿಕೊಳ್ಳಲಾರಂಭಿಸಿದರು. ಸಿಇಒ ಆಗಿ ತನ್ನದೇ ಸಂಸ್ಥೆಯಲ್ಲಿ ಅವರ ಕಾರ್ಯಾರಂಭ. ಕೇವಲ ಎರಡೇ ವರ್ಷಗಳಲ್ಲಿ 400  ಶಾಪ್‌ಗಳಲ್ಲಿ ದಿನಕ್ಕೆ 3500 ಪ್ಯಾಕೆಟ್ ಇಡ್ಲಿ, ದೋಸೆ ಹಿಟ್ಟು ಸೇಲಾಗುತ್ತಿತ್ತು. ಕೆಲಸಗಾರರ ಸಂಖ್ಯೆ 30ಕ್ಕೆ ಏರಿತ್ತು. ಐಡಿ ಫ್ರೆಶ್‌ಗೆ ಮಾರುಕಟ್ಟೆಯಲ್ಲಿ ಬೇಡಿಕೆ ಶುರುವಾಯ್ತು. ಕೈಗಾರಿಕಾ ಪ್ರದೇಶದಲ್ಲಿ ಐಡಿ ಫ್ರೆಶ್‌ನ ಪ್ಲಾಂಟ್ ಶುರುವಾಯ್ತು. ಅಮೆರಿಕಾದಿಂದ ಯಂತ್ರಗಳು ಬಂದವು. ಇಡ್ಲಿ, ದೋಸೆ ಹಿಟ್ಟಿಗೆ ಸೀಮಿತವಾಗಿದ್ದ ‘ಐಡಿ ಫ್ರೆಶ್’ ಪರಾಠ, ವಡೆ ಹಿಟ್ಟನ್ನೂ ಪ್ಯಾಕೆಟ್‌ಗಳಲ್ಲಿ ಮಾರಲಾರಂಭಿಸಿತು. ಇಷ್ಟಾದರೂ ಈ ಕಂಪೆನಿ ಹಿಟ್ಟಿಗೆ ಪ್ರಿಸರ್ವೇಟಿವ್ ಗಳನ್ನು ಸೇರಿಸುತ್ತಿರಲಿಲ್ಲ. 

ಮಾರುಕಟ್ಟೆ ವಿಸ್ತಾರವಾಯ್ತು!: ಬೆಂಗಳೂರಿನಲ್ಲಿ ಮಾತ್ರವಿದ್ದ ‘ಐಡಿ ಫ್ರೆಶ್’ ಉತ್ಪನ್ನಗಳು 2012ಕ್ಕೆ ಚೆನ್ನೈ, ಮಂಗಳೂರು, ಮುಂಬೈ, ಪುಣೆ ಮತ್ತು ಹೈದರಾಬಾದ್‌ಗೆ ವಿಸ್ತಾರಗೊಂಡಿತು. ಸ್ಥಳೀಯ ಘಟಕಗಳಲ್ಲಿ ಹಿಟ್ಟು ತಯಾರಾಗುತ್ತಿತ್ತು. ಆ ಪ್ಲ್ಯಾಂಟ್‌ನವರು ‘ಐಡಿ ಫ್ರೆಶ್’ ಷೇರು ದಾರರಾಗುತ್ತಿದ್ದರು. ಕಂಪೆನಿ ವಹಿವಾಟು ಹೆಚ್ಚಿದ್ದೇ ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡಯ್ಯಲು ಯೋಚಿಸಿದರು ಮುಸ್ತಫಾ. ಐಡಿಫ್ರೆಶ್ ಉತ್ಪನ್ನಗಳು ದುಬೈಗೂ ತಲುಪಿದವು. ‘ಐಡಿ ಫ್ರೆಶ್’ ಅಲ್ಲೂ ಜನಪ್ರಿಯವಾಯ್ತು. ಆದರೆ ಬೇಡಿಕೆ ಇರುವಷ್ಟು ಪೂರೈಕೆ ಮಾಡೋದೇ ಮುಖ್ಯ ಸಮಸ್ಯೆ. 

150 ಕೋಟಿ ವಹಿವಾಟು: 2015 ರ ವೇಳೆಗೆ ‘ಐಡಿ ಫ್ರೆಶ್’ ವಹಿವಾಟು 100 ಕೋಟಿಗೇರಿತು. ಈಗ 150 ಕೋಟಿಯನ್ನು ಮೀರಿದೆ.

click me!