ಕರ್ನಾಟಕ ಶಾಸಕರು ವಿಪ್‌ ಉಲ್ಲಂಘಿಸಿದರೆ ಏನಾಗಲಿದೆ?

By Web DeskFirst Published Jul 12, 2019, 7:33 AM IST
Highlights

ಕರ್ನಾಟಕ ಮುಂಗಾರು ಅಧಿವೇಶನ ಆರಂಭವಾಗಲಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರಿಗೆ ಈಗಾಗಲೆ ವಿಪ್ ಜಾರಿ ಮಾಡಲಾಗಿದೆ. ಒಂದು ವೇಳೆ ಇವರು ವಿಪ್ ಉಲ್ಲಂಘನೆ ಮಾಡಿದಲ್ಲಿ ಏನಾಗಲಿದೆ..?

ಬೆಂಗಳೂರು [ಜು.11] :  ಅತೃಪ್ತ ಶಾಸಕರ ವಿರುದ್ಧ ವಿಪ್‌ ಉಲ್ಲಂಘನೆ ಆರೋಪ ಕುರಿತು ದೂರು ದಾಖಲಾದರೆ ಸಭಾಧ್ಯಕ್ಷರು ಸಂವಿಧಾನದ ಶೆಡ್ಯೂಲ್‌-10ರಡಿಯ ನಿಯಮಗಳ ಪ್ರಕಾರ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಲು ಕೆಲವೊಂದು ಪ್ರಕ್ರಿಯೆಗಳನ್ನು ಅನುಸರಿಸಬೇಕಾಗುತ್ತದೆ.

ಶಾಸಕರನ್ನು ಎರಡು ಸಂದರ್ಭದಲ್ಲಿ ಮಾತ್ರ ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಸಾಧ್ಯ. ಶಾಸಕನಾಗಿದ್ದಾಗಲೇ ಸ್ವಯಂ ಪ್ರೇರಣೆಯಿಂದ ತಾನು ಪ್ರತಿನಿಧಿಸುವ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಮತ್ತೊಂದು ಪಕ್ಷಕ್ಕೆ ಸೇರಿದ್ದರೆ ಅಥವಾ ವಿಧಾನಸಭಾ ಮಂಡಲದ ನಡಾವಳಿ ವೇಳೆ ಪಕ್ಷ ನೀಡಿದ ವಿಪ್‌ ಉಲ್ಲಂಘಿಸಿದರೆ ಸಂವಿಧಾನದ ಶೆಡ್ಯೂಲ್‌-10ರಡಿಯಲ್ಲಿ ವಿಚಾರಣೆ ನಡೆಸಿ, ಆರೋಪ ಸಾಬೀತಾದರೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಬಹುದು. ಶಾಸಕ ಸ್ಥಾನ ಅನರ್ಹಗೊಳಿಸುವ ಮುನ್ನ ಕೆಲವೊಂದು ಪ್ರಕ್ರಿಯೆಯನ್ನು ಸ್ಪೀಕರ್‌ ನಡೆಸಬೇಕಾಗುತ್ತದೆ.

ಕಾನೂನು ಪ್ರಕಾರ ವಿಪ್‌ ಉಲ್ಲಂಘನೆ ಕುರಿತು ಶಾಸಕಾಂಗ ಪಕ್ಷದ ನಾಯಕರು ಅಥವಾ ಅವರ ನೇತೃತ್ವದ ನಿಯೋಗ ಸ್ಪೀಕರ್‌ಗೆ ದೂರು ನೀಡಬೇಕಾಗುತ್ತದೆ. ವಿಪ್‌ ಉಲ್ಲಂಘಿಸಿದ 15 ದಿನಗಳ ನಂತರ ದೂರು ನೀಡಬೇಕು. ದೂರು ಬಂದ ನಂತರ ವಿಪ್‌ ಉಲ್ಲಂಘಿಸಿದ ಹಾಗೂ ಅದು ಪಕ್ಷಾಂತರ ನಿಷೇಧ ಕಾನೂನಿನ ಕ್ರಮ ಜರುಗಿಸುವ ಕುರಿತು ದೂರಿನಲ್ಲಿನ ಆರೋಪಗಳನ್ನು ಪರಿಶೀಲಿಸಬೇಕು. ನಂತರ ಆರೋಪ ಹೊತ್ತ ಶಾಸಕರಿಗೆ ಸ್ಪೀಕರ್‌ ಅವರು ಶೋಕಾಸ್‌ ನೋಟಿಸ್‌ ಜಾರಿಗೊಳಿಸಿ ಮೂರು ಅಥವಾ ಏಳು ದಿನದಲ್ಲಿ ಉತ್ತರ ನೀಡುವಂತೆ ಸೂಚಿಸಬಹುದು.

ಶಾಸಕರು ಉತ್ತರ ನೀಡಿದ ನಂತರ ಆ ಕುರಿತು ದೂರುದಾರಿಗೆ ಮಾಹಿತಿ ನೀಡಿ, ಅವರಿಂದ ಶಾಸಕರ ಉತ್ತರಕ್ಕೆ ಆಕ್ಷೇಪಣೆಯನ್ನು ಸ್ವೀಕರಿಸಬೇಕು. ನಂತರ ದಿನಾಂಕವನ್ನು ನಿಗದಿಪಡಿಸಿ ಶಾಸಕರು ಹಾಗೂ ದೂರುದಾರರ ವಾದ ಪ್ರತಿವಾದ ಆಲಿಸಬೇಕು. ವಾದ ಪ್ರತಿವಾದ ಪೂರ್ಣಗೊಂಡ ನಂತರ ತೀರ್ಪು ಅನ್ನು ಹೊರಡಿಸಬೇಕು.

ವಿಚಾರಣೆ ವೇಳೆ ಪಕ್ಷ ನೀಡಿದ್ದ ವಿಪ್‌ ಅನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಆರೋಪವು ಸಾಬೀತಾದರೆ ಆ ಶಾಸಕನ ಶಾಸಕ ಸ್ಥಾನವನ್ನು ಅನರ್ಹಗೊಳಿಸಿ ಸ್ಪೀಕರ್‌ ಆದೇಶಿಸಬಹುದು. ಒಂದೊಮ್ಮೆ ದೂರಿನ ಆರೋಪಗಳು ಸಾಬೀತಾಗದೆ ಹೋದರೆ ದೂರನ್ನು ತಿರಸ್ಕರಿಸಿ ಆದೇಶಿಸಬಹುದು. ವಿಪ್‌ ಉಲ್ಲಂಘನೆ ಕುರಿತು ಸಲ್ಲಿಕೆಯಾದ ದೂರನ್ನು ಸ್ಪೀಕರ್‌ ಅವರು ಇಂತಿಷ್ಟೇ ಸಮಯದೊಳಗೆ ವಿಚಾರಣೆ ನಡೆಸಿ ಇತ್ಯರ್ಥಪಡಿಸಲು ಯಾವುದೇ ನಿಯಮವಿಲ್ಲ.

click me!