20 ದೇಶದಿಂದ ರಾಜ್ಯದ ಮಾವಿಗೆ ಬೇಡಿಕೆ

First Published May 21, 2018, 10:59 AM IST
Highlights

ಯುರೋಪ್ ರಾಷ್ಟ್ರಗಳು, ಆಸ್ಟ್ರೇಲಿಯಾ, ಚೀನಾ, ನ್ಯೂಜಿಲ್ಯಾಂಡ್ ಸೇರಿದಂತೆ ಸುಮಾರು 20 ರಾಷ್ಟ್ರಗಳಲ್ಲಿ ರಾಜ್ಯದ ಮಾವಿಗೆ ಬೇಡಿಕೆ ಇದ್ದು, ಈ ಬಾರಿಯ ಮಾವು ಹಂಗಾಮಿನಲ್ಲಿ ಸುಮಾರು 1500 ಮೆಟ್ರಿಕ್ ಟನ್ ಮಾವು ರಫ್ತಿಗೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಸಿದ್ಧತೆ ನಡೆಸಿದೆ. 

ಬೆಂಗಳೂರು (ಮೇ. 21): ಯುರೋಪ್ ರಾಷ್ಟ್ರಗಳು, ಆಸ್ಟ್ರೇಲಿಯಾ, ಚೀನಾ, ನ್ಯೂಜಿಲ್ಯಾಂಡ್ ಸೇರಿದಂತೆ ಸುಮಾರು ೨೦ ರಾಷ್ಟ್ರಗಳಲ್ಲಿ ರಾಜ್ಯದ ಮಾವಿಗೆ ಬೇಡಿಕೆ ಇದ್ದು, ಈ ಬಾರಿಯ ಮಾವು ಹಂಗಾಮಿನಲ್ಲಿ ಸುಮಾರು 1500 ಮೆಟ್ರಿಕ್ ಟನ್ ಮಾವು ರಫ್ತಿಗೆ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಸಿದ್ಧತೆ ನಡೆಸಿದೆ.

ರಾಜ್ಯದ ಮಾವು ಮಾರುಕಟ್ಟೆ ವಿಸ್ತರಿಸುವ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಕಲ್ಪಿಸುವ ನಿಟ್ಟಿನಲ್ಲಿ ನಿಗಮ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಾಲೂರಿನ ಇನೋವಾ ಬಯೋ ಅಗ್ರಿಪಾರ್ಕ್‌ನ ಪ್ಯಾಕ್‌ಹೌಸ್ ಮೂಲಕವಾಗಿ ನಿಗಮದ ಸಹಕಾರದಲ್ಲಿ ರಫ್ತುದಾರರು ಈಗಾಗಲೇ ಸುಮಾರು 75 ಮೆಟ್ರಿಕ್ ಟನ್ ಮಾವನ್ನು ವಿದೇಶಗಳಿಗೆ ರಫ್ತು ಮಾಡಿದ್ದಾರೆ.

ಕಳೆದ ವರ್ಷ ನಿಗಮದ ಸಹಯೋಗದಲ್ಲಿ 1000 ಮೆಟ್ರಿಕ್ ಟನ್ ವಿವಿಧ ತಳಿಯ ಮಾವನ್ನು ಆಸ್ಟ್ರೇಲಿಯಾ, ಇಟಲಿ, ಅಮೆರಿಕ, ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡಲಾಗಿತ್ತು. ಇದೀಗ ಒಂದು  ಸಾವಿರದಿಂದ 1500 ಮೆಟ್ರಿಕ್ ಟನ್‌ವರೆಗೂ ಮಾವು ರಫ್ತು ಮಾಡಲು ನಿಗಮ ನಿರ್ಧರಿಸಿದೆ.

ಪ್ರಸಕ್ತ ಸಾಲಿನಲ್ಲಿ ಆಲ್ಫಾನ್ಸೋ (ಬಾದಾಮಿ), ಬೇಗನ್‌ಪಲ್ಲಿ, ದಶೇರಿ, ಕೇಸರ್, ತೋತಾಪುರಿ ತಳಿಗಳಿಗೆ ಬೇಡಿಕೆ ಇದೆ. ಈ ಬಾರಿ ಇಳಿ ಹಂಗಾಮು ಇರುವುದರಿಂದ ಶೇ.35 ರಿಂದ ೪೦ರಷ್ಟು ಇಳುವರಿ ಕಡಿಮೆಯಾಗಿದೆ. ಉತ್ತಮ ಹಂಗಾಮಿನಲ್ಲಿ ರಾಜ್ಯದ 1.78 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 12 ರಿಂದ 14 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆಯಲಾಗುತ್ತದೆ. ಆದರೆ ಈಗ ಇಳುವರಿ  7 ರಿಂದ 8 ಲಕ್ಷ ಮೆಟ್ರಿಕ್ ಟನ್ ಮಾತ್ರ ಸಿಗಬಹುದೆಂದು ನಿರೀಕ್ಷಿಸಲಾಗಿದೆ. ಜತೆಗೆ ಆಲಿಕಲ್ಲು ಮಳೆ, ಗಾಳಿಯಿಂದಾಗಿ ಮಾವು ಹಾನಿಗೊಳಗಾಗಿದೆ. ಹಲವೆಡೆ ಫಸಲು ಕೂಡ  ತಡವಾಗಿ ಬರುತ್ತಿರುವುದರಿಂದ ಇಂತಿಷ್ಟೇ ಪ್ರಮಾಣದಲ್ಲಿ ಇಳುವರಿ ಸಿಗಲಿದೆ ಎಂದು ಅಂದಾಜಿಸಲು ಸಾಧ್ಯವಾಗುತ್ತಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಬೇಡಿಕೆ: 
ಹಣ್ಣುಗಳ ರಾಜ ಮಾವಿಗೆ ಈ ಬಾರಿ ಸ್ಥಳೀಯವಾಗಿ ಅತ್ಯಂತ ಹೆಚ್ಚು ಬೇಡಿಕೆ ಇದೆ. ಇಳುವರಿ ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿರುವುದರಿಂದ ಮಾರುಕಟ್ಟೆಯಲ್ಲಿ ಮಾವಿನ ದರದ ಅಬ್ಬರ ಜೋರಾಗಿರಲಿದೆ ಎಂದು ನಿಗಮ ಅಂದಾಜಿಸಿದೆ. ಮಾವು ಹೆಚ್ಚು ಬೆಳೆಯುವ ಕೋಲಾರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ರಾಮನಗರ, ಧಾರವಾಡ, ಚಿತ್ರದುರ್ಗ,  ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಗದಗ, ತುಮಕೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ರಫ್ತು ಯೋಗ್ಯವಾದ ಹಣ್ಣಿಗೆ ಬೇಡಿಕೆ ಇದೆ.

ಜತೆಗೆ ಸ್ಥಳೀಯ ಗ್ರಾಹಕರ ಬೇಡಿಕೆಗೆ ತಕ್ಕಂತೆ ಮಾವು  ಪೂರೈಸುವ ನಿಟ್ಟಿನಲ್ಲಿ ನಿಗಮವು ಮಾವು ಬೆಳೆಗಾರರಿಗೆ ಅಗತ್ಯ ನೆರವು ಒದಗಿಸಲಿದೆ. ಮುಖ್ಯವಾಗಿ ದರದ ಏರಿಳಿತದಲ್ಲಿ ಸಮತೋಲನ ಕಾಯ್ದುಕೊಳ್ಳುವಂತೆ ಮಾವು ಬೆಳೆಗಾರರಿಗೆ ಸೂಚಿಸಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಾವು ಮೇಳ ಹಮ್ಮಿಕೊಳ್ಳಲು ನಿಗಮ ಚಿಂತನೆ ನಡೆಸಿದೆ.

ರಫ್ತು-ಆಮದುದಾರರ ಸಭೆ 

ಮುಂಬೈನಲ್ಲಿ ಕಳೆದ ವಾರ ಮಾವು ರಫ್ತು ಮತ್ತು ಆಮದುದಾರರ ಸಭೆ ನಡೆದಿದ್ದು, ನ್ಯೂಜಿಲ್ಯಾಂಡ್, ಸಿಂಗಾಪುರ, ಆಸ್ಟ್ರೇಲಿಯಾ, ಯೂರೋಪ್ ರಾಷ್ಟ್ರಗಳು, ಇರಾನ್, ಚೀನಾ, ಜಪಾನ್, ರುಮೇನಿಯಾ, ಬೆಲ್ಜಿಯಂ, ನೇಪಾಳ ಸೇರಿದಂತೆ 20 ರಾಷ್ಟ್ರಗಳ 51 ಮಂದಿ ಮಾವು ಆಮದುದಾರರು, ಕರ್ನಾಟಕ, ಮುಂಬೈ, ಆಂಧ್ರ, ತಮಿಳುನಾಡು ಸೇರಿದಂತೆ ಒಟ್ಟು 120 ಮಂದಿ ರಫ್ತುದಾರರು ಪಾಲ್ಗೊಂಡಿದ್ದರು. ಚೀನಾ, ಆಸ್ಟ್ರೇಲಿಯಾ, ರುಮೇನಿಯಾ, ಜಪಾನ್ ಸೇರಿದಂತೆ ಬಹುತೇಕ ರಾಷ್ಟ್ರಗಳ ಆಮದುದಾರರ  ಕರ್ನಾಟದ ಆಲ್ಫಾನ್ಸೋ, ತೋತಾಪುರಿ ಒಳಗೊಂಡಂತೆ ಐದಾರು ತಳಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾವು ತಳಿಗಳ ಮಾದರಿಯನ್ನು ಪರೀಕ್ಷಾರ್ಥವಾಗಿ ತೆಗೆದುಕೊಂಡು ಹೋಗಿವೆ.

ಕಳೆದ ವರ್ಷವೇ ಅಮೆರಿಕ, ಆಸ್ಟ್ರೇಲಿಯಾದ ತಜ್ಞರು ಇಲ್ಲಿಗೆ ಆಗಮಿಸಿ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಿದ್ದರು. ಇದೀಗ ಪುನಃ ತಜ್ಞರ ತಂಡ ರಾಜ್ಯಕ್ಕೆ ಭೇಟಿ ನೀಡಿ ರಫ್ತು ಯೋಗ್ಯವಾದ ಹಣ್ಣುಗಳ ಆಯ್ಕೆ, ಪರೀಕ್ಷೆ ಮಾಡಲಿದೆ. ರಾಜ್ಯದ ಮಾವು ಬೆಳೆಗಾರರಿಗೆ ಆಶಾದಾಯವಾಗಿದೆ ಎಂದು ನಿಗಮ ತಿಳಿಸಿದೆ.  

click me!