ಕಾಲೇಜು ಉಪನ್ಯಾಸಕರಿಗೆ ವಾಹನ ತಪಾಸಣೆ ಕೆಲಸ

By Web DeskFirst Published Oct 10, 2018, 9:36 AM IST
Highlights

ಲೋಕಸಭಾ ಉಪ ಚುನಾವಣೆ ಸಂಬಂಧ ನಿರ್ಮಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆಗೆಂದು ಈ ಕಾಲೇಜಿನ 17 ಉಪನ್ಯಾಸಕರನ್ನು ನಿಯೋಜಿಸಲಾಗಿದ್ದು, ಇದರಿಂದ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಪೆಟ್ಟು ಬೀಳುವ ಆತಂಕ ಎದುರಾಗಿದೆ. 

ಬಳ್ಳಾರಿ :  ಇದು ನಗರದ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವ್ಯಥೆ. ಲೋಕಸಭಾ ಉಪ ಚುನಾವಣೆ ಸಂಬಂಧ ನಿರ್ಮಿಸಿರುವ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆಗೆಂದು ಈ ಕಾಲೇಜಿನ 17 ಉಪನ್ಯಾಸಕರನ್ನು ನಿಯೋಜಿಸಲಾಗಿದ್ದು, ಇದರಿಂದ ಕಾಲೇಜಿನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಈ ಬಗ್ಗೆ ಈಗಾಗಲೇ ಆದೇಶ ಉಪನ್ಯಾಸಕರ ಕೈಸೇರಿಯೂ ಆಗಿದೆ. ಈ ಪ್ರಕಾರ ಉಪನ್ಯಾಸಕರೆಲ್ಲರೂ ಬುಧವಾರದಿಂದಲೇ ಕರ್ತವ್ಯಕ್ಕೆ ಹಾಜರಾಗಬೇಕಿದ್ದು ಚುನಾವಣೆ ಮುಗಿಯುವವರೆಗೂ(ನ.3ರವರೆಗೆ) ನಿರ್ವಹಿಸಬೇಕಿದೆ.

ರಾಜ್ಯದಲ್ಲಿ ಬೇರೆಲ್ಲೂ ಉಪನ್ಯಾಸಕರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಇಂತಹ ಪರಿಪಾಠವಿದ್ದು ಜಿಲ್ಲೆಯ ಹೆಚ್ಚಿನ ಸರ್ಕಾರಿ ಕಾಲೇಜುಗಳ ಉಪನ್ಯಾಸಕರಿಗೆ ಆದೇಶ ರವಾನೆಯಾಗಿದೆ. ಕಳೆದ ಚುನಾವಣೆ ವೇಳೆಯೂ ಉಪನ್ಯಾಸಕರು ಕರ್ತವ್ಯ ನಿರ್ವಹಿಸಿದ್ದರು.

ವಿದ್ಯಾರ್ಥಿಗಳು ಅಳಲು:  ಕಾಲೇಜಿನ ವಿವಿಧ ವಿಭಾಗಗಳ ಸಿಲೆಬಸ್‌ಗಳು ಬರೀ ಶೇ.35 ರಷ್ಟುಮಾತ್ರ ಪೂರ್ಣಗೊಂಡಿದ್ದು, ಸುಮಾರು ಒಂದು ತಿಂಗಳ ಕಾಲ ಉಪನ್ಯಾಸಕರು ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡರೆ ಶೈಕ್ಷಣಿಕ ಹಿನ್ನಡೆಯಾಗುವುದು ಖಚಿತ ಎಂಬುದು ವಿದ್ಯಾರ್ಥಿಗಳ ಅಳಲಾಗಿದೆ. ಇನ್ನು ಡಿಸೆಂಬರ್‌ನಲ್ಲಿ ನಡೆಯುವ ಕಿರು ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಬೇಕಾಗಿದೆ. ವಿದ್ಯಾರ್ಥಿಗಳ ಆಂತರಿಕ ಪರೀಕ್ಷಾ ಮೌಲ್ಯಮಾಪನ ಮಾಡಿ ಆನ್‌ಲೈನ್‌ನಲ್ಲಿ ಅಂಕ ಪಟ್ಟಿಯನ್ನು ಸೇರ್ಪಡಿಸುವ ಕೆಲಸ ಬಾಕಿ ಇದೆ. ಈ ಎಲ್ಲ ಶೈಕ್ಷಣಿಕ ತುರ್ತು ಕೆಲಸಗಳ ನಡುವೆ ಉಪನ್ಯಾಸಕರನ್ನು ಚುನಾವಣೆ ಕಾರ್ಯಕ್ಕೆ ಬಳಸಿಕೊಳ್ಳಲು ಜಿಲ್ಲಾಡಳಿತ ಮುಂದಾಗಿರುವುದು ಉಪನ್ಯಾಸಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಉಪನ್ಯಾಸಕರಿಗೆ ಪಾಠ ಮಾಡಲು ಬಿಡಿ:  ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಗರದ ಪದವಿ ಕಾಲೇಜು ಉಪನ್ಯಾಸಕರನ್ನು ಚುನಾವಣೆ ಕಾರ್ಯದ ನಿಮಿತ್ತ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳನ್ನು ತಪಾಸಣೆ ನಡೆಸುವ ಕೆಲಸಕ್ಕೆ ನಿಯೋಜಿಸಲಾಗಿತ್ತು. ದಿನಕ್ಕೆ 8 ಗಂಟೆಯಂತೆ ದಿನದ ಮೂರು ಅವಧಿಯಲ್ಲಿ ಉಪನ್ಯಾಸಕರು ಕೆಲಸ ಮಾಡಬೇಕಾಗಿತ್ತು. (ಬೆಳಗ್ಗೆ 6ರಿಂದ ಮಧ್ಯಾಹ್ನ 2, ಮಧ್ಯಾಹ್ನ 2ರಿಂದ ರಾತ್ರಿ 10 ಮತ್ತು ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ) ಆಗ ಸಿಲಬಸ್‌ಗಳು ಪೂರ್ಣಗೊಂಡಿದ್ದವು. ಹೀಗಾಗಿ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಿ, ಸುಮಾರು ಒಂದು ತಿಂಗಳು ಕಾರ್ಯ ನಿರ್ವಹಿಸಿದರು.

ಜಿಲ್ಲಾಡಳಿತ ನಿರ್ಧಾರವನ್ನು ವಿರೋಧಿಸಿರುವ ವಿದ್ಯಾರ್ಥಿ ಸಂಘಟನೆಗಳು ಜಿಲ್ಲಾಡಳಿತ ಕೂಡಲೇ ತನ್ನ ನೀತಿಯನ್ನು ಬದಲಾಯಿಸಿಕೊಳ್ಳಬೇಕು. ಉಪನ್ಯಾಸಕರನ್ನು ಚುನಾವಣೆ ಕೆಲಸಕ್ಕೆ ಬಳಸದೆ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಬಿಡಬೇಕು ಎಂದು ಒತ್ತಾಯಿಸಿವೆ.


ಚುನಾವಣೆ ಕಾರ್ಯ ನಿಯೋಜನೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡು, ಮನವರಿಕೆ ಮಾಡಿಕೊಟ್ಟಿದ್ದೇವೆ. ಅವರು ಸ್ಪಂದಿಸಿದ್ದಾರೆ.

-ಚುನಾವಣೆಗೆ ನಿಯೋಜನೆಗೊಂಡ ಉಪನ್ಯಾಸಕರು

ಉಪನ್ಯಾಸಕರು ಬೆಳಗ್ಗೆ ಬಂದು ಮನವಿ ಕೊಟ್ಟಿದ್ದಾರೆ. ಬೇರೆಯವರನ್ನು ಬದಲಾವಣೆ ಮಾಡಲು ಕ್ರಮ ವಹಿಸುವೆ. ಎರಡು ದಿನದೊಳಗೆ ಬದಲಿ ವ್ಯವಸ್ಥೆ ಮಾಡುವೆ.

-ಡಾ.ರಾಮ್‌ ಪ್ರಸಾತ್‌ ಮನೋಹರ್‌ ಜಿಲ್ಲಾಧಿಕಾರಿ ಬಳ್ಳಾರಿ

ಚುನಾವಣೆಗೆ ಉಪನ್ಯಾಸಕರನ್ನು ನಿಯೋಜನೆಗೊಳಿಸುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನಾವು ಸಹ ಮನವಿ ಸಲ್ಲಿಸುತ್ತೇವೆ.

-ಸುರೇಶ್‌ ಎಐಡಿಎಸ್‌ಒ ವಿದ್ಯಾರ್ಥಿ ಮುಖಂಡ ಬಳ್ಳಾರಿ

ಕೆ.ಎಂ.ಮಂಜುನಾಥ್‌

(ಸಾಂದರ್ಭಿಕ ಚಿತ್ರ)

click me!