ರೇಪ್‌ ಸಂತ್ರಸ್ತೆಯ 24 ವಾರದ ಭ್ರೂಣ ತೆಗೆಸಲು ಕೋರ್ಟ್ ಒಪ್ಪಿಗೆ

By Web Desk  |  First Published Mar 13, 2019, 10:51 AM IST

ರೇಪ್‌ ಸಂತ್ರಸ್ತೆಯ 24 ವಾರದ ಭ್ರೂಣ ತೆಗೆಸಲು ಕೋರ್ಟ್ ಒಪ್ಪಿಗೆ |  ನ್ಯೂನತೆಯಿದ್ದ ಭ್ರೂಣ: ಅಪ್ರಾಪ್ತೆ ನೆರವಿಗೆ ಹೈಕೋರ್ಟ್‌ | ಭ್ರೂಣದ ಅಸಹಜ ಬೆಳವಣಿಗೆಯ ಕಾರಣಕ್ಕೆ ಗರ್ಭಪಾತಕ್ಕೆ ಅನುಮತಿ
 


ಬೆಂಗಳೂರು (ಮಾ. 13):  ಸುಮಾರು 24 ವಾರದ ಭ್ರೂಣ ಬೆಳವಣಿಗೆ ನ್ಯೂನತೆಯಿಂದ ಕೂಡಿರುವ ಕಾರಣ ಗರ್ಭಪಾತಕ್ಕೆ ಅನುಮತಿ ನೀಡಬೇಕೆಂದು ಅತ್ಯಾಚಾರ ಪ್ರಕರಣದ ಸಂತ್ರಸ್ತೆಯೊಬ್ಬರು ಸಲ್ಲಿಸಿದ್ದ ಮನವಿ ಪುರಸ್ಕರಿಸಿದ ಹೈಕೋರ್ಟ್‌, ತಜ್ಞ ವೈದ್ಯರ ವರದಿ ಆಧರಿಸಿ ಗರ್ಭಪಾತಕ್ಕೆ ಅವಕಾಶ ಕಲ್ಪಿಸಿದೆ.

ಚಿತ್ರದುರ್ಗ ಮೂಲದ 17 ವರ್ಷದ ಅಪ್ರಾಪ್ತೆಯು ಗರ್ಭಪಾತಕ್ಕೆ ಅನುಮತಿ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Latest Videos

undefined

ಈ ಅರ್ಜಿಯನ್ನು ಈ ಹಿಂದೆ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಅಲೋಕ್‌ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅಪ್ರಾಪ್ತೆಯ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ವಾಣಿ ವಿಲಾಸ ಆಸ್ಪತ್ರೆ ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜು-ಸಂಶೋಧನಾ ಸಂಸ್ಥೆಯ ತಜ್ಞ ವೈದ್ಯರ ತಂಡಕ್ಕೆ ನಿರ್ದೇಶಿಸಿತ್ತು.

ಮಂಗಳವಾರ ಅರ್ಜಿ ಮತ್ತೆ ವಿಚಾರಣೆಗೆ ಬಂದಾಗ ಬೆಂಗಳೂರು ವೈದ್ಯಕೀಯ ಕಾಲೇಜು-ಸಂಶೋಧನಾ ಸಂಸ್ಥೆಯ ಪರ ವಕೀಲೆ ಎಂ.ಸಿ.ನಾಗಶ್ರೀ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.

ಅರ್ಜಿದಾರಳ ಭ್ರೂಣಕ್ಕೆ ಸದ್ಯ 24 ವಾರವಾಗಿದೆ. ಭ್ರೂಣದ ತಲೆಭಾಗದಲ್ಲಿ ಸೀಳು ಕಾಣಿಸಿಕೊಂಡಿದೆ. ಮಗು ಜನಿಸಿದರೂ ಭವಿಷ್ಯದಲ್ಲಿ ಮತ್ತೆ ಆರೋಗ್ಯ ಸಮಸ್ಯೆ ಎದುರಾಗಲಿದೆ. ಇದರಿಂದ ಗರ್ಭಪಾತ ನಡೆಸುವುದೇ ಸೂಕ್ತ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಈ ವರದಿ ಪರಿಗಣಿಸಿದ ನ್ಯಾಯಪೀಠ, ತಜ್ಞ ವೈದ್ಯರ ತಂಡವು ಭ್ರೂಣದ ಬೆಳವಣಿಗೆ ನ್ಯೂನತೆಯಿಂದ ಕೂಡಿದೆ ಎಂದು ತಿಳಿಸಿ ವರದಿ ಸಲ್ಲಿಸಿದೆ. ಈ ವರದಿಯ ಆಧಾರದ ಮೇಲೆ ತಾಯಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ದೃಷ್ಟಿಯಿಂದ ಗರ್ಭಪಾತಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದು ತಿಳಿಸಿ ಅರ್ಜಿಯನ್ನು ಪುರಸ್ಕರಿಸಿತು.

ಅಲ್ಲದೆ, ಗರ್ಭದಿಂದ ಹೊರತೆಗೆದ ಭ್ರೂಣವನ್ನು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ಸಂರಕ್ಷಿಸಬೇಕು ಹಾಗೂ ಅದರ ಡಿಎನ್‌ಎ ಪರೀಕ್ಷೆ ಮಾಡಬೇಕು. ಹೊಳಲ್ಕೆರೆ ಠಾಣಾ ಪೊಲೀಸ್‌ ಇನ್ಸ್‌ಪೆಕ್ಟರ್‌, ಅರ್ಜಿದಾರಳ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆ ದೃಷ್ಟಿಯಿಂದ ಆ ಡಿಎನ್‌ಎ ಪರೀಕ್ಷೆಯ ವರದಿ ಪಡೆದುಕೊಳ್ಳಬೇಕು.

ಅರ್ಜಿದಾರಳಿಗೆ ಪರಿಹಾರ ನೀಡುವ ಮತ್ತು ಗರ್ಭಪಾತಕ್ಕೆ ತಗಲುವ ವೆಚ್ಚ ಭರಿಸಲು ತುರ್ತಾಗಿ 70 ಸಾವಿರ ರು. ಹಣ ಬಿಡುಗಡೆ ಮಾಡುವ ಬಗ್ಗೆ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಉತ್ತರಿಸಬೇಕು ಎಂದು ಸೂಚಿಸಿ ಪ್ರಾಧಿಕಾರಕ್ಕೆ ನೋಟಿಸ್‌ ಜಾರಿ ಮಾಡಿದ ನ್ಯಾಯಪೀಠ, ವಿಚಾರಣೆ ಮುಂದೂಡಿತು.

ಅಪ್ರಾಪ್ತೆಯ ಮನವಿ ಏನು:

ಅತ್ಯಾಚಾರ ಪ್ರಕರಣದಿಂದ ನಾನು ಗರ್ಭ ಧರಿಸಿದ್ದೇನೆ. ಸದ್ಯ ಭ್ರೂಣಕ್ಕೆ 24 ವಾರವಾಗಿದೆ. ಆದರೆ, ಭ್ರೂಣದಲ್ಲಿ ಬೈಲಾಟೆರಲ್‌ ಓಪನ್‌ ಲಿಪ್‌ ಸ್ಕೆಜೆನ್ಸಾ$್ಫಲಿ (ಭ್ರೂಣದ ತಲೆಭಾಗದಲ್ಲಿ ಸೀಳು) ಎಂಬ ಸಮಸ್ಯೆ ಕಾಣಿಸಿಕೊಂಡಿದೆ. ಈ ಕಾರಣಕ್ಕೆ ಮಗು ಜನಿಸಿದ ಮೇಲೆ ತೊಂದರೆ ಎದುರಾಗಲಿದೆ. ಜತೆಗೆ, ಹೆರಿಗೆ ಸಮಯದಲ್ಲಿ ತನಗೆ ಅಪಾಯವಾಗುವ ಸಾಧ್ಯತೆಯಿದೆ. ಆದ್ದರಿಂದ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಅಪ್ರಾಪ್ತೆ ಹೈಕೋರ್ಟ್‌ಗೆ ಕೋರಿದ್ದರು.
 

click me!