ಮಹಾರಾಷ್ಟ್ರದಲ್ಲಿ ಮಳೆ; ಕರ್ನಾಟಕದಲ್ಲಿ ಪ್ರವಾಹ!

By Web DeskFirst Published Aug 1, 2019, 8:15 AM IST
Highlights

‘ಮಹಾ’ಮಳೆಯಿಂದ ಕೃಷ್ಣಾ ನೀರಿನ ಮಟ್ಟ ಏರಿಕೆ| ಮಳೆಗೆ ಕುಸಿದ 13 ಮನೆಗಳು| ಮೈದುಂಬಿ ಹರಿಯುತ್ತಿರುವ ಕೃಷ್ಣಾ, ಉಪನದಿಗಳು| ಜನ ಸಂಚಾರಕ್ಕೆ ಮುಕ್ತವಾದ ಸೇತುವೆಗಳು| ಸಾವಿರಾರು ಎಕರೆ ಗದ್ದೆಗಳು ಜಲಾವೃತ

 ಬೆಂಗಳೂರು[ಆ.01]: ರಾಜ್ಯದಲ್ಲಿ ಮಳೆಯ ಪ್ರಮಾಣ ಕುಸಿದಿದ್ದರೂ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಪ್ರವಾಹ ಮುಂದುವರಿದಿದೆ. ಪ್ರವಾಹದಲ್ಲಿ ಮುಳುಗಿದ್ದ ಸೇತುವೆಗಳು ಇನ್ನೂ ಜನ ಸಂಚಾರಕ್ಕೆ ಮುಕ್ತವಾಗಿಲ್ಲ. ಈ ನಡುವೆ ಚಿಕ್ಕೋಡಿಯ ನಾನಾ ಕಡೆ 13 ಮನೆಗಳು ಕುಸಿದಿವೆ. ಸಾವಿರಾರು ಎಕರೆ ಭತ್ತದ ಗದ್ದೆಗಳು ಜಲಾವೃತವಾಗಿವೆ. ಹಲವು ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ. ಇನ್ನು ಕರಾವಳಿ ವ್ಯಾಪ್ತಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಸಾಧಾರಣ ಮಳೆಯಾಗಿದೆ. ಧಾರವಾಡ ಸೇರಿದಂತೆ ಮಲೆನಾಡು ಭಾಗದ ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಮಳೆ ಕ್ಷೀಣಿಸಿದೆ.

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಹೀಗಾಗಿ ಕೃಷ್ಣಾ ಸೇರಿದಂತೆ ಇತರೆ ನದಿಗಳಲ್ಲಿ ಹರಿಯುತ್ತಿರುವ ನೀರಿನ ಮಟ್ಟಏರುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲೂಕಿನ ಆರು ಸೇತುವೆಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಜತೆಗೆ ಖಾನಾಪುರ ತಾಲೂಕಿನ ಮೂರು ಸೇತುವೆಗಳು ಇನ್ನೂ ಮುಳುಗಡೆಯಾಗಿವೆ. ರಾಯಬಾಗ ತಾಲೂಕಿನ ಉಗಾರ-ಕುಡಚಿ ಸೇತುವೆ ಬುಧವಾರ ಬೆಳಗ್ಗೆಯಿಂದ ಮುಳುಗಡೆಯಾಗಿದೆ. ಚಿಕ್ಕೋಡಿ ತಾಲೂಕಿನ ನಾನಾ ಕಡೆ 13 ಮನೆಗಳು ಧರೆಗುರುಳಿವೆ. ಹಲವಾರು ಗ್ರಾಮಗಳಲ್ಲಿರುವ ಸಾವಿರಾರು ಎಕರೆಯಷ್ಟುಭತ್ತದ ಗದ್ದೆಗಳು ಜಲಾವೃತಗೊಂಡಿವೆ. ನೀಲಾವಡೆ ಗ್ರಾಮದ ಬಳಿ ಮಲಪ್ರಭಾ ನದಿಯ ಸೇತುವೆ, ಇದ್ದಲಹೊಂಡ- ಗರ್ಲಗುಂಜಿ ಮಾರ್ಗದ ಸೇತುವೆ, ಹಿರೇಮುನವಳ್ಳಿ- ಅವರೊಳ್ಳಿ ಮಾರ್ಗಗಳ ಸೇತುವೆ, ಮೋದೆಕೊಪ್ಪ- ತೀರ್ಥಕುಂಡೆ ಮಾರ್ಗದ ಸೇತುವೆಗಳ ಮೇಲೆ ನೀರಿನ ಹರಿವು ಮುಂದುವರಿದಿದೆ. ಶೀಲಹಳ್ಳಿ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.

ತಗ್ಗದ ಕೃಷ್ಣಾ ಪ್ರವಾಹ:

ಬಸವಸಾಗರ ಜಲಾಶಯದಿಂದ ಕೃಷ್ಣಾನದಿಗೆ ಸೋಮವಾರ ರಾತ್ರಿಯಿಂದ 2.11 ಲಕ್ಷ ಕ್ಯುಸೆಕ್‌ ನೀರು ಹರಿಬಿಟ್ಟಿದ್ದರಿಂದ ಕೃಷ್ಣಾ ಸೇರಿದಂತೆ, ವೇದಗಂಗಾ, ದೂಧಗಂಗಾ ಹಾಗೂ ಪಂಚಗಂಗಾ ನದಿಗಳ ನೀರಿನಮಟ್ಟಅಪಾರ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ತಗ್ಗು ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದ್ದರಿಂದ ಕಬ್ಬು, ಸೋಯಾಬಿನ್‌, ಗೋವಿನಜೋಳ ಸೇರಿದಂತೆ ಇನ್ನಿತರ ಬೆಳೆಗಳು ಮುಳುಗಡೆಯಾಗಿವೆ. ಅಲ್ಲದೇ ನಡುಗಡ್ಡೆ ಗ್ರಾಮಗಳಾದ ಯಳಗುಂದಿ, ಯರಗೋಡಿ, ಹಂಚಿನಾಳ, ಕಡದರಗಡ್ಡಿ, ಕರಕಲಗಡ್ಡಿ ಸೇರಿದಂತೆ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ.

ನದಿಪಾತ್ರದ ಮಂದಿಗೆ ಎಚ್ಚರಿಕೆ:

ಮೀನುಗಾರರು ನದಿಗಿಳಿಯದಂತೆ ಹಾಗೂ ನದಿ ಪಾತ್ರದ ಗ್ರಾಮಸ್ಥರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಪ್ರವಾಹದ ಸಂದರ್ಭದಲ್ಲಿ ನದಿಪಾತ್ರದಲ್ಲಿ ಹಾಕಲಾಗಿರುವ ಪಂಪ್‌ ಹಾಗೂ ಪೈಪುಗಳು ಕೊಚ್ಚಿಹೋಗುವ ಆತಂಕ ಎದುರಾಗಿದ್ದರಿಂದ ಅವುಗಳನ್ನು ಹೊರತೆಗೆಯುವಲ್ಲಿ ರೈತರು ಮುಂದಾಗಿದ್ದಾರೆ. ಕಲಬುರಗಿ- ಯಾದಗಿರಿ- ರಾಯಚೂರು ಜಿಲ್ಲೆಗಳ ಸಂಪರ್ಕಿಸುವ ರಾಜ್ಯ ಹೆದ್ದಾರಿ-15 (ಕೋಳೂರು- ದೇವದುರ್ಗ ಮಾರ್ಗ) ರಲ್ಲಿನ ಸೇತುವೆಗೆ ನೀರು ನುಗ್ಗುವ ಸಾಧ್ಯತೆಯಿದೆ. ಈಗಾಗಲೇ ಕೇವಲ 3 ಅಡಿಗಳಷ್ಟುನೀರು ಸೇತುವೆಯ ಅಂತರದಲ್ಲಿ ಹರಿಯುತ್ತಿದೆ.

ಇನ್ನು ಬೆಳಗಾವಿ ಉತ್ತರ ಕನ್ನಡ, ಧಾರವಾಡ ಸೇರಿದಂತೆ ಎಲ್ಲೆಡೆ ಮಳೆಯ ಪ್ರಮಾಣ ಕ್ಷೀಣಿಸಿದೆ. ಆಗೊಮ್ಮೆ, ಈಗೊಮ್ಮೆ ಸಣ್ಣ ಮಳೆಯನ್ನು ಬಿಟ್ಟರೆ ಬುಧವಾರವಿಡೀ ಬಿಸಿಲ ವಾತಾವರಣವಿತ್ತು. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಸಾಧಾರಣ ಮಳೆಯಾಗಿದೆ. ಅಲ್ಲದೆ ಶಿವಮೊಗ್ಗದಲ್ಲಿ ಸಂಪೂರ್ಣ ಕುಂಠಿತಗೊಂಡಿತ್ತು, ಕೊಡಗು ಜಿಲ್ಲೆಯಲ್ಲಿ ಬುಧವಾರವೂ ಮಳೆ ಬಿಡುವು ನೀಡಿತ್ತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಮೋಡ ಕವಿದ ವಾತಾವರಣವಿತ್ತು.\

click me!