ಬರೋಬ್ಬರಿ 3 ಕಿ.ಮೀ. ಟ್ರಾಫಿಕ್‌ ಜಾಂ

By Web DeskFirst Published Jan 2, 2019, 9:22 AM IST
Highlights

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಎದುರಾಗಿತ್ತು. ನಂದಿ ಗಿರಿಧಾಮಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಜನರು ತೆರಳಿದ ಕಾರಣ ಸಂಚಾರ ದಟ್ಟಣೆ ಎದುರಾಗಿತ್ತು. 

ಚಿಕ್ಕಬಳ್ಳಾಪುರ:  ಹೊಸ ವರ್ಷಾಚರಣೆ ಸಲುವಾಗಿ ಮಂಗಳವಾರ ಬೆಳಗಿನ ಜಾವ ನಂದಿ ಗಿರಿಧಾಮದತ್ತ ಪ್ರವಾಸಿಗರು ಆಗಮಿಸಿದ ಪರಿಣಾಮ ಇಲ್ಲಿನ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. 

ನಂದಿ ಗಿರಿಧಾಮದಲ್ಲಿ ಕಾನೂನು- ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಸೋಮವಾರ ಸಂಜೆ 4 ಗಂಟೆಯಿಂದ ಮಂಗಳವಾರ ಬೆಳಗ್ಗೆ 8 ಗಂಟೆಯವರೆಗೂ ಬೆಟ್ಟದ ಪ್ರವೇಶ ನಿಷೇಧಿಸಿದ್ದವು. 

ಹೀಗಾಗಿ ಮಧ್ಯರಾತ್ರಿ ಬಳಿಕ ಬೆಟ್ಟಪ್ರವೇಶಕ್ಕೆಂದು ಆಗಮಿಸಿದ ವಾಹನಗಳು, ನಂದಿಬೆಟ್ಟದ ಬುಡದಲ್ಲಿರುವ ಪೊಲೀಸ್‌ ಚೆಕ್‌ಪೋಸ್ಟ್‌ನಿಂದ ಕಾರಹಳ್ಳಿ ಕ್ರಾಸ್‌ವರೆಗೂ ಸಾಲುಗಟ್ಟಿನಿಂತಿದ್ದ ಪರಿಣಾಮ ಸುಮಾರು 3 ಕಿ.ಮೀ. ವರೆಗೂ ಟ್ರಾಫಿಕ್‌ ಜಾಮ್‌ ಆಗಿತ್ತು. ಬೆಳಗ್ಗೆ 8 ಗಂಟೆ ವೇಳೆಗೆ ಏಕಕಾಲದಲ್ಲಿ ಎಲ್ಲ ವಾಹನಗಳೂ ಬೆಟ್ಟಹತ್ತಲು ಮುಂದಾದ ಪರಿಣಾಮ ಇಡೀ ಬೆಟ್ಟದ ರಸ್ತೆ ಸಂಪೂರ್ಣ ವಾಹನಗಳಿಂದಲೇ ತುಂಬಿಹೋಗಿತ್ತು. 

ನಂದಿಗಿರಿಧಾಮಕ್ಕೆ 6 ಸಾವಿರಕ್ಕೂ ಹೆಚ್ಚು ಕಾರುಗಳಲ್ಲಿ ಪ್ರವಾಸಿಗರು ಆಗಮಿಸಿದ್ದರು. ಬೈಕು ಸೇರಿದಂತೆ ಇತರೆ ವಾಹನಗಳ ಲೆಕ್ಕವೇ ಸಿಗದಂತಾಯಿತು. ಒಂದು ಅಂದಾಜಿನ ಪ್ರಕಾರ 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಮಂಗಳವಾರ ನಂದಿಗಿರಿಧಾಮಕ್ಕೆ ಭೇಟಿ ನೀಡಿ ನೂತನ ವರ್ಷಾಚರಣೆ ಮಾಡಿದ್ದಾರೆ.

click me!