ಕನ್ನಡ ನಾಮಫಲಕಕ್ಕೆ ಶೀಘ್ರ ಕಾನೂನು ಮಾನ್ಯತೆ?

By Web DeskFirst Published Oct 12, 2018, 9:27 AM IST
Highlights

ವಾಣಿಜ್ಯ ಮಳಿಗೆಗೆಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸಲು ಕಾನೂನು ಮೊರೆ ಹೋಗಲಾಗಿದೆ.  ಸರ್ಕಾರ ಹೊಸ ಜಾಹೀರಾತು ಬೈಲಾ ಅನುಮೋದಿಸೋ ಮೂಲಕ ಕನ್ನಡ ಖಡ್ಡಾಯಗೊಳಿಸಲು ಮುಂದಾಗಿದೆ. ಇಷ್ಟೇ ಅಲ್ಲ ಕನ್ನಡ ಕಡ್ಡಾಯಕ್ಕೆ ಕಾನೂನಿನ ಮಾನ್ಯತೆ ಪಡೆಯಲು ತಯಾರಿ ಆರಂಭಗೊಂಡಿದೆ.

ಬೆಂಗಳೂರು(ಅ.12):  ಕಾನೂನಿನ ಬೆಂಬಲವಿಲ್ಲದೆ ವಾಣಿಜ್ಯ ಮಳಿಗೆಗಳ  ನಾಮಫಲಕಗಳಲ್ಲಿ ಶೇಕಡ 60ರಷ್ಟುಕನ್ನಡ ಬಳಕೆ ಕಡ್ಡಾಯದ ಸುತ್ತೋಲೆ ಹೊರಡಿಸಿ ಕೋರ್ಟ್‌ನಿಂದ ಆಕ್ಷೇಪಣೆಗೊಳಗಾಗಿರುವ ಬಿಬಿಎಂಪಿಯು ತಾನೇ ಇತ್ತೀ​ಚೆಗೆ ರೂಪಿ​ಸಿದ್ದ ‘ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶಗಳ  ಬೈಲಾ-2018’ದ ಮೂಲಕ ನಾಮಫಲಕದಲ್ಲಿ ಕನ್ನಡ ಕಡ್ಡಾಯಕ್ಕೆ ಕಾನೂನಿನ ಮಾನ್ಯತೆ ಪಡೆಯಲು ದಾರಿ ಸೃಷ್ಟಿ​ಯಾ​ಗುವ ನಿರೀಕ್ಷೆ ಹೊಂದಿ​ದೆ.

ನಗರದಲ್ಲಿ ವಾಣಿಜ್ಯ ಜಾಹೀರಾತುಗಳ ನಿಯಂತ್ರಣಕ್ಕೆ ಕೆಎಂಸಿ ಕಾಯ್ದೆ 1976ರಡಿ ಈಗಾಗಲೇ ರೂಪಿಸಿ ಸಾರ್ವಜನಿಕ ಆಕ್ಷೇಪಣೆಗಾಗಿ ಪ್ರಕಟಿಸಿರುವ ‘ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶಗಳ ಬೈಲಾ-2018’ರಲ್ಲಿ ‘ನಾಮಫಲಕದಲ್ಲಿ ಶೇ.60ರಷ್ಟುಕನ್ನಡ ಕಡ್ಡಾಯ’ ನಿಯಮವನ್ನು ಬಿಬಿಎಂಪಿ ಸೇರ್ಪಡೆ ಮಾಡಿದೆ. ಇದರಿಂದ ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸುವ ಬಿಬಿಎಂಪಿ ಪ್ರಯತ್ನ ಒಂದು ದ್ವಾರದಿಂದ ಮುಚ್ಚಿದರೂ ಮತ್ತೊಂದು ದ್ವಾರದಿಂದ ಕಾನೂನು ಮಾನ್ಯತೆಯ ಮೂಲಕವೇ ದ್ವಾರ ತೆರೆದುಕೊಳ್ಳುತ್ತದೆ.

ರಾಜ್ಯ ಸರ್ಕಾರದ ಅನುಮತಿಯೊಂದಿಗೆ ಕರ್ನಾಟಕ ಮುನಿಸಿಪಲ್‌ ಕಾರ್ಪೊರೇಷನ್‌ ಕಾಯ್ದೆರಡಿ ಹೊಸದಾಗಿ ‘ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶಗಳ ಬೈಲಾಗಳು-2018’ಅನ್ನು ರೂಪಿಸಲಾಗಿದ್ದು, ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಅಂಗಡಿ, ಮುಂಗಟ್ಟು, ಮಾಲ್‌ಗಳು ಸೇರಿದಂತೆ ಎಲ್ಲಾ ರೀತಿಯ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ.60ರಷ್ಟುಕನ್ನಡ ಬಳಕೆ ಮಾಡಬೇಕು. ಉಳಿದ ಭಾಷೆ ಬಳಕೆ ಶೇ.40ರಷ್ಟುಮೀರಬಾರದು ಎಂದು ನಿಯಮ ರೂಪಿಸಲಾಗಿದೆ.

ಈ ಹೊಸ ಬೈಲಾವನ್ನು ಬಿಬಿಎಂಪಿ ತನ್ನ ವೆಬ್‌ಸೈಟ್‌ನಲ್ಲಿ ಈಗಾಗಲೇ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಲು ಅ.24ರವರೆಗೆ ಅವಕಾಶ ನೀಡಲಾಗಿದೆ. ಬರುವ ಆಕ್ಷೇಪಣೆಗಳನ್ನು ಪರಿಶೀಲಿಸಿ ಹೊಸ ಜಾಹೀರಾತು ಬೈಲಾವನ್ನು ಅಂತಿಮಗೊಳಿಸಿ ಪಾಲಿಕೆ ಸರ್ಕಾರಕ್ಕೆ ಕಳುಹಿಸಲಿದೆ. ಇದಕ್ಕೆ ಸರ್ಕಾರದ ಅನುಮೋದನೆ ದೊರತರೆ ಸಾಕು ನಗರದ ವಾಣಿಜ್ಯ ಮಳಿಗೆಗಳಲ್ಲಿ ಶೇ.60ರಷ್ಟುಕನ್ನಡ ಕಡ್ಡಾಯ ನಿಯಮಕ್ಕೆ ಕಾನೂನು ಮಾನ್ಯತೆ ದೊರೆತಂತಾಗುತ್ತದೆ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.

ಸುತ್ತೋಲೆ ಸದ್ಯಕ್ಕೆ ವಾಪಸ್‌:
ಈ ಮಧ್ಯೆ, ನಾಮಫಲಕದಲ್ಲಿ ಶೇ.60ರಷ್ಟುಕನ್ನಡ ಕಡ್ಡಾಯಗೊಳಿಸಿ ಪಾಲಿಕೆ ಹೊರಡಿಸಿರುವ ಸುತ್ತೋಲೆಯನ್ನು ಸದ್ಯಕ್ಕೆ ವಾಪಸ್‌ ಪಡೆಯುವುದು ಪಾಲಿಕೆಗೆ ಅನಿವಾರ್ಯವಾಗಿದೆ. ಸುತ್ತೋಲೆಯನ್ನು ಕೆಲ ವಾಣಿಜ್ಯ ಮಳಿಗೆಗಳ ಮಾಲೀಕರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ನ್ಯಾಯಾಲಯ ಯಾವ ಕಾನೂನಿನ ಅಡಿಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ ಎಂದು ಪ್ರಶ್ನಿಸಿದೆ. ಅಲ್ಲದೆ, ಭಾಷೆ ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಅದನ್ನು ಪ್ರಚುರಪಡಿಸಲು ವಾಣಿಜ್ಯ ಮಳಿಗೆಗಳ ಮೇಲೆ ಒತ್ತಡ ಹಾಕುವುದಲ್ಲ, ಶಾಲಾ ಕಾಲೇಜುಗಳಲ್ಲಿ ಭಾಷೆಯ ಮಹತ್ವ, ಶ್ರೇಷ್ಠತೆ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿ ವಿಚಾರಣೆ ಮುಂದೂಡಿದೆ. ಇದರಿಂದ ಅಡಕತ್ತರಿಯಲ್ಲಿ ಸಿಲುಕಿರುವ ಬಿಬಿಎಂಪಿ ಸದ್ಯದ ಮಟ್ಟಿಗೆ ಸುತ್ತೋಲೆ ಹಿಂಪಡೆಯುವ ಚಿಂತನೆಯಲ್ಲಿದೆ. ಆದರೆ, ಹಾಗೇನಾದರೂ ಮಾಡಿದರೆ ಕನ್ನಡ ಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಹಾಗಾಗಿ ಈ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪಾಲಿಕೆ ಅನಿವಾರ್ಯವಾಗಿ ಮುಂದಿನ ಅರ್ಜಿ ವಿಚಾರಣೆ ವೇಳೆಗೆ ಸುತ್ತೋಲೆ ವಾಪಸ್‌ ಪಡೆಯಲು ಆಲೋಚಿಸುತ್ತಿದ್ದು, ಹೊಸ ಜಾಹೀರಾತು ಬೈಲಾಗೆ ಸರ್ಕಾರದ ಅನುಮತಿ ದೊರೆತ ಕೂಡಲೇ ಹೊಸ ಸುತ್ತೋಲೆ ಹೊರಡಿಸುವ ಚಿಂತನೆಯಲ್ಲಿದೆ. ಹೊಸ ಬೈಲಾಗೆ ಸರ್ಕಾರದ ಒಪ್ಪಿಗೆ ದೊರೆತರೆ ಆ ನಂತರ ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸಿ ಮರು ಸುತ್ತೋಲೆ ಹೊರಡಿಸಿದರೆ ಅದನ್ನು ಪ್ರಶ್ನಿಸಿ ಮತ್ತೆ ಯಾರೂ ನ್ಯಾಯಾಲಯದ ಮೊರೆ ಹೋಗಲಾಗುವುದಿಲ್ಲ ಎಂಬುದು ಬಿಬಿಎಂಪಿ ಅಧಿಕಾರಿಗಳ ಲೆಕ್ಕಾಚಾರವಾಗಿದೆ.

ಬೆಂಗಳೂರು ನಗರ ಎಷ್ಟೇ ಬೆಳೆದರೂ ನಾಡ ಭಾಷೆ ಕನ್ನಡಕ್ಕೆ ಸಿಗಬೇಕಾದ ಸ್ಥಾನಮಾನದ ವಿಚಾರದಲ್ಲಿ ರಾಜಿಯಾಗುವುದಿಲ್ಲ. ನಾಮಫಲಕದಲ್ಲಿ ಕನ್ನಡ ಕಡ್ಡಾಯಗೊಳಿಸುವ ವಿಚಾರವಾಗಿ ಹೊಸದಾಗಿ ರೂಪಿಸಿರುವ ಜಾಹೀರಾತು ಬೈಲಾ-2018ಕ್ಕೆ ಆದಷ್ಟುಬೇಗ ಸರ್ಕಾರದ ಮಾನ್ಯತೆ ಪಡೆದು ಅನುಷ್ಠಾನಕ್ಕೆ ತರಲು ಪ್ರಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಬಿಕೆ ಹೇಳಿದ್ದಾರೆ. 

ಬಿಬಿಎಂಪಿ ರೂಪಿಸಿರುವ ಹೊಸ ಜಾಹೀರಾತು ಬೈಲಾ-2018ರಲ್ಲಿ ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇ.60ರಷ್ಟುಕನ್ನಡ ಬಳಕೆ ಕಡ್ಡಾಯ ನಿಯಮ ಸೇರ್ಪಡೆಯಾಗಿದೆ. ಇದಕ್ಕೆ ಸರ್ಕಾರದ ಅನುಮೋದನೆ ಸಿಕ್ಕರೆ ಸಾಕು ನಾಮಫಲಕದಲ್ಲಿ ಕನ್ನಡ ಕಡ್ಡಾಯಕ್ಕೆ ತಾನಾಗಿಯೇ ಕಾನೂನು ಮಾನ್ಯತೆ ದೊರೆತಂತಾಗುತ್ತದೆ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಎಂ.ಶಿವರಾಜು ಹೇಳಿದ್ದಾರೆ.

ಲಿಂಗರಾಜು ಕೋರಾ

click me!