ವಕ್ಫ್ ಆಸ್ತಿ ಕಬಳಿಕೆ : ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ನೀಡಿದ ಆದೇಶವೇನು..?

By Web DeskFirst Published Dec 13, 2018, 9:14 AM IST
Highlights

ವಕ್ಫ್ ಆಸ್ತಿ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಸಲ್ಲಿಸಿರುವ ವರದಿಯನ್ನು ವಿಧಾನಮಂಡಲ ಅಧಿವೇಶನ ಅಥವಾ 2019ರ ಅಧಿವೇಶನದಲ್ಲಿ ಮಂಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ ನೀಡಿದೆ.

ಬೆಂಗಳೂರು :  ರಾಜ್ಯಾದ್ಯಂತ ವಕ್ಫ್ ಆಸ್ತಿ ಕಬಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ಸಲ್ಲಿಸಿರುವ ವರದಿಯನ್ನು ಪ್ರಸಕ್ತ ವಿಧಾನಮಂಡಲ ಅಧಿವೇಶನ ಅಥವಾ 2019ರ ಅಧಿವೇಶನದಲ್ಲಿ ಮಂಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಆದೇಶಿಸಿದೆ.

ಮಾಣಿಪ್ಪಾಡಿ ವರದಿಯನ್ನು ಅಧಿವೇಶನದಲ್ಲಿ ಮಂಡಿಸುವಂತೆ ತನಗೆ ಸೂಚಿಸಿ ಹೊರಡಿಸಿರುವ ಆದೇಶವನ್ನು ಮರು ಪರಿಶೀಲಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಆದೇಶ ಮಾಡಿದೆ.

2016ರ ಫೆಬ್ರವರಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮಾಣಿಪ್ಪಾಡಿ ವರದಿಯನ್ನು ಮಂಡಿಸಲಾಗುವುದು ಎಂದು ರಾಜ್ಯ ಸರ್ಕಾರವು 2015ರ ಸೆ.10ರಂದು ಹೈಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿದೆ. ಹೀಗಾಗಿ, ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ಮೆರಿಟ್‌ ಮೇಲೆ ವಿಚಾರಣೆ ನಡೆಸುವ ಅಗತ್ಯವಿಲ್ಲ. ಆದ್ದರಿಂದ ಸರ್ಕಾರವು ಪ್ರಸಕ್ತ ಅಥವಾ 2019ರ ಸಾಲಿನ ಅಧಿವೇಶನದಲ್ಲಿ ಮಾಣಿಪ್ಪಾಡಿ ವರದಿಯನ್ನು ಮಂಡಿಸಬೇಕು ಹೈಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ.

6 ವರ್ಷದಿಂದ ಬಾಕಿಯಿರುವ ವರದಿ:

ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 2012ರ ಮಾರ್ಚ್ ಲ್ಲಿ ಅಂದಿನ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್‌ ಮಾಣಿಪ್ಪಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಆದರೆ, ಮೂರು ವರ್ಷ ಕಳೆದರೂ ಸರ್ಕಾರ ವರದಿಯನ್ನು ಸದನದಲ್ಲಿ ಮಂಡಿಸಿರಲಿಲ್ಲ. ಇದರಿಂದ ಸದನದಲ್ಲಿ ಮಾಣಿಪ್ಪಾಡಿ ವರದಿಯನ್ನು ಮಂಡಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮಾಜಿ ಸಚಿವ ಎಸ್‌.ಕೆ. ಕಾಂತಾ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಯು 2015ರ ಸೆ.10ರಂದು ವಿಚಾರಣೆಗೆ ಬಂದಾಗ ಸರ್ಕಾರದ ನಿರ್ದೇಶನದ ಮೇರೆಗೆ ರಾಜ್ಯ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌, 2016ರ ಫೆಬ್ರುವರಿಯ ಅಧಿವೇಶನದಲ್ಲಿ ಮಾಣಿಪ್ಪಾಡಿ ವರದಿ ಮಂಡಿಸಲಾಗುವುದು ಎಂದು ಕೋರ್ಟ್‌ಗೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಅದನ್ನು ಆಧರಿಸಿ ವಿಭಾಗೀಯ ಪೀಠ ಅರ್ಜಿ ಇತ್ಯರ್ಥಪಡಿಸಿತ್ತು. ಈ ಆದೇಶದ ಮರುಪರಿಶೀಲನೆಗೆ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗ ಕಾಯ್ದೆ-1994 ರ ಸೆಕ್ಷನ್‌ 10(2) ಪ್ರಕಾರ ಸಮಿತಿಯ ವರದಿಯನ್ನು ಸದನದಲ್ಲಿ ಮಂಡಿಸಬೇಕು ಎಂದು ಅರ್ಜಿದಾರರು (ಎಸ್‌.ಕೆ.ಕಾಂತಾ) ಅರ್ಜಿಯಲ್ಲಿ ಮನವಿ ಮಾಡಿದ್ದರು. ಆದರೆ, ಕಾಯ್ದೆಯ ಸೆಕ್ಷನ್‌ 10(2) ಅನುಸಾರ ಸಮಿತಿಯ ವರದಿಯ ಬದಲಾಗಿ ಅದರ ಶಿಫಾರಸುಗಳನ್ನಷ್ಟೇ ಸದನದಲ್ಲಿ ಮಂಡಿಸಬಹುದು. 

ಅದರಂತೆ ಈ ಶಿಫಾರಸುಗಳನ್ನು 2016ರ ಮಾ.3ರಂದೇ ಸರ್ಕಾರ ಸದನದಲ್ಲಿ ಮಂಡಿಸಿದ್ದು, ಅವು ತಿರಸ್ಕೃತಗೊಂಡಿವೆ. ಹೀಗಿರುವಾಗ ವರದಿ ಮಂಡಿಸುವ ಪ್ರಶ್ನೆಯೇ ಇಲ್ಲ. 2015ರ ಸೆ.10ರಂದು ನ್ಯಾಯಾಲಯ ಹೊರಡಿಸಿದ ಆದೇಶದಲ್ಲೂ ವರದಿ ಮಂಡಿಸುವಂತೆಯೇ ಉಲ್ಲೇಖವಾಗಿದೆ. ಆದ್ದರಿಂದ ಆ ಆದೇಶವನ್ನು ಮರು ಪರಿಶೀಲಿಸಬೇಕು ಎಂದು ಸರ್ಕಾರ ತನ್ನ ಅರ್ಜಿಯಲ್ಲಿ ಕೋರಿತ್ತು. ಇದೀಗ ಸರ್ಕಾರದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ನ್ಯಾಯಾಂಗ ನಿಂದನೆ ಅರ್ಜಿ ಬಾಕಿ:  ಈ ಮಧ್ಯೆ ಹೈಕೋರ್ಟ್‌ ಆದೇಶದ ಹೊರತಾಗಿಯೂ ಸರ್ಕಾರವು ಸದನದಲ್ಲಿ ಮಾಣಿಪ್ಪಾಡಿ ವರದಿಯನ್ನು ಮಂಡಿಸಿಲ್ಲ ಎಂದು ಆರೋಪಿಸಿ ಮೂಲ ಅರ್ಜಿದಾರ ಎಸ್‌.ಕೆ.ಕಾಂತಾ 2016ರಲ್ಲಿ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಇನ್ನೂ ವಿಚಾರಣೆ ಹಂತದಲ್ಲಿದೆ. ಹಾಗೆಯೇ, ಈ ಅರ್ಜಿಯ ವಿಚಾರಣೆ ವೇಳೆ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್‌, ಸದನದಲ್ಲಿ ಮಾಣಿಪ್ಪಾಡಿ ವರದಿ ಮಂಡಿಸದಿದ್ದರೆ ಸಂಬಂಧಪಟ್ಟಅಧಿಕಾರಿ ವಿರುದ್ಧ ನ್ಯಾಯಾಂಗ ನಿಂದನೆ ದೋಷಾರೋಪ ಹೊರಿಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿತ್ತು.

ಕಳೆದ ಏಳು ವರ್ಷಗಳಿಂದ ಕೋರ್ಟ್‌ನಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಈಗ ಜಯ ಸಂದಿದೆ. ವರದಿ ಜಾರಿಯಾದರೆ ಮುಸಲ್ಮಾನರಿಗೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಾಕಷ್ಟುಪ್ರಯೋಜನಗಳು ಸಿಗಲಿವೆ. ಕಳೆದ ಆರು ವರ್ಷಗಳಿಂದ ಸರ್ಕಾರವು ವರದಿ ಮಂಡಿಸದೆ ಕಾರಣಹರಣ ಮಾಡುತ್ತಿದೆ. ಹೈಕೋರ್ಟ್‌ನ ಈ ಆದೇಶದಿಂದ ವರದಿಯನ್ನು ಸದನದಲ್ಲಿ ಮಂಡಿಸದೇ ಸರ್ಕಾರಕ್ಕೆ ಬೇರೆ ದಾರಿ ಇಲ್ಲ.

- ಅನ್ವರ್‌ ಮಾಣಿಪ್ಪಾಡಿ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ

click me!