ಪಾಶ್ಚಿಮಾತ್ಯ ವಾದ್ಯ ಸ್ಯಾಕ್ಸೋಫೋನ್ ವಾದನದ ಮೂಲಕ ಪೂರ್ವ-ಪಶ್ಚಿಮಗಳನ್ನು ಬೆಸೆದು ಸಂಗೀತ ಲೋಕದಲ್ಲಿ ಹೊಸ ಎತ್ತರಕ್ಕೆ ಏರಿದ ಅಪರೂಪದ ಕಲಾವಿದ ಕದ್ರಿ ಗೋಪಾಲನಾಥ್. ಸ್ಯಾಕ್ಸೋಫೋನ್‌ಲ್ಲಿ ವಾದ್ಯದಲ್ಲಿ ಪಾಶ್ಚಾತ್ಯದ ಬದಲು ದೇಶೀಯ, ಅದರಲ್ಲೂ ಶಾಸ್ತ್ರೀಯ ರಾಗಗಳನ್ನು ನುಡಿಸಿ, ಅದನ್ನು ದೇಶ-ವಿದೇಶಗಳಲ್ಲಿ ಪ್ರಚುರಪಡಿಸಿದವರು.
ಪಾಶ್ಚಿಮಾತ್ಯ ವಾದ್ಯ ಸ್ಯಾಕ್ಸೋಫೋನ್ ವಾದನದ ಮೂಲಕ ಪೂರ್ವ-ಪಶ್ಚಿಮಗಳನ್ನು ಬೆಸೆದು ಸಂಗೀತ ಲೋಕದಲ್ಲಿ ಹೊಸ ಎತ್ತರಕ್ಕೆ ಏರಿದ ಅಪರೂಪದ ಕಲಾವಿದ ಕದ್ರಿ ಗೋಪಾಲನಾಥ್. ಸ್ಯಾಕ್ಸೋಫೋನ್‌ಲ್ಲಿ ವಾದ್ಯದಲ್ಲಿ ಪಾಶ್ಚಾತ್ಯದ ಬದಲು ದೇಶೀಯ, ಅದರಲ್ಲೂ ಶಾಸ್ತ್ರೀಯ ರಾಗಗಳನ್ನು ನುಡಿಸಿ, ಅದನ್ನು ದೇಶ-ವಿದೇಶಗಳಲ್ಲಿ ಪ್ರಚುರಪಡಿಸಿದವರು. ಇಂದು ಸ್ಯಾಕ್ಸೋಫೋನ್‌ಗೆ ಶಾಸ್ತ್ರೀಯ ಸಂಗೀತದ ವೇದಿಕೆಯಲ್ಲಿ ಒಂದು ಗೌರವಾನ್ವಿತ ಸ್ಥಾನ ದೊರಕಿದ್ದರೆ ಗೋಪಾಲನಾಥ್ ಅವರ ಪ್ರತಿಭೆ, ಪರಿಶ್ರಮಗಳಿಂದಲೇ. ಹಾಗಾಗಿ ಕರ್ಣಾಟಕ ಶಾಸ್ತ್ರೀಯ ಸಂಗೀತದ ನಿಟ್ಟಿನಲ್ಲಿ ಸ್ಯಾಕ್ಸೋಫೋನ್‌ಗೆ ಇನ್ನೊಂದು ಹೆಸರೇ ಕದ್ರಿ ಗೋಪಾಲನಾಥ್. ತನ್ನ ವಿಶಿಷ್ಟ ಶೈಲಿ ಮೂಲಕವೇ ಸಂಗೀತ ಪ್ರಿಯರ ಮನಗೆದ್ದಿರುವ ಅವರು ಸ್ಯಾಕ್ಸೋಫೋನ್ ಹಿಡಿದು ಕುಳಿತರೆಂದರೆ ಅಲ್ಲೊಂದು ನಾದಲೋಕವೇ ಸೃಷ್ಟಿಯಾಗುತ್ತಿತ್ತು. ಕಛೇರಿಯ ಆರಂಭದಿಂದ ಕೊನೆಯವರೆಗೆ ಸುನಾದದ ಅಲೆಯೆಬ್ಬಿಸುತ್ತಿತ್ತು. ಕೇಳುತ್ತಿದ್ದ ಮಂದಿ ತನ್ಮಯರಾಗಿ ಬಿಡುತ್ತಿದ್ದರು.
undefined
ಕಲಾವಿದರ ಕುಟುಂಬದಿಂದಲೇ ಬಂದ ಗೋಪಾಲನಾಥ್ ಅವರು ಎಳವೆಯಲ್ಲೇ ಸ್ಯಾಕ್ಸೋಫೋನ್‌ನ ಮೋಡಿಗೆ ಬಿದ್ದವರು. ತಂದೆಯೊಂದಿಗೆ ನಾದಸ್ವರ ನುಡಿಸುತ್ತಿದ್ದ ಅವರು ನಂತರ ಸಣ್ಣ ವಯಸ್ಸಲ್ಲೇ ಸ್ಯಾಕ್ಸೋಫೋನ್‌ನ ಸೆಳೆತಕ್ಕೆ ಸಿಲುಕಿ, ಅದನ್ನು ಶಾಸ್ತ್ರೀಯ ಸಂಗೀತದೊಂದಿಗೆ ಜೋಡಿಸಲು ಪಟ್ಟ ಪ್ರಯತ್ನ ಅಷ್ಟಿಷ್ಟಲ್ಲ. ಸತತ ಪರಿಶ್ರಮದ ಮೂಲಕ ಸ್ಯಾಕ್ಸೋಪೋನ್ ವಾದನದ ಪ್ರತಿಯೊಂದು ಸೂಕ್ಷ್ಮಗಳನ್ನು ತನ್ಮಯತೆಯಿಂದ ಕರಗತ ಮಾಡಿಕೊಂಡ ಅವರು ಮುಂದೆ ಇದೊಂದು ದೇಶೀಯ ವಾದ್ಯ ಎನ್ನುವಂತೆ ನುಡಿಸಿ ವಿಶ್ವವಿಖ್ಯಾತಿ ಪಡೆದರು. ತಮ್ಮೊಂದಿಗೆ ಮಂಗಳೂರಿನ ಕದ್ರಿಯ ಹೆಸರನ್ನೂ ವಿಶ್ವದೆಲ್ಲೆಡೆ ಜನಪ್ರಿಯಗೊಳಿಸಿದರು.
ಕರ್ಣಾಟಕ ಸಂಗೀತ, ಹಿಂದುಸ್ತಾನಿ ಕಲಾವಿದರೊಂದಿಗೆ ಜುಗಲ್‌ಬಂದಿ, ಪಾಶ್ಚಾತ್ಯ ವಾದ್ಯಗಳೊಂದಿಗೆ ಜಾಸ್, ಫ್ಯೂಷನ್ ಹೀಗೆ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ನೀಡುತ್ತ ಕದ್ರಿ ಗೋಪಾಲನಾಥ್ ಅವರು ಏರಿದ್ದು ಸಣ್ಣಎತ್ತರವಲ್ಲ. ಸಂಗೀತ ಕಛೇರಿಗಳಲ್ಲಷ್ಟೇ ಅಲ್ಲ, ಅನೇಕ ವೈಶಿಷ್ಟ್ಯಪೂರ್ಣ ಆಲ್ಬಂಗಳಲ್ಲೂ ಅವರ ಸಂಗೀತ ಶ್ರೋತೃ-ಅಭಿಮಾನಿಗಳ ಕಿವಿ ತಣಿಸುತ್ತಿತ್ತು.
ಗುರುಗಳೂ ಗೋಪಾಲರೇ: ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಚೆನ್ನೈ ಕಲಾನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಕದ್ರಿ ಗೋಪಾಲನಾಥ್ ಸ್ಯಾಕ್ಸೋಫೋನ್ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ನುಡಿಸುವುದನ್ನು ಕಲಿತರು. ಅತ್ಯಂತ ಶ್ರದ್ಧೆಯಿಂದ ಸಂಗೀತವನ್ನು ಅಭ್ಯಾಸ ಮಾಡಿದ ಅವರು, ಕರ್ಣಾಟಕ ಸಂಗೀತ ಮತ್ತು ಸ್ಯಾಕ್ಸೊಫೋನ್ ವಾದ್ಯಗಳೆರಡರಲ್ಲೂ ಪ್ರಭುತ್ವ ಸಾಧಿಸಿದರು. ಬಳಿಕ ಮದ್ರಾಸಿನ ಟಿ.ವಿ.ಗೋಪಾಲಕೃಷ್ಣನ್ ಅವರ ಸಂಪರ್ಕಕ್ಕೆ ಬಂದರು. ಗೋಪಾಲನಾಥರಲ್ಲಿದ್ದ ಅಗಾಧ ಪ್ರತಿಭೆಯನ್ನು ಗಮನಿಸಿದ ಗೋಪಾಲಕೃಷ್ಣನ್ ಅವರು ಕದ್ರಿ ಗೋಪಾಲನಾಥರು ಒಬ್ಬ ಅಂತಾರಾಷ್ಟ್ರೀಯ ಪ್ರತಿಭೆಯಾಗಿ ರೂಪುಗೊಳ್ಳುವಲ್ಲಿ ಮಹತ್ವದ ಪಾತ್ರವಹಿಸಿದರು.
ದೇವರ ಕೋಣೆಯಲ್ಲಿ ಮೊದಲ ಸ್ಯಾಕ್ಸೋಫೋನ್ ವಾದನ
ಕದ್ರಿ ಗೋಪಾಲನಾಥ್ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ಸಜಿಪಮೂಡದಲ್ಲಿ 1950 ರ ಡಿಸೆಂಬರ್ 6 ರಂದು ಜನಿಸಿದರು. ತಂದೆ ತನಿಯಪ್ಪ, ತಾಯಿ ಗಂಗಮ್ಮ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು. ಬಾಲ್ಯದಿಂದಲೇ ಸ್ಯಾಕ್ಸೋಫೋನ್ ವಾದನವನ್ನು ಅತಿಯಾಗಿ ಪ್ರೀತಿಸುತ್ತಿದ್ದ ಕದ್ರಿ ಗೋಪಾಲನಾಥ್ ಅವರು ತಾನು ಮೊದಲು ಖರೀದಿಸಿದ್ದ ಸ್ಯಾಕ್ಸೋಫೋನ್‌ನ್ನು ತನ್ನ ಅಂತಿಮ ದಿನದವರೆಗೂ ದೇವರ ಕೋಣೆಯಲ್ಲಿಟ್ಟು ಗೌರವ ಸಲ್ಲಿಸುತ್ತಾ
ಬಂದಿದ್ದರು. ಸುಮಾರು 50 ವರ್ಷಗಳ ಹಿಂದೆ 300 ರು. ಬೆಲೆ ತೆತ್ತು ಸ್ಯಾಕ್ಸೋಫೋನ್‌ನನ್ನು ಖರೀದಿಸಿದ್ದರಂತೆ. ಮೊದಲ ವಾದನ ಎಂಬ ಪ್ರೀತಿಯೂ ಅದರ ಮೇಲಿದ್ದರಿಂದ ಅದನ್ನು ದೇವರ ಕೋಣೆಯಲ್ಲಿಟ್ಟು ಜತನವಾಗಿ ಕಾಪಾಡಿಕೊಂಡು ಬಂದಿದ್ದರು. ಮೊದಲ ವಾದನ ಕೂಡ ದೇವರ ಕೋಣೆಯಲ್ಲೇ ನಡೆಸಿದ್ದರಂತೆ.
ದಿಕ್ಕು ಬದಲಿಸಿದ ಮೈಸೂರು ಅರಮನೆಯ ಬ್ಯಾಂಡ್‌ಸೆಟ್
ಸಂಗೀತವೇ ಗೋಪಾಲನಾಥರ ದಿನಚರಿಯಾಗಿತ್ತು. ಕದ್ರಿ ಗೋಪಾಲನಾಥರು ಬಾಲ್ಯದಿಂದಲೇ ತಂದೆಯವರಿಂದ ನಾಗಸ್ವರ ವಾದನದ ಶಿಕ್ಷಣವನ್ನು ಪಡೆದರು. ಆದರೆ ಅವರ ಬದುಕಿಗೆ ತೆರೆದದ್ದು ಮತ್ತೊಂದು ಬಾಗಿಲು. ಒಮ್ಮೆ ಅವರು ಮೈಸೂರು ಅರಮನೆಯ ಬ್ಯಾಂಡ್‌ಸೆಟ್ ನೊಂದಿಗೆ ಸ್ಯಾಕ್ಸೋಫೋನ್ ವಾದನವನ್ನು ಕೇಳಿ ಆ ವಾದ್ಯದಲ್ಲಿರುವ ವೈವಿಧ್ಯತೆಗೆ ಮನಸೋತು ಸ್ಯಾಕ್ಸೋಫೋನಿನಲ್ಲಿಯೇ ಪ್ರಾವೀಣ್ಯತೆ ಸಂಪಾದಿಸಬೇಕು ಎಂಬ ದೃಢ ನಿರ್ಧಾರ ಕೈಗೊಂಡರು. ಇದಕ್ಕಾಗಿ ಅವರು ನಡೆಸಿದ ನಿರಂತರ ತಪಸ್ಸು 20 ವರ್ಷಗಳದ್ದು.
ಚೆನ್ನೈನಲ್ಲಿ ಮೊದಲ ಕಛೇರಿ
ಗೋಪಾಲನಾಥರ ಪ್ರಥಮ ಕಾರ್ಯಕ್ರಮ ಮದ್ರಾಸಿನ ಚೆಂಬೈ ಮೆಮೋರಿಯಲ್ ಟ್ರಸ್ಟ್‌ನಲ್ಲಿ ನಡೆಯಿತು. ಅದು ಅವರಿಗೆ ಎಲ್ಲೆಡೆಯಿಂದ ಪ್ರಸಿದ್ಧಿ ತಂದಿತು. ಆಕಾಶವಾಣಿ ‘ಎ’ ಶ್ರೇಣಿಯ ಕಲಾವಿದರೆಂದು ಪರಿಗಣಿತರಾದ ಗೋಪಾಲನಾಥರ ಕಛೇರಿಗಳು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿ ಅಲ್ಲದೆ ಉತ್ತರ ಭಾರತದ ಪ್ರತಿಷ್ಠಿತ ಉತ್ಸವ- ವೇದಿಕೆಗಳಲ್ಲಿ, ಬಿಬಿಸಿಯ ಆಹ್ವಾನದ ಮೇರೆಗೆ ರಾಯಲ್ ಆಲ್ಬರ್ಟ್ ಹಾಲ್, ಫ್ರಾಗ್ ಜಾಸ್ ಫೆಸ್ಟಿವಲ್, ಬರ್ಲಿನ್ ಸಂಗೀತೋತ್ಸವ, ಮೆಕ್ಸಿಕೋದ ಸೆರ್ವಾಂಟಿನೊ ಉತ್ಸವ, ಲಂಡನ್‌ನ ಪ್ರೊಮೆನಾಡೊ, ಪ್ಯಾರಿಸ್‌ನ ಹೈಲ್ ಫೆಸ್ಟಿವಲ್ ಮುಂತಾದ ವಿಶ್ವ ಉತ್ಸವ-ವೇದಿಕೆಗಳಲ್ಲಿ ನಡೆದಿವೆ.
ಯೂರೋಪ್, ಸ್ವಿಜರ್‌ಲ್ಯಾಂಡ್, ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ,ಡಿ ಸಿಂಗಪೂರ್, ಬಹರೇನ್, ಕತಾರ್, ಮಸ್ಕತ್, ಮಲೇಶಿಯಾ, ಶ್ರೀಲಂಕಾ ಹೀಗೆ ಅವರು ವಿಶ್ವದಾದ್ಯಂತ ಯಶಸ್ವಿ ಕಛೇರಿಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ.
ರಾಗ್‌ರಂಗ್ ಜನಪ್ರಿಯತೆ
ನಾಡಿನೆಲ್ಲೆದೆ ಮನಸೂರೆಗೊಂಡ ಕದ್ರಿ ಗೋಪಾಲನಾಥ್ ಹಾಗೂ ಪ್ರವೀಣ್ ಗೋಡ್ಖಿಂಡಿ ಜೋಡಿಯ ಜುಗಲ್ ಬಂದಿ ‘ರಾಗ್‌ರಂಗ್’ ಆಲ್ಬಂ ಸಂಗೀತ ಕ್ಷೇತ್ರದಲ್ಲಿ ತನ್ನದೇ ವೈಶಿಷ್ಟ್ಯತೆಯನ್ನು ಮೆರೆದಿದೆ. ಆಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿದ್ದ ಗೋಡ್ಖಿಂಡಿಯನ್ನು ಆಲ್ಬಂನಲ್ಲಿ ಸೇರಿಸಿಕೊಳ್ಳಲು ಅವರ ತಂದೆ ವೆಂಕಟೇಶ್ ಗೋಡ್ಖಿಂಡಿ ಕದ್ರಿಯ ರವನ್ನು ಕೇಳಿಕೊಂಡಿದ್ದರು ಎಂದು ಗೋಪಾಲನಾಥ್ ಅವರು ಆಗಾಗ ಹೇಳುತ್ತಿದ್ದರು. ಅದರಂತೆ ಪ್ರವೀಣ್ ಗೋಡ್ಖಿಂಡಿ ಅವರ ಜೊತೆ ಕದ್ರಿಯವರ ಜುಗಲ್ ಬಂದಿಯ ಪ್ರಯೋಗ ವೂ ನಡೆಯಿತು. ಈ ಆಲ್ಬಂನ್ನು ಜನತೆ ಬಹಳ ಮೆಚ್ಚಿ ಕೊಂಡರು. ಇದು ಕದ್ರಿಯವರ ಜೊತೆಗೆ ಪ್ರವೀಣ್ ಗೋಡ್ಖಿಂಡಿಗೂ ಅಪಾರ ಪ್ರಸಿದ್ಧಿ ಯನ್ನು ತಂದುಕೊಟ್ಟಿತು. ಆ ಬಳಿಕ ಕದ್ರಿ-ಗೋಡ್ಖಿಂಡಿ ಜುಗಲ್‌ಬಂದಿ ಹೆಚ್ಚಾಗಿ ಏರ್ಪಡುತ್ತಿದ್ದವು.
ಗೋಪಾಲನಾಥ್ ಅವರು ಬಂಟ್ವಾಳ ಮೂಲದವರಾದರೂ ಅವರ ಹೆಸರಿನ ಜೊತೆಗೆ ಕದ್ರಿ ಸೇರಿಕೊಂಡಿರುವುದರ ಹಿಂದೆ ಕುತೂಹಲದ ಕತೆ ಇದೆ. 1964 ರಲ್ಲಿ ಸಂಗೀತ ಗುರುವನ್ನು ಅರಸಿಕೊಂಡು ಬಂಟ್ವಾಳದಿಂದ ಗೋಪಾಲನಾಥರು ಮಂಗಳೂರಿಗೆ ಬಂದಿದ್ದರು. ಆಗ ಅವರ ಸ್ನೇಹಿತ ಮಾಧವ ಶೆಟ್ಟಿ ಮಂಗಳೂರಿನ ಕಲಾನಿಕೇತನದಲ್ಲಿ ಕೊಳಲು ಕಲಿಯುತ್ತಿದ್ದರು. ಅದೇ ವೇಳೆ ಸೋದರ ಮಾವ ಗೋಪಾಲ್, ಆಗಿನ ಪ್ರಸಿದ್ಧರಾದ ನಾರಾಯಣಸ್ವಾಮಿ ಅವರೊಂದಿಗೆ ನಾಗಸ್ವರ ವಾದಕರಾಗಿದ್ದರು. ಅವರ ಮಾರ್ಗದರ್ಶನದ ಜೊತೆಗೆ ಮಂಗಳೂರಿನ ಎನ್.ಗೋಪಾಲಕೃಷ್ಣ ಅವರ ಬಳಿ ಸ್ಯಾಕ್ಸೋಫೋನ್ ವಾದನ ಕಲಿಯಲಾರಂಭಿಸಿದರು.
ಈ ತರಗತಿ ನಡೆಯುತ್ತಿದ್ದುದು ಕದ್ರಿ ಮಂಜುನಾಥ ದೇವಸ್ಥಾನದಲ್ಲಿ. ವಾರದಲ್ಲಿ ೪ ಕ್ಲಾಸ್ ಗೋಪಾಲನಾಥ್‌ಗೆ. ಬೆಳಗ್ಗಿನ ಹೊತ್ತಿನಲ್ಲಿ ಸ್ಯಾಕ್ಸೋಫೋನ್ ತರಗತಿ, ಬಳಿಕ ತಾಂಜಾ ವೂರಿನ ಗೋಪಾಲಕೃಷ್ಣ ಪಿಳ್ಳೆ ಅವರಲ್ಲಿ ವಿದ್ಯಾಭ್ಯಾಸ ಮುಂದುವರಿಯಿತು. ಐದು ವರ್ಷ ಸತತ ಅಭ್ಯಾಸದ ಬಳಿಕ ಮದ್ರಾಸ್‌ನಲ್ಲಿ ಸಂಗೀತ ಕಲಿಕೆ. ಕದ್ರಿ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆಯಲ್ಲಿ ಗೋಪಾಲನಾಥ್‌ರ ಮೊದಲ ಸ್ಯಾಕ್ಸೋಫೋನ್ ಕಛೇರಿ ನಡೆದಿತ್ತು. ಕದ್ರಿಯಲ್ಲಿ ಕಲಿಕೆ, ಕದ್ರಿಯಲ್ಲಿ ಆರಂಭಿಕ ಕಛೇರಿಯೇ ಗೋಪಾಲ ನಾಥ್ ಹೆಸರಿನಲ್ಲಿ ‘ಕದ್ರಿ’ ಸೇರಲು ಕಾರಣವಾಯಿತು.
ಗೋಪಾಲ ನಂಟು!
ಕದ್ರಿ ಗೋಪಾಲನಾಥ್‌ಗೆ ಗೋಪಾಲ ಹೆಸರಿನ ಜೊತೆ ಅವಿನಾಭಾವ ನಂಟು. ಇವರ ಹೆಸರು ಗೋಪಾಲ, ಇವರ ಸೋದರ ಮಾವನ ಹೆಸರು ಗೋಪಾಲಕೃಷ್ಣ. ಕದ್ರಿ ಗೋಪಾಲನಾಥ್ ಅವರಿಗೆ ಮಂಗಳೂರಿನಲ್ಲಿ ಸ್ಯಾಕ್ಸೋಫೋನಿನ ಪ್ರಾಥಮಿಕ ಶಿಕ್ಷಣ ನೀಡಿದವರು ಎನ್. ಗೋಪಾಲನಾಥ್. ಬಳಿಕ ಸ್ಯಾಕ್ಸೋಫೋನ್‌ನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿಸಿಕೊಟ್ಟವರು ಚೆನ್ನೈನ ಗೋಪಾಲಕೃಷ್ಣ ಅಯ್ಯರ್, ಬಳಿಕ ಟಿ.ವಿ.ಗೋಪಾಲಕೃಷ್ಣ. ಹೀಗೆ ಗೋಪಾಲಕೃಷ್ಣ
ಹೆಸರು ಕದ್ರಿ ಗೋಪಾಲನಾಥ್ ಜೊತೆಗೆ ಬೆಸೆದುಕೊಂಡಿರುವುದು ಮಾತ್ರ ಅಚ್ಚರಿ.
ಕಾರ್ಗಿಲ್ ಯುದ್ಧ ನಿಧಿಗೆ ಕೊಡುಗೆ
ಚೆನ್ನೈನ ನಾರದ ಗಾನಸಭಾದಲ್ಲಿ 400 ಮಂದಿ ಕಲಾವಿದರೊಡನೆ ನಡೆಸಿಕೊಟ್ಟ ಸ್ಯಾಕ್ಸೋಫೋನ್ ಕಾರ್ಯಕ್ರಮದಿಂದ ಬಂದ ಸುಮಾರು 6-7 ಲಕ್ಷ ರು. ಮೊತ್ತವನ್ನು ಕಾರ್ಗಿಲ್ ಯುದ್ಧ ನಿಧಿಗಾಗಿ ಕದ್ರಿ ಗೋಪಾಲನಾಥರು ಸಮರ್ಪಿಸಿದ್ದರು.
ಗೋಪಾಲನಾಥ್ ಪ್ರತಿಭೆಗೆ ಸಂದ ಪ್ರಶಸ್ತಿ, ಗೌರವಗಳು
ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರ್ಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ, ಮಂತ್ರಾಲಯ, ಅಹೋಬಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಟಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಆಳ್ವಾಸ್ ವಿರಾಸತ್ ಪ್ರಶಸ್ತಿ-೨೦೦೮ ಮುಂತಾದ ಅನೇಕ ಪ್ರಶಸ್ತಿ, ಗೌರವಗಳು ಕದ್ರಿ ಗೋಪಾಲನಾಥರ ಕಲಾಪ್ರತಿಭೆಯನ್ನು ಅರಸಿ ಬಂದಿತ್ತು. ಭಾರತದಲ್ಲಿ ಹಾಗೂ ಹೊರಗೆ ಅನೇಕ ಸಂಗೀತ ಕಛೇರಿಗಳನ್ನು ನಡೆಸುತ್ತಾ ಬಂದಿರುವ ಕದ್ರಿ ಗೋಪಾಲನಾಥ್, ‘ಸ್ಯಾಕ್ಸೊಫೋನ್ ಚಕ್ರವರ್ತಿ’ ಎಂದೇ ಹೆಸರಾಗಿದ್ದಾರೆ.
ಚಿನ್ನ ಲೇಪನದ ಸ್ಯಾಕ್ಸೋಫೋನ್ ಗಿಫ್ಟ್ ನೀಡಿದ್ದ ಚೆಕ್ ಗಣರಾಜ್ಯ!
1980 ರಲ್ಲಿ ಮುಂಬೈನ ಬಿರ್ಲಾ ಭವನದಲ್ಲಿ ಜಾನ್ ಹೂಡಿ ಎಂಬ ವಿದೇಶಿಗನ ಜೊತೆಗೆ ಕದ್ರಿ ಗೋಪಾಲನಾಥ್‌ಗೆ ಸ್ಯಾಕ್ಸೋಫೋನ್ ವಾದನ ನಡೆಸಿ ಸೈ ಎನಿಸಿಕೊಂಡರು. ಅಲ್ಲಿ ಬೆಳಗ್ಗಿನ ಕಛೇರಿಯೇ ಜನರನ್ನು ಆಕರ್ಷಿಸಿದ ಕಾರಣ ಸಂಜೆಯೂ ಕಛೇರಿ ನೀಡುವಂತೆ ಒತ್ತಾಯ ಕೇಳಿಬಂತು. ಅದರಂತೆ ಕದ್ರಿಯವರ ಸಂಜೆಯ ಕಛೇರಿಯೂ ಭಾರಿ ಜನಮನ್ನಣೆಗೆ ಪಾತ್ರವಾಯಿತು. ಈ ಜನಪ್ರಿಯತೆ ಅವರನ್ನು ಮುಂದಿನ ವರ್ಷ ಜಕೊಸ್ಲೋವಾಕಿಯಾ ದೇಶಕ್ಕೆ ಕರೆದೊಯ್ಯಿತು.
ಅಲ್ಲಿ ಕದ್ರಿ ಗೋಪಾಲನಾಥ್‌ರ ಸ್ಯಾಕ್ಸೋಫೋನ್ ವಾದನಕ್ಕೆ ತಲೆದೂಗಿದ ಸಂಘಟಕರು ಚಿನ್ನದ ಲೇಪನದ ಸ್ಯಾಕ್ಸೋಫೋನ್‌ನ್ನು ಉಡುಗೊರೆಯಾಗಿ ನೀಡಿದರು.
ಆಕಾಶವಾಣಿಯಲ್ಲೂ ಸಿಕ್ಕಿತು ಸ್ಯಾಕ್ಸೋಫೋನ್‌ಗೆ ಅವಕಾಶ
ಆಕಾಶವಾಣಿಯಲ್ಲಿ ಈ ಹಿಂದೆ ಸ್ಯಾಕ್ಸೋಫೋನ್ ವಾದನಕ್ಕೆ ಅವಕಾಶ ಇರಲಿಲ್ಲ. ಆಕಾಶವಾಣಿಯಲ್ಲಿ ಸ್ಯಾಕ್ಸೋಫೋನ್ ನುಡಿಸಬೇಕು ಎಂಬ ಅದಮ್ಯ ಆಕಾಂಕ್ಷೆ ಹೊಂದಿದ್ದ ಕದ್ರಿ ಗೋಪಾಲನಾಥ್ ಅವರು ಈ ವಿಚಾರವನ್ನು ಖ್ಯಾತ ಗಾಯಕ ಬಾಲಮುರಳಿಕೃಷ್ಣ ಗಮನಕ್ಕೆ ತಂದರು. ಅವರು ಕೂಡಲೇ ದೆಹಲಿ ಆಕಾಶವಾಣಿ ಮುಖ್ಯಸ್ಥರನ್ನು ಸಂಪರ್ಕಿಸಿ, ಸ್ಯಾಕ್ಸೋಫೋನ್ ವಾದನಕ್ಕೂ ಆಕಾಶವಾಣಿಯಲ್ಲಿ ಅವಕಾಶ ನೀಡುವಂತೆ ವಿನಂತಿಸಿಕೊಂಡರು. ಇದರ ಫಲವಾಗಿ ಕದ್ರಿ ಗೋಪಾಲನಾಥ್ ಅವರು ಆಕಾಶವಾಣಿಯಲ್ಲಿ ಆಹ್ವಾನಿತ ಸಂಗೀತಗಾರರ ಎದುರು ಸ್ಯಾಕ್ಸೋಫೋನ್ ನುಡಿಸಿ ಅಪಾರ ಮೆಚ್ಚುಗೆಗೆ ಒಳಗಾದರು. ಅಲ್ಲದೆ ಆಕಾಶವಾಣಿಯ ಬಿ ಹೈ ಗ್ರೇಡ್ ಗೆ ಪಾತ್ರರಾಗಿ ದೇಶಾದ್ಯಂತ ಆಕಾಶವಾಣಿಗಳಲ್ಲಿ ಸ್ಯಾಕ್ಸೋಫೋನ್ ಕಾರ್ಯಕ್ರಮ ನೀಡಿದರು.