ಇಂದು ಸ್ಪೀಕರ್‌ ಆಯ್ಕೆ, ಬಳಿಕ ಎಚ್‌ಡಿಕೆ ವಿಶ್ವಾಸ ಮತಯಾಚನೆ

First Published May 25, 2018, 7:25 AM IST
Highlights

ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ವಿಶ್ವಾಸಮತ ಯಾಚನೆ ಮಾಡಲಿದ್ದು, ಅದರ ಬೆನ್ನಲ್ಲೇ ಉಭಯ ಪಕ್ಷಗಳಲ್ಲಿ ಸಂಪುಟ ವಿಸ್ತರಣೆಯ ಸರ್ಕಸ್‌ ತೀವ್ರಗೊಳ್ಳುವುದು ನಿಶ್ಚಿತವಾಗಿದೆ.

ಬೆಂಗಳೂರು :  ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಇಂದು ವಿಶ್ವಾಸಮತ ಯಾಚನೆ ಮಾಡಲಿದ್ದು, ಅದರ ಬೆನ್ನಲ್ಲೇ ಉಭಯ ಪಕ್ಷಗಳಲ್ಲಿ ಸಂಪುಟ ವಿಸ್ತರಣೆಯ ಸರ್ಕಸ್‌ ತೀವ್ರಗೊಳ್ಳುವುದು ನಿಶ್ಚಿತವಾಗಿದೆ.

 ಮಧ್ಯಾಹ್ನ ಆರಂಭವಾಗಲಿರುವ ವಿಧಾನಸಭೆಯ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮೊದಲಿಗೆ ಸ್ಪೀಕರ್‌ ಆಯ್ಕೆ ನಡೆಯಲಿದೆ. ನಂತರ ಕುಮಾರಸ್ವಾಮಿ ಅವರು ತಮ್ಮ ಸರ್ಕಾರದ ಪರವಾಗಿ ವಿಶ್ವಾಸಮತ ಯಾಚನೆಯ ಪ್ರಸ್ತಾವನೆ ಮಂಡಿಸಲಿದ್ದಾರೆ. ಅಲ್ಲಿಗೆ ಸಮ್ಮಿಶ್ರ ಸರ್ಕಾರ ರಚನೆಯ ಒಂದು ಪ್ರಮುಖ ಘಟ್ಟಮುಗಿದಂತಾಗುತ್ತದೆ. ನಂತರ ಇನ್ನೊಂದು ಪ್ರಮುಖ ಘಟ್ಟಆರಂಭವಾಗಲಿದೆ. ಅದುವೇ ಸಂಪುಟ ವಿಸ್ತರಣೆ.

ಉಭಯ ಪಕ್ಷಗಳ ನಡುವಿನ ಅಧಿಕಾರ ಹಂಚಿಕೆ ಸೂತ್ರದ ಅನುಸಾರ ಜೆಡಿಎಸ್‌ಗೆ ಮುಖ್ಯಮಂತ್ರಿ ಸೇರಿದಂತೆ 12 ಸಚಿವ ಸ್ಥಾನ ಮತ್ತು ಕಾಂಗ್ರೆಸ್ಸಿಗೆ ಉಪಮುಖ್ಯಮಂತ್ರಿ ಸೇರಿದಂತೆ 22 ಸಚಿವ ಸ್ಥಾನಗಳು ಲಭಿಸಲಿವೆ. ಆದರೆ, ಉಭಯ ಬಣಗಳಲ್ಲೂ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಾಗಿಯೇ ಇದೆ. ಸರ್ಕಾರ ರಚನೆ ನಡೆದಷ್ಟುಮೃದುವಾಗಿ ಸಂಪುಟ ವಿಸ್ತರಣೆ ನಡೆಯುತ್ತದೆಯೇ ಎಂಬುದು ಕುತೂಹಲಕರವಾಗಿದೆ.

ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕೆ ವಿಪರೀತ ಪೈಪೋಟಿಯಿದೆ. ಈ ಹಿನ್ನೆಲೆಯಲ್ಲಿ ಯಾರಿಗೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚಿಸಲು ಕಾಂಗ್ರೆಸ್‌ ನಾಯಕರು ಶುಕ್ರವಾರ ರಾತ್ರಿ ಅಥವಾ ಶನಿವಾರ ಬೆಳಗ್ಗೆ ದೆಹಲಿಗೆ ತೆರಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ ಶನಿವಾರ ದೆಹಲಿಯಲ್ಲಿ ಗುಲಾಂ ನಬಿ ಆಜಾದ್‌, ವೇಣುಗೋಪಾಲ್‌ ಮೊದಲಾದ ನಾಯಕರ ಜತೆ ಚರ್ಚಿಸಿ ಸಂಪುಟ ಸೇರ್ಪಡೆಯಾಗಬೇಕಾದವರ ಪಟ್ಟಿಸಿದ್ಧಪಡಿಸಲಿದ್ದಾರೆ. ಅನಂತರ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಈ ಪಟ್ಟಿಗೆ ಒಪ್ಪಿಗೆ ಪಡೆಯಲಿದ್ದಾರೆ.

ವಾಸ್ತವವಾಗಿ ಕಾಂಗ್ರೆಸ್‌ ಹೈಕಮಾಂಡ್‌ ಸಂಪುಟ ಸೇರ್ಪಡೆ ವಿಚಾರವನ್ನು ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಹಾಗೂ ರಾಜ್ಯ ನಾಯಕರೇ ತೀರ್ಮಾನಿಸುವಂತೆ ಸೂಚಿಸಿತ್ತು. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ರಾಜ್ಯದ ಮಟ್ಟದಲ್ಲೇ ಸಚಿವ ಸ್ಥಾನಗಳನ್ನು ನಿರ್ಧರಿಸಿದರೆ ಅಸಮಾಧಾನಕ್ಕೆ ಕಾರಣವಾಗಬಹುದು ಎಂಬ ಕಾರಣಕ್ಕೆ ರಾಜ್ಯ ನಾಯಕರು ದೆಹಲಿ ಪ್ರವಾಸವನ್ನು ಯೋಜಿಸಿದ್ದಾರೆ ಎನ್ನಲಾಗಿದೆ.

ಇನ್ನು ಜೆಡಿಎಸ್‌ನಲ್ಲಿ ಜಾತಿ ಹಾಗೂ ಪ್ರಾದೇಶಿಕತೆಯ ಆಧಾರದ ಮೇಲೆ ಸಚಿವ ಸ್ಥಾನ ನೀಡುವುದು ಸವಾಲಾಗಿಯೇ ಪರಿಣಮಿಸಿದೆ. ಹಳೆ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಪಕ್ಷಕ್ಕೆ ಈ ಭಾಗದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಆಯ್ಕೆಯಾಗಿದ್ದಾರೆÜ. ಅದರಲ್ಲೂ ಒಕ್ಕಲಿಗ ಸಮುದಾಯಕ್ಕೆ ಸೇರಿದವರೇ ಹೆಚ್ಚು. ಈಗ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಒಕ್ಕಲಿಗ ಸಮುದಾಯಕ್ಕೆ ಸೇರಿರುವುದರಿಂದ ಮತ್ತೆ ಸಂಪುಟದಲ್ಲೂ ಅದೇ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುವುದು ಉತ್ತಮ ಸಂದೇಶ ರವಾನಿಸದಂತೆ ಆಗುವುದಿಲ್ಲ. ಹಾಗಂತ ಹಿರಿಯ ಶಾಸಕರನ್ನು ಕಡೆಗಣಿಸುವಂತೆಯೂ ಇಲ್ಲ.

ಹೀಗಾಗಿಯೇ ಜೆಡಿಎಸ್‌ ನಾಯಕರು ಈಗಾಗಲೇ ಹಿರಿತನ ಮತ್ತು ಪ್ರಾದೇಶಿಕ ಸಮಾನತೆಯ ಆಧಾರದ ಮೇಲೆ ಇಂಥವರು ಸಚಿವರಾಗಬಹುದು ಎಂಬ ಪಟ್ಟಿಯೊಂದನ್ನು ಸಿದ್ಧಪಡಿಸಿಟ್ಟುಕೊಂಡಿದ್ದಾರೆ. ಆದರೆ, ಆ ಪಟ್ಟಿಯನ್ನು ಮಿತ್ರ ಪಕ್ಷವಾದ ಕಾಂಗ್ರೆಸ್‌ ಜತೆಗೂ ಚರ್ಚಿಸಲೇಬೇಕಾದ ಅನಿವಾರ್ಯತೆಯಿದೆ. ಇಲ್ಲದಿದ್ದರೆ ಜಾತಿ ಲೆಕ್ಕಾಚಾರ ಮತ್ತು ಪ್ರಾದೇಶಿಕ ಸಮಾನತೆ ಏರುಪೇರಾಗುವ ಅಪಾಯ ಎದುರಾಗುತ್ತದೆ. ಶುಕ್ರವಾರ ವಿಶ್ವಾಸಮತ ಯಾಚನೆಯ ಪ್ರಕ್ರಿಯೆ ಮುಗಿದ ಬಳಿಕ ಜೆಡಿಎಸ್‌ ವರಿಷ್ಠರು ತಮ್ಮ ಪಕ್ಷದ ಶಾಸಕರೊಂದಿಗೆ ಸಮಾಲೋಚನೆ ಆರಂಭಿಸಲಿದ್ದಾರೆ. ಶನಿವಾರ ಅಥವಾ ಭಾನುವಾರದ ವೇಳೆಗೆ ಸ್ಪಷ್ಟಚಿತ್ರಣ ಹೊರಬೀಳಲಿದೆ. ಎಲ್ಲವೂ ಸರಿಹೋದರೆ ಬಹುತೇಕ ಸೋಮವಾರ ಸಂಪುಟ ವಿಸ್ತರಣೆಯೂ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.

ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಒಪ್ಪಿಗೆ ಕೊಟ್ಟಿದ್ದು ರಾಜ್ಯದ ಒಳಿತಾಗಿಯೇ ವಿನಃ ವೈಯಕ್ತಿಕವಾಗಿ ನನ್ನ ಆಸೆ, ಆಕಾಂಕ್ಷೆಗಳಿಗಲ್ಲ. ಮುಖ್ಯಮಂತ್ರಿಯಾಗಿ ಮೆರೆಯೋದಕ್ಕಾಗಲಿ, ಅಟ್ಟಹಾಸ ಮಾಡಲಿಕ್ಕಾಗಲಿ ಈ ಪದವಿ ಸ್ವೀಕರಿಸಿಲ್ಲ. ಮುಖ್ಯಮಂತ್ರಿಯಾಗಿಯೇ ಇರಬೇಕು ಎಂಬ ಹುಚ್ಚೂ ನನಗಿಲ್ಲ. 12 ವರ್ಷ ಹಿಂದೆ ನಾನು ನೀಡಿದ 20 ತಿಂಗಳ ಆಡಳಿತವನ್ನು ಜನತೆ ಮರೆತಿಲ್ಲ. ಅದಕ್ಕಾಗಿ ನಾನು ಹಾಗೂ ಪಕ್ಷ ಉಳಿದಿದ್ದೇವೆ. ಶುಕ್ರವಾರ ವಿಶ್ವಾಸಮತ ಪಡೆಯವ ಸಂದರ್ಭದಲ್ಲಿ ಎಲ್ಲಾ ವಿಷಯಗಳ ಬಗ್ಗೆ ಬಿಜೆಪಿ, ಕಾಂಗ್ರೆಸ್‌ ನಾಯಕರು ಹಾಗೂ 6.5 ಕೋಟಿ ಜನರ ಗಮನ ಸೆಳೆಯುತ್ತೇನೆ.

- ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

click me!