5 ವರ್ಷದಲ್ಲಿ ವಾರಣಾಸಿ ಹೇಗೆ ಬದಲಾಗಿದೆ? ಇಲ್ಲಿದೆ ಚಿತ್ರಣ

By Web DeskFirst Published Apr 29, 2019, 5:02 PM IST
Highlights

ವಾರಣಾಸಿ ಯಾವತ್ತೂ ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಿರಲಿಲ್ಲ. ಗಲೀಜು, ಇಕ್ಕಟ್ಟು, ಸುಲಿಗೆ, ಮಾಲಿನ್ಯ ಹೀಗೆ ನಾನಾ ಕಾರಣಗಳಿಂದಾಗಿ ಅಭಿವೃದ್ಧಿಯಿಂದ ದೂರವೇ ಉಳಿದಿತ್ತು.  ಐದು ವರ್ಷಗಳಲ್ಲಿ ಕಳೆದಿದೆ. ಮೋದಿಯವರ ಕ್ಷೇತ್ರ ಹೇಗೆ ಬದಲಾಗಿದೆ? ಇಲ್ಲಿದೆ ಉತ್ತರ. 

ಉತ್ತರ ಪ್ರದೇಶದ ವಾರಾಣಸಿಯಿಂದ ಎರಡನೇ ಬಾರಿಗೆ ವಿಜಯ ಬಯಸಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಸಿದ್ದಾರೆ. ವಾರಾಣಸಿ ಕೇವಲ ನಗರವಲ್ಲ, ಹಿಂದುಗಳ ಪವಿತ್ರ ಕ್ಷೇತ್ರ. ಜೀವನದಲ್ಲೊಮ್ಮೆ ಕಾಶಿ ಯಾತ್ರೆ ಮಾಡಬೇಕು, ವಿಶ್ವನಾಥನ ದರ್ಶನ ಪಡೆಯಬೇಕು, ಆಗ ಮಾತ್ರ ಮೋಕ್ಷ ಸಿಗುತ್ತದೆ ಎಂದು ಬಹಳ ಜನರು ನಂಬಿದ್ದಾರೆ. ಆದ್ದರಿಂದಲೇ ಇಲ್ಲಿಗೆ ಪ್ರತಿವರ್ಷ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ.

ಆದರೆ, ಈ ಪಟ್ಟಣ ಯಾವತ್ತೂ ಪ್ರವಾಸಿಗರಿಗೆ ಆಕರ್ಷಣೀಯ ತಾಣವಾಗಿರಲಿಲ್ಲ. ಗಲೀಜು, ಇಕ್ಕಟ್ಟು, ಸುಲಿಗೆ, ಮಾಲಿನ್ಯ ಹೀಗೆ ನಾನಾ ಕಾರಣಗಳಿಂದಾಗಿ ಅಭಿವೃದ್ಧಿಯಿಂದ ದೂರವೇ ಉಳಿದಿತ್ತು. ಇಂತಹ ಕ್ಷೇತ್ರದಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ನರೇಂದ್ರ ಮೋದಿ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದರು.

ನಂತರ ಐದು ವರ್ಷಗಳಲ್ಲಿ ವಾರಾಣಸಿಯನ್ನು ಅಭಿವೃದ್ಧಿಪಡಿಸಿ ತೋರಿಸುತ್ತೇನೆ ಎಂದು ಶಪಥ ಕೂಡ ಮಾಡಿದ್ದರು. ಈಗ ಐದು ವರ್ಷ ಕಳೆದಿದೆ. ಮೋದಿಯವರ ಕ್ಷೇತ್ರ ಹೇಗೆ ಬದಲಾಗಿದೆ? ಇಲ್ಲಿದೆ ಉತ್ತರ.

ಗಂಗಾನದಿಯಲ್ಲಿ ಜಲಸಾರಿಗೆ

ಭಾರತದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಒಳನಾಡು ಜಲಸಾರಿಗೆ ವಾರಾಣಸಿಯಿಂದ ಆರಂಭವಾಗಿದೆ. ಕಳೆದ ವರ್ಷ ನರೇಂದ್ರ ಮೋದಿ ವಾರಾಣಸಿಯ ಗಂಗಾ ನದಿ ಮೂಲಕ ಭಾರತದ ಮೊದಲ ಮಲ್ಟಿ-ಮಾಡೆಲ್‌ ಟರ್ಮಿನಲ್‌ ಉದ್ಘಾಟಿಸಿದರು. ದೇಶದ ಮೊದಲ ಒಳನಾಡು ಜಲಸಾರಿಗೆಯಾದ ಕಂಟೇನರ್‌ ಕಾರ್ಗೋ ಹಡಗನ್ನು ಕೊಲ್ಕತ್ತಾದಿಂದ ವಾರಾಣಸಿಗೆ ಬರಮಾಡಿಕೊಂಡರು. ರಾಷ್ಟ್ರೀಯ ಜಲಸಾರಿಗೆಯಡಿ ನಿರ್ಮಾಣವಾದ ಮೊದಲ ಮಲ್ಟಿಮಾಡೆಲ್‌ ವಾಟರ್‌ ವೇ ಇದು.

ರಸ್ತೆಗಳು ಹೇಗಾಗಿವೆ?

ಕಳೆದ ವರ್ಷ ಮೋದಿ 1,571.95 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ 34 ಕಿ.ಮೀ. ಉದ್ದದ ಎರಡು ಪ್ರಮುಖ ರಸ್ತೆಗಳನ್ನು ಉದ್ಘಾಟಿಸಿದರು. ಇದಲ್ಲದೆ 16.55 ಕಿ.ಮೀ. ಉದ್ದದ ವಾರಾಣಸಿ ರಿಂಗ್‌ ರೋಡ್‌ನ 1ನೇ ಹಂತವನ್ನು 7.59 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಬಾಬಾಟ್‌ಪುಟ್‌- ವಾರಾಣಸಿಗೆ ಹೋಗುವ 17.25 ಕಿ.ಮೀ. ಉದ್ದದ 4 ಲೇನ್‌ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಅದಕ್ಕಾಗಿ 812.59 ಕೋಟಿ ಮೀಸಲಿರಿಸಲಾಗಿದೆ.

ಎನ್‌ಎಚ್‌ 56 (ಲಖನೌ-ವಾರಾಣಸಿ)ನಲ್ಲಿ ರೈಲ್ವೆ ಬ್ರಿಡ್ಜ್‌ ಮತ್ತು ಒಂದು ಫ್ಲೈ-ಓವರ್‌ ಒಳಗೊಂಡ ರಿಂಗ್‌ ರಸ್ತೆ, ಎನ್‌ಎಚ್‌ -23 (ಅಜಂಗಢ-ವಾರಾಣಸಿ), ಎನ್‌ಎಚ್‌ 29 (ಗೋರಖ್‌ಪುರ-ವಾರಾಣಸಿ) ಮತ್ತು ಅಯೋಧ್ಯೆ-ವಾರಾಣಸಿ ಹೆದ್ದಾರಿಗಳು, ಬೈಪಾಸ್‌ಗಳು ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಿವೆ.

ಇದು ಪ್ರಯಾಣದ ಅವಧಿಯನ್ನು ತಗ್ಗಿಸಿದೆ, ಜೊತೆಗೆ ಮಾಲಿನ್ಯವನ್ನೂ ಕಡಿಮೆ ಮಾಡಿದೆ. ವಾರಾಣಸಿಯಲ್ಲಿರುವ 4 ರೈಲು ನಿಲ್ದಾಣಗಳ ಪೈಕಿ ಮಂದುವಾಧಿ ನಿಲ್ದಾಣವು ವಿಶ್ವದರ್ಜೆಯ ನಿಲ್ದಾಣದ ಮಾನ್ಯತೆ ಪಡೆದಿದೆ. ವಾರಾಣಸಿಯಲ್ಲಿ ಟ್ರಾಫಿಕ್‌ ಜಾಮ್‌ ಕಡಿಮೆ ಮಾಡಲು 173.53 ಕೋಟಿ ವೆಚ್ಚದಲ್ಲಿ ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್‌ ಸ್ಥಾಪಿಸಲಾಗಿದೆ.

ವಿಶ್ವನಾಥ ದೇಗುಲದಿಂದ ಗಂಗಾನದಿಗೆ ಕಾರಿಡಾರ್‌

ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ. ಕಾಶಿ ವಿಶ್ವನಾಥ ದೇವಾಲಯಕ್ಕೆ ಯಾತ್ರಾರ್ಥಿಗಳು ಮಣಿಕರ್ಣಿಕಾ, ಜಲಾಸೇನ್‌, ಲಲಿತಾ ಘಾಟ್ಸ್‌ ಮೂಲಕವಾಗಿ ನೇರವಾಗಿ ತಲುಪಲು ಅವಕಾಶ ಮಾಡಿಕೊಡುವ ಯೋಜನೆಯೇ ಗಂಗಾ ಕಾರಿಡಾರ್‌. 600 ಕೋಟಿ ರು. ವೆಚ್ಚದ ಈ ಯೋಜನೆಯು ಈ ವರ್ಷ ಪೂರ್ಣವಾಗಲಿದೆ. ಇದಕ್ಕಾಗಿ 166 ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಕಾರಿಡಾರ್‌ 56 ಮೀಟರ್‌ ಅಗಲ, 300 ಮೀಟರ್‌ ಉದ್ದವಿದೆ. ಸದ್ಯ ಈ ಯೋಜನೆಯಿಂದಾಗಿ ದೇವಾಲಯದ ಸುತ್ತಲೂ ವಿಶ್ವದರ್ಜೆಯ ಸೌಕರ‍್ಯಗಳು ಲಭ್ಯವಾಗುತ್ತಿವೆ. ಮೊದಲು ವಿಶ್ವನಾಥ ದೇಗುಲದಿಂದ ಗಂಗಾನದಿಗೆ ಹೋಗಬೇಕೆಂದರೆ ಇಕ್ಕಟ್ಟಿನ ಕೊಳಕು ಓಣಿಗಳಲ್ಲಿ ಸಾಗಬೇಕಿತ್ತು. ಈಗ ದೇವಸ್ಥಾನದಿಂದ ನೇರವಾಗಿ ಗಂಗಾನದಿ ಕಾಣಿಸುತ್ತದೆ.

ತಗ್ಗಿದ ವಿದ್ಯುತ್‌ ಸಮಸ್ಯೆ

2014ಕ್ಕೂ ಮೊದಲು ವಾರಾಣಸಿಯಲ್ಲಿ ತೀರಾ ವಿದ್ಯುತ್‌ ಸಮಸ್ಯೆ ಇತ್ತು. ಮೊದಲು ನಗರದಲ್ಲಿ ಕೇವಲ 10-12 ಗಂಟೆ ಮಾತ್ರ ವಿದ್ಯುತ್‌ ವಿತರಿಸಲಾಗುತ್ತಿತ್ತು. ಸದ್ಯ 22-23 ಗಂಟೆ ವಿದ್ಯುತ್‌ ಲಭ್ಯವಿರುತ್ತದೆ.

ಗಂಗಾನದಿ ಎಷ್ಟುಶುದ್ಧವಾಯಿತು?

ಕಾಶಿಗೆ ಹೋದವರೆಲ್ಲ ಗಂಗಾಸ್ನಾನ ಮಾಡುತ್ತಾರೆ. ಗಂಗಾನದಿಯ ದಡದಲ್ಲಿ ಪ್ರತಿದಿನ ಸಂಜೆ ನಡೆಯುವ ಗಂಗಾರತಿ ಪ್ರಮುಖ ಆಕರ್ಷಣೆ. ಆದರೆ, ಕಾಶಿಯಲ್ಲಿ ಗಂಗಾಸ್ನಾನ ಮಾಡಿದರೆ ಚರ್ಮರೋಗ ಬರುತ್ತದೆ ಎಂದು ಜನರು ಹೆದರುವಷ್ಟುಇಲ್ಲಿನ ನೀರು ಮಲಿನವಾಗಿತ್ತು. ಅರೆಬೆಂದ ಶವಗಳನ್ನು ಗಂಗಾನದಿಗೆ ಎಸೆಯುವುದು, ಘಾಟ್‌ಗಳಲ್ಲಿ ನೈರ್ಮಲ್ಯದ ಕೊರತೆ, ಕೊಳಚೆ ನೀರನ್ನು ಸ್ಥಳೀಯ ನಿವಾಸಿಗಳು, ಹೋಟೆಲ್‌ಗಳು ಹಾಗೂ ಸಣ್ಣಪುಟ್ಟಉದ್ದಿಮೆಗಳು ನೇರವಾಗಿ ನದಿಗೆ ಹರಿಸುವುದು, ವಾರಾಣಸಿಯ ಚರಂಡಿ ನೀರು ಗಂಗಾನದಿಗೆ ಸೇರುವುದು ಮುಂತಾದವು ಇದಕ್ಕೆ ಕಾರಣವಾಗಿದ್ದವು.

ನಮಾಮಿ ಗಂಗೆ ಯೋಜನೆಯಡಿಯಲ್ಲಿ ವಾರಾಣಸಿಯಲ್ಲಿ ಗಂಗಾನದಿಯ ಶುದ್ಧೀಕರಣಕ್ಕಾಗಿ 13 ಯೋಜನೆಗಳಡಿ 913 ಕೊಟಿ ರು. ಖರ್ಚು ಮಾಡಲಾಗುತ್ತಿದೆ. ವಾರಾಣಸಿಯ ಕೊಳಚೆ ವಿಲೇವಾರಿಗೆ ಪ್ರತ್ಯೇಕವಾಗಿ 703 ಕೊಟಿ ರು. ವ್ಯಯಿಸಲಾಗುತ್ತಿದೆ. ಈಗ ಪವಿತ್ರ ನದಿಗೆ ನಗರದ ಯಾವುದೇ ಕೊಳಚೆ ಸೇರುತ್ತಿಲ್ಲ. ಕೊಳಚೆ ವಿಲೇವಾರಿಗಾಗಿ ಗೋಯ್‌ತಹಾ ಬಳಿ 218 ಕೋಟಿ ವೆಚ್ಚದ ಯೋಜನೆ ಜಾರಿಗೊಳಿಸಲಾಗಿದೆ.

ಆದರೂ ಗಂಗಾನದಿಯನ್ನು ಪೂರ್ಣಪ್ರಮಾಣದಲ್ಲಿ ಶುದ್ಧೀಕರಿಸಲು ಆಗಿಲ್ಲ. ಆದರೆ ಘಾಟ್‌ಗಳು ಸ್ವಚ್ಛವಾಗಿವೆ. ನದಿಯ ನೀರು ಕೂಡ ಮೊದಲಿಗಿಂತ ಹೆಚ್ಚು ಶುದ್ಧವಾಗಿದೆ. ಕಾಶಿಯ ಜನರಲ್ಲಿ ಗಂಗೆಯನ್ನು ಮಲಿನ ಮಾಡಬಾರದು ಎಂಬ ಜಾಗೃತಿ ಮೂಡಿದೆ.

ಮನೆಮನೆಗೆ ಪೈಪ್‌ ಗ್ಯಾಸ್‌

ವಾರಾಣಸಿ ನಗರ ಅನಿಲ ವಿತರಣಾ ನೆಟ್‌ವರ್ಕ್ ಕಳೆದ ವರ್ಷ ನಗರದ ಎಲ್ಲ ಮನೆಗಳಿಗೆ, ಟ್ರಾನ್ಸ್‌ಪೋರ್ಟ್‌ ಸೆಕ್ಟರ್‌ಗಳಿಗೆ ಮತ್ತು ಕಾರ್ಖಾನೆಗಳಿಗೆ ಪರಿಸರ ಸ್ನೇಹಿ ನೈಸರ್ಗಿಕ ಅನಿಲ ಸರಬರಾಜು ಮಾಡುತ್ತಿದೆ. ಇದು ಕಾಶಿಯಲ್ಲಿ ಮಾಲಿನ್ಯವನ್ನು ಕಡಿಮೆ ಮಾಡಿದೆ.

ಅತಿದೊಡ್ಡ ಕ್ಯಾನ್ಸರ್‌ ಆಸ್ಪತ್ರೆ

ಪ್ರಧಾನಿ ಮೋದಿ ಕಳೆದ ವರ್ಷ ವಾರಾಣಸಿಯಲ್ಲಿ ಹೋಮಿ ಭಾಭಾ ಕ್ಯಾನ್ಸರ್‌ ಆಸ್ಪತ್ರೆ ಉದ್ಘಾಟಿಸಿದರು. ಇದು ಟಾಟಾ ಮೆಮೊರಿಯಲ್‌ ಟ್ರಸ್ಟ್‌ನಿಂದ ಸ್ಥಾಪನೆಯಾದ, ಮೊಟ್ಟಮೊದಲ ಅತಿ ದೊಡ್ಡ ಕ್ಯಾನ್ಸರ್‌ ಘಟಕ. ಇದೇ ಟ್ರಸ್ಟ್‌ ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಆವರಣದೊಳಗೆ ಮತ್ತೊಂದು ಕ್ಯಾನ್ಸರ್‌ ಘಟಕ ಸ್ಥಾಪಿಸಿದೆ. 352 ಹಾಸಿಗೆ ಹೊಂದಿರುವ ಪಂಡಿತ್‌ ಮದನ್‌ ಮೋಹನ್‌ ಮಾಳವೀಯ ಕ್ಯಾನ್ಸರ್‌ ಘಟಕವು ಕೇವಲ 10 ತಿಂಗಳಲ್ಲಿ ನಿರ್ಮಾಣವಾಗಿ, ಇದೇ ಫೆಬ್ರವರಿಯಲ್ಲಿ ಲೋಕಾರ್ಪಣೆಯಾಗಿದೆ.

ಬೃಹತ್‌ ಸಮಾವೇಶ ಭವನ

ಜಪಾನ್‌ ಸರ್ಕಾರದ ಆರ್ಥಿಕ ನೆರವಿನೊಂದಿಗೆ 130 ಕೋಟಿ ವೆಚ್ಚದಲ್ಲಿ ವಾರಾಣಸಿಯಲ್ಲಿ 1200 ಜನರು ಕೂರಬಹುದಾದ ಅತ್ಯಾಧುನಿಕ ಸಮಾವೇಶ ಭವನವನ್ನು ನಿರ್ಮಿಸಲಾಗಿದೆ. ಇಲ್ಲಿ ಅಂತಾರಾಷ್ಟ್ರೀಯ ಮಟ್ಟದ ಸಮಾವೇಶಗಳು ನಡೆಯುವುದರಿಂದ ವಾರಾಣಸಿಗೆ ಜಾಗತಿಕ ಮಾನ್ಯತೆ ಲಭಿಸತೊಡಗಿದೆ.

ಪ್ರವಾಸಿಗರ ಸಂಖ್ಯೆ ಹೆಚ್ಚಳ

2018-19ರ ಅವಧಿಯಲ್ಲಿ 25 ಲಕ್ಷ ಪ್ರಯಾಣಿಕರು ವಿಮಾನದ ಮೂಲಕ ವಾರಾಣಸಿಗೆ ಬಂದಿದ್ದಾರೆ. 2013-14ರಲ್ಲಿ ಈ ಸಂಖ್ಯೆ 7.6 ಲಕ್ಷದಷ್ಟಿತ್ತು. ಹೋಟೆಲ್‌ ರೂಮ್‌ಗಳು ಕಳೆದ ವರ್ಷಗಳಿಗಿಂತ ಹೆಚ್ಚೆಚ್ಚು ಬ್ಯುಸಿಯಾಗುತ್ತಿವೆ. ವ್ಯಾಪಾರವೂ ಶೇ.30-40ರಷ್ಟುಹೆಚ್ಚಾಗಿದೆ ಎನ್ನುತ್ತಾರೆ ಅಲ್ಲಿನ ಹೋಟೆಲ್‌ ಮಾಲಿಕರು. ಕೇವಲ ವಿದೇಶಿ ಪ್ರವಾಸಿಗರು ಮಾತ್ರವಲ್ಲದೆ, ದೇಶೀಯ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದೆ. ಘಾಟ್‌ಗಳು ಹೆಚ್ಚೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

5 ವರ್ಷದಲ್ಲಿ ಮೋದಿ ವಾರಾಣಸಿಗೆ ಭೇಟಿ ನೀಡಿದ್ದು 18 ಬಾರಿ

5 ವರ್ಷದಲ್ಲಿ ಮೋದಿ ವಾರಾಣಸಿಗೆ ನೀಡಿದ ಅನುದಾನ .30,000 ಕೋಟಿ

30 ಸಾವಿರ ಕೋಟಿಯ 300 ಯೋಜನೆ!

ನರೇಂದ್ರ ಮೋದಿ ವಾರಾಣಸಿ ಕ್ಷೇತ್ರದಿಂದ ಆಯ್ಕೆಯಾದ ಬಳಿಕ ವಾರಾಣಸಿ ಅಭಿವೃದ್ಧಿಗಾಗಿ 30,000 ಕೋಟಿ ಮೀಸಲಿಟ್ಟಿದ್ದಾರೆ. ಅಧಿಕೃತ ಅಂಕಿಅಂಶಗಳ ಪ್ರಕಾರ 2014-15ರಿಂದೀಚೆಗೆ ಕ್ಷೇತ್ರದ ಅಭಿವೃದ್ಧಿಗಾಗಿಯೇ 21,862 ಕೋಟಿ ವ್ಯಯಿಸಲಾಗಿದೆ.

4000 ಕೋಟಿ- ಕಾಶಿ ವಿಶ್ವನಾಥ ದೇವಾಲಯದಿಂದ ಗಂಗಾ ಘಾಟ್‌ಗಳವರೆಗೆ ಕಾರಿಡಾರ್‌ ನಿರ್ಮಾಣ

600 ಕೋಟಿ- ವಾರಾಣಸಿ ವಿಮಾನ ನಿಲ್ದಾಣದಿಂದ ನಗರಕ್ಕೆ 4 ಲೇನ್‌ ಹೆದ್ದಾರಿ

800 ಕೋಟಿ- ಮದನ್‌ ಮೋಹನ್‌ ಮಾಳವೀಯ ಕ್ಯಾನ್ಸರ್‌ ಸೆಂಟರ್‌

600 ಕೋಟಿ- ಕೊಳಚೆ ನಿರ್ವಹಣಾ ಘಟಕ

533 ಕೋಟಿ- ಟ್ರೇಡ್‌ ಫೆಸಿಲಿಟಿ ಸೆಂಟರ್‌

305 ಕೊಟಿ- ಸಮಾವೇಶ ಭವನ

185 ಕೋಟಿ- ಕುಡಿಯುವ ನೀರಿನ ಸೌಲಭ್ಯ

131 ಕೋಟಿ- 36,000 ಎಲ್‌ಇಡಿ ಬೀದಿ ದೀಪ

click me!