ಕರಾವಳಿ, ಮಲೆನಾಡಲ್ಲಿ ನಿಲ್ಲುತ್ತಿಲ್ಲ ಮಳೆ ಅಬ್ಬರ : ಶಾಲಾ, ಕಾಲೇಜಿಗೆ ರಜೆ

By Web DeskFirst Published Aug 14, 2018, 10:59 AM IST
Highlights

ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮಳೆಯ ಅಬ್ಬರ ಮಿತಿ ಮೀರಿದೆ. ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. 

ಬೆಂಗಳೂರು: ಕರಾವಳಿ, ಮಲೆನಾಡಿನ ಘಟ್ಟಪ್ರದೇಶಗಳಲ್ಲಿ ಸೋಮವಾರವೂ ಭರ್ಜರಿ ಮಳೆ ಮುಂದುವರಿದಿದೆ. ಹಲವೆಡೆ ತಗ್ಗುಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗಿ, ಜನಜೀವನ ಅಸ್ತವ್ಯಸ್ತಗೊಂಡಿದೆ. ನೂರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಅಲ್ಲಲ್ಲಿ ಗುಡ್ಡಕುಸಿದ ಹಿನ್ನೆಲೆಯಲ್ಲಿ ಶಿರಾಡಿಘಾಟ್‌, ಮಡಿಕೇರಿ-ಮಂಗಳೂರು ಮಾರ್ಗ ಸೇರಿ ವಿವಿಧೆಡೆ ಪ್ರಮುಖ ಸಂಪರ್ಕ ರಸ್ತೆ ಕಡಿತಗೊಂಡು ಹಲವು ಗಂಟೆಗಳ ಕಾಲ ಸಂಚಾರ ವ್ಯತ್ಯಯವಾಗಿದೆ.

ಕೊಡಗು ಜಿಲ್ಲೆಯಲ್ಲಿ ಬಿರುಗಾಳಿ ಮಳೆ ಮುಂದುವರಿದಿದ್ದು ಕಂಬಿಬಾಣೆ ಸಮೀಪದ ಉಪ್ಪುತೋಡುವಿನಲ್ಲಿ ಎರಡು ಮನೆಗಳಿಗೆ ನೀರು ನುಗ್ಗಿದೆ. ಶೃಂಗೇರಿಯ ಕುರುಬಗೆರೆಯಿಂದ ಶ್ರೀಮಠಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ರಸ್ತೆ ಸಂಜೆಯ ವೇಳೆಗೆ ಜಲಾವೃತವಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಚಿಕ್ಕಮಗಳೂರಿನ ಎನ್‌.ಆರ್‌.ಪುರ ತಾಲೂಕಿನ ಶಂಕರಪುರ-ಮುಡುಬ ಸೇತುವೆ, ಶೆಟ್ಟಿಕೊಪ್ಪ- ಅಲ್ಲಂದೂರು ಮಾರ್ಗದಲ್ಲಿರುವ ಸೇತುವೆ ಮೇಲೆ ನೀರು ಹರಿಯುತ್ತಿದೆ. ಕುದುರೆಗುಂಡಿ ಕಾನೂರು ರಸ್ತೆಯಲ್ಲೂ ಪ್ರವಾಹದ ನೀರು ಹರಿಯುತ್ತಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

ಇನ್ನು ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ನದಿ, ಹಳ್ಳಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನೂರಾರು ಎಕರೆ ಪ್ರದೇಶದಲ್ಲಿ ಹೊಲ, ಗದ್ದೆಗಳು ಜಲಾವೃತವಾಗಿವೆ.

ಗುಡ್ಡ ಕುಸಿದು ರಸ್ತೆ ಬಂದ್‌: ಕಳೆದ ಕೆಲ ದಿನಗಳಿಂದ ಘಟ್ಟಪ್ರದೇಶದಲ್ಲಿ ಸುರಿಯುತ್ತಿರುವ ಭರ್ಜರಿ ಮಳೆಗೆ ಭೂಮಿ ಸಡಿಲಗೊಂಡಿದ್ದು ಶಿರಾಡಿಘಾಟ್‌ನ ಸಮೀಪದ ದೊಡ್ಡತಪ್ಪಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿದೆ. ನಾಲ್ಕು ಜೆಸಿಬಿ, ಒಂದು ಹಿಟಾಚಿ ಯಂತ್ರ ಬಳಸಿ ತೆರವು ಮಾಡಿ ರಾತ್ರಿ ವೇಳೆ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಪದೇ ಪದೆ ಈ ಮಾರ್ಗದಲ್ಲಿ ಗುಡ್ಡಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಕಿ.ಮೀ.ದೂರದವರೆಗೆ ಸಾಲುಗಟ್ಟಿನಿಂತಿದ್ದವು. ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡುವಿನ ಕರ್ತೋಜಿಯಲ್ಲೂ ಭೂಕುಸಿದ ಪರಿಣಾಮ ಬೆಳಗ್ಗಿನಿಂದ ಸಂಜೆ ವರೆಗೆ ಹೆದ್ದಾರಿ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಜೆಸಿಬಿ ಮೂಲಕ ಮಣ್ಣು ತೆರವು ಮಾಡಿ ಸಂಜೆ ವೇಳೆಗೆ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಯಿತು. ಭಾಗಮಂಡಲ-ನಾಪೋಕ್ಲು ಪ್ರವಾಹದಿಂದಾಗಿ ರಸ್ತೆ ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಬಂದ್‌

ಆಗಿತ್ತು. ಶೃಂಗೇರಿ ತಾಲೂಕಿನ ಎಸ್‌.ಕೆ.ಬಾರ್ಡರ್‌ನಲ್ಲಿ ಮರವೊಂದು ಬಿದ್ದ ಪರಿಣಾಮ ಸೋಮವಾರ ಬೆಳಗ್ಗೆ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟಏರಿಕೆಯಾಗಿದೆ. ಇದರಿಂದ ಬೆಳಗಾವಿಯ ಕಲ್ಲೋಳ-ಯಡೂರ ಕೆಳಹಂತದ ಸೇತುವೆ ಜಲಾವೃತವಾಗಿದೆ.

ನದಿ ತೀರದಿಂದ ಸ್ಥಳಾಂತರಕ್ಕೆ ಸೂಚನೆ: ಲಿಂಗನಮಕ್ಕಿ ಜಲಾಶಯಕ್ಕೆ 40 ಸಾವಿರಕ್ಕೂ ಅಧಿಕ ಒಳಹರಿವು ಬರುತ್ತಿದೆ. ಜಲಾಶಯ ಭರ್ತಿಗೆ ಇನ್ನು 6 ಅಡಿ ಮಾತ್ರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಸ್ಥರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕೆಪಿಸಿಎಲ್‌ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೈಸೂರು-ನಂಜನಗೂಡು ಸಂಚಾರ ಮುಕ್ತ: ಕೇರಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಳೆದ ನಾಲ್ಕೈದು ದಿನಗಳಿಂದ ಉಕ್ಕಿ ಹರಿಯುತ್ತಿದ್ದ ಕಪಿಲಾ ನದಿಯಲ್ಲಿ ಈಗ ಪ್ರವಾಹ ಕಡಿಮೆಯಾಗಿದೆ. ಮೂರು ದಿನಗಳ ನಂತರ ಮೈಸೂರು-ನಂಜನಗೂಡು ಹೆದ್ದಾರಿ ಸಂಚಾರ ಮುಕ್ತಗೊಂಡಿದೆ. ಕೇರಳದ ವೈನಾಡಿನಲ್ಲಿ ಮಳೆಯ ಪ್ರಮಾಣ ಕಗ್ಗಿರುವುದರಿಂದ ಕಬಿನಿ ಜಲಾಶಯದ ಒಳ ಹರಿವಿನ ಪ್ರಮಾಣವೂ ಕಡಿಮೆಯಾಗಿದ್ದು, ಡ್ಯಾಂನಿಂದ 40,350 ಕ್ಯುಸೆಕ್‌ ನೀರನ್ನು ಮಾತ್ರ ಹೊರಬಿಡಲಾಗುತ್ತಿದೆ. ಕಪಿಲೆಯ ಪ್ರವಾಹದಿಂದಾಗಿ ಗಿರಿಜಾ ಕಲ್ಯಾಣ ಮಂಟಪದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ನೆರೆ ಸಂತ್ರಸ್ತರೂ ಮಂಗಳವಾರ ತಮ್ಮ ಮನೆಗಳಿಗೆ ವಾಪಸಾಗಲಿದ್ದಾರೆ.

ಶಾಲಾ-ಕಾಲೇಜುಗಳಿಗೆ ರಜೆ: ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂಡಿಗೆರೆ, ಕೊಪ್ಪ ಹಾಗೂ ಶೃಂಗೇರಿ ತಾಲೂಕಿನ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

click me!